ಅಜ್ಜಿ ಬಿಟ್ಹೋದ ಮೇಲೆ ಒಂಟಿ ಅನಿಸ್ತಿದೆ..ಬಾಂಧವ್ಯದ ಬೇನೆಗೆ ಮದ್ದು
ಅಜ್ಜಿಯ ಪ್ರೀತಿ ನನ್ನ ನೋವಿಗೆ ಮುಲಾಮಿನ ಹಾಗಿತ್ತು. ನನ್ನ ಮುಖ ಸ್ವಲ್ಪ ಕಳೆಗುಂದಿದರೂ ಅವರು ವಿಚಾರಿಸುತ್ತಿದ್ದರು. ಹೆಚ್ಚೆಚ್ಚು ಓದಲು ಪ್ರೇರಣೆ ನೀಡುತ್ತಿದ್ದರು. ಅವರನ್ನು ಅಮ್ಮ ನಿರ್ಲಕ್ಷ್ಯ ಮಾಡಿದರೂ ಅವರು ಕೇರ್ ಮಾಡ್ತಿರಲಿಲ್ಲ. ಕಳೆದ ವಾರ ಅಜ್ಜಿ ತೀರಿಕೊಂಡರು. ಕೂತರೆ ನಿಂತರೆ ಅವರದೇ ಯೋಚನೆ. ಅನಾಥ ಪ್ರಜ್ಞೆ. ಬಹಳ ತಬ್ಬಲಿ ಅನಿಸುತ್ತಿದೆ.
ಪ್ರಶ್ನೆ: ನನಗೀಗ ಹದಿನೆಂಟು ವರ್ಷ. ಬಿಬಿಎಂ ಓದುತ್ತಿದ್ದೇನೆ. ಚಿಕ್ಕವಳಿಂದಲೂ ಅಜ್ಜಿಯೇ ಅಮ್ಮನ ಪ್ರೀತಿ ತೋರಿದವಳು. ಅಮ್ಮ ಅಪ್ಪ ಅಂದರೆ ಅಷ್ಟಕ್ಕಷ್ಟೆ. ಅವರಿಗೆ ಮಗನ ಮೇಲೇ ಹೆಚ್ಚು ಪ್ರೀತಿ. ನನ್ನನ್ನು ನಿರ್ಲಕ್ಷಿಸುತ್ತಿದ್ದಳು. ಅಜ್ಜಿ ಅವರ ಮಡಿಲಲ್ಲಿ ಜೋಪಾನ ಮಾಡಿದರು. ಟೀನೇಜ್ ಶುರುವಾದ ಮೇಲಂತೂ ನಾನು ಅಪ್ಪ ಅಮ್ಮನನ್ನು ದ್ವೇಷಿಸಲು ಆರಂಭಿಸಿದೆ. ಅವರ ಮುಖ ಕಂಡರಾಗ್ತಿರಲಿಲ್ಲ. ಯಾಕೆ ಇಂಥಾ ಅಪ್ಪ ಅಮ್ಮನ್ನ ಕೊಟ್ಟೆ ದೇವ್ರೆ ಅಂತ ಒಳಗೊಳಗೇ ಅಳುತ್ತಿದ್ದೆ. ಆದರೆ ಅಜ್ಜಿಯ ಪ್ರೀತಿ ನನ್ನ ನೋವಿಗೆ ಮುಲಾಮಿನ ಹಾಗಿತ್ತು. ನನ್ನ ಮುಖ ಸ್ವಲ್ಪ ಕಳೆಗುಂದಿದರೂ ಅವರು ವಿಚಾರಿಸುತ್ತಿದ್ದರು. ಹೆಚ್ಚೆಚ್ಚು ಓದಲು ಪ್ರೇರಣೆ ನೀಡುತ್ತಿದ್ದರು. ಅವರನ್ನು ಅಮ್ಮ ನಿರ್ಲಕ್ಷ್ಯಿಸಿದರೂ ಅವರು ಕೇರ್ ಮಾಡ್ತಿರಲಿಲ್ಲ. ಕಳೆದ ವಾರ ಅಜ್ಜಿ ತೀರಿಕೊಂಡರು. ಕೂತರೆ, ನಿಂತರೆ ಅವರದ್ದೇ ಯೋಚನೆ. ಅನಾಥ ಪ್ರಜ್ಞೆ. ಬಹಳ ತಬ್ಬಲಿ ಅನಿಸುತ್ತಿದೆ. ಊಟ, ತಿಂಡಿ ಸೇರುತ್ತಿಲ್ಲ. ಮಲಗಿದರೆ ನಿದ್ದೆಯೂ ಬರಲ್ಲ. ಏನ್ಮಾಡಲಿ ಅನ್ನೋದೇ ತೋಚುತ್ತಿಲ್ಲ. ಕೆಲವೊಮ್ಮೆ ಈ ಲೈಫೇ ಬೇಡ ಅನಿಸಿ, ಆತ್ಮಹತ್ಯೆಯ ಯೋಚನೆಗಳೂ ಬರುತ್ತಿವೆ. ಆದರೆ ಅಜ್ಜಿ ಯಾವತ್ತೂ ಒಂದು ಮಾತು ಹೇಳ್ತಿದ್ರು, ಪ್ರತೀ ಸಮಸ್ಯೆಗೂ ಒಂದು ಪರಿಹಾರ ಇದ್ದೆ ಇರುತ್ತೆ. ಸಮಸ್ಯೆಯನ್ನು ಫೇಸ್ ಮಾಡಬೇಕೇ ಹೊರತು ಅದರಿಂದ ಪಲಾಯನ ಮಾಡಬಾರದು ಅಂತ. ನಾನೊಂದು ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಜ್ಜಿಗೆ ಅವಮಾನ ಮಾಡಿದ ಹಾಗಾಗುತ್ತದೆ. ಈ ಕಡೆ ಲೈಪೂ ಬೇಡ ಅನಿಸ್ತಿದೆ. ಏನು ಮಾಡಲಿ?
ದುಃಖದಿಂದ ನಿಮ್ಮನ್ನು ಮೇಲೆತ್ತುವ ಎರಡು ಕತೆಗಳು
- ಲೈಫ್‌ನ ಚಾಲೆಂಜ್‌ಗಳು ಈಗ ಶುರು. ನೀನ್ಯಾಕೆ ಇದನ್ನು ಒಂದು ಟಾಸ್ಕ್ ಅಂದುಕೊಂಡು ಮಾಡ್ಬಾರ್ದು.. ಎಷ್ಟೋ ಸಲ ಬದುಕು ಚೆನ್ನಾಗಿಯೇ ಇರುತ್ತೆ. ಆದರೆ ನಾವು ಅದನ್ನು ಗ್ರಹಿಸುವ ರೀತಿಯಲ್ಲಿ ಸಮಸ್ಯೆ ಇರುತ್ತೆ. ಅಪ್ಪ ಅಮ್ಮ ನಿನ್ನನ್ನು ಎಷ್ಟೇ ನಿರ್ಲಕ್ಷ್ಯಿಸುತ್ತಿದ್ದಾರೆ ಎಂದೆನಿಸಿದರೂ ಅದು ಪೂರ್ತಿ ಸತ್ಯ ಆಗಿರಲ್ಲ. ಅವರೊಳಗೂ ನಿನ್ನ ಬಗ್ಗೆ ಪ್ರೀತಿ ಇದ್ದೇ ಇರುತ್ತೆ. ತಮ್ಮ ಚಿಕ್ಕವನಾದ ಕಾರಣ ಅವನನ್ನು ಹೆಚ್ಚು ಕೇರ್ ಮಾಡುವ ಭರದಲ್ಲಿ ನೀನು ಕೊಂಚ ಮೂಲೆ ಗುಂಪಾಗಿರಬಹುದು. ಅದೂ ಅಲ್ಲ, ಅವರು ನಿನ್ನನ್ನು ನಿರ್ಲಕ್ಷಿಸಿದ್ದಾರೆ ಅಂತಲೇ ತಿಳಿಯೋಣ. ಅದು ಅವರ ಸಮಸ್ಯೆ. ಮಕ್ಕಳಲ್ಲಿ ಬದುಕಿನ ಬಗ್ಗೆ ಆತ್ಮವಿಶ್ವಾಸ ತುಂಬಬೇಕಾದ್ದು ಹೆತ್ತವರ ಕರ್ತವ್ಯ. ಅವರದನ್ನು ಮಾಡಿಲ್ಲ ಅಂದರೆ ಅದು ಅವರ ತಪ್ಪು. ಅವರು ಮಾಡಿದ ತಪ್ಪಿಗೆ ಅವರಿಗೆ ಶಿಕ್ಷೆಯಾಗಬೇಕೇ ಹೊರತು ನಿನಗೆ ನೀನೇ ಶಿಕ್ಷೆ ಕೊಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ.
ಸದ್ಯಕ್ಕೆ ನೀನು ಮಾಡಬೇಕಾಗಿರುವುದು ಇಷ್ಟೇ, ನಿನ್ನನ್ನೇ ನೀನು ಮರೆಯುವಂಥಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು. ಸಿನಿಮಾವೋ, ಓದೋದೋ, ನಾಟಕವೋ ಏನಾದ್ರೂ ಸರಿ. ಅದರಲ್ಲಿ ತೀವ್ರವಾಗಿ ತೊಡಗಿಸಿಕೋ. ಹೊರ ಜಗತ್ತನ್ನೇ ಮರೆಯೋ ಹಾಗೆ. ನಿಧಾನಕ್ಕೆ ನಿನ್ನ ನೋವು ತಹಬಂದಿಗೆ ಬರುತ್ತೆ. ಅಪ್ಪ ಅಮ್ಮ ಅವರಾಗಿ ಸಿಟ್ಟು ಉಡಾಪೆ ತೋರಿಸಿದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕು. ಆದರೆ ನೀನು ಅವರ ಬಗ್ಗೆ ದ್ವೇಷ ಕಡಿಮೆ ಮಾಡಿಕೋ. ಏಕೆಂದರೆ ಈ ದ್ವೇಷದಿಂದ ಅವರಿಗಿಂತ ಹೆಚ್ಚಾಗಿ ನಿನಗೇ ಹಾನಿ. ಸಿಟ್ಟು ನಿನ್ನನ್ನು ಅಸಹಾಯಕತೆಗೆ ನೂಕುತ್ತದೆ. ಅದರಿಂದ ನೀನು ಗಳಿಸಿಕೊಳ್ಳೋದು ಏನಿಲ್ಲ, ಬದಲಾಗಿ ನಿನ್ನ ಮನಸ್ಸಿನ ಮೇಲಿನ ಹತೋಟಿಯನ್ನೆ ಕಳೆದುಕೊಳ್ಳುತ್ತೀಯಾ. ನೋವು ಇನ್ನೂ ಜಾಸ್ತಿಯಾಗುತ್ತೆ.
ನಲ್ಮೇಯ ಮಾತಿಗೆ ಹಿರಿ ಹಿರಿ ಹಿಗ್ಗುವ ಹಿರಿಯರು
ಅಜ್ಜಿ ನಿನ್ನನ್ನು ಇಷ್ಟು ಕಾಲ ಮಡಿಲ ಕಂದನ ಹಾಗೆ ಜೋಪಾನ ಮಾಡಿದರು ಅನ್ನುತ್ತೀಯಾ, ಅವರ ಪ್ರೀತಿ ನಿನ್ನನ್ನು ಬೆಳೆಸಬೇಕು. ನೀನು ಬೆಳೆಯಬೇಕು. ಬದುಕನ್ನು ಧೈರ್ಯದಿಂದ ಪೇಸ್ ಮಾಡಬೇಕು. ಮುಂದೇನೋ ಆಗುತ್ತೆ ಅನ್ನೋದೆಲ್ಲ ಹೆಚ್ಚಿನ ಸಲ ಕಲ್ಪನೆಯಷ್ಟೇ ಆಗಿರುತ್ತದೆ. ಅಂಥಾ ಕಲ್ಪನೆಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡ. ಒಂಟಿಯಾಗಿ ಇರದೇ ಇರೋ ಹಾಗೆ ನೋಡ್ಕೋ. ಮಲಗೋ ಮುಂಚೆ ಮೊಬೈಲ್ ಸೈಡಿಗಿಟ್ಟು ಓದು. ಖಂಡಿತಾ ನಿದ್ದೆ ಬರುತ್ತೆ. ಇಷ್ಟೆಲ್ಲ ಆದ್ಮೇಲೂ ಸಮಸ್ಯೆ ಮುಂದುವರಿಯುತ್ತಿದೆ ಅನಿಸಿದರೆ ಮನೋವೈದ್ಯರನ್ನು ಕಾಣಲೇಬೇಕು.