Asianet Suvarna News Asianet Suvarna News

ದಾಂಪತ್ಯ ಎಂಬ ಯಜ್ಞಕುಂಡದಲ್ಲಿ ಪ್ರೇಮದ ಬೆಂಕಿ ಉರಿಯುತ್ತಲೇ ಇರಬೇಕು!

ಕೆಲವು ವರ್ಷಗಳ ದಾಂಪತ್ಯದ ಬಳಿಕ ದಂಪತಿಗಳಲ್ಲಿ ಒಂದು ಬಗೆಯ ಅನ್ಯಮನಸ್ಕತೆ, ಬೇಸರ ಮನೆ ಮಾಡುವುದನ್ನು ನೀವು ನೋಡಿರಬಹುದು, ಅನುಭವಿಸಿರಬಹುದು. ಇದ್ಯಾಕೆ ಹೀಗೆ, ಇದರಿಂದ ಪಾರಾಗುವುದು ಹೇಗೆ?

 

 

How to keep your love reinvented in your marriage
Author
Bengaluru, First Published Oct 28, 2021, 2:37 PM IST

ಒಂದು ದಾಂಪತ್ಯ (Marriage). ನೋಡಲಿಕ್ಕೂ ಇಬ್ಬರೂ ಚೆನ್ನಾಗಿದ್ದಾರೆ, ನೋಡಿದಾಗಲೇ ಪ್ರೇಮ (Love) ಉಕ್ಕುವಂತಿದ್ದಾರೆ. ಪ್ರತಿದಿನ ಅವನು ಆಕೆಯ ಕಚೇರಿಗೆ ಬಂದು ಪಿಕಪ್ ಮಾಡುತ್ತಾನೆ. ಅವನು ಬರುವುದು ಅರ್ಧ ಕ್ಷಣ ತಡವಾದರೆ ಅವಳು ಕೋಪಿಸಿಕೊಳ್ಳುತ್ತಾಳೆ, ಆತಂಕದಿಂದ ಶತಪಥ ಹಾಕುತ್ತಾಳೆ. ಅವನು ಆಕೆಯನ್ನು ಐಸ್‌ಕ್ರೀಂ ಕೊಡಿಸಿ ಸಮಾಧಾನ ಮಾಡುತ್ತಾನೆ. ಇಬ್ಬರೂ ಸಮಾನ ಆಸಕ್ತಿಯನ್ನು ಹೊಂದಿದವರು. ಅವಳಿಗೆ ಸುದೀಪ್ ಫಿಲಂಗಳು ಇಷ್ಟ; ಇವನು ಅವಳನ್ನು ಥಿಯೇಟರಿಗೆ ಕರೆದುಕೊಂಡು ಹೋಗುತ್ತಾನೆ. ಅವನಿಗೆ ಮೈಸೂರು ಪಾಕ್ (Mysore Pak) ಇಷ್ಟ. ಅವಳು ಕಷ್ಟಪಟ್ಟಾದರೂ ಮಾಡಿ ಕೊಡುತ್ತಾಳೆ. ಅವಳ ಬರ್ತ್‌ಡೇಗೆ ಸರ್‌ಪ್ರೈಸ್ ಗಿಫ್ಟ್ ಆಗಿ ಮಾಲ್ದೀವ್ಸ್‌ಗೆ (Maldives) ಟಿಕೆಟ್ ಬುಕ್ ಮಾಡಿಸಿದ್ದ. ಮಧುಚಂದ್ರವಂತೂ (honeymoon) ಹಿಮಾಚಲ ಪ್ರದೇಶದಲ್ಲಿ ತುಂಬಾ ರೋಮಾಂಚನಕಾರಿಯಾಗಿತ್ತು. ಹೇಳಿ ಮಾಡಿಸಿದ ಜೋಡಿ ಅನ್ನುತ್ತಾರೆ ಎಲ್ಲರೂ. ಅಕ್ಕಪಕ್ಕದವರು ಇವರ ಜೋಡಿ ನೋಡಿ ಅಸೂಯೆ ಪಡುತ್ತಾರೆ. ಹೆತ್ತವರು ತಮ್ಮ ಮಗ-ಸೊಸೆ, ಮಗಳು- ಅಳಿಯ ಹೀಗಿರಲಿ ಎಂದು ಬಯಸುತ್ತಾರೆ. ತಮ್ಮಿಬ್ಬರ ಮಧ್ಯೆ ಇನ್ನೊಂದು ಜೀವ ಬಂದರೆ, ನಮ್ಮ ಪ್ರೀತಿ ಹಂಚಿ ಹೋದೀತು ಎಂಬ ಭಯದಿಂದಲೇ ಇಬ್ಬರೂ ಇನ್ನೂ ಮಗು ಮಾಡಿಕೊಂಡಿಲ್ಲ. ಹೀಗಿರುವ ದಾಂಪತ್ಯದಲ್ಲಿ ಹಲಕೆಲವು ಜಗಳಗಳೂ ಅಸಮಾಧಾನಗಳೂ ಇವೆ. ಆದರೆ ಅದೆಲ್ಲ ಮರುಕ್ಷಣವೇ ಸರಿಹೋಗುತ್ತವೆ. 

