ಗಂಡ-ಹೆಂಡ್ತಿ ಕೋಳಿ ಜಗಳದಲ್ಲಿ ಇಂಥ ಕಾಮೆಂಟ್ಸ್ ಕಾಮನ್
ಪತಿ-ಪತ್ನಿ ಎಂದ ಮೇಲೆ ಜಗಳವಿಲ್ಲವೆಂದ್ರೆ ಹೇಗೆ? ಆಗಾಗ ಜಗಳ ಮಾಡೋದು ದಾಂಪತ್ಯದ ಆರೋಗ್ಯಕ್ಕೆ ಒಳ್ಳೆಯದು. ಇಲ್ಲವೆಂದ್ರೆ ಸಂಬಂಧದಲ್ಲಿ ಮಜಾ ಬರೋದಾದ್ರೂ ಹೇಗೆ?
ದಾಂಪತ್ಯದಲ್ಲಿ ಜಗಳವೇ ಇಲ್ಲವೆಂದ್ರೆ ಹೇಗೆ? ಗಂಡ-ಹೆಂಡ್ತಿ ಅಂದ ಮೇಲೆ ಅಲ್ಲಿ ಕೋಳಿ ಜಗಳ ಇದ್ರೇನೆ ಮಜಾ. ಆಗಾಗ ಜಗಳ ನಡೀತಿದ್ರೆ ಇಬ್ಬರ ನಡುವೆ ಹೊಂದಾಣಿಕೆ, ಪ್ರೀತಿ ಮತ್ತು ಬಾಂಧವ್ಯ ಹೆಚ್ಚುತ್ತೆ. ಆದ್ರೆ ಕೆಲವು ಗಂಡ-ಹೆಂಡ್ತಿ ಜಗಳ ಮಾತ್ರ ತಾರಕಕ್ಕೇರಿ ವಿಚ್ಛೇದನದಲ್ಲಿ ಕೊನೆಗೊಂಡಿದ್ದೂ ಇದೆ. ತಜ್ಞರ ಪ್ರಕಾರ ಪತಿ-ಪತ್ನಿ ಆಗಾಗ ಜಗಳವಾಡೋದು ದಾಂಪತ್ಯದ ಆರೋಗ್ಯಕ್ಕೆ ಒಳ್ಳೆಯದಂತೆ. ದಾಂಪತ್ಯ ಅಥವಾ ಸಂಬಂಧದಲ್ಲಿ ಅಸಮಾಧಾನವಿದ್ದಾಗ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡ್ರೆ, ಇನ್ನಷ್ಟು ಎತ್ತರಕ್ಕೆ ಬೆಳೆದು ದೊಡ್ಡ ಕಂದಕವನ್ನೇ ಸೃಷ್ಟಿಸಿ ಬಿಡಬಲ್ಲದು. ಅದೇ ಅಸಮಾಧಾನವನ್ನು ಹೊರಹಾಕಿದಾಗ ಇಬ್ಬರ ಮನಸ್ಸೂ ಹಗುರವಾಗುತ್ತೆ. ಅಲ್ಲದೆ, ಅಸಮಾಧಾನದ ಹಿಂದಿನ ಕಾರಣವೂ ತಿಳಿಯುತ್ತೆ. ಹಾಗಂತ ಚಿಕ್ಕಪುಟ್ಟ ವಿಷಯಕ್ಕೆ ದಿನಕ್ಕೆ ಹತ್ತಾರು ಬಾರಿ ಕಿತ್ತಾಡೋದು, ಕೂಗಾಟ ನಡೆಸೋದು ಖಂಡಿತಾ ಒಳ್ಳೆಯದ್ದಲ್ಲ. ಆದ್ರೆ ಅಪರೂಪಕ್ಕೊಮ್ಮೆ ಜಗಳವಾಡೋದ್ರಿಂದ ತೊಂದರೆಯೇನಿಲ್ಲ. ಕೆಲವು ದಂಪತಿಗಳು ಜಗಳವಾಡೋದನ್ನ ನೋಡೋದೆ ಚೆಂದ. ಹೀಗೆ ಇಬ್ಬರನ್ನು ಇನ್ನಷ್ಟು ಹತ್ತಿರವಾಗಿಸುವ ಕರ್ಣಕಠೋರವಲ್ಲದ ಸಿಲ್ಲಿ ಜಗಳಕ್ಕೆ ಕಾರಣವಾಗುವ ಒಂದಿಷ್ಟು ಟಾಪಿಕ್‍ಗಳು ಇಲ್ಲಿವೆ.
ಬ್ರೇಕಪ್‌ಗೆ ಕೂಡಾ ಸುಖಾಂತ್ಯ ನೀಡಬಹುದು!
