ಮಗನಿಗೆ ಹೆಣ್ಣು ನೋಡಲು ಹೋದ ತಂದೆಯೊಬ್ಬ, ಆ ಹುಡುಗಿಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆ ರಾಂಪುರದಲ್ಲಿ ನಡೆದಿದೆ.

ರಾಂಪುರ: ಮಗನಿಗೆ ಹೆಣ್ಣು ನೋಡಲು ಹೋದ ತಂದೆಯೊಬ್ಬ ತನ್ನ ಮಗ ಮದುವೆಯಾಗಬೇಕಾದ ಹುಡುಗಿಯನ್ನು ತಾನೇ ಮದುವೆಯಾದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ಶಕೀಲ್ ಎಂಬಾತನೇ ಹೀಗೆ ತನ್ನ ಮಗನ ಭಾವಿ ಪತ್ನಿಯನ್ನು ಮದುವೆಯಾದ ವ್ಯಕ್ತಿ.

ಈತ ಪ್ರಾರಂಭದಲ್ಲಿ ತನ್ನ ಅಪ್ರಾಪ್ತ ಮಗನೊಂದಿಗೆ ಮಹಿಳೆಯೊಬ್ಬಳ ಮದುವೆ ಮಾಡಲು ಮುಂದಾಗಿದ್ದಾನೆ. ಆದರೆ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಈತ ಕುಟುಂಬ ಸದಸ್ಯರ ಮೇಲೆಯೇ ಹಲ್ಲೆ ಮಾಡಿದ್ದಾರೆ. ನಂತರ ಆ ಮಹಿಳೆಯ ಜೊತೆ ದಿನವೂ ಈತ ಫೋನ್‌ನಲ್ಲಿ ಮಾತನಾಡಲು ಶುರು ಮಾಡಿದ್ದಾನೆ ಎಂದು ಶಕೀಲ್‌ನ ಪತ್ನಿ ಶಬಾನ ಎಂಬುವವರು ಆರೋಪ ಮಾಡಿದ್ದಾರೆ. ಶಬಾನ ಜೊತೆ ಈಗಾಗಲೇ ಮದುವೆಯಾಗಿರುವ ಶಕೀಲ್‌ಗೆ ಈ ದಾಂಪತ್ಯದಲ್ಲಿ ಆರು ಜನ ಮಕ್ಕಳು ಜನಿಸಿದ್ದಾರೆ.

ಆತನಿಗೆ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಇರುವ ಬಗ್ಗೆ ಮೊದಲೇ ಸಂಶಯ ಬಂದಿತ್ತು. ಇದಲ್ಲದೇ ಮಹಿಳೆಯೊಬ್ಬಳ ಜೊತೆ ಎರಡು ಬಾರಿ ಆತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆತ ಆಕೆಗೆ ದಿನವೂ ವೀಡಿಯೋ ಕಾಲ್ ಮಾಡುತ್ತಾ ಇರುತ್ತಿದ್ದ. ಆರಂಭದಲ್ಲಿ ನನ್ನ ಮಾತನ್ನು ಯಾರೋ ನಂಬಲಿಲ್ಲ, ನಂತರ ನನ್ನ ಮಗ ಹಾಗೂ ನಾನು ಸೇರಿ ಆತನ ವಿರುದ್ಧ ಸಾಕ್ಷ್ಯ ಕಲೆ ಹಾಕಿದೆವು ಎಂದು ಶಬಾನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನನ್ನ 15 ವರ್ಷದ ಮಗ ಆ ಮಹಿಳೆಗೆ ತನ್ನ ತಂದೆಯ ಜೊತೆಗೆಯೇ ಅನೈತಿಕ ಸಂಬಂಧ ಇರುವುದನ್ನು ನೋಡಿ ಮದುವೆಯಾಗುವುದಕ್ಕೆ ನಿರಾಕರಿಸಿದ್ದ.