ಆದರೆ ಕಳೆದ ಒಂದು ವರ್ಷದಿಂದ ಏನೋ ವಿಕರ್ಷಣೆ, ಏನೋ ಅಸಮಾಧಾನ, ಅತೃಪ್ತಿ. ಇಬ್ಬರೂ ಮೊದಲಿನಂತೆಯೇ ಹಗ್ (Hug) ಮಾಡಿಕೊಳ್ಳುತ್ತಾರೆ, ಪ್ರೀತಿಸುತ್ತಾರೆ. ಮೊದಲಿನಂತೆಯೇ ಗಿಫ್ಟ್ ಕೊಟ್ಟುಕೊಳ್ಳುತ್ತಾರೆ. ಆದರೆ ಚುಂಬನದಲ್ಲಿ, ಆಲಿಂಗನದಲ್ಲಿ, ಮಿಲನದಲ್ಲಿ ಮೊದಲಿನ ಕಾವು- ಬೆಂಕಿ ಇದೆಯಾ ಎಂದು ಕೇಳಿದರೆ, ಊಹೂಂ. ಯಾವುದೋ ಅಂತರ. ಯಾವುದೋ ಕಾತುರ. ಅದೇಕೆ ಹೀಗೆ ಎಂದು ಕೇಳಿದರೆ ಇಬ್ಬರಲ್ಲಿಯೂ ಉತ್ತರವಿಲ್ಲ. ಹಾಗೇನಿಲ್ಲವಲ್ಲಾ ಎನ್ನುತ್ತಾರೆ. ಆದರೆ ದಾಂಪತ್ಯದ ಬೇರುಗಳು ಒಳಗೊಳಗೇ ಕೊರಗ ತೊಡಗಿರುವುದು ಇಬ್ಬರಿಗೂ ಅರಿವಿಗೆ ಬಂದಿದೆ.

How to keep your love reinvented in your marriage

ಬಾಲಿವುಡ್‌ನ (Bollywood)  ಸೊಗಸಾದ ದಾಂಪತ್ಯ (Couple) ಜೋಡಿಯಾದ ಜೆನೆಲಿಯಾ ಹಾಗೂ ರಿತೇಶ್ ದೇಶಮುಖ್ (Genilia and Reteish Deshmukh)  ಜೋಡಿ ಒಮ್ಮೆ ಟಿವಿ ಕಾರ್ಯಕ್ರಮವೊಂದರಲ್ಲಿ, 'ನೀವಿಬ್ಬರೂ ಇಷ್ಟೊಂದು ಚೆನ್ನಾಗಿ ಇರೋದಕ್ಕೆ ಕಾರಣವೇನು?' ಎಂದು ಯಾರೋ ಪ್ರಶ್ನಿಸಿದರು. ಅದಕ್ಕೆ ರಿತೇಶ್ ಕೊಟ್ಟ ಉತ್ತರ ಹೀಗಿತ್ತು-  ನಾವು ನಮ್ಮ ಪ್ರೀತಿಯನ್ನು ಮರಳಿ ಮರಳಿ ನವೀಕರಿಸಿಕೊಳ್ಳುತ್ತಲೇ ಇರಬೇಕು. ಪ್ರೀತಿಯೇನೋ ಮದುವೆಯಲ್ಲಿ ಪರ್ಯವಸಾನ ಆಗಬಹುದು. ಆದರೆ ಮದುವೆಯಲ್ಲೇ ಅದು ಮುಗಿಯಬಾರದು. ಮದುವೆಯೇ ಪ್ರೀತಿಯ (love) ಕೊನೆಯಲ್ಲ. ಮದುವೆಯ ನಂತರವೂ ಪರಸ್ಪರ ಪ್ರೇಮವನ್ನು ನವೀಕರಿಸುವ ವಿಧಾನಗಳನ್ನು ಹುಡುಕುತ್ತಲೇ ಇರಬೇಕು,' ಎಂದಿದ್ದರು.

