ಬದುಕಿನ ದೊಡ್ಡ ಅಲೆಗಳಿಗೆ ಬೆದರದೆ ಈಜೋದು ಹೇಳಿಕೊಟ್ಟ ಅಪ್ಪ!
ಅಪ್ಪನ ಅಗಾಧ ತ್ಯಾಗ, ಧೈರ್ಯ, ಪ್ರೀತಿಯನ್ನು ಸ್ಮರಿಸಿ ವಿದ್ಯಾರ್ಥಿಯೊಬ್ಬರು ತಮ್ಮ ತಂದೆಗೆ ಫಾದರ್ಸ್ ಡೇ ವಿಶ್ ಮಾಡಿದ್ದಾರೆ.
ಶಶಿಧರ ನಾಯ್ಕ ಎ, ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಅಪ್ಪ ಎಂದರೆ ಕೇವಲ ಆಕಾಶವಲ್ಲ, ಅದನ್ನೂ ಮೀರಿದ ಒಂದು ಅದ್ಭುತ ಜೀವ. ತನ್ನ ಇಡೀ ಸಂಸಾರದ ಹೊಣೆ ಹೊತ್ತು ತನ್ನ ಕುಟುಂಬಕ್ಕೆ ಆಧಾರವಾಗಿರುವ ಅಪ್ಪನನ್ನು 'ಪಿತೃ ದೇವೋಭವ' ಎಂದು ಉಪನಿಷತ್ ನಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಅಪ್ಪ ದೇವರಿಗೆ ಸಮನಾದವನು ಎಂದರ್ಥ.
ಅಪ್ಪ ಎನ್ನುವ ಶಬ್ದದಲ್ಲೇ ಒಂದು ಹುಮ್ಮಸ್ಸು, ಚೈತನ್ಯ ಇದೆ. ಒಂದು ಸಣ್ಣ ಜೀವ ಭುವಿಗೆ ಕಾಲಿಟ್ಟಾಗ ಅಮ್ಮನ ಜೊತೆಗೆ ಕಾಣಿಸುವ ಮತ್ತೊಂದು ಜೀವ ಅಂದ್ರೆ ಅದು ಅಪ್ಪ.
ಒಂದು ಸಣ್ಣ ಸಂಸಾರದಲ್ಲಿ ಅಪ್ಪನ ಪಾತ್ರ ನಿಭಾಯಿಸಿಕೊಂಡು ಹೋಗೋದು ಅಂದ್ರೆ ಅದು ಅಷ್ಟು ಸುಲಭದ ಮಾತಲ್ಲ. ಸಂಸಾರದಲ್ಲಿ ಅಪ್ಪನ ಪಾತ್ರ ಎಂದರೆ ಅದು ದೇಶವನ್ನು ಮುನ್ನಡೆಸುವ ಪ್ರಧಾನಿಯಂತೆ. ಎಲ್ಲ ಕಷ್ಟ- ನಷ್ಟವನ್ನು, ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕಾದ ಮಹತ್ತರ ಜವಾಬ್ದಾರಿ ಒಬ್ಬ ತಂದೆಯದ್ದು.
ಹಾ, ನಾನು ಎಲ್ಲರ ಹಾಗೆ ಅಪ್ಪನ ಪ್ರೀತಿಯನ್ನು ಪಡೆದುಕೊಂಡು ಬೆಳೆದವನು. ನನ್ನ ಅಮ್ಮನನ್ನು ಹೇಗೆ ದೇವರ ಸ್ವರೂಪದಲ್ಲಿ ಕಾಣುತ್ತೆನೋ ಅದೇ ರೀತಿಯಲ್ಲಿ ಅಪ್ಪನನ್ನು ಕೂಡಾ ದೇವರ ಸ್ವರೂಪದಲ್ಲಿ ಕಂಡವನು.
ನನ್ನ ಅಪ್ಪ ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು, ಹಲವಾರು ಅನುಭವಗಳನ್ನು ನನ್ನಲ್ಲಿ ಹಂಚಿಕೊಂಡವರು. ಅಂತಹ ಹಲವಾರು ಅನುಭವಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು, ಪ್ರಯೋಜನವನ್ನು ಕಂಡವನು.
