ಆರ್ಡಿನರಿ ಮ್ಯಾನ್ ಆಗಿ ಮಕ್ಕಳಿಗೆ ಎಕ್ಸ್ಟ್ರಾರ್ಡಿನರಿ ಲೈಫ್ ಕೊಟ್ಟ ಅಪ್ಪನಿಗೆ Happy Father’s Day
ಅಮ್ಮನ ಬಗ್ಗೆ ಹೇಳಿದಷ್ಟು ‘ ಅಪ್ಪ’ ನ ಬಗ್ಗೆ ಯಾವ ಪಠ್ಯ ಪುಸ್ತಕದಲ್ಲೂ ಹೇಳಿಲ್ಲ ನಿಜಾ, ಆದರೆ ಪ್ರತಿಯೊಬ್ಬರ ಜೀವನದಲ್ಲಿ ಅಮ್ಮನಷ್ಟೇ ಮುಖ್ಯಪಾತ್ರವನ್ನು ಹೊಂದಿರುವವರು ಅಪ್ಪ. ಪ್ರತಿಯೊಬ್ಬ ಮಕ್ಕಳ ಮೊದಲ ಹೀರೋ ಅಪ್ಪ. ಹೊತ್ತು, ಹೆತ್ತದ್ದು ಅಮ್ಮನೇ ಇರಬಹುದು, ಆದರೆ ಮಕ್ಕಳ ಜೀವನ ರೂಪಿಸಿದ ರುವಾರಿ ಅಪ್ಪ. ಇಂದು ‘ವಿಶ್ವ ತಂದೆಯರ ದಿನದಂದು’ (International father's day) ತಂದೆಯ ಬಗ್ಗೆ ಮಕ್ಕಳ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಅಪ್ಪನಲ್ಲಿ ನೇರವಾಗಿ ಹೇಳಲಾಗದ ಮಾತುಗಳು ಇಲ್ಲಿ ಅಕ್ಷರವಾಗಿ ಬಂದಿದೆ… ತಂದೆಯರ ದಿನಕ್ಕೆ ಅಪ್ಪನಿಗೆ ಇದಕ್ಕಿಂತ ವಿಶೇಷ ಗಿಫ್ಟ್ ಬೇರೇನು ಬೇಕು?
ಯಾರಾದರೂ ಬಂದು 'ನೀವು ಥೇಟ್ ನಿಮ್ಮ ತಂದೆ ಥರಾನೇ ಕಾಣ್ತಿರಾ' ಎಂದಾಗ ನನಗಾಗುವ ಸಂತೋಷ ಅಷ್ಟಿಷ್ಟಲ್ಲ. ಹೌದು, ಬಹುತೇಕರ ಕಣ್ಣಲ್ಲಿ ನಾನು ನನ್ನ ತಂದೆಯ ಯಂಗರ್ ವರ್ಶನ್. ಆದರೆ, ಅವರಲ್ಲಿರುವ ಶಿಸ್ತು, ಕಾರ್ಯತತ್ಪರತೆ, ಸರಳತೆ, ಚಾಕಚಕ್ಯತೆ, ಕಷ್ಟಗಳಿಗೆ ಸವಾಲೊಡ್ಡುವ ಧೈರ್ಯ, ಸಂಸಾರ ನಿಭಾಯಿಸುವ ಕಲೆ ಹೀಗೆ ಮುಂತಾದ ಗುಣಗಳು ಇನ್ನೂ ಮೈಗೂಡಬೇಕಿವೆ. ಹಾಗೆ ಆದಾಗ ಮಾತ್ರ ಅಪ್ಪನ ಜೊತೆಗಿನ ಹೋಲಿಕೆಗೆ ಸರಿಯಾದ ಅರ್ಥ ಸಿಗುತ್ತೆ ಅನ್ನೋದು ನನ್ನ ಅಭಿಪ್ರಾಯ. ಅಪ್ಪನಂತೆ ಕಾಣುವುದು ಸಹಜ ಆದರೆ ಅಪ್ಪನ ದಾರಿಯಲ್ಲಿ ಸಾಗುವುದು ಹಾಗೂ ಅಪ್ಪನ ರೀತಿಯಲ್ಲಿ ಬದುಕುವುದು ತುಂಬಾ ಕಠಿಣ. ಜೀವನದ ಪ್ರತಿ ಹಂತದಲ್ಲೂ ಸ್ಫೂರ್ತಿಯಾಗಿ ನಿಲ್ಲುವ ನನ್ನ ತಂದೆಗೆ 'ವಿಶ್ವ ತಂದೆಯರ ದಿನ'ದ ಶುಭಾಶಯಗಳು.