-ಮದುವೆಯಾಗಿದೆ ಅನ್ನೋದು ನೆನಪಿರಲಿ, ಸ್ವಲ್ಪನೂ ಜವಾಬ್ದಾರಿನೇ ಇಲ್ಲ.
ನವವಿವಾಹಿತ ಜೋಡಿಯಿಂದ ಹಿಡಿದು ನಡುವಯಸ್ಸಿನಲ್ಲಿರುವ ದಂಪತಿಗಳ ತನಕ ಜಗಳದ ನಡುವೆ ಪತಿಗೆ ಪತ್ನಿ ಈ ಡೈಲಾಗ್ ಹೇಳೋದು ಕಾಮನ್. ಹುಡ್ಗೀರು ಮದುವೆಯಾದ ತಕ್ಷಣ ಪರಿಸ್ಥಿತಿಗೆ ಬೇಗ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ. ಲೈಫ್ ಬಗ್ಗೆ ಒಂದಿಷ್ಟು ಸೀರಿಯಸ್ ಆಗ್ತಾರೆ. ಆದ್ರೆ ಈ ಗಂಡಸರು ಎಲ್ಲಿ ತಮ್ಮ ಬುದ್ಧಿ ಬಿಡ್ತಾರೆ. ಮದುವೆ ಬಳಿಕವೂ ವೀಕೆಂಡ್‍ಗಳಲ್ಲಿ ಪಾರ್ಟಿ, ಫ್ರೆಂಡ್ಸ್ ಎಂದು ತಡರಾತ್ರಿ ಮನೆಗೆ ಬರ್ತಾರೆ. ಇದು ಸಹಜವಾಗಿಯೇ ಪತ್ನಿಯ ಪಿತ್ತ ನೆತ್ತಿಗೇರಿಸಿ ಗಲಾಟೆಗೆ ಕಾರಣವಾಗುತ್ತೆ. ಇನ್ನು ಮದುವೆಯಾಗಿ ಹತ್ತು ವರ್ಷ ಕಳೆದ್ರೂ ಕೆಲವು ಗಂಡಸರು ಮನೆ ವ್ಯವಹಾರ, ಮಕ್ಕಳ ಶಿಕ್ಷಣ, ಆರೋಗ್ಯ ಮುಂತಾದ ವಿಚಾರಗಳ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ. ಎಲ್ಲವನ್ನು ಪತ್ನಿ ಹೆಗಲಿಗೇರಿಸಿ ಆರಾಮಾಗಿರುತ್ತಾರೆ. ಇಂಥ ಪತಿಮಹಾಶಯರಿಗೆ ಪತ್ನಿ ಆಗಾಗ ಜವಾಬ್ದಾರಿ ಪಾಠ ಮಾಡೋದು ಕಾಮನ್.
-ಒದ್ದೆ ಟವಲ್ ಬೆಡ್ ಮೇಲೆ ಹಾಕದಿದ್ರೆ ನಿದ್ರೆ ಬರಲ್ವಾ ನಿಮ್ಗೆ?
ಇದು ನಿಸ್ಸಂದೇಹವಾಗಿ ಪತ್ನಿಯದ್ದೇ ಡೈಲಾಗ್. ಸ್ನಾನ ಮಾಡಿ ಮೈ ಒರೆಸಿಕೊಂಡ ಬಳಿಕ ಒದ್ದೆಯಾದ ಟವಲ್ ತಂದು ಬೆಡ್ ಮೇಲೆ ಹಾಕುವ ಕೆಲ್ಸ ಮಾಡೋದು ಪತಿಯೇ ಎಂಬುದ್ರಲ್ಲಿ ಡೌಟೇ ಇಲ್ಲ. ಭಾರತದ ಎಲ್ಲ ಮನೆಗಳಲ್ಲೂ ಈ ವಿಚಾರಕ್ಕೆ ಆಗಾಗ ಜಗಳ ನಡೆಯೋದು ಕಾಮನ್. ಒದ್ದೆ ಟವಲ್ ಮುದ್ದೆ ಮಾಡಿ ಬೆಡ್ ಮೇಲೆ ಎಸೆಯೋದು ಕದನ ವಿರಾಮದ ಉಲ್ಲಂಘನೆ ಅನ್ನೋದು ಗೊತ್ತಿದ್ರೂ ಬಹುತೇಕ ಪುರುಷರು ಈ ಕೆಲ್ಸ ಮಾಡೋದನ್ನು ನಿಲ್ಲಿಸೊಲ್ಲ.
ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ!
-ಅಮ್ಮನ ಕೈರುಚಿ ಮುಂದೆ ನಿಂದೇನೂ ಅಲ್ಲ!
