ನನಗೆ ಈ ಹೆಂಡತಿಯೊಂದಿಗೆ ಸಂಸಾರ ಮಾಡುವುದಕ್ಕೆ ಸಾಕಾಗಿದೆ. ಮತ್ತೊಂದು ಮದುವೆಯಾಗುವ ದುರಾಸೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ಅಮಾನವೀಯ ಕೃತ್ಯದಲ್ಲಿ, ಮಹಿಳೆ 10 ದಿನಗಳ ಕಾಲ ನರಕ ಅನುಭವಿಸಿದ್ದು, ಕೃತ್ಯ ಬೇಧಿಸಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಮದುವೆಯಾಗಿ 12 ವರ್ಷಗಳ ಕಾಲ ಜೊತೆಯಾಗಿದ್ದ ಪತ್ನಿಯನ್ನೇ ಪತಿಯೊಬ್ಬ ಕೇವಲ 50,000 ರೂಪಾಯಿಗೆ ಮಾರಾಟ ಮಾಡಿದ ಅಮಾನವೀಯ ಮತ್ತು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮತ್ತೊಂದು ಮದುವೆಯಾಗುವ ಆಸೆಗೆ ಬಿದ್ದ ಪತಿ, ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನೇ ಮಾನವ ಕಳ್ಳಸಾಗಣೆಗೆ ದೂಡಿದ್ದಾನೆ. ಇಷ್ಟೇ ಅಲ್ಲದೆ, ಮಾರಾಟವಾದ ಬಳಿಕ ಆ ಮಹಿಳೆ ಸತತ 10 ದಿನಗಳ ಕಾಲ ಸಾಮೂಹಿಕ ಅತ್ಯಾ*ಚಾರ ಹಾಗೂ ನರಕಯಾತನೆಗೆ ಒಳಗಾಗಿದ್ದಾಳೆ. ಸದ್ಯ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದು, ಪತಿ ಸೇರಿದಂತೆ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಪತ್ತೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್!

ಈ ಘಟನೆ ಗುಜರಾತ್‌ನ ಪಾಲನ್‌ಪುರದಲ್ಲಿ ನಡೆದಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಮಹಿಳೆ ನಾಪತ್ತೆ ಪ್ರಕರಣದಂತೆ ಕಂಡುಬಂದಿತ್ತು. ಮೇ 11 ರಂದು ಪಾಲನ್‌ಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪತಿಯೇ ಬಂದು, 'ನನ್ನ ಪತ್ನಿ ಮೇ 10 ರಿಂದ ಯಾರಿಗೂ ಹೇಳದೆ ಕಾಣೆಯಾಗಿದ್ದಾಳೆ' ಎಂದು ದೂರು ನೀಡಿದ್ದನು. ಆದರೆ, ಮಹಿಳೆಯ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಪೊಲೀಸರಿಗೆ ಪತಿಯ ನಡವಳಿಕೆಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ತೀವ್ರ ವಿಚಾರಣೆ ಆರಂಭಿಸುತ್ತಿದ್ದಂತೆ ಹೆದರಿದ ಪತಿ ಅಲ್ಲಿಂದ ಪರಾರಿಯಾಗಿದ್ದನು. ತದನಂತರ ಪೊಲೀಸರು ತಾಂತ್ರಿಕ ಕಣ್ಗಾವಲು (Technical Surveillance) ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಕರಾಳ ಕಥೆ ಬಯಲಾಗಿದೆ.

ಪತ್ನಿಯಿಂದ ಮುಕ್ತಿ ಪಡೆಯಲು ಸ್ನೇಹಿತರೊಂದಿಗೆ ಪ್ಲಾನ್!

