Asianet Suvarna News Asianet Suvarna News

12 ಸಾವಿರ ಮಂದಿ ಚಿಂದಿ ಆಯುವವರ ಬದುಕು ಬದಲಿಸಿದ ಹಸಿರು ದಳ

ರಸ್ತೆ ಬದಿಯಲ್ಲಿ ಚಿಂದಿ ಆಯುವವರ ಬದುಕು ತುಂಬಾ ಕಷ್ಟಕರ. ಆರ್ಥಿಕ ಭದ್ರತೆ ಇಲ್ಲ, ಸರಕಾರಗಳಿಂದ ಸಿಗಬೇಕಾದ ಸೌಲಭ್ಯಗಳು ಸಿಗುವುದಿಲ್ಲ, ಹಗಲು ಇರುಳು ಎನ್ನದೇ ದಿನಪೂರ್ತಿ ದುಡಿದರೂ ಅದಕ್ಕೆ ಸರಿಯಾದ ಪ್ರತಿಫಲವಿಲ್ಲ, ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲ. ಇವೆಲ್ಲಾ ಇಲ್ಲಗಳ ನಡುವಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬುವ ಸಂಸ್ಥೆಯೊಂದು ನಾಡಿನಾದ್ಯಂತ ಮತ್ತು ನಾಡಿನಾಚೆಗೆ ಕೆಲಸ ಮಾಡುತ್ತಿದೆ. ಅದೇ ‘ಹಸಿರು ದಳ’. ಇದರ ಬಗ್ಗೆ ಸಂಸ್ಥೆಯ ಸಹ ಸಂಸ್ಥಾಪಕರಾದ ನಳಿನಿ ಶೇಖರ್‌ ಮಾತನಾಡಿದ್ದಾರೆ.

Hasiru Dala transforms the life of 12k ragpickers in Karnataka
Author
Bengaluru, First Published Jan 29, 2020, 4:52 PM IST

ಕೆಂಡಪ್ರದಿ

ಹೆಸರು ‘ಹಸಿರು ದಳ’. ಹೆಸರಿಗೆ ತಕ್ಕಂತೆ ವೇಸ್ಟ್‌ ಪಿಕ್ಕ​ರ್ಸ್ ಬದುಕಿನಲ್ಲಿ ಹಸಿರು ಚಿಗುರೊಡೆದು ಅವರ ಬಾಳಲ್ಲಿ ಹೊಸ ಯುಗಾದಿ ಬರುವಂತೆ ಮಾಡಿದೆ. ಬೆಂಗಳೂರಿನಲ್ಲಿ 2010ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಮೈಸೂರು, ಮಂಗಳೂರು, ತುಮಕೂರು, ಪುತ್ತೂರು, ಕಡೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿ ಹಲವಾರು ನಗರಗಳಲ್ಲಿ ಮತ್ತು ಕೊಯಮತ್ತೂರು, ತಿರುಚನಾಪಳ್ಳಿ, ರಾಜಮುಂಡ್ರಿಯಂತಹ ನೆರೆ ರಾಜ್ಯದ ಪ್ರಮುಖ ನಗರಗಳಲ್ಲಿ ಇರುವ ಚಿಂದಿ ಆಯುವವರ ಬದುಕಿಗೆ ಬೆಳಕಿನ ಸುಧೆ ಹರಿಸಿದೆ.

