ನೀವು ಪಕ್ಕದಲ್ಲಿರುವ ಬಾಟಲ್ ಎತ್ತಿ ನೀರು ಕುಡಿದು ಇಳಿಸುವ ಹೊತ್ತಿಗಾಗಲೇ ಆತ್ಮಹತ್ಯೆಗೆ ಒಂದು ಜೀವ ಬಲಿಯಾಗಿರುತ್ತದೆ. ಅಷ್ಟೇ ಏಕೆ, ನೀವು ಈ ಲೇಖನವನ್ನು ಕ್ಲಿಕ್ ಮಾಡಿ ತೆಗೆದು ಒಂದೆರಡು ಲೈನ್ ಓದುವಷ್ಟರಲ್ಲಿ ಎಲ್ಲೋ ಯಾರೋ ಒಬ್ಬ ತನ್ನ ಜೀವ ತೆಗೆದುಕೊಂಡಿರುತ್ತಾನೆ. ಹೌದು, ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಪ್ರಪಂಚದಲ್ಲಿ ಪ್ರತಿ 40 ಸೆಕಂಡ್‌ಗಳಿಗೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಬಲಿಯಾಗುತ್ತಾನೆ. ಪ್ರತಿ ವರ್ಷ ಸುಮಾರು 8 ಲಕ್ಷ ಜನರು ಆತ್ಮಹತ್ಯೆಯಿಂದ ಜೀವ ಬಿಡುತ್ತಾರೆ. 

ಆತ್ಮಹತ್ಯೆಗೆ ವಯಸ್ಸು, ವೃತ್ತಿ, ದೇಶ, ವ್ಯಕ್ತಿತ್ವ ಯಾವ ಬೇಧವೂ ಇಲ್ಲ. ಆದರೆ, 15ರಿಂದ 29 ವಯೋಮಾನದವರಲ್ಲಿ ಅತಿ ಹೆಚ್ಚು ಸಾವಿಗೆ ಆ್ಯಕ್ಸಿಡೆಂಟ್ ಬಳಿಕ ಆತ್ಮಹತ್ಯೆಯೇ ಎರಡನೇ ಪ್ರಮುಖ ಕಾರಣ. ಆದರೆ, ಇಷ್ಟೊಂದು ಸಂಖ್ಯೆಯ ಜನ ಆತ್ಮಹತ್ಯೆ ಮಾಡಿಕೊಳ್ಳುವುದೇಕೆ? ಯಾಕೆ ಜನರಲ್ಲಿ ಆತ್ಮಹತ್ಯೆಯ ಒಲವು ಹೆಚ್ಚು? ಸಾಮಾನ್ಯವಾಗಿ ಖಿನ್ನತೆಯನ್ನು ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ಆದರೆ, ವರದಿಯು ಬೇರೆಯದೇ ಹೇಳುತ್ತದೆ. ಇದರ ಪ್ರಕಾರ ಕೇವಲ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ.5ರಷ್ಟು ಮಂದಿ ಮಾತ್ರ ಖಿನ್ನತೆ ಹೊಂದಿರುತ್ತಾರೆ. ಹಾಗಿದ್ದರೆ, ಉಳಿದವರು ಯಾವ ಕಾರಣಕ್ಕೆ ಜೀವಕ್ಕೆ ಮುಕ್ತಿ ಹಾಡುತ್ತಾರೆ?

ನನ್ನ ಮಗನಿಗೆ ಆನ್‌ಲೈನ್‌ ಕ್ಲಾಸುಗಳು ಬೇಡ, ಯಾಕೆಂದರೆ...

ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?
ನ್ಯೂಜಿಲ್ಯಾಂಡ್‌ನ ಒಟಾಗೋ ಯೂನಿವರ್ಸಿಟಿಯ ಪ್ರಮುಖ ಮನಃಶಾಸ್ತ್ರಜ್ಞ ಜೆಸ್ಸೀ ಬೆರಿಂಗ್ ಈ ಬಗ್ಗೆ ಪುಸ್ತಕ ಬರೆದಿದ್ದಾರೆ. ಅದರ ಹೆಸರು 'ಸೂಸೈಡಲ್: ವೈ ವಿ ಕಿಲ್ ಅವರ್‌ಸೆಲ್ವ್ಸ್'. ಇದರಲ್ಲಿ ಅವರು ಆತ್ಮಹತ್ಯೆಯ ಕುರಿತು ಹೇಳಿರುವುದು ಹೀಗೆ: 'ಆತ್ಮಹತ್ಯಾ ಪ್ರವೃತ್ತಿಗೆ ಶೇ.43ರಷ್ಟು ಜನರಲ್ಲಿ ಜೀನ್ಸ್ ಕಾರಣವಾಗಿದ್ದರೆ, ಇನ್ನು ಶೇ,57ರಷ್ಟು ಜನರಲ್ಲಿ ಸುತ್ತಲ ವಾತಾವರಣ ಹಾಗೂ ಘಟನೆಗಳು ಕಾರಣವಾಗಿರುತ್ತವೆ'.

