Asianet Suvarna News Asianet Suvarna News

ತಂಗಿಯಿಂದ ಮಾತ್ರ ಇವನ್ನೆಲ್ಲ ಕಲಿಯೋಕೆ ಸಾಧ್ಯ!

ತಂಗಿ ಅಕ್ಕನ ಅರಿವಿಗೆ ಬಾರದೆಯೇ ಆಕೆಗೆ ಸಾಕಷ್ಟನ್ನು ಕಲಿಸಿರುತ್ತಾಳೆ. ಅಕ್ಕನ ಜೀವನದಲ್ಲಿ ತಂಗಿಯದು ಮಹತ್ವದ ಸ್ಥಾನ. 

Things You Can ONLY Learn From Your Younger Sister
Author
Bangalore, First Published Jun 25, 2020, 5:12 PM IST

ಅಕ್ಕ ಅಂದ್ರೆ ಯಾವಾಗಲೂ ಕಲಿಸೋದು, ತಂಗಿ ಅಂದ್ರೆ ಕಲಿಯೋದು ಎಂಬ ನಂಬಿಕೆಯಿದೆ. ಗಣಿತದ ಸಮಸ್ಯೆ ಬಿಡಿಸುವುದರಿಂದ ಹಿಡಿದು ಆ ದಿನಗಳ ಬಗ್ಗೆ, ಹುಡುಗರೊಂದಿಗೆ ವರ್ತಿಸಬೇಕಾದ ರೀತಿಯವರೆಗೆ ಎಲ್ಲವನ್ನೂ ಅಕ್ಕ ಹೇಳಿಕೊಡುತ್ತಾಳೆ. ಆದ್ರೆ ನೀವು ಅಕ್ಕನ ಸ್ಥಾನದಲ್ಲಿದ್ರೆ ತಂಗಿಯಿಂದ ಎಷ್ಟೊಂದನ್ನು ಕಲಿತಿರುತ್ತೀರೆಂದು ನಿಮಗೇ ಗೊತ್ತಿರಲಿಕ್ಕಿಲ್ಲ. ಈ ಕೆಳಗಿನ ವಿಷಯಗಳನ್ನು ಓದಿದರೆ ಖಂಡಿತಾ ಅಕ್ಕಂದಿರಿದನ್ನು ರಿಲೇಟ್ ಮಾಡಿಕೊಳ್ಳಬಲ್ಲಿರಿ. 

- ಜಜ್ ಮಾಡದಿರಲು
ಆಕೆ ತನ್ನಿಡೀ ಬದುಕನ್ನು ನಿಮ್ಮೆಲ್ಲ ಹುಚ್ಚುತನ, ಮೊಂಡುತನ, ಹಟಮಾರಿತನವನ್ನು ನೋಡುತ್ತಲೇ ಬೆಳೆದಿರುತ್ತಾಳೆ. ಆದರೂ ಆಕೆಯಲ್ಲಿ ನಿಮ್ಮ ಮೇಲಿನ ಪ್ರೀತಿ ಒಂದಿನಿತೂ ಕಡಿಮೆಯಾಗುವುದಿಲ್ಲ. ಒಬ್ಬರನ್ನು ಜಜ್ ಮಾಡದೆ ಪ್ರೀತಿಸುವುದು ಹೇಗೆಂದು ಆಕೆ ಕಲಿಸುತ್ತಿದ್ದಾಳೆಲ್ಲವೇ?

ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

- ಪ್ರೀತಿಸುವವರೊಂದಿಗೇ ಜಗಳ
ಅಕ್ಕತಂಗಿಯರು ಜಗಳವಾಡದೆ ದಿನ ಮುಗಿಯುವುದು ಬಹುಷಃ ದುಸ್ತರವೇ. ಕೆಲ ದಿನ ಮಾತು ಬಿಟ್ಟಿದ್ದೂ ಇರಬಹುದು, ಅಮ್ಮನಿಗೆ ಹೇಳಿಕೊಟ್ಟು ಹೊಡೆಸಿದ ನೆನಪುಗಳು ಸಾಕಷ್ಟು ಇರಬಹುದು. ನಿಮ್ಮ ಟಾಪ್ ಮೇಲೆ ಕಲೆ ಮಾಡಿದಳೆಂದು, ಆಕೆಯೊಂದಿಗೆ ಹೊರಗೆ ಹೋಗಲಿಲ್ಲವೆಂದು, ನಿಮಗೆ ಕೊಡದೆಯೇ ಚಾಕೋಲೇಟ್ ತಿಂದಳೆಂದು- ಹೀಗೆ ಸಣ್ಣ ಸಣ್ಣ ವಿಷಯಕ್ಕೂ ಕಿತ್ತಾಡಿರಬಹುದು. ಆದರೂ ಇಬ್ಬರ ನಡುವಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಇಷ್ಟಕ್ಕೂ ಬಹಳ ಪ್ರೀತಿಸುವವರೊಂದಿಗೆ ಮಾತ್ರ ಹೀಗೆ ಕಿತ್ತಾಡಲು ಸಾಧ್ಯ. ಅದನ್ನು ತಂಗಿಗಿಂತ ಚೆನ್ನಾಗಿ ಅರ್ಥ ಮಾಡಿಸುವವರು ಇನ್ನೊಬ್ಬರಿರಲಿಕ್ಕಿಲ್ಲ. 

