Asianet Suvarna News Asianet Suvarna News

ಮಕ್ಕಳ ಬೆಸ್ಟ್ ಫ್ರೆಂಡ್ ಈ ಪೆಂಗ್ವಿನ್ ಡ್ಯಾಡ್

ಕಾಲದೊಂದಿಗೆ ಅಪ್ಪನೂ ಬದಲಾಗಿದ್ದಾನೆ. ಆಧುನಿಕ ಅಪ್ಪ ಮಕ್ಕಳ ಬೆಸ್ಟ್ ಫ್ರೆಂಡ್. ಅಮ್ಮನಂತಿರುವ ಈ ಪೆಂಗ್ವಿನ್ ಡ್ಯಾಡ್ ಮಕ್ಕಳಿಗೆ ಮಾತ್ರವಲ್ಲ,ಅಮ್ಮಂಗೂ ಸೂಪರ್ ಹೀರೋನೇ!

How modern Indian dads role is changing
Author
Bangalore, First Published Jun 21, 2020, 4:39 PM IST

ಅದೊಂದು ಕಾಲವಿತ್ತು, ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ದೂರದಲ್ಲಿ ಬರುತ್ತಿರುವ ಅಪ್ಪನನ್ನು ನೋಡುತ್ತಿದ್ದಂತೆ ಮನೆಯೊಳಗೆ ಓಡಿ ಹೋಗಿ ಕೋಣೆ ಸೇರಿಕೊಳ್ಳುತ್ತಿದ್ದರು. ಅಪ್ಪ ಅಂದ್ರೆ ಅದೇನೋ ಭಯ. ಅಪ್ಪ ಅಂದ್ರೆ ಬಿಗುಮಾನ, ಶಿಸ್ತು, ಬೈಗುಳ, ಹೊಡೆತ ಎಂಬ ಭಾವನೆ. ಹಾಗಂತ ಅಂದಿನ ಅಪ್ಪನಿಗೆ ಮಕ್ಕಳ ಮೇಲೆ ಪ್ರೀತಿ, ಮಮಕಾರ ಇರಲಿಲ್ಲ ಎಂದೇನಲ್ಲ. ಮಕ್ಕಳಿಗೆ ಹೊಟ್ಟೆ ತುಂಬಾ ಹಿಟ್ಟು, ಮೈ ತುಂಬಾ ಬಟ್ಟೆ ಕೊಡಿಸಲು ಅಂದಿನ ಅಪ್ಪಂದಿರು ಚೌಕಾಸಿ ಮಾಡುತ್ತಿರಲಿಲ್ಲ. ಆದ್ರೆ ಮನೆ ಯಜಮಾನ ಎಂಬ ಕಾರಣಕ್ಕೋ ಅಥವಾ ತೊಡೆ ಮೇಲೆ ಕೂರಿಸಿಕೊಂಡು ಮುದ್ದು ಮಾಡಿದ್ರೆ ಮಕ್ಕಳು ಸಲೀಗೆ ತಕೋತ್ತಾರೆ ಎಂಬ ಕಾರಣಕ್ಕೂ ಗೊತ್ತಿಲ್ಲ, ಮಕ್ಕಳನ್ನು ಹತ್ತಿರ ಬಿಟ್ಟುಕೊಡುತ್ತಿರಲಿಲ್ಲ. ಆದ್ರೆ ಕಾಲ ಬದಲಾಗುತ್ತಿದ್ದಂತೆ ಈ ಸ್ಟ್ರಿಕ್ ಅಪ್ಪ ಕೂಡ ಬದಲಾಗುತ್ತ ಸಾಗಿದ. ಈ ಬದಲಾವಣೆ ಎಷ್ಟರ ಮಟ್ಟಿಗಾಯಿತೆಂದ್ರೆ ಆಧುನಿಕ ಕಾಲದಲ್ಲಿ ಅಪ್ಪನೊಳಗೋ ಒಬ್ಬ ಅಮ್ಮನಿದ್ದಾಳೆ ಎಂಬುದರ ಪರಿಚಯವಾಯ್ತು. ಅಮ್ಮನಂತಹ ಆಧುನಿಕ ಅಪ್ಪಂದಿರಿಗೆ ವಿಶೇಷವಾದ ಬಿರುದೂ ಇದೆ. ಅದೇ ಪೆಂಗ್ವಿನ್ ಡ್ಯಾಡ್ಸ್.