ಪೊಲೀಸ್ ತನಿಖೆಯ ಪ್ರಕಾರ, 30 ವರ್ಷದ ಆರೋಪಿ ಪತಿಗೆ ತನ್ನ 26 ವರ್ಷದ ಪತ್ನಿಯ ಮೇಲೆ ಜಿಗುಪ್ಸೆ ಉಂಟಾಗಿತ್ತು. ಅವಳನ್ನು ಮನೆಯಿಂದ ಹೊರಹಾಕಿ, ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರಲು ಸಂಚು ರೂಪಿಸಿದ್ದನು. ಇದಕ್ಕಾಗಿ ತನ್ನ ಇಬ್ಬರು ಸ್ನೇಹಿತರ ಸಹಾಯ ಪಡೆದ ಆತ, ಮದುವೆಯ ವ್ಯವಸ್ಥೆ ಮಾಡುವ ನೆಪದಲ್ಲಿ ಪತ್ನಿಯನ್ನು ಬೇರೆ ಕಡೆಗೆ ಸಾಗಿಸಲು ಯೋಚಿಸಿದ್ದನು. ಮೇ 10 ರಂದು ಸ್ನೇಹಿತರು ಮಹಿಳೆಯನ್ನು ರಿಕ್ಷಾದಲ್ಲಿ ಫ್ಲಾಟ್‌ವೊಂದಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಮೊದಲ ಬಾರಿಗೆ ಸಾಮೂಹಿಕವಾಗಿ ಅತ್ಯಾ*ಚಾರ ಎಸಗಿದ್ದಾರೆ.

1.5 ಲಕ್ಷಕ್ಕೆ ಡೀಲ್, 10 ದಿನಗಳ ಕಾಲ ಸತತ ಅತ್ಯಾ*ಚಾರ

ಅಲ್ಲಿಂದ ಮಹಿಳೆಯನ್ನು ಥರಾದ್ ಎಂಬ ಹಳ್ಳಿಯ ಒಂದು ಕುಟುಂಬಕ್ಕೆ ಮಾರಾಟ ಮಾಡಲು ಡೀಲ್ ಕುದುರಿಸಲಾಗಿತ್ತು. ಒಟ್ಟು 1.5 ಲಕ್ಷ ರೂಪಾಯಿಗೆ ಡೀಲ್ ಫಿಕ್ಸ್ ಆಗಿದ್ದು, ಅದರಲ್ಲಿ 50,000 ರೂಪಾಯಿ ಮುಂಗಡವನ್ನು ಪತಿ ಪಡೆದುಕೊಂಡಿದ್ದನು. ಥರಾದ್‌ಗೆ ಕರೆದೊಯ್ದ ಬಳಿಕ ಮಹಿಳೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿನ ಆರೋಪಿಗಳು ಸತತ ಒಂದು ವಾರಕ್ಕೂ ಹೆಚ್ಚು ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾ*ಚಾರ ನಡೆಸಿದ್ದಾರೆ. ಈ ಇಡೀ ಘಟನೆಯಲ್ಲಿ ಮಹಿಳೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ನರಕಯಾತನೆ ಅನುಭವಿಸಿದ್ದಾಳೆ.

ಆರೋಪಿಯ ಹಳೇ ಚಾಳಿ ಬಿಚ್ಚಿಟ್ಟ ಪೊಲೀಸರು!

ಮೇ 21 ರಂದು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಇಷ್ಟೇ ಅಲ್ಲದೆ, ಆರೋಪಿ ಪತಿ ಮಹಿಳೆಯ 15,000 ರೂ. ಮೌಲ್ಯದ ಚಿನ್ನದ ಓಲೆಯನ್ನು ಕದ್ದು ದೀಸಾದಲ್ಲಿ ಮಾರಾಟ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಪತಿಗೆ ಈ ಹಿಂದೆಯೂ ಇಂತಹ ಚಾಳಿ ಇತ್ತು ಎನ್ನಲಾಗಿದ್ದು, ಈ ಮುಂಚೆ ಇಬ್ಬರು ವಿವಾಹಿತ ಮಹಿಳೆಯರನ್ನು ಪುಸಲಾಯಿಸಿ ಓಡಿಸಿಕೊಂಡು ಹೋಗಿದ್ದನು. ಸದ್ಯ ಸಂತ್ರಸ್ತ ಮಹಿಳೆಗೆ ಸೂಕ್ತ ಆಪ್ತಸಮಾಲೋಚನೆ (Counselling) ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಅಗತ್ಯವಿರುವ ಎಲ್ಲಾ ಸಿಸಿಟಿವಿ ಮತ್ತು ಕಾಲ್ ರೆಕಾರ್ಡ್ಸ್ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.