ಮಕ್ಕಳ ಕಷ್ಟ ಮಕ್ಕಳಿಗೆ. ಹೊರ ಹೋಗಿ ಬೇರೆ ಮಕ್ಕಳೊಂದಿಗೆ ಆಡುವಂತಿಲ್ಲ, ಮನೆಯಲ್ಲೇ ಆಡೋಣವೆಂದರೆ ಯಾವುದಕ್ಕೂ ಜೊತೆಯಿಲ್ಲ. ಅಪ್ಪ ಅಮ್ಮನನ್ನು ಕರೆದರೆ ಸದಾ ಬ್ಯುಸಿ ಬ್ಯುಸಿ ಎನ್ನುತ್ತಾರೆ. ಒಬ್ಬರೇ ಆಡುವಂಥದ್ದೇನಿರುತ್ತದೆ? ಕೇರಂ, ಚೆಸ್, ಲೂಡೋ, ಪಗಡೆ, ಕುಂಟೆಬಿಲ್ಲೆ, ಶಟಲ್ - ಯಾವ ಆಟ ಆಡ್ಬೇಕಂದ್ರೂ ಜೊತೆ ಬೇಕೇ ಬೇಕು. ಇವನ್ನೆಲ್ಲ ಒಬ್ಬರೇ ಆಡಬಹುದಾದದ್ದು ಮೊಬೈಲ್ ಫೋನಲ್ಲಿ ಮಾತ್ರ. ಹಾಗಂಥ ಮೊಬೈಲ್ ಹಿಡಿದು ಆಡತೊಡಗಿದರೆ ಗಂಟೆಗಟ್ಟಲೆ ಅಪ್ಪಅಮ್ಮನ ಸಹಸ್ರನಾಮ. ಹೋಗಲತ್ಲಾಗೆ ಅಂತ ಟಿವಿ ನೋಡಿದರೆ ಅದಕ್ಕೂ ಕಣ್ಣು ಹಾಳಾಗುತ್ತೆ ಅಂತ ಬೈತಾರೆ. ಕೂತ್ಕೊಂಡು ಕಲರಿಂಗ್ ಮಾಡೋದು, ಪುಸ್ತಕ ಓದೋದೆಲ್ಲ ಎಷ್ಟೊತ್ತು ತಾನೇ ಮಾಡಲಾಗುತ್ತೆ? ಸೋಷ್ಯಲ್ ಮೀಡಿಯಾ ನೋಡೋದು ಮಜವಾಗಿರುತ್ತೆ, ಆದರೆ ಅದನ್ನು ಕದ್ದುಮುಚ್ಚಿಯೇ ಮಾಡಬೇಕು. ಇಲ್ಲದಿದ್ದರೆ ಬೆನ್ನಿನ ಮೇಲೆ ಬರೆಯೇ ಬೀಳಬಹುದು. ಹಾಗಿದ್ದರೆ ನಾವೇನು ಮಾಡ್ಬೇಕು ಹೇಳಿ?

ತಂಗಿಯಿಂದ ಮಾತ್ರ ಇವನ್ನೆಲ್ಲ ಕಲಿಯೋಕೆ ಸಾಧ್ಯ!

ಇತ್ತ ಪೋಷಕರ ಕಷ್ಟವೂ ಕಡಿಮೆಯದ್ದಲ್ಲ. ಇಡೀ ದಿನ ಮನೆಯಲ್ಲೇ ಇರುವ ಮಕ್ಕಳಿಗೆ ಬಗೆಬಗೆಯ ತಿಂಡಿ ಮಾಡಿಕೊಡಬೇಕು. ಅವರು ಮನೆ ತುಂಬಾ ಮಾಡಿದ ಸಂತೆ ತೆಗೆದು ಮನೆ ಸ್ವಚ್ಛಗೊಳಿಸುವುದೇನು ಸುಲಭದ ಕೆಲಸವಲ್ಲ. ಇದರೊಂದಿಗೆ ಕಚೇರಿಯ ಕೆಲವೂ ಆಗಬೇಕು. ಸ್ವಂತಕ್ಕಂತ ನಯಾಪೈಸೆ ಸಮಯ ಸಿಗೋಲ್ಲ. ಅಷ್ಟಾದರೂ ಮಕ್ಕಳು ತಮ್ಮ ಬಗ್ಗೆ ದೂರುವುದು ಬಿಡುವುದಿಲ್ಲ. ಇದರೊಂದಿಗೆ ಇಡೀ ದಿನ ಟಿವಿ, ಲ್ಯಾಪ್ಟಾಪ್, ಫೋನ್ ಎಂದು ನೋಡುತ್ತಿದ್ದರೆ ಸಿಟ್ಟು ಬರುತ್ತೆಯೋ ಇಲ್ಲವೋ? ಅದರಲ್ಲೂ ಈಗ ಹುಟ್ಟುಟ್ಟುತ್ತಲೇ ಫೇಸ್‌ಬುಕ್, ಇನ್ಸ್ಟಾ ಎಂದು ಹಿಡಿದುಕೊಂಡು ಕುಳಿತುಕೊಳ್ಳುತ್ತವೆ. ಇದರೊಂದಿಗೆ ಆನ್ಲೈನ್ ಕ್ಲಾಸ್ ಬೇರೆ. ಸಾಕಪ್ಪಾ ಸಾಕು, ಈ ಕೊರೋನಾ ಎಲ್ಲ ಮುಗಿದು ಯಾವಾಗಪ್ಪಾ ಶಾಲೆ ತೆಗೆಯೋದು ಎಂದು ಎಲ್ಲ ಪೋಷಕರು ಕನವರಿಸುತ್ತಿದ್ದಾರೆ. 

