ಹೊಟ್ಟೆಯೊಳಗೆ ಬೆಚ್ಚಗೆ ಮಲಗಿದ್ದ ಕಂದಮ್ಮ ಕದಲಿದ ಅನುಭವ. ಕಾಡಿನಲ್ಲಿರುವ ಸೊಪ್ಪು ತಿಂದು ಬಾಯಿಯೆಲ್ಲ ರುಚಿ ಕಳೆದುಕೊಂಡಿದೆ.ಇಷ್ಟಪಟ್ಟು ತಿನ್ನುವಂತಹ ಯಾವ ಸೊಪ್ಪು,ಹಣ್ಣುಗಳೂ ಇಲ್ಲ. ಹೊಟ್ಟೆಯೊಳಗಿಂದ ಕಂದ ‘ಅಮ್ಮಾ ನಂಗೆ ರುಚಿಯಾಗಿರುವ ತಿನಿಸು ಏನಾದ್ರೂ ಬೇಕು’ ಎಂದು ಕೂಗಿ ಹೇಳಿದಂತಾಯಿತು.ಮನಸ್ಸು ಮತ್ತೆ ಯೋಚನೆ ಬದಲಿಸಲಿಲ್ಲ, ಅಂಥ ತಿನಿಸು ಹುಡುಕಿ ಹೊರಟೇ ಬಿಟ್ಟೆ. ಕಾಲುಗಳು ಭಾರವಾದ ಹೆಜ್ಜೆಗಳನ್ನಿಡುತ್ತ ಸಾಗಿದವು.ಬಹುದೂರ ಸಾಗಿದ ಮೇಲೊಂದು ಕಾಲುದಾರಿ. ಅದ್ರಲ್ಲಿ ನಡೆದು ಸಾಗುತ್ತಿದ್ದವಳಿಗೆ ಅನಾನಸು ಹಣ್ಣಿನ ಪರಿಮಳ ಮೂಗಿಗೆ ಬಡಿಯಿತು. ಬಾಯಿಯಲ್ಲಿ ಅರಿವಿಲ್ಲದಂತೆ ನೀರು ಒಸರಲು ಆರಂಭಿಸಿತು. ಅರೇ ಕ್ಷಣವೂ ಯೋಚಿಸದೆ ಅತ್ತ ಸಾಗಿದೆ. ಅನಾನಸು ತೋಟದ ಬೇಲಿಗೂ ಮುನ್ನವೇ ಬಲಿತ ಹಣ್ಣೊಂದು ಬಿದ್ದಿರೋದು ಕಂಡಿತು. ಬಸುರಿ ಬಯಕೆ ಗರಿಗೆದರಿತು, ಸೊಂಡಿಲಿನಿಂದ ಆ ಹಣ್ಣನ್ನು ಎತ್ತಿ ಬಾಯಿಗೆ ಹಾಕಿಕೊಂಡು ಕಚ್ಚಿದೆ ಅಷ್ಟೆ. ಎದೆ ಸೀಳುವಷ್ಟು ಭಯಂಕರ ಸದ್ದು. ಬಾಯಿಯೊಳಗೆ ಬೆಂಕಿಯುಂಡೆ ಸ್ಫೋಟಗೊಂಡ ಅನುಭವ. ಇಡೀ ಶರೀರವೇ ಧರೆಗುರುಳುವಷ್ಟು ಯಮಯಾತನೆ. ಹೊಟ್ಟೆಯೊಳಗೆ ಜಗತ್ತನ್ನೇ ನೋಡದ ನನ್ನ ಕರುಳಬಳ್ಳಿ ನನ್ನಷ್ಟೇ ಯಾತನೆಯಿಂದ ಮಿಸುಕಾಡುತ್ತಿತ್ತು. ಆ ಕ್ಷಣ ಭಯದಿಂದ ‘ಅಮ್ಮಾ, ನನಗೇನೋ ಆಗುತ್ತಿದೆ ಕಾಪಾಡು ಕಾಪಾಡು’ ಎಂದು ಗೋಗರೆದಂತಾಯಿತು. 

