ಲಾಕ್‌ ಡೌನ್‌ ಆದ ಕೆಲವು ದಿನಗಳಿಗೆ ನನ್ನ ಮಗನ ಟೀಚರ್‌ ಇ-ಮೇಲ್‌ ಮಾಡಿದ್ದರು. ಆನ್‌ಲೈನ್‌ ಸ್ಕೂಲ್‌ ಶುರು ಮಾಡುವ ಕುರಿತು. ನನ್ನ, ನನ್ನ ಪತಿಯ, ನನ್ನ ಒಂದನೇ ಕ್ಲಾಸು ಪಾಸಾದ ಮಗನ ಮಾನಸಿಕ ಆರೋಗ್ಯವನ್ನು ನೆನೆಸಿಕೊಂಡು ನಾವು ಅವತ್ತೇ ಅವರಿಗೆ ಒಂದು ಮೇಲ್‌ ಮಾಡಿದೆವು.

ನನ್ನ ಮಗನಿಗೆ ಆನ್‌ ಲೈನ್‌ ಸ್ಕೂಲು ಬೇಡ.. ಯಾಕೆಂದರೆ...

- ಅನೇಕ ಪೋಷಕರಂತೆ ನಾನೂ ನನ್ನ ಪತಿಯೂ ಇಬ್ಬರೂ ಕೆಲಸಕ್ಕೆ ಹೋಗುವವರು. ಈಗ ಮನೆಯಲ್ಲೇ ಇರಬೇಕಾಗಿ ಬಂದಿದೆ. ನಮ್ಮ ಕೆಲಸದ ಜತೆ ಮಗನನ್ನೂ ನೋಡಿಕೊಳ್ಳಬೇಕಿದೆ. ನಾವಿಬ್ಬರೂ ಪ್ರೊಫೆಸರ್‌ಗಳಾಗಿದ್ದವರು. ಈಗ ನಮ್ಮ ಕೆಲಸದ ಜೊತೆ ಮಗನ ಪಾಠಗಳನ್ನೂ ಮಾಡಿಸುತ್ತಾ ಹೋದರೆ ನಾವೂ ಮಗನೂ ಎಲ್ಲರೂ ಸುಸ್ತಾಗುತ್ತೇವೆ. ಹಾಗಾಗಿಯೇ ನಾನು ಆನ್‌ಲೈನ್‌ ಸ್ಕೂಲು ಬೇಡ ಎಂದೆ.

ಕೊರೋನಾ ಭೀತಿ, ಆನ್‌ಲೈನ್‌ನಲ್ಲೇ ಪಾಠ, ವಿದ್ಯಾರ್ಥಿಗಳ ಮನಗೆದ್ದ ಅತಿಥಿ ಉಪನ್ಯಾಸಕ!

- ನಮಗೆ ಈಗ ಬೇಕಾಗಿದ್ದು ನನ್ನ ಮಗ ಸೇಫಾಗಿ, ಆರಾಮಾಗಿ ಇರಬೇಕು ಅನ್ನುವುದಷ್ಟೇ. ಅವನು ಖುಷಿಯಾಗಿರುವಂತೆ ನೋಡುಕೊಳ್ಳಲು ನಮಗೆ ಸಾಧ್ಯವಿದೆ. ಈಗ ನಾನು ಬೆಳಿಗ್ಗೆ ಎದ್ದು ವಾಕ್‌ ಮಾಡುತ್ತೇನೆ, ಆಮೇಲೆ ತಿಂಡಿ ತಿಂದು ಮಗನನ್ನು ಓದಿಸುತ್ತೇನೆ. ಆಮೇಲೆ ನಾವು ಮೂರೂ ಮಂದಿ ಆಡುತ್ತೇವೆ. ಗಾರ್ಡನ್‌ಗೆ ಹೋಗಿ ತೋಟದ ಕೆಲಸ ಮಾಡುತ್ತೇವೆ. ಗಿಡಗಳಿಗೆ ನೀರು ಹಾಕುವುದು. ಪಾಟ್‌ಗಳಿಗೆ ಬಣ್ಣ ಬಳಿಯುವುದು. ಅವನಿಗೆ ಅದರಿಂದ ಖುಷಿಯಾಗುತ್ತದೆ. ಅದರ ನಂತರ ನಾವು ನಮ್ಮ ಕೆಲಸಗಳನ್ನು ಮಾಡುತ್ತಲೇ ಅವನೊಂದಿಗ ಸಮಯ ಕಳೆಯುತ್ತೇವೆ.