ನಮ್ಮ ಅಜ್ಜ ಅಜ್ಜಿಗೂ ಆ ಮಹಿಳೆಯ ಜೊತೆ ತಮ್ಮ ತಂದೆಯ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಅವರು ನನ್ನ ತಂದೆ ಆಕೆಯನ್ನು ಮದುವೆಯಾಗುವುದಕ್ಕೆ ಸಹಾಯ ಮಾಡಿದರು ಎಂದು ಬಾಲಕ ಆರೋಪಿಸಿದ್ದಾನೆ.

ಆ ಮಹಿಳೆಯನ್ನು ಮದುವೆಯಾಗುವುದಕ್ಕಾಗಿ ಮನೆ ತೊರೆದ ಶಕೀಲ್ ಮನೆಯಿಂದ ಹೋಗುವ ವೇಳೆ 2 ಲಕ್ಷ ನಗದು ಹಾಗೂ 17 ಗ್ರಾಂ ಚಿನ್ನಭಾರಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ರೀತಿಯ ಪ್ರಕರಣಗಳು ಹೊಸದೇನಲ್ಲ, ಕಳೆದ ಏಪ್ರಿಲ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮಗಳನ್ನು ಮದುವೆಯಾಗಬೇಕಿದ್ದ, ಭಾವಿ ಅಳಿಯನ ಜೊತೆ ಓಡಿ ಹೋಗುವ ಮೂಲಕ ದೊಡ್ಡ ಸುದ್ದಿಯಾಗಿದ್ದಳು. ಅಲಿಘಡದ ನಿವಾಸಿಯಾಗಿದ್ದ ಶಿವಾನಿ ಎಂಬ ವಧುವಿನ ತಾಯಿ ಅನಿತಾ ಎಂಬಾಕೆ ತನ್ನ ಭಾವಿ ಅಳಿಯನ ಜೊತೆ ಓಡಿ ಹೋಗಿದ್ದಳು. ಈಕೆ ಮನೆ ಬಿಟ್ಟು ಹೋಗುವ ವೇಳೆ ಮಗಳ ಮದುವೆಗಾಗಿ ಇಟ್ಟಿದ್ದ ಮೂರುವರೆ ಲಕ್ಷ ನಗದು ಹಾಗೂ 5 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಓಡಿ ಹೋಗಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದರು. ಮದುವೆಗೆ ಬಂಧುಗಳಿಗೆಲ್ಲರಿಗೂ ಊರಿನಲ್ಲಿ ಆಮಂತ್ರಣ ಹಂಚಿದ ನಂತರ ಈ ಘಟನೆ ನಡೆದಿತ್ತು.

ನಾನು ಏಪ್ರಿಲ್ 16ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ಏಪ್ರಿಲ್ 6 ರಂದು ನನ್ನ ತಾಯಿ ಅನಿತಾ ಆತನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆಕೆ ಹೋಗುವ ವೇಳೆ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ. ಇದಕ್ಕೂ ಮೊದಲು ತಾಯಿ ದಿನವೂ ರಾಹುಲ್ ಜೊತೆ ಕಳೆದ ಮೂರು ತಿಂಗಳಿನಿಂದಲೂ ದಿನವೂ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಶಿವಾನಿ ಹೇಳಿದ್ದರು. ಇತ್ತ ಶಿವಾನಿಯ ತಂದೆ ಬೆಂಗಳೂರಿನಲ್ಲಿ ಉದ್ಯಮವೊಂದನ್ನು ಮುನ್ನಡೆಸುತ್ತಿದ್ದರು. ಪತ್ನಿ ಅಳಿಯನ ಜೊತೆ ನಿರಂತರವಾಗಿ ಮಾತನಾಡುವುದು ತಿಳಿದಿತ್ತು. ಆದರೆ ಮದುವೆ ಹತ್ತಿರದಲ್ಲೇ ಇದ್ದಿದ್ದರಿಂದ ಮದುವೆಯವರೆಗೆ ಏನು ಹೇಳುವುದು ಬೇಡ ಎಂದು ನಿರ್ಧರಿಸಿದ್ದೆ ಎಂದು ಹೇಳಿದ್ದರು. ಅಷ್ಟರಲ್ಲಿ ಪತ್ನಿ ಆಳಿಯನೊಂದಿಗೆಯೇ ಓಡಿ ಹೋಗಿದ್ದಳು.