ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿಗಳಿಲ್ಲದೆ ಕೇವಲ ನೋಂದಣಿ ಮಾಡಿಕೊಂಡರೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 

ಅಹಮದಾಬಾದ್ (ಜು.2) ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಸಮಾರಂಭಗಳನ್ನು ನಡೆಸದೆ, ಕೇವಲ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಮದುವೆ ಎಂಬುದು ಕೇವಲ ಹಾಡು ಮತ್ತು ನೃತ್ಯಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಿಟನ್‌ನಲ್ಲಿ ವಾಸವಿರುವ ವ್ಯಕ್ತಿ ಹಾಗೂ ಅಹಮದಾಬಾದ್‌ನ ಮಹಿಳೆ ಮಧ್ಯೆ ಯಾವುದೋ ಒಂದು ಸಂದರ್ಭದಲ್ಲಿ ಮದುವೆ ನೋಂದಣಿ ಮಾತ್ರ ಆಗಿತ್ತು. ಸಾಂಪ್ರದಾಯಿಕ ವಿವಾಹವೇ ಆಗಿಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಇಬ್ಬರೂ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ‘ನಮ್ಮ ನಡುವೆ ಸಾಂಪ್ರದಾಯಿಕವಾಗಿ ವಿವಾಹವಾಗಿಲ್ಲ. ಕೇವಲ ನೋಂದಣಿ ಮಾತ್ರ ಆಗಿದೆ. ನಾವಿಬ್ಬರೂ ಪತಿ-ಪತ್ನಿ ಆಗಿ ಎಂದೂ ಜೀವನ ನಡೆಸಿಲ್ಲ. ಹಾಗಾಗಿ ಈ ಮದುವೆಯನ್ನು ಅನೂರ್ಜಿತಗೊಳಿಸಬೇಕು’ ಎಂದು ಮನವಿ ಮಾಡಿದ್ದರು. ಆದರೆ ಕುಟುಂಬ ನ್ಯಾಯಾಲಯ ಮದುವೆಯನ್ನು ಮಾನ್ಯ ಎಂದು ಹೇಳಿತ್ತು. ಹಾಗಾಗಿ ಗುಜರಾತ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾ. ಇಳೇಶ್‌ ವೋರಾ ಹಾಗೂ ನ್ಯಾ. ಆರ್‌.ಟಿ. ವಚ್ಚನಿ ಅವರಿದ್ದ ವಿಭಾಗೀಯ ಪೀಠ, ‘ಸಾಂಪ್ರದಾಯಿಕ ಆಚರಣೆಗಳು ವ್ಯಕ್ತಿಯ ಆಧ್ಯಾತ್ಮಿಕ ಅಸ್ತಿತ್ವವನ್ನು ಶುದ್ಧೀಕರಿಸುತ್ತವೆ. ಸಪ್ತಪದಿಯ ಮೂಲಕ ಪವಿತ್ರ ಅಗ್ನಿಯ ಮುಂದೆ ವಧುವರರು ಒಟ್ಟಿಗೆ 7 ಹೆಜ್ಜೆಗಳನ್ನು ಇಡುವುದು ಮದುವೆಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಕಾನೂನು ಸ್ಥಾನಮಾನವನ್ನು ಒದಗಿಸುತ್ತದೆ. ಹಿಂದೂ ಕಾನೂನಿನಡಿಯಲ್ಲಿ, ಮದುವೆಯನ್ನು ಒಂದು ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ. , ಕೇವಲ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ’ ಎಂದು ಜೂ.23ರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಮದುವೆ ಅಮಾನ್ಯ ಎಂದು ಘೋಷಣೆಯಾಗಿದೆ.