ಇದು ಎಷ್ಟು ನಿಜ ಅಲ್ವೆ? ಒಂದೆರಡು ವರ್ಷಗಳ ದಾಂಪತ್ಯದ ಬಳಿಕ, ಆ ಮೊದಲಿನ ದೇಹಗಳ ಹುಡುಕಾಟ ಬೆದಕಾಟ ಇರುವುದಿಲ್ಲ. ಯಾಕೆಂದರೆ ಪರಸ್ಪರರ ದೇಹಗಳ ಮೇಲಿದ್ದ ಕುತೂಹಲ ಆಗಿಹೋಗಿರುತ್ತದೆ. ನಂತರ ಏನಿದ್ದರೂ ಮನಸ್ಸು ಮನಸ್ಸುಗಳ ಕೂಡಾಟ. ಮನದ ಪ್ರೇರಣೆಯಿಂದಲೇ ದಾಂಪತ್ಯ ನಡೆಯುತ್ತಿರುತ್ತದೆ. ಹೀಗಾಗಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಪೂರ್ವಕ ನಾವು ಹೋರಾಡುತ್ತಲೇ ಇರಬೇಕು. 'ದಾಂಪತ್ಯದಲ್ಲಿ ಪರ್ಪಸ್ ಎಂಬ ನಿತ್ಯಾಗ್ನಿ ಉರಿಯುತ್ತಲೇ ಇರಬೇಕು' ಎಂದು ಬರೆಯುತ್ತಾರೆ ರವಿ ಬೆಳಗೆರೆ. ಪ್ರೀತಿ ಎಂಬುದು ಈ ನಿತ್ಯಾಗ್ನಿಯ ಹವಿಸ್ಸು. ರೋಮಾಂಚಕತೆ ಎಂಬುದು ನಾವು ಅದಕ್ಕೆ ನೀಡಬೇಕಾದ ಜ್ವಲನಶೀಲತೆ.

ಬಹಳ ಕಾಲ ಜೊತೆಯಾಗಿರೋ ಜೋಡಿಗಳು ನೋಡೋಕೂ ಒಂದೇ ಥರ, ಇದು ಹೇಗೆ ಸಾಧ್ಯ?

ಬೇಕಿದ್ದರೆ ಈ ಜೆನಿಲಿಯಾ (Genelia Dsouza) ರಿತೇಶ್ (Riteish Deshmukh) ದಾಂಪತ್ಯವನ್ನೇ ನೋಡಿ. ಅವರಿಬ್ಬರೂ ಮೊದಲು ಭೇಟಿಯಾದಾಗ ಜೆನಿಲಿಯಾ 16 ವರ್ಷದ ಹುಡುಗಿ. ರಿತೇಶ್ 25 ವರ್ಷದ ಯುವಕ. ಇಬ್ಬರೂ ಒಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ರಿತೇಶ್, ಜೆನೆಲಿಯಾಗಿಂತ 9 ವರ್ಷ ದೊಡ್ಡವರು. ಆದರೆ ಹಾಗೆಂದೂ ಜೆನೆಲಿಯಾಗೆ ಅನಿಸಲೇ ಇಲ್ಲ. ಇಬ್ಬರೂ ತಮ್ಮ ಮೊದಲ ಸಿನಿಮಾದ ಕೆಲಸ ಮುಗಿಸಿ, ವಿದಾಯ ಹೇಳಿ ಬಿಟ್ಟು ತೆರಳುವ ದಿನ, ರಿತೇಶ್ ಮೈಕ್ ತೆಗೆದುಕೊಂಡು ಜೆನೆಲಿಯಾಳನ್ನು ನೋಡುತ್ತ "ಜಾಯೆ ತೋ ಚಾಹೇ ಕಹಾಂ'  ಹಾಡನ್ನು ಹಾಡಿದರು. ಜೆನೆಲಿಯಾಗೆ ಅದು ಆಕಸ್ಮಿಕ. ಇಂಥ ಆಕಸ್ಮಿಕಗಳು, ಪ್ರೇಮ ಪ್ರಸ್ತಾಪಗಳು ಮುಂದಿನ 9 ವರ್ಷ ಕಾಲ ಅವರ ಪ್ರೇಮವನ್ನು ಜೀವಂತವಾಗಿಟ್ಟವು. ಇಬ್ಬರೂ ತಮ್ಮ ಪ್ರೇಮದ ಕಾವು ಆರಲು ಬಿಡಲೇ ಇಲ್ಲ. 9 ವರ್ಷದ ಬಳಿಕ ಅವರು ಮದುವೆಯಾದರು. ಮದುವೆಯಾದ ಕೂಡಲೇ ಹನಿಮೂನ್ ಎಂದೆಲ್ಲ ಹೋಗಲು ಸಾಧ್ಯವಾಗದೆ, ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಆದರೆ, ತಮ್ಮ ಪ್ರೇಮವನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳುತ್ತಾ ಇರುವುದರಿಂದಲೇ ಇಂದಿಗೂ, ಎರಡು ಮಕ್ಕಳಾದ ಮೇಲೂ, ನವ ವಧುವರರಂತೆ ಕಂಗೊಳಿಸುತ್ತಾರೆ. 