ಗಂಡ-ಹೆಂಡ್ತಿ ಕೋಳಿ ಜಗಳದಲ್ಲಿ ಇಂಥ ಕಾಮೆಂಟ್ಸ್ ಕಾಮನ್

ತುಸು ದೂರದಲ್ಲಿ ಕಾಣಿಸಿದ ಹರಿಯುವ ನೀರು ಬದುಕುವ ಆಸೆ ಹುಟ್ಟಿಸಿತು. ಕಾಲು ಎತ್ತಿಡಲು ಸಾಧ್ಯವಾಗದಷ್ಟು ಯಮಯಾತನೆಯಾಗುತ್ತಿದ್ದರೂ ನೀರಿನೆಡೆಗೆ ಓಡಿದೆ. ನದಿಯ ಮಧ್ಯೆ ನಿಂತು ಛಿದ್ರಗೊಂಡಿರುವ ನನ್ನ ಬಾಯಿಯನ್ನು ನೀರೊಳಗೆ ಮುಳುಗಿಸಿದೆ. ನೀರು ಕುಡಿದೆ. ಆದರೂ ತಗ್ಗಲಿಲ್ಲ ಯಾತನೆ. ಓ ವಿಧಿಯೇ ನನ್ನ ಪಾಲಿಗೆ ನೀನೇಕೆ ಇಷ್ಟು ಕ್ರೂರಿಯಾದೆ. ನನ್ನ ಪ್ರಾಣ ತೆಗೆದುಕೋ ಚಿಂತೆಯಿಲ್ಲ, ನನ್ನ ಗರ್ಭದಲ್ಲಿರುವ ಜಗವನ್ನೇ ಕಾಣದ ಕೂಸನ್ನು ಬದುಕಿಸಿಕೊಡು. ಅದಕ್ಕಾಗಿ ಎಷ್ಟು ಯಾತನೆಯನ್ನಾದರೂ ನಾನು ಸಹಿಸಿಕೊಳ್ಳಬಲ್ಲೆ. ಅದೋ ಅಲ್ಲೊಂದಿಷ್ಟು ಜನರು ನದಿ ಮೇಲೆ ನಿಂತು ನನ್ನೆಡೆಗೆ ನೋಡುತ್ತಿದ್ದಾರೆ. ಅವರ ನೆರಳು ನೋಡಿದರೂ ನನ್ನೆದೆ ನಡುಗುತ್ತೆ. ನನ್ನ ಈ ಸ್ಥಿತಿಗೆ ಆ ಸ್ವಾರ್ಥಿ ಮಾನವರೇ ಕಾರಣ ಅನ್ನೋದು ಗೊತ್ತು. ಈ ಕ್ಷಣ ಮನಸ್ಸು ಮಾಡಿದರೆ ಅಲ್ಲಿ ನಿಂತಿರುವ ಮಾನವರನ್ನೆಲ್ಲ ಯಮನ ಪಾದಕ್ಕೆ ಕಳುಹಿಸುವಷ್ಟು ತಾಕತ್ತು ನನ್ನಲ್ಲಿದೆ. ಆದ್ರೆ ನಾನು ಹಾಗೇ ಮಾಡಲಾರೆ. ಈ ಮನುಷ್ಯರು ಒಂದೇ ಬಾರಿಗೆ ಸಾಯಬಾರದು. ನನ್ನಂತೆ ಈ ಭೂಮಿ ಮೇಲಿನ ಅದೆಷ್ಟು ಜೀವಿಗಳ ಉಸಿರು ನಿಲ್ಲಿಸಿಲ್ಲ ಇವರು? ಅದೆಷ್ಟು ಹಿಂಸೆ, ಕ್ರೌರ್ಯ ಮೆರೆದಿಲ್ಲ!