ಪ್ರೀತಿಯ ಅಜ್ಜಿ ಅಸುನೀಗಿದಾಗ

2010ರಲ್ಲಿ ಆರಂಭ

ಬೆಂಗಳೂರು ವಿವಿಯಲ್ಲಿ ಮಾಸ್ಟರ್‌ ಇನ್‌ ಚೈಲ್ಡ್‌ ಡೆವಲಪ್‌ಮೆಂಟ್‌ ಕಲಿತ ನಳಿನಿ ಶೇಖರ್‌ ಅವರು ನಂತರ ಮುಂಬೈ, ಬೆಂಗಳೂರು ವಿವಿಯಲ್ಲಿ ಕೆಲಸ ಮಾಡಿದವರು. ಪುಣೆ ಮೊದಲಾದ ಕಡೆಗಳಲ್ಲಿ ಶೋಷಣೆಗೊಳಗಾದವರ ಪರವಾಗಿ ದುಡಿದವರು. ಹೀಗೆ ಮಾಡುತ್ತಲೇ ಅಮೆರಿಕಾಗೆ ತೆರಳಿದ ನಳಿನಿ ಅಲ್ಲಿ ಹತ್ತು ವರ್ಷಗಳ ಕಾಲ ನೆಲೆ ನಿಲ್ಲುತ್ತಾರೆ. ಅಲ್ಲಿಯೂ ಶೋಷಿತರ ಪರವಾದ ಹೋರಾಟ ಇವರದ್ದು. ಇದಾದ ಮೇಲೆ ತನ್ನ ನೆಲದಲ್ಲಿಯೇ ಏನಾದರೂ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದು ‘ಮೈತ್ರಿ ಸರ್ವ ಸೇವಾ ಸಮಿತಿ’ಯನ್ನು ನಡೆಸುತ್ತಿದ್ದ ಆನ್ಸಲಂ ರೊಝಾರಿಯೋ ಅವರೊಂದಿಗೆ ಸೇರಿ 2010ರಲ್ಲಿ ಕಟ್ಟಿದ್ದೇ ‘ಹಸಿರು ದಳ’. 2013ರಲ್ಲಿ ಅಧಿಕೃತವಾಗಿ ಟ್ರಸ್ಟ್‌ ರೂಪ ತಾಳಿದ ಈ ಸಂಸ್ಥೆ ಅಲ್ಲಿಂದ ಇಲ್ಲಿಯವೆಗೂ ವೇಸ್ಟ್‌ ಪಿಕ್ಕ​ರ್ಸ್ ಮತ್ತು ಅವರ ಮಕ್ಕಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ.

ಏನೇನ್‌ ಮಾಡುತ್ತೆ ಗೊತ್ತಾ?

ವೇಸ್ಟ್‌ ಪಿಕ್ಕ​ರ್ಸ್‌ನ ಮನೆಗೆ ಹೋಗಿ ಕಸ ಸಂಗ್ರಹಿಸಿ, ಬೀದಿ ಬೀದಿಯಲ್ಲಿ ಸಿಕ್ಕುವ ಡ್ರೈ ವೇಸ್ಟ್‌ ಆಯ್ದು, ಅದನ್ನು ವಿಂಗಡಿಸಿ ಸ್ಕ್ರ್ಯಾಬ್‌ ಅಂಗಡಿಗೆ ಮಾರುತ್ತಾರೆ. ಈ ವೇಳೆ ಅವರಿಗೆ ಕೊಟ್ಟಿದ್ದೇ ಬೆಲೆ. ತೂಕದಲ್ಲಿ ಮೋಸ, ಸರಿಯಾದ ಮೌಲ್ಯ ನೀಡದೇ ಇರುವುದು ಇದ್ದೇ ಇತ್ತು. ಜೊತೆಗೆ ಸ್ಥಳೀಯ ಸರಕಾರಗಳಿಗೆ ಇವರಿಂದ ಲಾಭವಾಗುತ್ತಿದ್ದರೂ (2016ರ ಸಮೀಕ್ಷೆಯ ಪ್ರಕಾರ ವೇಸ್ಟ್‌ ಪಿಕ್ಕ​ರ್‍ಸ್ನಿಂದ ಬಿಬಿಎಂಪಿಗೆ 80 ಕೋಟಿ ರು. ಉಳಿತಾಯವಾಗಿದೆ ಎನ್ನುತ್ತಾರೆ ನಳಿನಿ ಶೇಖರ್‌) ಇವರ ಮೂಲಭೂತ ಸೌಕರ್ಯಗಳ ಕಡೆಗೆ ನಿಗಾ ವಹಿಸುತ್ತಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಹಸಿರು ದಳ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಬಿಎಂಪಿಯಿಂದ ಬೆಂಗಳೂರಿನ ವೇಸ್ಟ್‌ ಪಿಕ್ಕ​ರ್‍ಸ್ಗೆ ಐಡಿ ಕಾರ್ಡ್‌ ವಿತರಣೆ ಮಾಡಿಸಿದೆ. ಘಟಕವಾರು ಕಸ ವಿಂಗಡಣೆ ಕೇಂದ್ರಗಳನ್ನು ಸ್ಥಾಪಿಸಿ ಅದರ ನಿರ್ವಹಣೆಯನ್ನು ವೇಸ್ಟ್‌ ಪಿಕ್ಕ​ರ್‍ಸ್ಗೆ ದೊರೆಯುವಂತೆ ಮಾಡಿದೆ. ಇದರ ಜೊತೆಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಇವರಿಗೆ ಸಕಾಲದಲ್ಲಿ ತಲುಪುವಂತೆ ಮಾಡುವಲ್ಲಿ ಹಸಿರು ದಳ ಪಾತ್ರ ಮಹತ್ವವಾದದ್ದು.

ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

ಮಕ್ಕಳು ಇವರಂತಾಗಬಾರದು

ವೇಸ್ಟ್‌ ಪಿಕ್ಕರ್ಸ್ ಬದುಕನ್ನು ಬದಲಾಯಿಸಿದ ಹಸಿರು ದಳ ಇದುವರೆಗೂ ಸುಮಾರು 12 ಸಾವಿರ ಮಂದಿಗೆ ನೆರವಾಗಿದೆ. ಅವರನ್ನು ಸ್ವಂತ ವ್ಯಾಪಾರಿಗಳನ್ನಾಗಿ ಮಾಡಿದೆ. ಮುಂದಿನ ಹತ್ತು ವರ್ಷದಲ್ಲಿ ಇವರ ಜೀವನ ಮಟ್ಟಸುಧಾರಿಸಬೇಕು ಎನ್ನುವ ಸಂಕಲ್ಪ ತೊಟ್ಟಿದೆ. ಅದರಂತೆ ಮುಂದೆ ಸಾಗುತ್ತಿದೆ. ಅದರ ಭಾಗವಾಗಿ ‘ಬುಗುರಿ’ ಎನ್ನುವ ಕಮ್ಯುನಿಟಿ ಲೈಬ್ರರಿಯನ್ನು ಶುರು ಮಾಡಿ ವೇಸ್ಟ್‌ ಪಿಕ್ಕ​ರ್‍ಸ್ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದೆ. ಅವರು ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದೆ ಹಸಿರು ದಳ.