How modern Indian dads role is changing

ನಿಮ್ಮ ಮಗು ಸುಳ್ಳು ಹೇಳ್ತಿದೆಯಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಪೆಂಗ್ವಿನ್ ಡ್ಯಾಡ್ ಎಂಬ ಹೆಸರೇಕೆ?
ನೀವು ಪೆಂಗ್ವಿನ್‍ಗಳ ಕುರಿತ ವೈಡ್ ಲೈಫ್ ಡಾಕ್ಯುಮೆಂಟ್ರಿಗಳನ್ನು ನೋಡಿದ್ರೆ ಮಕ್ಕಳ ಆರೈಕೆ ಮಾಡುವ ಅಪ್ಪನನ್ನು ಪೆಂಗ್ವಿನ್ ಡ್ಯಾಡ್ ಎಂದು ಕರೆಯಲು ಕಾರಣವೇನು ಎಂಬುದು ಅರ್ಥವಾಗಿರುತ್ತೆ. ಅಂಟಾಕ್ರ್ಟಿಕದಲ್ಲಿ ಜೀವಿಸುವ ಪೆಂಗ್ವಿನ್‍ಗಳಲ್ಲಿ ಒಂದು ವಿಶೇಷ ಸಂಪ್ರದಾಯವಿದೆ. ಪ್ರತಿವರ್ಷ ಹೆಣ್ಣು ಪೆಂಗ್ವಿನ್‍ಗಳು ಮೀನು ಹುಡುಕಿಕೊಂಡು ಆಳ ಸಮುದ್ರಕ್ಕೆ ಈಜಿಕೊಂಡು ಹೋಗುತ್ತವೆ. ಹೀಗೆ ಹೊರಡುವ ಮುನ್ನ ಇವು ಮೊಟ್ಟೆಗಳನ್ನಿಟ್ಟು ಅವುಗಳನ್ನು ತನ್ನ ಸಂಗಾತಿಯ ಸುಪರ್ದಿಗೆ ನೀಡುತ್ತವೆ. ತಂದೆ ಪೆಂಗ್ವಿನ್ ಮೊಟ್ಟೆಗಳಿಗೆ ಕಾವು ನೀಡಿ ಮರಿ ಮಾಡಿ ಅವುಗಳನ್ನು ತಾಯಿ ಪೆಂಗ್ವಿನ್ ಮೀನುಗಳೊಂದಿಗೆ ಹಿಂತಿರುಗುವ ತನಕ ಅಂದ್ರೆ ಸುಮಾರು ಮೂರು ತಿಂಗಳು ಜತನದಿಂದ ಕಾಪಾಡುತ್ತೆ. ತಾಯಿ ಮರಳಿದ ಬಳಿಕವೂ ತಂದೆ ಪೆಂಗ್ವಿನ್ ಮರಿಗಳು ದೊಡ್ಡವಾಗುವ ತನಕ ಅವುಗಳ ಪೋಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತೆ. 

ಪ್ರಗ್ನೆನ್ಸಿ; ಹೀಗಿರಲಿ ಪತಿಪತ್ನಿ ನಡುವಿನ ಇಂಟಿಮಸಿ

ಭಾರತದಲ್ಲಿ ಪೆಂಗ್ವಿನ್ ಡ್ಯಾಡ್ಸ್ ಸಂಖ್ಯೆ ಹೆಚ್ಚಳ
2018ರಲ್ಲಿ ಫ್ಲಿಪ್‍ಕಾರ್ಟ್ ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಭಾರತದ 17 ನಗರಗಳ 1,700 ಅಪ್ಪಂದಿರ ಸಮೀಕ್ಷೆ ನಡೆಸಿತ್ತು. ಇದ್ರಲ್ಲಿ ಶೇ.85ರಷ್ಟು ಅಪ್ಪಂದಿರು ತಮ್ಮ ಮಗುವನ್ನು ಬೆಳಗ್ಗೆ ಹಾಸಿಗೆಯಿಂದ ಎಬ್ಬಿಸಿ ಸ್ಕೂಲ್‍ಗೆ ಸಿದ್ಧ ಮಾಡೋದ್ರಿಂದ ಹಿಡಿದು ರಾತ್ರಿ ಮಲಗಿಸುವ ತನಕ ಮಗುವಿಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡೋದಾಗಿ ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ ಬೆಂಗಳೂರಿನ ಅಪ್ಪಂದಿರು ಟಾಪ್‍ನಲ್ಲಿದ್ದಾರೆ. ಬೆಂಗಳೂರಿನ ಶೇ.91ರಷ್ಟು ಅಪ್ಪಂದಿರು ಮಕ್ಕಳ ನಿತ್ಯದ ಕೆಲಸಗಳನ್ನು ತಾವೇ ಮಾಡುತ್ತಾರಂತೆ. ಇನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಅಪ್ಪಂದಿರು ಮಕ್ಕಳ ಪಾಲನೆಯಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸೋದಾಗಿ ಹೇಳಿದ್ದಾರೆ. ಇದ್ರಿಂದ ಖುಷಿ ಸಿಗುವ ಜೊತೆ ಮಕ್ಕಳ ಉತ್ತಮ ಸ್ನೇಹಿತನಾಗಲು ಸಾಧ್ಯವಾಗುತ್ತೆ ಎಂದಿದ್ದಾರೆ.