ಈ ಸೃಷ್ಟಿಯ ನನ್ನಂಥ ಅಸಹಾಯಕ ಜೀವಿಗಳ ಶಾಪ ಮನುಕುಲವನ್ನು ತಟ್ಟದೆ ಬಿಡದು. ಬಹುಶಃ ನನ್ನಂತೆ ಯಾವುದೋ ಮೂಕ ಪ್ರಾಣಿಯಿಟ್ಟ ಶಾಪ ಫಲಿಸಲಾರಂಭಿಸಿದೆಯೇನೋ! ಅದೇನೋ ಕೊರೋನಾ ವೈರಸ್ ಅಂತೆ, ಅದಕ್ಕೆ ಹೆದರಿ ಇತ್ತೀಚೆಗೆ ಮನುಷ್ಯರು ಮನೆಯಿಂದ ಹೊರಬರುತ್ತಿಲ್ಲವಂತೆ. ಅದೆಷ್ಟೇ ಪ್ರಯತ್ನಪಟ್ಟರೂ ಈ ವೈರಸ್ ಅನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲವಂತೆ. ಕೊರೋನಾ ಮಾತ್ರವಲ್ಲ, ಅದರ ಅಪ್ಪನಂತಹ ಕೋಟ್ಯಂತರ ವೈರಸ್‍ಗಳು ಭೂಮಿ ಮೇಲೆ ಹುಟ್ಟಬೇಕು. ನಾವು ಪ್ರಾಣಿಗಳು ಹೇಗೆ ಮನುಷ್ಯನಿಗೆ ಕ್ಷಣ ಕ್ಷಣವೂ ಹೆದರುತ್ತ ಬದುಕುತ್ತೇವೆಯೋ ಹಾಗೆಯೇ ಮನುಕುಲವೂ ಇಂಥ ವೈರಸ್‍ಗಳಿಗೆ ಭಯಪಡುತ್ತ ಬದುಕುವಂತಾಗಲಿ, ಇದೇ ನನ್ನ ಶಾಪ. 

ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ

ಅದೋ, ನನ್ನ ಕುಲಬಾಂಧವರನ್ನು ಕರೆತಂದು ನನ್ನನ್ನು ಈ ನೀರಿನಿಂದ ಮೇಲೇಳಿಸಿ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಯಾವ ಧೈರ್ಯದ ಮೇಲೆ ನಾನು ಇವರನ್ನು ನಂಬಿ ಹೋಗಲಿ. ಅಯ್ಯೋ, ನನ್ನ ಕಂದಮ್ಮ ಮಿಸುಕಾಡುತ್ತಿಲ್ಲ, ಅಂದರೆ ನನಗಿಂತಲೂ ಮುಂದೆ ಇನ್ನೊಂದು ಲೋಕಕ್ಕೆ ಪಯಣಿಸಿ ಬಿಟ್ಟಿದೆಯೇ? ಇನ್ನು ನನಗೆ ಈ ದೇಹ, ಉಸಿರಿನ ಮೇಲೆ ವ್ಯಾಮೋಹವಿಲ್ಲ. ಹೇ ಭಗವಂತ! ಈ ನೋವಿನಿಂದ ನನಗೆ ಮುಕ್ತಿ ಕೊಡು. ಮನುಷ್ಯರಿರುವ ಈ ನರಕದಲ್ಲಿ ಬಾಳೋದಕ್ಕಿಂತ ಸಾಯೋದೇ ಮೇಲು. ನನ್ನ ಶರೀರ ಕಂಪಿಸುತ್ತಿದೆ, ಉಸಿರಾಡಲು ಆಗುತ್ತಿಲ್ಲ. ಹೌದು, ನಾನು ಹೊರಡುವ ಸಮಯ ಬಂದಾಯ್ತು, ಹೊರಡುತ್ತೇನೆ. ಮನುಷ್ಯ ಇರುವ ತನಕ ಈ ಭೂಮಿ ಮೇಲೆ ನಾನು ಇನ್ನೊಂದು ಜನ್ಮ ಎತ್ತದಿದ್ರೆ ಸಾಕು, ಆ ಸೃಷ್ಟಿಕರ್ತನಲ್ಲಿ ಇದೇ ನನ್ನ ಕೊನೆಯ ಕೋರಿಕೆ.