ಗರ್ಭಿಣಿ ಆನೆಯೊಂದು ಹಸಿವಿನಿಂದ ಆಹಾರ ಹುಡುಕಿಕೊಂಡು ಊರಿಗೆ ಬಂದಿರುತ್ತದೆ. ಒಬ್ಬರಿಗೆ ಕೂಡಾ ನಯಾಪೈಸೆ ಹಾನಿ ಮಾಡುವುದಿಲ್ಲ. ಅದಕ್ಕೆ ಅವರಾರೋ ಅನಾನಸ್ ಹಣ್ಣನ್ನು ನೀಡಿದಾಗ ಖಂಡಿತಾ ಮನುಷ್ಯರ ಮೇಲೆ ಕೃತಜ್ಞತಾಭಾವ ಮೂಡಿಸಿಕೊಂಡು ಬಾಯಿಗಿಟ್ಟುಕೊಳ್ಳುತ್ತದೆ. ಆದರೆ, ಆನಂತರದಲ್ಲಿ ಆದದ್ದೇನು? ಪಟಾಕಿ ತುಂಬಿದ ಅನಾನಸ್ ಬಾಯಿಯಲ್ಲಿ ಸ್ಫೋಟವಾಗಿದ್ದಷ್ಟೇ ಅಲ್ಲ, ಮನುಷ್ಯರ ಮೇಲೆ ಅದಿಟ್ಟ ನಂಬಿಕೆ ಕೂಡಾ ಸ್ಫೋಟಕ್ಕೆ ನುಚ್ಚು ನೂರಾಯಿತು. ಸುಟ್ಟ ಬಾಯಿಯಲ್ಲಿ ಏನೂ ತಿನ್ನಲಾರದೆ ಉರಿ ಕಳೆದುಕೊಳ್ಳಲು ನೀರಿನ ನಡುವೆ ಹೋಗಿ ನಿಲ್ಲುವ ಆನೆ ಅಲ್ಲಿಯೇ ಪ್ರಾಣ ಬಿಡುತ್ತದೆ. ಹೊಟ್ಟೆಯಲ್ಲಿರುವ ಪುಟ್ಟ ಮರಿ ಜಗತ್ತನ್ನು ನೋಡುವ ಮೊದಲೇ ಅಸು ನೀಗುತ್ತದೆ. ಎಂಥಾ ವಿಕೃತಿ!! ಈ ಜಗತ್ತು ತನಗಾಗಿ ಮಾತ್ರ ಸೃಷ್ಟಿಯಾಗಿದೆ ಎಂದುಕೊಂಡ ಸ್ವಾರ್ಥಿ ಮನುಷ್ಯರಿಂದ ಮಾತ್ರ ಇಷ್ಟು ಮೃಗೀಯವಾಗಿ ವರ್ತಿಸಲು ಸಾಧ್ಯ. 

ಹೀಗೆ ಪ್ರಾಣಿಗಳು ಜೀವಿಗಳೇ ಅಲ್ಲ ಎಂಬಂತೆ ವರ್ತಿಸುವ ಮನುಷ್ಯನ ನಡುವಳಿಕೆಗೆ ಉದಾಹರಣೆಗಳು ಪ್ರತಿದಿನ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಅಂಥವುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದ ಕೆಲ ಅಮಾನವೀಯ ಘಟನೆಗಳ ಹಿನ್ನೋಟ ಇಲ್ಲಿದೆ. 

ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ!

- ಜುಲೈ 29, 2018
ಹರಿಯಾಣದಲ್ಲಿ ಗರ್ಭಿಣಿ ಮೇಕೆಯೊಂದನ್ನು ಮಾಲೀಕನಿಂದ ಅಪಹರಿಸಿ ಒಂದಿಷ್ಟು ಯುವಕರು ಸಾಮೂಹಿಕ ಅತ್ಯಾಚಾರ ನಡೆಸುತ್ತಾರೆ. ಇವರ ವಿಕೃತಿಯನ್ನು ಸಹಿಸಲಾರದೆ ಮೇಕೆ ಪ್ರಾಣ ಬಿಡುತ್ತದೆ. ಇಷ್ಟು ಸಾಲದೆಂಬಂತೆ ಓರ್ವ ಆರೋಪಿ ಮಾಲೀಕನ ಬಲಿ ಹೋಗಿ, ತಾನು ಮೇಕೆಯೊಂದಿಗೆ ಕಳೆದ ಕ್ಷಣ ಬಹಳ ಮಜವಾಗಿತ್ತು ಎಂದು ಹೇಳಿಕೆ ಬೇರೆ ಕೊಡುತ್ತಾನೆ!