ಒತ್ತಡ ಹಾಗೂ ಅತಿಯಾದ ನಿರೀಕ್ಷೆ
ಹೆಚ್ಚಿನವರ ಆತ್ಮಹತ್ಯೆ ಇತರೆ ಜನರೇ ಕಾರಣವಾಗಿರುತ್ತಾರೆ ಎನ್ನುವುದು ಕ್ರೂರ ಎನಿಸಬಹುದು. ಆದರೆ ಅದೇ ನಿಜ ಎನ್ನುತ್ತಾರೆ ಬೆರಿಂಗ್. ಸಾಮಾಜಿಕ ಒತ್ತಡಗಳು ಹಾಗೂ ನಮ್ಮ ಮೇಲೆ ಇತರರಿಟ್ಟಿರುವ ಅತಿಯಾದ ನಿರೀಕ್ಷೆಗಳ ಭಾರಕ್ಕೆ ಆತ್ಮಹತ್ಯಾ ಪ್ರವೃತ್ತಿ ಜಾಗೃತವಾಗುತ್ತದೆ. ಆದರೆ, ಇದನ್ನು ಗೆಳೆಯರು, ಕುಟುಂಬಸ್ಥರು, ಸಹೋದರರು ಸೇರಿದಂತೆ ಪರಿಚಯಸ್ಥರೆಲ್ಲ ಇದೆಲ್ಲ ಸ್ವಲ್ಪ ದಿನವಷ್ಟೇ, ಏನೋ ಕೆಟ್ಟ ಮೂಡ್‌ನಲ್ಲಿದ್ದಾನೆ ಎಂದು ನೆಗ್ಲೆಕ್ಟ್ ಮಾಡುವ ಮೂಲಕ, ಇಂಥವರ ಮನಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗುತ್ತಾರೆ. 

ಸಾಮಾನ್ಯವಾಗಿ ಆತ್ಮಹತ್ಯಾ ಯೋಚನೆಗಳು ಪದೇ ಪದೆ ಬರುವವರು ಅದರ ಬಗ್ಗೆ ಹೇಳಿಕೊಳ್ಳುವುದಿಲ್ಲ. ಹೇಳಿಕೊಂಡರೆ ಸಮಾಜ ಅವರನ್ನು ನಾರ್ಮಲ್ ಆಗಿ ನೋಡುವುದೂ ಇಲ್ಲ. ಜೊತೆಗೆ, ಹೇಳಿಕೊಂಡವರ ಬಳಿ ಜಗತ್ತು ಈ ಮನಸ್ಥಿತಿಗೆ ಕಾರಣ ಕೇಳುತ್ತದೆ. ಆದರೆ, ಬಹುತೇಕ ಬಾರಿ ಇದಕ್ಕೆ ನಿಜವಾದ ಕಾರಣ ಏನೆಂದು ಹಾಗೆ ಯೋಚನೆ ಬರುತ್ತಿರುವವರಿಗೇ ತಿಳಿದಿರುವುದಿಲ್ಲ. ನಮ್ಮ ಮೆದುಳಿನ ನರಕೋಶಗಳ ಕೆಲಸ ಡಿಕೋಡ್ ಮಾಡುವ ಸಾಮರ್ಥ್ಯ ನಮ್ಮಲ್ಲಿಲ್ಲದ ಕಾರಣವೂ ಇರಬಹುದು. ಜನರಿಗೆ ತಾವು ಎದುರಿಸುತ್ತಿರುವ ಸಮಸ್ಯೆಯಿಂದ ಹೊರಹೋಗಲು ಆತ್ಮಹತ್ಯೆಯ ಹೊರತಾಗಿ ಬೇರೆ ದಾರಿಯೇ  ಇಲ್ಲ ಎನಿಸಿದ ಆ ಒಂದು ಕ್ಷಣದಲ್ಲಿ ಇದೆಲ್ಲ ಘಟಿಸಿಬಿಡುತ್ತದೆ. 

