ಜೀವನಶೈಲಿ, ಕೆಮಿಕಲ್ ಯುಕ್ತ ಆಹಾರ, ಮಾಲಿನ್ಯಮಯ ಪರಿಸರ ಮುಂತಾದವುಗಳಿಂದಾಗಿ ಇಂದು ಮಕ್ಕಳಲ್ಲೇ ಮರೆವು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಮರೆವಿನ ಕಾರಣದಿಂದ ಆಗಾಗ ಹಲವು ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಈ ಮರೆವು ಹೆಚ್ಚಾದರೆ ಅದು ಬದುಕಿನ ಎಲ್ಲ ಮಜಲುಗಳನ್ನೂ ಬುಡಮೇಲು ಮಾಡಿಬಿಡಬಲ್ಲದು. ಹಾಗಾಗಿ ಮೆಮೋರಿ ಪವರ್ ಹೆಚ್ಚಿಸಿಕೊಳ್ಳುವುದು, ಅದನ್ನು ಶಾರ್ಪ್ ಆಗಿಟ್ಟುಕೊಳ್ಳುವುದು ಅಗತ್ಯ. ಮೆದುಳಿನ ಆರೋಗ್ಯ ಕಾಪಾಡಿಕೊಂಡು ಮೆಮೋರರಿ ಪವರ್ ಹೆಚ್ಚಿಸಿಕೊಳ್ಳಲು ಹೀಗ್ ಮಾಡಿ.

ಗೊತ್ತೇ, ಪೀನಟ್‌ ಬಟರ್‌ನಿಂದ ವಜ್ರ ತೆಗೆಯಬಹುದು!

ಆಹಾರಾಭ್ಯಾಸ
ನಾವು ಸಾಮಾನ್ಯವಾಗಿ ನಮ್ಮ ಆಹಾರದ ಕಡೆ ಗಮನ ಹರಿಸುವುದಿಲ್ಲ. ಆಗಾಗ ಊಟವನ್ನು ಬಿಡುತ್ತೇವೆ, ಬದಲಿಗೆ ಎಣ್ಣೆಯಲ್ಲಿ ಕರಿದ, ಮಸಾಲೆಯುಕ್ತ ಆಹಾರ ಸೇವಿಸುತ್ತೇವೆ. ಇವೆಲ್ಲವೂ ಬದುಕಿನ ನಂತರದ ಘಟ್ಟಗಳಲ್ಲಿ ಮರೆವಿಗೆ ಕಾರಣವಾಗುತ್ತದೆ. ಒಂದು ಹೊತ್ತು ಊಟ ಬಿಡುವುದು ಸಾಮಾನ್ಯ ವಿಷಯದಂತೆ ಕಾಣಬಹುದು. ಆದರೆ, ಇದು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರುತ್ತದೆ. ಡಯಟ್‌ನಲ್ಲಿ ಹೆಚ್ಚು ಬಣ್ಣಗಳಿಂದ ಕೂಡಿದ ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇರಿಸಿ. ಇವುಗಳಲ್ಲಿರುವ ನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುತ್ತವೆ. ಟೊಮ್ಯಾಟೋ, ಪಾಲಕ್, ಒಂದಲಗ, ಆರೆಂಜ್ ಮುಂತಾದವುಗಳ ಸೇವನೆ ಹೆಚ್ಚಿಸಿ. 

ಚಟುವಟಿಕೆಯಿಂದಿರಿ
ಆ್ಯಕ್ಟಿವ್ ಆಗಿರಬೇಕು ಎಂದ ಮಾತ್ರಕ್ಕೆ ಜಿಮ್‌ಗೆ ಹೋಗಬೇಕೆಂದು ಅರ್ಥವಲ್ಲ. ಡ್ಯಾನ್ಸ್ ಮಾಡಿ, ಯಾವುದಾದರೂ ಹೊರಾಂಗಣ ಆಟವಾಡಿ, ವಾಕ್ ಮಾಡಿ, ಇತರೆ ವ್ಯಾಯಾಮಗಳನ್ನು ಟ್ರೈ ಮಾಡಿ. ದೇಹ ಚಟುವಟಿಕೆಯಿಂದಿದ್ದಷ್ಟೂ ಮೆದುಳಿಗೆ ರಕ್ತ ಚೆನ್ನಾಗಿ ಹರಿದು ಹೋಗುತ್ತದೆ, ಮೆಟಬಾಲಿಸಂ ಚೆನ್ನಾಗಿರುತ್ತದೆ- ಮೆದುಳಿನ ಕೆಲಸಗಳು ಶಾರ್ಪ್ ಆಗುತ್ತವೆ.         