Things You Can ONLY Learn From Your Younger Sister

- ನಿಮಗಿಂತ ಹೆಚ್ಚು ಇನ್ನೊಬ್ಬರ ಬಗ್ಗೆ ಹೆಮ್ಮೆ
ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಇದ್ದೇ ಇರುತ್ತದೆ. ಇರಬೇಕು ಕೂಡಾ. ಆದರೆ, ಇನ್ನೊಬ್ಬರ ಸಾಧನೆಯನ್ನು ಕಿಂಚಿತ್ತೂ ಹೊಟ್ಟೆಕಿಚ್ಚಿಲ್ಲದೆ ಖುಷಿಯಾಗಿ ಸಂಭ್ರಮಿಸಲು ಸಾಧ್ಯ ಎಂಬುದನನ್ನು ತಿಳಿಸಿಕೊಟ್ಟಿದ್ದು ತಂಗಿ. ಆಕೆ ಅಂಬೆಗಾಲಿಂದ ನಡೆಯಲು ತೊಡಗಿದಾಗ, ಅಕ್ಕ ಎಂದು ಕರೆಯಲು ಆರಂಭಿಸಿದಾಗ, ಚರ್ಚಾಸ್ಪರ್ಧೆಯಲ್ಲಿ ಗೆದ್ದಾಗ, ಒಬ್ಬಳೇ ಹೊರಗೆ ತಿರುಗಾಡಿ ಬರುವಾಗ- ನಿಮಗೆ ನೀವೇ ಸಾಧಿಸಿದಷ್ಟು ಹೆಮ್ಮೆಯಾಗಿತ್ತಲ್ಲವೇ? ತಂದೆತಾಯಿಗೆ ಮಕ್ಕಳ ಗೆಲುವುಗಳ ಬಗ್ಗೆ ಆಗುವಂಥ ಸಂತೋಷವನ್ನು ತಂಗಿಯ ಗೆಲುವು ಅಕ್ಕನಿಗೆ ನೀಡುತ್ತದೆ. 

- ತಾಳ್ಮೆ
ತಂಗಿಯ ಜಗಳ, ಸಿಟ್ಟು, ಕೋಪತಾಪಗಳೆಲ್ಲ ನಿಮ್ಮನ್ನು ಆಗ ಹುಚ್ಚೆಬ್ಬಿಸಿರಬಹುದು. ಆದರೆ, ನಂತರದಲ್ಲಿ ಅವೇ ನಿಮಗೆ ತಾಳ್ಮೆಯನ್ನು ಕಲಿಸಿಕೊಟ್ಟವು. ಆಕೆ ಹೊಡೆದರೂ ತಿರುಗಿ ಹೊಡೆಯದೆ, ನಿಮ್ಮ ವಸ್ತುಗಳನ್ನು ಬಳಸಿದರೂ ಕೋಪ ಮಾಡಿಕೊಳ್ಳದಿರಲು ಕಲಿತಿರಿ. ಈ ತಾಳ್ಮೆ ಹಾಗೂ ಕೋಪ ಮಾಡಿಕೊಳ್ಳದಿರುವ ಪಾಠ ನಿಮಗೆ ಜೀವನದಲ್ಲಿ ಹಲವೆಡೆ ಸಹಾಯಕ್ಕೆ ಬರುತ್ತವೆ. 

Things You Can ONLY Learn From Your Younger Sister

- ಹಂಚಿಕೊಳ್ಳಲು ಕಲಿಸಿದವಳು
ಆಕೆ ಹುಟ್ಟುವ ಮುನ್ನ ಅಪ್ಪಅಮ್ಮನ ಪ್ರೀತಿಯಿಂದ ಹಿಡಿದು ಮನೆಯ ಎಲ್ಲವೂ ಕೇವಲ ನಿಮ್ಮೊಬ್ಬರದಾಗಿತ್ತು. ಆಕೆ ಬಂದ ಬಳಿಕ ಪ್ರೀತಿಯಿಂದ ಹಿಡಿದು ಬಟ್ಟೆಬರೆ, ಪುಸ್ತಕ, ಚಾಕೋಲೇಟ್, ಕೋಣೆ ಎಲ್ಲವನ್ನೂ ಹಂಚಿಕೊಳ್ಳಬೇಕಾಯಿತು. ಇದರಿಂದಾಗಿ ಹಂಚಿಕೊಂಡು ಬದುಕುವುದನ್ನು ಕಲಿತಿರಿ. 