- ನಾವು ಅವನ ಆನ್‌ಲೈನ್‌ ಸ್ಕೂಲ್‌ ನಿಲ್ಲಿಸಿದರೆ ಅವನ ಕಲಿಕೆ ನಿಂತಂತೆ ಆಗುವುದಿಲ್ಲ ಅನ್ನುವುದು ನಮಗೆ ಗೊತ್ತಿತ್ತು. ನಾವಿಬ್ಬರೂ ಇತಿಹಾಸಕಾರರು. ದಿನವಿಡೀ ಇತಿಹಾಸ, ಮ್ಯಾಪು, ವಿಜ್ಞಾನ ಸಂಶೋಧನೆ ಹೀಗೆಲ್ಲಾ ಮಾತನಾಡುತ್ತಿರುತ್ತೇವೆ. ಅವನಿಗೆ ಅರ್ಥವಾಗುವ ಹಾಗೆ ಮಾತನಾಡುತ್ತೇವೆ. ಅವನಿಗೆ ಏನಾದರೂ ಅರ್ಥವಾಗದೇ ಇದ್ದರೆ ಅವನು ವಾಪಸ್‌ ನಮಗೆ ಪ್ರಶ್ನೆ ಕೇಳುತ್ತಾನೆ. ಅವನಿಗೆ ನಾವು ಇತಿಹಾಸದ ಪುಸ್ತಕದಲ್ಲಿ ಇರದ, ಯೂಟ್ಯೂಬ್‌ ವೀಡಿಯೋಗಳು ಕಲಿಸ ಪಾಠ ಕಲಿಸುತ್ತಿದ್ದೇವೆ.

ಪಿಇಎಸ್‌ ವಿವಿಯಲ್ಲಿ ಲೈವ್‌ ಆನ್‌ಲೈನ್‌ ತರಗತಿ ಆರಂಭ

- ಎರಡು ತಿಂಗಳ ಆನ್‌ಲೈನ್‌ ಸ್ಕೂಲು ಇಲ್ಲದಿದ್ದರೆ ಅವನು ಹಿಂದೆ ಉಳಿಯುತ್ತಾನಾ ಎಂಬ ಆತಂಕ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಯಾಕೆ ಹಿಂದೆ ಬೀಳುತ್ತಾನೆ ಅಥವಾ ಯಾರಿಂದ ಹಿಂದೆ ಬೀಳುತ್ತಾನೆ ಎಂದು ಯೋಚಿಸಬೇಕಿದೆ. ಅವನು ಎಲ್ಲಿಯವರೆಗೆ ಓದಿ ಬರೆದು ಮಾಡುತ್ತಾನೋ, ಅವನ ಕಲ್ಪನಾಶಕ್ತಿ ಬಳಸಿಕೊಳ್ಳುತ್ತಾನೋ ಅಲ್ಲಿಯವರೆಗೆ ತಲೆಕೆಡಿಸಿಕೊಳ್ಳುವುದು ಏನೂ ಇಲ್ಲ. ಅವನು ಆರಾಮಾಗಿ ಎರಡನೇ ತರಗತಿಗೆ ಹೋಗುವ ಸಾಮರ್ಥ್ಯ ಗಳಿಸಿಕೊಳ್ಳುತ್ತಾನೆ. ಹಾಗಾಗಿ ಅವನ ಖುಷಿ ಮತ್ತು ನೆಮ್ಮದಿ ನಮಗೆ ಈಗ ಮುಖ್ಯ.