ಚೆಂದದ ದಾರಿ ತೋರಿದ ಹಸಿರು ದಳ

‘1964ರಿಂದಲೂ ನಾವು ಶೋಷಿತರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಇವರಲ್ಲಿ ಹೆಣ್ಣು ಮಕ್ಕಳು ರಾತ್ರಿ ಬೆಳಿಗ್ಗೆ ಎನ್ನದೇ ವೇಸ್ಟ್‌ ಪಿಕ್‌ ಮಾಡಿ ಜೀವನ ನಡೆಸುತ್ತಿದ್ದರು. ಇವರ ಪರವಾಗಿ ಮತ್ತಷ್ಟುತೀವ್ರವಾಗಿ ಕೆಲಸ ಮಾಡಬೇಕು ಎಂದುಕೊಂಡು ಹಸಿರು ದಳ ಸ್ಥಾಪನೆ ಮಾಡಿದೆವು. ಪ್ರಾರಂಭದಲ್ಲಿ ಇದಕ್ಕೆ ವಿಪ್ರೋ ಎಂಪ್ಲಾಯ್‌ಗಳು ಸೇರಿ ರಚಿಸಿಕೊಂಡಿರುವ ವಿಪ್ರೋ ಕೇರ್‌ ಎನ್ನುವ ಸಂಘಟನೆ ಸಹಾಯ ಮಾಡಿತು. ಆಮೇಲೆ ಟಾಟಾ, ಅಜೀಂ ಪ್ರೇಮ್‌ಜೀ, ಯುಎನ್‌ಡಿಪಿಯವರೆಲ್ಲಾ ನಮ್ಮ ನೆರವಿಗೆ ನಿಂತರು. ಪ್ರಾರಂಭದ ಮೂರು ವರ್ಷ ನಾವು ನಮ್ಮದೇ ಸಂಪನ್ಮೂಲಗಳನ್ನು ಬಳಸಿಕೊಂಡು ಸೇವೆ ಮಾಡಿದೆವು. ಇದೀಗ ವೇಸ್ಟ್‌ ಪಿಕ್ಕ​ರ್ಸ್ ಜಾಗೃತರಾಗಿ ತಾವೇ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗುವ ಮಟ್ಟಕ್ಕೆ ಬಂದಿದ್ದಾರೆ’ ಎನ್ನುವ ನಳಿನಿ ಶೇಖರ್‌ ಅವರು ಚಿಂದಿ ಆಯುವವರಿಗೆ ಚೆಂದದ ದಾರಿಯನ್ನು ಹಸಿರು ದಳದ ಮೂಲಕ ತೋರಿದ್ದಾರೆ.

ದುಃಖದಿಂದ ಮೇಲೆತ್ತುವ ಎರಡು ಕಥೆಗಳು

ಪರ್ಯಾಯ ದಾರಿ ತೋರಿದರು

ಮೂರು ನಾಲ್ಕು ವರ್ಷದ ಹಿಂದೆ ಪ್ಲಾಸ್ಟಿಕ್‌ ರೇಟು ತುಂಬಾ ಕಡಿಮೆ ಆಗಿಬಿಡುತ್ತದೆ. ಇದನ್ನೇ ಆಯ್ದು ಬದುಕು ನಡೆಸುತ್ತಿದ್ದ ವೇಸ್ಟ್‌ ಪಿಕ್ಕ​ರ್‍ಸ್ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಆಗ ಹಸಿರುದಳ ಕೇವಲ ಚಿಂದಿ, ಪ್ಲಾಸ್ಟಿಕ್‌ ಆಯ್ದುಕೊಂಡಿದ್ದರೆ ಸಾಲದು ಎಂದು ಬೆಂಗಳೂರಿನ ರಸ್ತೆಗಳಲ್ಲಿ, ಹೊರವಲಯದಲ್ಲಿ, ವಿವಿಧ ಕಡೆಗಳಲ್ಲಿ ಬೆಳೆದು ನಿಂತಿರುವ ಹರಳು, ಹೊಂಗೆ, ಬೇವಿನ ಬೀಜಗಳನ್ನು ಆಯ್ದು ಅವುಗಳಿಂದ ಆದಾಯವನ್ನು ವೃದ್ಧಿಸಿಕೊಳ್ಳುವ ಐಡಿಯಾ ನೀಡುತ್ತದೆ. ಜೊತೆಗೆ ಅದಕ್ಕೆ ಬೇಕಾದ ಮಾರುಕಟ್ಟೆಸೌಲಭ್ಯ, ಸಲಕರಣೆಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಇದೀಗ ಬಿಬಿಎಂಪಿ ಮತ್ತು ಬೇರೆ ಬೇರೆ ನಗರಗಳ ಸ್ಥಳೀಯ ಸಂಸ್ಥೆಯೊಂದಿಗೆ ಮಾತನಾಡಿ ಇವರಿಗೆಲ್ಲಾ ಗೌರವಯುತವಾಗಿ ಬದುಕಲು ಏನೇನು ಸೌಲಭ್ಯ ಬೇಕೋ ಅದನ್ನು ಒದಗಿಸಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.

Follow Us:
Download App:
  • android
  • ios