ಕಲಿಯುತ್ತಲೇ ಇರಿ
ಸಾಮಾನ್ಯವಾಗಿ ಜನರು ದೈಹಿಕವಾಗಿ ಚಟುವಟಿಕೆಯಿಂದಿರುವ ಬಗ್ಗೆ ಯೋಚಿಸುತ್ತಾರೆ. ಆದರೆ, ಮಾನಸಿಕವಾಗಿ ಆ್ಯಕ್ಟಿವ್ ಆಗಿರುವುದನ್ನು ಕಡೆಗಣಿಸುತ್ತಾರೆ. ಎರಡೂ ನೆನಪಿನ ಶಕ್ತಿ ವೃದ್ಧಿಗೆ ಮುಖ್ಯ. ಮಾಡಿದ್ದೇ ಮಾಡುತ್ತಿದ್ದರೆ ಮನಸ್ಸೆಲ್ಲೋ ಇದ್ದರೂ ಕೆಲಸ ಸಾಗುತ್ತದೆ. ಮೆದುಳಿಗೆ ಹೆಚ್ಚು ಕೆಲಸವಾಗುವುದಿಲ್ಲ. ಆದರೆ, ಮೆದುಳಿಗೆ ಕೆಲಸ ಕೊಟ್ಟರಷ್ಟೇ ಅದು ಆ್ಯಕ್ಟಿವ್ ಆಗಿರುತ್ತದೆ. ಹೊಸ ಹೊಸ ಕಲಿಕೆಗಳು ಮನಸ್ಸನ್ನು ಚೇತೋಹಾರಿಯಾಗಿರಿಸುತ್ತವೆ. ಕಲಿಕೆ ಮುಗಿಯಿತೆಂದಾಗುವುದೇ ಇಲ್ಲ. ಅದು ಹೊಸ ಇನ್ಸ್‌ಟ್ರುಮೆಂಟ್ ಇರಬಹುದು, ಕಂಪ್ಯೂಟರ್ ಪ್ರೋಗ್ರಾಮಿಂಗ್ ಇರಬಹುದು, ಪೇಂಟಿಂಗ್, ಸೋಪ್ ಮೇಕಿಂಗ್ ಯಾವುದಾದರೂ ಸರಿ.  ಮೆದುಳಿಗೆ ಸವಾಲೊಡ್ಡುವಂಥ ವಿಷಯಗಳನ್ನು ಕಲಿಯಿರಿ. ಜೊತೆಗೆ ಆಗಾಗ ಸುಡೊಕು, ಪದಬಂಧ ಬಿಡಿಸುವುದು, ಜಾಣ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕೂಡಾ ಮಾಡುತ್ತಿರಿ. 

ಜನರೊಂದಿಗೆ ಬೆರೆಯಿರಿ
ಹೊಸ ಹೊಸ ಜನರೊಂದಿಗೆ ಬೆರೆಯುವುದು ನಮ್ಮ ಮನಸ್ಸಿಗೆ ಖುಷಿ ಕೊಡುವುದಷ್ಟೇ ಅಲ್ಲ, ಅದು ನಮ್ಮ ಮೆದುಳಿನ ಆರೋಗ್ಯಕ್ಕೂ ಮುಖ್ಯ. ಸಾಮಾಜಿಕವಾಗಿ ಬೆರೆಯುವುದರಿಂದ ಒತ್ತಡ ಮತ್ತು ಖಿನ್ನತೆ ದೂರಾಗುತ್ತವೆ. ಅಷ್ಟೇ ಅಲ್ಲ, ಮೆದುಳು ಚುರುಕಾಗಿದ್ದು, ಮರೆವಿನ ಸಮಸ್ಯೆಯಿಂದ ದೂರವುಳಿಯುತ್ತದೆ. ಹಾಗಾಗಿ, ಸಾಧ್ಯವಾದದಷ್ಟು ಹೊಸಬರ ಜೊತೆ ಬೆರೆಯಿರಿ, ಗೆಳೆತನ ಮಾಡಿಕೊಳ್ಳಿ, ಅವಕಾಶ ಸಿಕ್ಕಾಗಲೆಲ್ಲ ಗೆಳೆಯರು, ಸಂಬಂಧಿಕರು ಇತರರನ್ನು ಭೇಟಿಯಾಗಿ.

ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

ಗುಣಮಟ್ಟದ ನಿದ್ರೆ
ಮಾನಸಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಸಾಕಷ್ಟು ನಿದ್ರೆ, ವಿಶ್ರಾಂತಿ ಅಗತ್ಯ. ರೆಸ್ಟ್ ಎಂದರೆ ಕೇವಲ ದೈಹಿಕವಾಗಿಯಲ್ಲ, ಮಾನಸಿಕವಾಗಿಯೂ ರೆಸ್ಟ್ ಮಾಡುವುದು ಕಲಿಯಬೇಕು. ಅತಿಯಾದ ಒತ್ತಡಕ್ಕೆ ಒಳಗಾಗದಿರಿ. ಸ್ಟ್ರೆಸ್ ಹಾರ್ಮೋನ್‌ಗಳು ಹಿಪ್ಪೋಕ್ಯಾಂಪಸ್ಸನ್ನು ಡ್ಯಾಮೇಜ್ ಮಾಡುತ್ತವೆ. ಮೆದುಳಿನ ಈ ಭಾಗವೇ ನೆನಪುಗಳ ಕೇಂದ್ರವಾಗಿದ್ದು, ಇದಕ್ಕೆ ಹಾನಿಯಾದರೆ ಮರೆವು ಬರುತ್ತದೆ. ದಿನಕ್ಕೆ 8 ಗಂಟೆ ನಿದ್ರಿಸುವುದು ದೇಹಕ್ಕೂ ಮನಸ್ಸಿಗೂ ಒಳ್ಳೆಯದು. ಧ್ಯಾನ ಕೂಡಾ ಸಹಾಯಕ್ಕೆ ಬರುತ್ತದೆ.