- ನಾವು ಅವನೊಂದಿಗೆ ಕುಳಿತು ಮಾತನಾಡುತ್ತೇವೆ. ಅವನು ಎಷ್ಟುಅದೃಷ್ಟವಂತ ಅಂತ ತಿಳಿಸಿಕೊಡುತ್ತೇವೆ. ನಮಗೆ ಮನೆ ಇದೆ, ಗಾರ್ಡನ್‌ ಇದೆ, ಕೆಲಸ ಇದೆ, ಆದರೆ ಅದು ಯಾವುದೂ ಇಲ್ಲದೇ ಇರುವವರಿಗಿಂತ ನೀನು ಅದೃಷ್ಟವಂತ, ಹಾಗಾಗಿಯೇ ಎಲ್ಲರ ಮೇಲೆ ಪ್ರೀತಿ ಇರಲಿ ಎಂದು ಅರ್ಥ ಮಾಡಿಸುತ್ತೇವೆ. ಅವನಿಗೆ ಚೂರು ಚೂರೇ ಈಗ ಅರ್ಥವಾಗತೊಡಗಿದೆ.

- ಈ ಲಾಕ್‌ ಡೌನ್‌ ಎಷ್ಟುದಿನ ಮುಂದುವರಿಯುತ್ತದೋ ಗೊತ್ತಿಲ್ಲ. ಸ್ಕೂಲು ಯಾವಾಗ ಆರಂಭವಾಗುತ್ತದೋ ಅನ್ನುವುದೂ ತಿಳಿದಿಲ್ಲ. ಮುಂದಿನದು ಯೋಚನೆ ಕೂಡ ಮಾಡಲಾಗುತ್ತಿಲ್ಲ. ಇಂಥಾ ಸಂದರ್ಭದಲ್ಲಿ ಸ್ಕೂಲುಗಳು ವರ್ಕ್ಶೀಟ್‌, ಅಸೈನ್‌ಮೆಂಟ್‌ಗಳಿಗಿಂತ ವಿದ್ಯಾರ್ಥಿಗಳು ಸೇಫ್‌ ಆಗಿದ್ದಾರಾ, ಅವರಿಗೆ ಸರಿಯಾದ ಆಹಾರ ಸಿಗುತ್ತಿದೆಯಾ ಎಂಬುದರ ಕಡೆಗೆ ಹೆಚ್ಚು ಗಮನ ಕೊಡಬೇಕಿದೆ. ಎಲ್ಲರಿಗೂ ಮನೆಯಲ್ಲಿ ಪ್ರಿಂಟ್‌ ಔಟ್‌ ತೆಗೆಯಲು ಸಾಧ್ಯವಿಲ್ಲ ಅನ್ನುವುದು ತಿಳಿಯಬೇಕಿದೆ. ಯಾವುದಕ್ಕೆ ಹೆಚ್ಚು ಗಮನ ಕೊಡಬೇಕು ಎಂದು ಅರ್ಥಮಾಡಿಕೊಳ್ಳಬೇಕಿದೆ.

- ನಾವು ಮಾಡುತ್ತಿರುವುದು ಎಲ್ಲಕ್ಕೂ ಎಲ್ಲರಿಗೂ ಪರಿಹಾರ ಅಂತ ಅಲ್ಲ. ಈ ಕ್ಷಣ ನನ್ನ ಮನಸ್ಸಲ್ಲಿ ಬರುವುದು ಒಂದೇ ಇಂಥದ್ದೊಂದು ಸಂಕಟದ ಸಮಯದಲ್ಲಿ ಪ್ರತಿ ದಿನವೂ ನಾವು ನಮ್ಮ ಮಗನಿಗೆ ಪ್ರೀತಿ ತೋರಿಸಿದೆವು ಅನ್ನುವುದು ಅವನಿಗೆ ನೆನಪಿದ್ದರೆ ಅಷ್ಟೇ ಸಾಕು.