Father’s Day: ಅಪ್ಪ-ಮಕ್ಕಳ ನಡುವೆ ಕಂದಕ ಸೃಷ್ಟಿಸುವ ಅಭ್ಯಾಸಗಳಿವು
ನನ್ನ ಮತ್ತು ಅಪ್ಪನ ನಡುವೆ ಬಾಲ್ಯದಲ್ಲಿ ನಡೆದ ಹಲವಾರು ಘಟನೆಗಳನ್ನು ಮೆಲುಕು ಹಾಕಿಕೊಂಡಾಗ ಕೆಲವೊಂದು ಘಟನೆಗಳು ಹಾಗೆಯೇ ಕಣ್ಣೆದುರು ಬಂದು ಬಿಡುತ್ತದೆ.
ನಾನು ಪ್ರಾಥಮಿಕ ಶಾಲೆಯಲ್ಲಿ ಓದುತಿದ್ದ ಸಮಯ. ನಮಗೆ ಪ್ರಾಥಮಿಕ ಶಾಲೆಗೆ ಹೋಗಬೇಕಾದರೆ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಸೀರೆಹೊಳೆ ಎಂಬ ನದಿಯನ್ನು ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ. ಆ ದಿನಗಳಲ್ಲಿಈ ನದಿಗೆ ಸೇತುವೆಗಳು ಇಲ್ಲದ ಸಮಯ ಬೇರೆ. ಜೂನ್-ಜುಲೈ ಸಮಯದಲ್ಲಿ ಮುಂಗಾರಿನ ರಣ ಮಳೆಯ ಕಾರಣ ನದಿಗಳು ಉಕ್ಕಿ ಹರಿಯುತ್ತಿರುತ್ತಿತ್ತು. ಈ ನದಿ ದಾಟಿ ನಮ್ಮ ಊರಿನಿಂದ ಆ ಕಡೆಯ ಊರಿಗೆ ಹೋಗ್ಬೇಕು ಅಂತ ಇದ್ರೂನು 10 ರಿಂದ 15 ಕಿಲೋಮೀಟರ್ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ. ಇಂತಹ ಕ್ಲಿಷ್ಟಕರ ಪರಿಸ್ಥಿತಿ ನನ್ನ ಊರಿನದ್ದು.
ನನ್ನ ಅಪ್ಪ ಬಾಲ್ಯದಲ್ಲೇ ಈಜು ಕಲಿತವರು. ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದಾಗ ನದಿಯ ಆ ಕಡೆಯ ತೀರದಿಂದ ಈ ಕಡೆಯ ತೀರಕ್ಕೆ ಸಲೀಸಾಗಿ ಈಜುತಿದ್ದವರು.
ಆರ್ಡಿನರಿ ಮ್ಯಾನ್ ಆಗಿ ಮಕ್ಕಳಿಗೆ ಎಕ್ಸ್ಟ್ರಾರ್ಡಿನರಿ ಲೈಫ್ ಕೊಟ್ಟ ಅಪ್ಪನಿಗೆ Happy Father’s Day
ನದಿಯ ನೀರು ಸ್ವಲ್ಪ ಕಮ್ಮಿಯಾಗಿ ನದಿ ದಾಟುವ ಸ್ಥಿತಿ ಇದ್ರೆ ಸಂಜೆ ನಾನು ಮತ್ತು ನನ್ನ ತಮ್ಮ ಶಾಲೆ ಬಿಟ್ಟು ನದಿಯ ದಂಡೆಗೆ ಬಂದು ಅಪ್ಪನಿಗೆ ಕಾಯುತ್ತಿದ್ದೆವು. ಅಪ್ಪ ಆ ಕಡೆಯ ದಡಕ್ಕೆ ಬಂದಾಗ ಅಪ್ಪನ ಮುಖ ನೋಡಿ ಒಂದು ಚಂದದ ಸ್ಮೈಲ್ ಕೊಡುತ್ತಿದ್ದೆವು. ಈ ನದಿ ದಾಟಲು ಆ ದೇವರೇ ಅಪ್ಪನ ರೂಪದಲ್ಲಿ ಬಂದಿದ್ದಾರೆ ಎನ್ನುವ ಒಂದು ನಂಬಿಕೆ. ಅಪ್ಪನ ಹೆಗಲ ಮೇಲೆ ಕೂತು, ಬ್ಯಾಗ್ ನ್ನು ಬೆನ್ನಿಗೇರಿಸಿ ರಭಸದಿಂದ ಹರಿಯುತ್ತಿರುವ ನೀರಿನಲ್ಲಿ, ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ, ನೀರು ತಮ್ಮ ಕುತ್ತಿಗೆಯವರೆಗೂ ಬರ್ತಿದ್ರೂ, ತನ್ನ ಜೀವವನ್ನು ಒತ್ತೆಯಿಟ್ಟು ನಮಗಿಬ್ಬರಿಗೂ ಯಾವುದೇ ರೀತಿಯ ಅಪಾಯವಾಗದಂತೆ ದಾಟಿಸುತ್ತಿದ್ದರು. ಈ ರೀತಿಯ ಅದೆಷ್ಟೋ ನಿಜ ಘಟನೆಗಳು ನಡೆದು ಹೋಗಿವೆ. ಅಂತಹ ಒಂದೊಂದು ನೈಜ ಘಟನೆಗಳು ನನಗೆ ಹಲವಾರು ಪಾಠಗಳನ್ನು ಕಲಿಸಿವೆ ನಾನು ಕಲಿತಿದ್ದೇನೆ.
ನನ್ನ ಅಪ್ಪನಿಂದ ನಾನು ಧೈರ್ಯವನ್ನ ಲಿತೆ, ತಾಳ್ಮೆಯನ್ನು ಕಲಿತೆ, ಜೀವನದಲ್ಲಿ ಸಮಸ್ಯೆ ಬಂದಾಗ ಅದನ್ನು ಎದುರಿಸಿ ಜೀವನದಲ್ಲಿ ಮುನ್ನಡೆಯುವುದನ್ನು ಕಲಿತೆ, ಯಾರಿಗೂ ಮೋಸ ಮಾಡಬಾರದು, ಮೋಸ ಮಾಡುವುದು ತಪ್ಪು ಎಂಬುದನ್ನ ಕಲಿತೆ, ಅಪ್ಪನಿಂದ ಜವಾಬ್ದಾರಿ ಅನ್ನೋದು ಏನು ಎಂಬುದನ್ನ ಕಲಿತೆ. ಹೀಗೆ ಹತ್ತು ಹಲವಾರು ಪಾಠಗಳನ್ನ ನನ್ನ ಅಪ್ಪನಿಂದ ನಾನು ಕಲಿತೆ.
ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅಪ್ಪನ ಮೇಲೆ ಕೆಲವೊಂದು ಸಲ ಕೆಲವೊಂದು ವಿಷಯಗಳಲ್ಲಿ ಸಣ್ಣ ಮಟ್ಟಿನ ಮುನಿಸು ಬರುವುದು ಸಹಜ. ಅದು ಕ್ಷಣ ಮಾತ್ರ. ಆದ್ರೆ ಅಪ್ಪನ ಮೇಲೆ ವಿನಾಕಾರಣ ರೇಗಾಡುವುದು, ಜಗಳವಾಡುವುದು ಮಾತ್ರ ತಪ್ಪೇ. ಎಂದಿಗೂ ನಾನು ಅಪ್ಪನ ಜೊತೆ ಜಗಳ ಆಡಿಲ್ಲ, ಆದ್ರೆ ಕೆಲವೊಂದು ಸಲ ಸಣ್ಣ ಮಟ್ಟಿನ ಮುನಿಸು ಉಂಟಾಗಿದ್ದು ಇದೆ. ಅದು ಕ್ಷಣ ಕಾಲ ಮಾತ್ರ. ಮನೆಯಲ್ಲಿ ಇಷ್ಟು ದಿನ ಇದ್ದ ನನಗೆ ಅಪ್ಪನ ನೆನಪು ಅಷ್ಟೊಂದು ಬರ್ತಾ ಇರ್ಲಿಲ್ಲ. ಯಾಕಂದ್ರೆ ನಾನು ಪ್ರತಿನಿತ್ಯ ಅವರನ್ನು ನೋಡ್ತಾ ಇದ್ದೆ ಅನ್ನೋ ಕಾರಣದಿಂದ. ಆದ್ರೆ ಯಾವಾಗ ನಾನು ನನ್ನ ಸ್ನಾತಕೋತ್ತರ ಶಿಕ್ಷಣ ಪಡೆಯಲು ಮನೆ ಬಿಟ್ಟು ಹಾಸ್ಟೆಲ್ ಸೇರುವ ಪರಿಸ್ಥಿತಿ ಬಂತೋ ಅವಾಗ ಅಪ್ಪನ ನೆನಪು ಕಾಡತೊಡಗಿತು. ಈಗ ಅಮ್ಮನಿಗೆ ಹಾಸ್ಟೆಲ್ ನಿಂದ ಕರೆ ಮಾಡಿದಾಗ ಅಪ್ಪ ಹೇಗಿದ್ದಾರೆ, ಏನ್ಮಾಡ್ತಿದ್ದಾರೆ ಅನ್ನೋದನ್ನು ಮಾತ್ರ ಕೇಳದೆ ಬಿಡುವುದಿಲ್ಲ. ಅಷ್ಟು ಅಪ್ಪನ ನೆನಪು ಕಾಡ್ತಿದೆ. ಅಪ್ಪನ ಹತ್ರ ಇರಬೇಕು ಅಂತ ಅನಿಸುತ್ತೆ.
ಯೋಗದಿಂದ ನಿಮ್ಮ ಮೆದುಳಿಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದಿದ್ದೀರಾ?
ತನಗೆ ಎಷ್ಟೇ ಕಷ್ಟ ಇದ್ರೂನು ತನ್ನ ಮಕ್ಕಳು ಶಿಕ್ಷಣ ಪಡಿಬೇಕು, ಅವರು ಒಂದೊಳ್ಳೆ ಉದ್ಯೋಗ ಪಡೆದು ತಮ್ಮ ಜೀವನದಲ್ಲಿ ನೆಲೆ ನಿಲ್ಲಬೇಕು ಎಂದು ನಿಷ್ಕಲ್ಮಶ ಮನಸ್ಸಿನಿಂದ ಹಾರೈಸಿ, ತನ್ನ ಸ್ವಂತ ಆಸೆ-ಆಕಾಂಕ್ಷೆಗಳನ್ನ ಎಲ್ಲವನ್ನೂ ತ್ಯಾಗ ಮಾಡಿ ತನ್ನ ಮಕ್ಕಳ ಏಳಿಗೆಗಾಗಿ ಇಡೀ ದಿನ ದುಡಿಯುವ ನನ್ನ ಅಪ್ಪನಿಗೆ ಅಪ್ಪನೇ ಸಾಟಿ.
'ಫಾದರ್ಸ್ ಡೇ'ಯಂದು ಮಾತ್ರ ಅಪ್ಪನನ್ನು ನೆನೆಯುವ ದಿನ ಆಗ್ಬಾರ್ದು. ಒಂದು ಮಗುವಿನ ಹುಟ್ಟಿನಿಂದ ಹಿಡಿದು, ಅವರ ಲಾಲನೆ ಪಾಲನೆ ಮಾಡಿ, ಪ್ರತಿಯೊಂದು ಕ್ಷಣವೂ ತನ್ನ ಮಕ್ಕಳ ಕನಸಿಗೆ ಆಧಾರ ಸ್ತಂಭವಾಗಿರುವ ಅಂತಹ ಮಹಾನ್ ವ್ಯಕ್ತಿಯನ್ನು ಪ್ರತಿಕ್ಷಣವೂ, ಪ್ರತಿದಿನವೂ ನೆನೆಯುವ ಮತ್ತು ಅವರ ಆಸೆ ಆಕಾಂಕ್ಷೆಗಳನ್ನು ಪೂರೈಸಿ, ಅವರನ್ನು ಜೀವನದಲ್ಲಿ ಸಂತೋಷವಾಗಿಡುವ ಮಕ್ಕಳು ನಾವಾಗಬೇಕು. ಅಪ್ಪ, ಐ ಲವ್ ಯೂ ಪಾ....