- ಹೆಚ್ಚು ಜವಾಬ್ದಾರಿಯುತವಾಗಿರಲು
ಬೇಬಿಸಿಟ್ಟಿಂಗ್‌ನಿಂದ ಹಿಡಿದು ಆಕೆ ಹೊರ ಹೋಗಬೇಕಾದಾಗೆಲ್ಲ ಜೊತೆಗೆ ಕಂಪನಿ ಕೊಡುತ್ತಾ ಆಕೆಯ ರಕ್ಷಣೆಯ ಜವಾಬ್ದಾರಿ ಚಿಕ್ಕ ವಯಸ್ಸಿನಿಂದಲೇ ನಿಮ್ಮ ಹೆಗಲಿಗೆ ಬಿದ್ದಿರುತ್ತದೆ. ಹೇಗೆ ತಿನ್ನಬೇಕೆಂಬುದರಿಂದ ಹಿಡಿದು ಹೇಗೆ ಹೋಂ ವರ್ಕ್ ಮಾಡಬೇಕು, ಕಲಿಯಬೇಕು ಎಲ್ಲದಕ್ಕೂ ನಿಮ್ಮನ್ನೇ ಉದಾಹರಣೆಯಾಗಿ ಕೊಡುತ್ತಾ ಆಕೆಯನ್ನು ಬೆಳೆಸಿರುತ್ತಾಳೆ. ಈ ಎಲ್ಲ ಕಾರಣಗಳಿಗಾಗಿ ನೀವು ಹೆಚ್ಚು ಜವಾಬ್ದಾರಿಯುತರಾಗಿರುವುದು ಅನಿವಾರ್ಯವೇ ಆಗುತ್ತದೆ. 

ಹುಡುಗಿಯರು ಹೀಗಿದ್ದರೆ ಹುಡುಗರಿಗೆ ಇಷ್ಟವಾಗಲ್ಲ!

- ಉತ್ತಮ ತಾಯಾಗಲು
ನೀವು ಈಗಾಗಲೇ ಆಕೆಯನ್ನು ಸಣ್ಣವಳಿದ್ದಾಗಿನಿಂದ ನೋಡಿಕೊಂಡಿದ್ದೀರಿ. ಆಕೆ ನಿಮ್ಮನ್ನು ಎರಡನೇ ಅಮ್ಮ ಎಂದೇ ಕರೆಯುವುದು. ಹಾಗಾಗಿ, ನೀವು ತಾಯಿಯಾದಾಗ ನಿಮಗೆ ಮಗುವಿನ ಜವಾಬ್ದಾರಿ ಇತರರಷ್ಟು ಕಷ್ಟವೆನಿಸುವುದಿಲ್ಲ. ಸುಲಭವಾಗಿ ತಾಯ್ತನ ನಿಭಾಯಿಸಬಲ್ಲಿರಿ. 

- ಅನ್‌ಕಂಡಿಶನಲ್ ಆಗಿ ಪ್ರೀತಿಸಲು
ನೀವು ಆಕೆಯೊಂದಿಗೆ ಏನೆಲ್ಲ ಶೇರ್ ಮಾಡಿದ್ದೀರಿ ಎಂದು ಯೋಚಿಸಿ- ಆ ಮೊಂಡು ಮೂಗು, ಲಾಸ್ಟ್ ನೇಮ್, ನಿಮ್ಮ ವಸ್ತುಗಳು, ನಿಮ್ಮೆಲ್ಲ ಗುಟ್ಟುಗಳು, ಅಪ್ಪಅಮ್ಮನ ಮೇಲಿನ ದೂರುಗಳು- ಎಲ್ಲವನ್ನೂ ತಂಗಿಯೊಂದಿಗೆ ಶೇರ್ ಮಾಡಿದ್ದೀರಿ. ಹಾಗಾಗಿ, ಆಕೆಯೊಂದಿಗೆ ದಿನಕ್ಕೆ ನೂರೆಂಟು ಬಾರಿ ಜಗಳವಾಡಿದರೂ ಪ್ರೀತಿ ಮಾತ್ರ ಹೆಚ್ಚಾಗುತ್ತಲೇ ಹೋಗುತ್ತದೆ. ಹೀಗೆ ಅನ್‌ಕಂಡೀಶನಲ್ ಆಗಿ ಪ್ರೀತಿಸಲು ಸಾಧ್ಯವೆಂಬುದನ್ನು ಕಲಿಸಿದವಳು ತಂಗಿ. 

Follow Us:
Download App:
  • android
  • ios