How modern Indian dads role is changing

ಈ ಬದಲಾವಣೆಗೇನು ಕಾರಣ?
ಮಕ್ಕಳ ಪಾಲನೆಯಲ್ಲಿ ಅಪ್ಪಂದಿರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರೋದಕ್ಕೆ ಮುಖ್ಯ ಕಾರಣ ಆಧುನಿಕ ಮಹಿಳೆಯರು ಉದ್ಯೋಗಕ್ಕಾಗಿ ಮನೆ ಬಿಟ್ಟು ಹೊರಹೋಗುತ್ತಿರೋದು. ಪತ್ನಿ ದುಡಿಯುವ ಮೂಲಕ ಕುಟುಂಬ ನಿರ್ವಹಣೆಯಲ್ಲಿ ತನಗೆ ಹೆಗಲು ನೀಡುತ್ತಿರುವಾಗ ಆಕೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳೋದು ಪತಿಗೆ ಅನಿವಾರ್ಯವೂ ಆಗಿದೆ. ಅದ್ರಲ್ಲೂ ನಗರಗಳಲ್ಲಿರುವ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ಪತಿ-ಪತ್ನಿ ಸಮನಾಗಿ ಹಂಚಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.

ನೀವು ಎಮೋಶನಲಿ ಇಂಟಲಿಜೆಂಟಾ?

ಅಪ್ಪನ ಶ್ರೀರಕ್ಷೆ ಮಕ್ಕಳಿಗೆ ಭೀಮಬಲ
ಪೆಂಗ್ವಿನ್ ಡ್ಯಾಡ್ಸ್ ತಮ್ಮ ಮಕ್ಕಳೊಂದಿಗೆ ಸ್ಟ್ರಾಂಗ್ ಬಾಂಡಿಂಗ್ ಹೊಂದಿರುತ್ತಾರೆ. ಮಕ್ಕಳ ಶಿಕ್ಷಣ, ಆಟ, ಕಲಿಕೆ ಹೀಗೆ ಅವರ ಪ್ರತಿ ಬೆಳವಣಿಗೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಮಗುವಿನ ಪಾಲನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ಪಾಲ್ಗೊಂಡಾಗ ಮಕ್ಕಳು ಭಾವನಾತ್ಮಕವಾಗಿ ಬಲಿಷ್ಠರಾಗುವ ಜೊತೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತೆ ಅನ್ನೋದು ಮನಶಾಸ್ತ್ರಜ್ಞರ ಅಭಿಪ್ರಾಯ. ಮಕ್ಕಳಿಗೆ ಅಪ್ಪನೇ ಮೊದಲ ಸೂಪರ್ ಹೀರೋ. ಅದ್ರಲ್ಲೂ ಊಟ, ಸ್ನಾನ, ನಿದ್ರೆ ಹೀಗೆ ಪ್ರತಿ ಕೆಲಸದಲ್ಲೂ ಜೊತೆಯಾಗುವ ಅಪ್ಪ ಮಕ್ಕಳ ಬೆಸ್ಟ್ ಫ್ರೆಂಡ್ ಆಗೋದ್ರಲ್ಲಿ ಡೌಟೇ ಇಲ್ಲ.

Follow Us:
Download App:
  • android
  • ios