ಇಂದಿನ ಜೀವನಶೈಲಿ
ಇಲ್ಲಿ ಪೋಷಕರು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದುದೆಂದರೆ, ನಮ್ಮ ತಲೆಮಾರೇ ಬೇರೆ, ಮಕ್ಕಳ ತಲೆಮಾರೇ ಬೇರೆ. ನಮ್ಮ ಬಾಲ್ಯದಲ್ಲಿ ಸೋಷ್ಯಲ್ ಮೀಡಿಯಾ ಎಂಬ ಐಡಿಯಾವೇ ಇರಲಿಲ್ಲ. ಹಾಗಾಗಿ ನಾವು ಅದ್ಯಾವುದರ ಗೊಡವೆಗೂ ಹೋಗದೆ ಬೆಳೆದೆವು. ಇದ್ದಿದ್ದರೆ ಬಿಡುತ್ತಿದ್ದೆವಾ? ಇಂದಿನ ಮಕ್ಕಳನ್ನು ಇಂದಿನ ಸಮಾಜದ ಟ್ರೆಂಡ್‌ನಿಂದ ಬೇರ್ಪಡಿಸಿ ಬೆಳೆಸುತ್ತೇವೆ ಎಂದರೆ ಆಗುತ್ತದೆಯೇ? ಇಲ್ಲ. ಹಾಗಾಗಿ, ಮೊದಲು ಈ ಸಂಗತಿಯನ್ನು ಒಪ್ಪಿಕೊಳ್ಳಬೇಕು. ಹಾಗೆಂದು ಅವರನ್ನು ಪೂರ್ತಿಯಾಗಿ ಸೋಷ್ಯಲ್ ಮೀಡಿಯಾದಲ್ಲಿ ಮುಳುಗೇಳಲು ಅವರ ಪಾಡಿಗೆ ಬಿಡಿ ಎಂದಲ್ಲ. 

ಹೌದು, ನೀವು ಹೇಳುವುದೆಲ್ಲವೂ ಸರಿ, ಇಡೀ ದಿನ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಎಂದುಕೊಂಡಿದ್ದರೆ ಅದರಿಂದ ಹಲವು ಮಾನಸಿಕ ಸಮಸ್ಯೆಗಳು, ಕುಳಿತಲ್ಲೇ ಇರುವುದರಿಂದ ದೈಹಿಕ ಅನಾರೋಗ್ಯ ಎಲ್ಲವೂ ಬರುತ್ತದೆ. ಮಕ್ಕಳ ಪೋಸ್ಟ್‌ಗಳು ಮಿಸ್ಯೂಸ್ ಆಗುವ ಸಾಧ್ಯತೆ ಇರುತ್ತದೆ, ಫೋನ್‌ನಲ್ಲಿ ಮುಳುಗುವ ಮಕ್ಕಳಿಗೆ ಸಮಾಜದಲ್ಲಿ ಜನರೊಂದಿಗೆ ಬೆರೆಯುವುದು ಕಷ್ಟವೆನಿಸುತ್ತದೆ ಎಟ್ಸೆಟ್ರಾ ಎಟ್ಸೆಟ್ರಾ. ಆದರೆ, ಇದನ್ನೆಲ್ಲ ನೀವು ಹೇಳಿದ ಮಾತ್ರಕ್ಕೆ ಅವರು ಸುಮ್ಮನಾಗುವುದಿಲ್ಲ. ಬದಲಿಗೆ ನಿಮ್ಮ ಕಣ್ಣು ತಪ್ಪಿಸಿ ಕದ್ದುಮುಚ್ಚಿ ನೋಡಲಾರಂಭಿಸುತ್ತಾರೆ. ಇದಕ್ಕಾಗಿ ನೀವು ಬಯ್ಯುತ್ತಿದ್ದರೆ ತಿರುಗಿ ಹೇಳುತ್ತಾರೆ- ಪೋಷಕರು ಹಾಗೂ ಮಕ್ಕಳ ಮಧ್ಯೆ ಕಂದಕ ಉಂಟಾಗುತ್ತದೆ. 