- ಜುಲೈ 17, 2018
35 ವರ್ಷದ ವ್ಯಕ್ತಿಯೊಬ್ಬ ಕೋಲ್ಕತ್ತಾದಲ್ಲಿ ಬೀದಿನಾಯಿಯನ್ನು ಅಪಹರಿಸಿ ಮನೆಗೆ ತೆಗೆದುಕೊಂಡು ಹೋಗಿಟ್ಟುಕೊಂಡು ಅದರ ಬಾಯಿಗೆ ಹಗ್ಗವನ್ನು ಬಿಗಿಯುತ್ತಾನೆ. ಬಳಿಕ ಪ್ರತಿದಿನ ಅದರ ಮೇಲೆ ಅತ್ಯಾಚಾರ ನಡೆಸುತ್ತಾನೆ. ಈ ಬಗ್ಗೆ ಅನುಮಾನಗೊಂಡ ದಾರಿಹೋಕರು ವ್ಯಕ್ತಿಯ ಮನೆಯ ಕಿಟಕಿಗಳನ್ನು ತಳ್ಳಿ ನೋಡಿದಾಗ ವಿಷಯ ಬಹಿರಂಗವಾಗುತ್ತದೆ. 

- ಮೇ 18, 2018
ಹೈದರಾಬಾದ್‌ನ ಕೊಂಗಾರಾ ಅರಣ್ಯ ಪ್ರದೇಶದಲ್ಲಿ 100ಕ್ಕೂ ಹೆಚ್ಚು ನಾಯಿಗಳ ಕೊಳೆತ ಶವ ಕಂಡುಬರುತ್ತದೆ. ಅಪರಿಚಿತ ವ್ಯಕ್ತಿಗಳು ಬೀದಿನಾಯಿಗಳನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಕೊಲೆ ಮಾಡಿರುವ ಬಗ್ಗೆ ಎನ್‌ಜಿಒವೊಂದು ದೂರು ನೀಡುತ್ತದೆ. 

- ಜುಲೈ 26, 2018
ಛತ್ತೀಸ್‌ಗಢದಲ್ಲಿ ಪೋಲೀಸ್ ಕಣ್ಗಾವಲು ವಾಹನವೊಂದು ರಸ್ತೆ ದಾಟುತ್ತಿದ್ದ ಹಸುವಿನ ಮೇಲೆ ವಾಹನ ಹರಿಸುತ್ತದೆ. ಸಾಕ್ಷಿಗಳ ಪ್ರಕಾರ, ಹಸುವಿನ ಕಾಲಿಗೆ ಪೆಟ್ಟಾಗುತ್ತದೆ. ಅದನ್ನು ನೋಡಿದವರು ಹಸುವನ್ನು ರಕ್ಷಿಸಲು ಧಾವಿಸುತ್ತಾರೆ. ಆದರೆ, ಪೋಲೀಸರು ಹಸುವನ್ನು ಸಾಯಿಸುವ ಉದ್ದೇಶ ಹೊಂದಿದ್ದರು, ಹಾಗಾಗಿ, ನಂತರವೂ ಮತ್ತೆ ಮತ್ತೆ ಹಸುವಿನ ಮೇಲೆ ವಾಹನ ಹರಿಸಿದರು ಎಂದು ತಿಳಿಸಿದ್ದರು.

- ಜುಲೈ 6, 2016
ಚೆನ್ನೈನ ಮದ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಗೌತಮ್ ಸುದರ್ಶನ್ ಎಂಬಾತ 5 ತಿಂಗಳ ನಾಯಿಮರಿಯೊಂದನ್ನು ಮನೆಯ ಮಹಡಿಯಿಂದ ಕೆಳಗೆ ಎಸೆದಿದ್ದ. ಅಷ್ಟೇ ಅಲ್ಲ, ಅದನ್ನು ವಿಡಿಯೋ ಮಾಡಿ ಯೂಟ್ಯೂಬ್‌ಗೆ ಕೂಡಾ ಹಾಕಿದ್ದ!  