ತಟ್ಟೆಯಲ್ಲಿರೋದನ್ನು ಸುಮ್ಮನೆ ತಿನ್ನೋದು ಬಿಟ್ಟು ಕಾಲು ಕೆರೆದು ಜಗಳಕ್ಕೆ ಹೋಗೋದಂದ್ರೆ ಇದೇ ನೋಡಿ. ಹೆಂಡ್ತಿ ಅಡುಗೆಯನ್ನು ಅಮ್ಮನ ಕೈರುಚಿಗೆ ಹೋಲಿಸಿ ತೆಗಳಿದ್ರೆ ಜಗಳ ನಡೆಯದೆ ಇರುತ್ತೇ? ಹೆಂಡ್ತಿಯನ್ನು ಕೆರಳಿಸಲು ಗಂಡನಿಗೆ ಇದಕ್ಕಿಂತ ಒಳ್ಳೆಯ ಟಾಪಿಕ್ ಬೇರೆ ಸಿಗಲು ಸಾಧ್ಯವಿಲ್ಲ.
-ನನ್ನ ಅಪ್ಪ-ಅಮ್ಮನ ಬಗ್ಗೆ ಸ್ವಲ್ಪನೂ ಕಾಳಜಿಯಿಲ್ಲ
ಇದು ಪತಿ ಹಾಗೂ ಪತ್ನಿ ಇಬ್ಬರ ಬಾಯಿಯಿಂದಲೂ ಆಗಾಗ ಬರುತ್ತೆ. ಜಗಳದ ನಡುವೆ ಅಥವಾ ಇದೇ ಗಲಾಟೆಯ ಮುಖ್ಯ ವಿಷಯವಾಗುತ್ತದೆ. ಮದುವೆಯಾದ ಪ್ರಾರಂಭದ ಕೆಲವು ವರ್ಷ ಈ ವಿಷಯಕ್ಕೇನೆ ಸಿಕ್ಕಾಪಟ್ಟೆ ರದ್ಧಾಂತ ಆಗೋದು ಇರುತ್ತೆ. ಆದ್ರೆ ವರ್ಷ ಕಳೆದಂತೆ ಈ ಟಾಪಿಕ್ ಗಂಭೀರತೆ ಕಳೆದುಕೊಳ್ಳುತ್ತೆ.
ಹ್ಯಾಪಿ ರಿಲೇಶನ್‌ಶಿಪ್‌ನ ವೈಜ್ಞಾನಿಕ ಒಳಗುಟ್ಟು
-ನಿಮ್ಗೆ ನಂಗಿಂತ ಫ್ರೆಂಡ್ಸೇ ಜಾಸ್ತಿಯಾದ್ರು ಅಲ್ವಾ?
ಗಂಡಸರಿಗೆ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡೋದು, ಹರಟೋದು ಅಂದ್ರೆ ಇಷ್ಟ. ಇದೇ ಕಾರಣಕ್ಕೆ ವೀಕೆಂಡ್‍ನಲ್ಲಿ ಫ್ರೆಂಡ್ಸ್ ಮೀಟ್ ಮಾಡೋಕೆ, ಪಾರ್ಟಿ ಮಾಡೋಕೆ ಮನೆಯಿಂದ ಹೊರಹೋಗ್ತಾರೆ. ರಾತ್ರಿ ತಡವಾಗಿ ಮನೆ ಸೇರ್ತಾರೆ. ಇದ್ರಿಂದ ಹೆಂಡ್ತಿ ವೀಕೆಂಡ್‍ಗೆ ಹಾಕಿಕೊಂಡಿದ್ದ ಪ್ಲ್ಯಾನ್‍ಗಳೆಲ್ಲ ಹಾಳಾಗಿ ಆಕೆ ಸಿಟ್ಟು ನೆತ್ತಿಗೇರಿ ಗಂಡನೊಂದಿಗೆ ಗಲಾಟೆ ಪ್ರಾರಂಭಿಸಿದಾಗ ಈ ಮೇಲಿನ ಡೈಲಾಗ್ ಬಂದೇಬರುತ್ತೆ. ಆದ್ರೆ ಮರುದಿನ ಡಿನ್ನರ್ ಅಥವಾ ಶಾಪಿಂಗ್‍ಗೆ ಕರ್ಕೊಂಡ ಹೋದ್ರೆ ಹೆಂಡ್ತಿ ಕೋಪ ತಣ್ಣಗಾಗುತ್ತೆ ಎಂಬ ಸೀಕ್ರೇಟ್ ಗಂಡನಿಗೆ ಗೊತ್ತು.