ಮಿತಿ ಹುಟ್ಟುಹಾಕಿ
ಹೀಗೆ ಸೋಷ್ಯಲ್ ಮೀಡಿಯಾವನ್ನು ಪೂರ್ತಿ ಬೈಕಾಟ್ ಮಾಡಿಸಲು ಹೋಗುವ ಬದಲು ಅದಕ್ಕೊಂದು ಆರೋಗ್ಯಕರ ಮಿತಿ ಹಾಕಿ. ಮಿತಿ ಹಾಕುವುದು ತಕ್ಷಣದ ಕೆಲಸವಲ್ಲ. ಅದು ನಿಧಾನವಾಗಿ ಅಭ್ಯಾಸವಾಗುವಂತೆ ಮಾಡಬೇಕು. ಹಾಗೆ ಮಾಡುವ ಉತ್ತಮ ಮಾರ್ಗವೆಂದರೆ ಪೋಷಕರು ತಮ್ಮ ಸೋಷ್ಯಲ್ ಮೀಡಿಯಾ ಬಳಕೆಗೆ ಮೊದಲು ಮಿತಿ ಹಾಕಿಕೊಳ್ಳುವುದು. ನೀವು ಫೇಸ್ಬುಕ್ ಮತ್ತಿತರೆ ಜಾಲತಾಣಗಳನ್ನು ಯಥೇಚ್ಛ ಬಳಸಿ, ಮಕ್ಕಳಿಗೆ ಮಾತ್ರ ಉಪದೇಶ ಮಾಡಿದರೆ, ಹಿಪೋಕ್ರೈಟ್ಸ್ ಎನಿಸಿಕೊಳ್ಳುತ್ತೀರಿ. ಹಾಗೆ ಪೋಷಕರು ಆಡುವುದೊಂದು, ಮಾಡುವುದೊಂದು ಎಂದು ಮಕ್ಕಳಿಗನಿಸಿದ ಕ್ಷಣದಿಂದ ಅವರು ನಿಮ್ಮ ಮೇಲೆ ಗೌರವ ಕಳೆದುಕೊಳ್ಳುತ್ತಾರೆ. ನಮಗೆ ನಾವು ಮಿತಿ ಹಾಕಿಕೊಂಡರೆ ಹೇಳದಿದ್ದರೂ ಮಕ್ಕಳಿಗೆ ಇಡೀ ದಿನ ಸೋಷ್ಯಲ್ ಮೀಡಿಯಾ ನೋಡುವುದು ಅನಾರೋಗ್ಯಕರ ಎಂದು ತಿಳಿಯುತ್ತದೆ. ನಿಧಾನವಾಗಿ ಅವರೂ ಅದಕ್ಕೊಂದು ಬೌಂಡರಿ ಹಾಕಲಾರಂಭಿಸುತ್ತಾರೆ. 

ಮಕ್ಕಳಿಗೆ ಹೇಳುವ ಮುನ್ನ ನಾವು ನಮ್ಮ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಊಟಕ್ಕೆ ಕುಳಿತಾಗ ನಾವು ಸ್ಕ್ರೀನ್ ನೋಡುತ್ತಲೇ ಇರುತ್ತೇವೆಯೇ? ಕಾರ್‌ನಲ್ಲಿ ಹೋಗುವಾಗಲೂ ಫೋನ್‌ನೊಳಗೆ ಮುಳುಗಿ ಹೋಗಿರುತ್ತೇವೆಯೇ ? ಇದೆಲ್ಲ ಹೌದಾಗಿದ್ದಲ್ಲಿ, ಇದನ್ನು ಮಾಡಬೇಡಿ ಎಂದ ಮಾತ್ರಕ್ಕೆ ಮಕ್ಕಳು ಖಂಡಿತಾ ನಿಲ್ಲಿಸುವುದು ಸಾಧ್ಯವಿಲ್ಲ. 