- ಜುಲೈ 15, 2018
ಫತೇಹಾಬಾದ್‌ನಲ್ಲಿ ಬೀದಿನಾಯಿಯೊಂದು ತನ್ನ ಪಾಡಿಗೆ ರಸ್ತೆಯಲ್ಲಿ ಮಲಗಿ ನಿದ್ರಿಸುತ್ತಿತ್ತು. ಈ ಸಂದರ್ಭದಲ್ಲಿ ಹಾಳು ಬಿದ್ದ ರಸ್ತೆಗೆ ಟಾರು ಹಾಕುತ್ತಿದ್ದ ಕಾರ್ಮಿಕರು ಬಿಸಿಯಾದ ಟಾರನ್ನು ನಾಯಿಯ ಮೈಮೇಲೆ ಸುರಿದು ಅದು ಸುಟ್ಟು ಒದ್ದಾಡುವುದನ್ನು ನೋಡಿ ವಿಕೃತ ಸಂತೋಷ ಪಡೆದಿದ್ದಾರೆ. ಅರ್ಧ ದೇಹ ಸುಟ್ಟು ಹೋದ ನಾಯಿಯನ್ನು ಸಾಯಲು ಬಿಟ್ಟು ತಮ್ಮ ಪಾಡಿಗೆ ಕೆಲಸ ಮುಂದುವರಿಸಿದ್ದರು. 

ಬ್ರೇಕಪ್‌ಗೆ ಕೂಡಾ ಸುಖಾಂತ್ಯ ನೀಡಬಹುದು!

- ಡಿಸೆಂಬರ್ 2018
ಬೀದಿ ನಾಯಿಯ ಮರಿಯೊಂದಕ್ಕೆ ದ್ವಾರಕೆಯ ಪ್ರದೀಪ್ ಎಂಬ ಯುವಕ ಆಹಾರ ನೀಡಿದ. ಆ ಖುಷಿಯಲ್ಲಿ ನಾಯಿಮರಿಯು ಆತನ ಕಾಲನ್ನು ಕೆರೆಯಿತು. ಇದಕ್ಕಾಗಿ ಸಿಟ್ಟಾದ ಆತ, ಬ್ಲೇಡಿನಿಂದ ಮರಿಯ ಕಾಲುಗಳನ್ನು ಕೊಯ್ದು ಹಾಕಿದ!  

ತಾಯಿ ನಾಯಿಗೆ ಬುದ್ಧಿ ಕಲಿಸಲು ಅದರ ಆರು ಮರಿಗಳನ್ನು ಕೊಂದ ಮಹಿಳೆ, ಹಸುವಿನ ಮೇಲೆ ಅತ್ಯಾಚಾರ, ಪ್ರಯೋಗಕ್ಕಾಗಿ ಮಂಗಗಳು, ನಾಯಿಗಳಿಗೆ ನೀಡುವ ಹಿಂಸೆ, ವಿನಾ ಕಾರಣ ಪ್ರಾಣಿಗಳಿಗೆ ಹಿಂಸೆ ಮಾಡಿ ಕೊಲ್ಲುವುದು, ಟಿಕ್ ಟಾಕ್ ವಿಡಿಯೋಗಾಗಿ ಬೆಕ್ಕು ನಾಯಿಗಳನ್ನು ನೇಣು ಬಿಗಿದು ನೇತು ಹಾಕುವುದು ಮುಂತಾದ ಸುದ್ದಿಗಳನ್ನು ದಿನೇ ದಿನೇ ಓದುತ್ತೇವೆ, ಆದರೆ ಅಷ್ಟೇ ಬೇಗ ಮರೆಯುತ್ತೇವೆ. ಮನುಷ್ಯತ್ವವನ್ನೇ ಮರೆತ ನಮಗೆ ಇವನ್ನೆಲ್ಲ ಮರೆಯುವುದು ಕಷ್ಟವೇನಲ್ಲ ಅಲ್ಲವೇ?