ನವ ವಧುವರರಿಗೆ ಎದುರಾಗುವ ಶೃಂಗಾರ ಸಮಸ್ಯೆಗಳಿವು!

ಏನಿಲ್ಲ, ಮಾಡಬೇಕಾದುದಿಷ್ಟೇ. ಸಂಗಾತಿಯನ್ನು ಪೂರ್ತಿಯಾಗಿ ಗಮನಿಸುತ್ತಿರಬೇಕು. ಆಕೆಗೆ/ಆತನಿಗೆ ಯಾವುದಿಷ್ಟ, ಯಾವುದು ಕಷ್ಟ, ಯಾವುದು ಆತ/ಕೆಯ ರೋಮಾಂಚನವನ್ನು ಟ್ರಿಗರ್ ಮಾಡುತ್ತದೆ, ಇವೆಲ್ಲವನ್ನೂ ನೋಡಬೇಕು. ಆಕೆಯ/ ಆತನ ಒಂದು ನಿಟ್ಟುಸಿರು ಕೂಡ ನಿಮಗೆ ಯಾವಾಗ ಅರ್ಥವಾಗುತ್ತದೋ, ಆಗ ನಿಮ್ಮ ದಾಂಪತ್ಯ ಅರ್ಥಪೂರ್ಣವಾಗಿರುತ್ತದೆ. ಹೌದು, ಕೆಲವೊಮ್ಮೆ ದುಃಖ, ಬೇಸರದ, ಅಸಮಾಧಾನದ ಗಳಿಗೆಗಳು ಬರುತ್ತವೆ. ಆದರೆ ಪ್ರೇಮವಿಲ್ಲದ, ವಿಶ್ವಾಸದ್ರೋಹದ, ವಂಚನೆಯ ಗಳಿಗೆಗಳು ಎಂದೂ ಬರಬಾರದು. 

ಅಂದಹಾಗೆ ನೀವು ನಿಮ್ಮ ಪತ್ನಿಗೆ ಆಕೆ ಕೇಳದೆಯೇ ಒಂದು ಒಳ್ಳೇ ಟಾಪ್ ತೆಗೆಸಿಕೊಟ್ಟು ಎಷ್ಟು ಸಮಯವಾಯಿತು? ನೀವು ನಿಮ್ಮ ಗಂಡನಿಗೆ ಆತ ಕೇಳದೆಯೇ ಒಂದೊಳ್ಳೇ ಶರ್ಟ್ ತೆಗೆಸಿಕೊಟ್ಟು ಎಷ್ಟು ದಿನವಾಯಿತು? ಒಮ್ಮೆ ಯೋಚಿಸಿನೋಡಿ, ಪ್ರೇಮ ಭೌತಿಕ ವಸ್ತುಗಳಲ್ಲಿ ಇಲ್ಲ, ನಿಜ. ಆದರೆ ಅದನ್ನು ಕೊಡಿಸುವ ಮನಸ್ಸಿನಲ್ಲಿದೆ. ಹೌದು, ದಾಂಪತ್ಯ ಎಂಬ ನಿತ್ಯಾಗ್ನಿಕುಂಡಕ್ಕೆ ಪ್ರೀತಿ ಎಂಬ ಅಜ್ಯವನ್ನು ಸುರಿಯುತ್ತಲೇ ಇರಬೇಕು!   

40ರ ವಯಸ್ಸಿನ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನಾಗುತ್ತದೆ?

Follow Us:
Download App:
  • android
  • ios