ನೆನಪಿನ ಶಕ್ತಿ ಹೆಚ್ಚಿಸೋಕೆ ಬೇಕು ಈ ಜೀವನಶೈಲಿ

ಮಕ್ಕಳಿಗೆ ಸಮಯ ಕೊಡಿ
ಸೋಷ್ಯಲ್ ಮೀಡಿಯಾದಲ್ಲಿ ಮನರಂಜನೆ ಇದೆ, ಮಾಹಿತಿ ಇದೆ, ಅದು ಬಹಳ ಅಡಿಕ್ಟಿವ್. ಮಕ್ಕಳಿಗೆ ಸೋಷ್ಯಲ್ ಮೀಡಿಯಾ ಬಿಡಿ ಎಂದ ಮೇಲೆ ಅಂಥದೊಂದು ಅಡಿಕ್ಟಿವ್ ಆದ ಮನರಂಜನೆ ನೀಡುವ, ಮಾಹಿತಿ ನೀಡುವ ಮತ್ತೊಂದು ಮಾಧ್ಯಮದತ್ತ ಅವರ ಗಮನ ಹರಿಸುವಂತಾಗಬೇಕು. ಸೋಷ್ಯಲ್ ಮೀಡಿಯಾ ಬಿಟ್ಟ ಮಕ್ಕಳು ಈ ಎಲ್ಲ ಅಗತ್ಯಗಳನ್ನು ತುಂಬುವಂಥದ್ದು ಮತ್ತೊಂದೇನಿದೆ ಎಂದು ಹುಡುಕಾಡುತ್ತಾರೆ. ಆ ಮತ್ತೊಂದರ ಜಾಗ ಪೋಷಕರು ತುಂಬಬೇಕು. ನೀವು ಮಕ್ಕಳ ಬದುಕಲ್ಲಿ ಎಕ್ಸೈಟಿಂಗ್ ಅನಿಸಬೇಕು, ಎಂಟರ್‌ಟೈನಿಂಗ್ ಆಗಬೇಕು, ಹೆಚ್ಚು ಅರ್ಥಪೂರ್ಣ ಸಂಬಂಧ ಕೊಡಬೇಕು. ಅದು ಬಿಟ್ಟು ಪೋಷಕರು ಇಡೀ ದಿನ ಮಕ್ಕಳಿಗೆ ಬೈಯುವುದು, ಅವಮಾನಿಸುವುದು, ವ್ಯಂಗ್ಯವಾಡುವುದು, ತಾತ್ಸಾರ ಮಾಡುವುದು, ಕೆಲವೊಮ್ಮೆ ಹೊಡೆಯುವುದು ಮಾಡುತ್ತಿದ್ದರೆ ಅವರಾದರೂ ನಿಮ್ಮ ಮಾತನ್ನೇಕೆ ಕೇಳುತ್ತಾರೆ?

ಮಕ್ಕಳೊಂದಿಗೆ ಹೆಚ್ಚು ಕನೆಕ್ಟ್ ಆಗುವಂಥ ಸಂಬಂಧಕ್ಕೆ ಮಣೆ ಹಾಕಿ. ಅವರೊಂದಿಗೆ ಹೆಚ್ಚು ಮಾತನಾಡಿ, ಹೆಚ್ಚು ಆಟವಾಡಿ, ಅವರಿಷ್ಟ ಕಷ್ಟಗಳನ್ನು ವಿಚಾರಿಸಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ಪ್ರೀತಿಯನ್ನು ವ್ಯಕ್ತಪಡಿಸಿ. ಆಗ ಮಕ್ಕಳು ತಾವಾಗಿಯೇ ನಿಮ್ಮ ಬಳಿ ಬರುತ್ತಾರೆ. ಅಷ್ಟೇ ಅಲ್ಲ, ಎಂದಿಗಿಂತ ಹೆಚ್ಚು ಸಂತೋಷವನ್ನು ನೀವು ಅವರ ಮುಖದಲ್ಲಿ ಕಾಣಬಹುದು. ಸೋಷ್ಯಲ್ ಮೀಡಿಯಾವನ್ನು ಶತ್ರು ಎಂದು ಬಿಂಬಿಸುವ ಬದಲು, ಮಿತಿಯಲ್ಲಿ, ಆರೋಗ್ಯಕರವಾಗಿ ಹೇಗೆ ಅದನ್ನು ಬಳಸಬಹುದು ಎಂಬುದನ್ನು ತಿಳಿಸಿಕೊಡಿ. 

ಇದಾವುದಕ್ಕೂ ನಿಮಗೆ ಸಮಯವಿಲ್ಲವೆಂದಾದರೆ, ಅವರ ಪಾಡಿಗೆ ಅವರು ಸಮಯ ಕಳೆಯಲು ಏನನ್ನು ಕಂಡುಕೊಳ್ಳುತ್ತಾರೋ ಅದನ್ನು ದೂರುವ ಅಧಿಕಾರವೂ ನಿಮಗಿಲ್ಲ.