ಬಹಳಷ್ಟು ಜನರಿಗೆ ಅವರಲ್ಲಿರುವ ಆತ್ಮಹತ್ಯೆಯ ಯೋಚನೆ ಯಾವಾಗ ಕಾರ್ಯರೂಪಕ್ಕೆ ತಿರುಗಬಹುದೆಂಬುದು ಕೂಡಾ ಗೊತ್ತಿರುವುದಿಲ್ಲ. ಹಾಗಾಗಿ, ನಮ್ಮಲ್ಲಿ ಇಂಥ ಯೋಚನೆಗಳು ಬಂದಾಗ ಅದನ್ನು ಇತರರಲ್ಲಿ ಹೇಳಿಕೊಳ್ಳುವುದು ಬಹಳ ಮುಖ್ಯ. ಹಾಗೆ ಹೇಳಿಕೊಂಡವರಿಗೆ ಸಂಪೂರ್ಣ ಕಿವಿಗೊಟ್ಟು ಧೈರ್ಯ ತುಂಬುವ, ಜೊತೆಯಾಗಿ ನಿಲ್ಲುವ ಭರವಸೆ ನೀಡುವುದು ನಮ್ಮ ಆದ್ಯತೆಯಾಗಬೇಕು. ಅವರಿಗಿಂಥ ಕೆಟ್ಟ ಪರಿಸ್ಥಿತಿ ಎದುರಿಸಿದ್ದರ ಕುರಿತ ಕತೆಗಳನ್ನು ಹೇಳಬೇಕು. ಇಂಥ ಮಾತುಗಳು ಹೀಗೆ ಆತ್ಮಹತ್ಯೆಗೆ ಶರಣಾಗುವ ಕೆಲ ಜೀವಗಳನ್ನು ಉಳಿಸಬಲ್ಲವು. 

ಲಾಕ್‌ಡೌನ್ ಎಫೆಕ್ಟ್: ನಿಮ್ಮ ಎಕ್ಸ್ ಪದೇ ಪದೆ ಕನಸಿನಲ್ಲಿ ಬರುತ್ತಿದ್ದಾ ...

ಆತ್ಮಹತ್ಯೆ ಯೋಚನೆ ಬಗ್ಗೆ ವಿಚಾರಿಸಿ
ಯಾರಾದರೂ ಬೇಜಾರಲ್ಲಿದ್ದರೆ, ಖಿನ್ನತೆಯಲ್ಲಿದ್ದರೆ, ಏನೋ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರೆ ಅವರಿಗೆ ಆತ್ಮಹತ್ಯೆಯ ಯೋಚನೆಗಳು ಬರುತ್ತಿವೆಯೇ ವಿಚಾರಿಸಿ. ಈ ಪ್ರಶ್ನೆಯು ಐಸ್‌ಬ್ರೇಕರ್‌ನಂತೆ ಕೆಲಸ ಮಾಡಿ ಅವರ ಮನಸ್ಸಿನ ದುಗುಡಗಳನ್ನೆಲ್ಲ ಹೊರಹಾಕಲು ಕಾರಣವಾಗಬಹುದು. ಅವರು ಅಪಾಯದಲ್ಲಿದ್ದರೆ, ಅವರನ್ನು ಯಾವುದೇ ಕಾರಣಕ್ಕೂ ಒಂಟಿಯಾಗಿ ಬಿಡಬಾರದು.  ಇನ್ನು ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ತಮ್ಮ ಮನಸ್ಥಿತಿ ಬಗ್ಗೆ ನಿಮಗೆ ತಿಳಿಸಿ, ಬೇರೆ ಯಾರಿಗೂ ಈ ವಿಷಯ ತಿಳಿಸದಂತೆ ಭಾಷೆ ತೆಗೆದುಕೊಂಡರೆ, ಅವರು ನಿಮ್ಮ ಜೀವದ ಗೆಳೆಯರಾಗಿದ್ದರೂ, ಈ ಭಾಷೆಯನ್ನು ಮುರಿದು ಸಂಬಂಧಿಸಿದವರಿಗೆ ವಿಷಯ ತಿಳಿಸಲೇಬೇಕು. ಇದರಿಂದ ಅವರು ನಿಮ್ಮ ಬಗ್ಗೆ ಸಿಟ್ಟಾಗಬಹುದು, ಆದರೆ ಅವರ ಜೀವವಂತೂ ಹೆಚ್ಚಿನ ಪಕ್ಷ ಉಳಿಯುತ್ತದೆ.