- ಅಭಿಜಿತ್ ಯಲಿಗಾರ, ಧಾರವಾಡ.
ನನ್ನಪ್ಪ ಒಬ್ರು ಆರ್ಡಿನರಿ ಮ್ಯಾನ್, ಆದರೆ ನಮಗೆ ನೀಡಿದ್ದು ಮಾತ್ರ ಎಕ್ಸ್ಟ್ರಾ ಆರ್ಡಿನರಿ ಲೈಫ್! ಹೌದು ಅವತ್ತಿಂದ ಇವತ್ತಿಗೂ ತನಗಾಗಿ ಏನೂ ಮಾಡದೇ, ಏನೂ ಕೊಳ್ಳದೆ ನಮಗಾಗೇ ಎಲ್ಲವನ್ನೂ ಮಾಡಿದ, ಮಾಡುತ್ತಿರುವ, ತನ್ನೆಲ್ಲಾ ಕಷ್ಟವನ್ನು ತನ್ನಲ್ಲೇ ಇಟ್ಟು, ನಮಗಾಗಿ ಇರೋ ಎಲ್ಲಾ ಪ್ರೀತಿ, ಸುಖ, ಸಂತೋಷ, ನೆಮ್ಮದಿ ಇನ್ನೂ ಏನೇನಿದ್ಯೋ ಎಲ್ಲವನ್ನೂ ಇವತ್ತಿಗೂ ಕೊಡುತ್ತಿರೋ ಸಿಂಪಲ್ ಮ್ಯಾನ್ ನನ್ನಪ್ಪ. ಲೈಫನಲ್ಲಿ ನಾವು ಏನೂ ಕೇಳೋ ಮೊದಲೇ ಎಲ್ಲವನ್ನೂ ಕೊಡಿಸಿದರೂ, ಪ್ರತಿ ಒಂದು ಪೈಸೆ ದುಡ್ಡಿನ ಬೆಲೆ ತಿಳಿಸಿದವರೂ ನನ್ನಪ್ಪ. ಬದುಕಲ್ಲಿ ಎಷ್ಟೇ ಕಷ್ಟ ಬಂದ್ರು ನಮ್ಮೇಲೆ ನಮಿಗೆ ನಂಬಿಕೆ ಇದ್ರೆ ದೈರ್ಯದಿಂದ ಹೇಗಾದ್ರು ಖುಷಿಯಲ್ಲಿ ಬದುಕ್ಬೋದು ಅಂತ ಹೇಳಿಕೊಟ್ಟೋರು ನನ್ನಪ್ಪ. ಈ ಎಲ್ಲಾ ಪ್ರೀತಿ, ತ್ಯಾಗ, ಋಣಕ್ಕೆ ಬೆಲೆ ಕಟ್ಟಲಾಗದ್ದು. ಥ್ಯಾಂಕ್ಸ್ ತುಂಬಾ ಸ್ಮಾಲ್ ವರ್ಡ್, ಬಟ್ ಸ್ಟಿಲ್, ಥಾಂಕ್ ಯೂ ಅಪ್ಪಾ, ಈ ಬ್ಯೂಟಿಫುಲ್ ಲೈಫ್ ನೀಡಿದಕ್ಕೆ, ಯು ಆರ್ ಗಾಡ್ ಗಿಫ್ಟ್ದ್ ಫಾರ್ ಅಸ್.. .
ಸಹನಾ, ಭದ್ರಾವತಿ
ಅಪ್ಪ ಅಂದ್ರೆ ಎಲ್ರಿಗೂ ಭಯ. ಅಪ್ಪನ ದನಿ ಏರಿದ್ರೆ ಸಾಕು ಮನೆ ಮಂದಿಗೆಲ್ಲ ಅದೇನೋ ಭಯ.. ಆದ್ರೆ ನಮ್ಮಪ್ಪ ತೀರಾ ಪಾಪ. ನಾಲ್ಕು ಬೈಗಳ ನೀಡಿದ್ರು ಸಹ ಅದಕ್ಕಿಂತ ಹತ್ತರಷ್ಟು ಮುದ್ದು ಮಾಡಿಯೇ ಬೆಳೆಸಿದ್ರು. ಅಪ್ಪನಿಂದ ನಾನೇನಾದ್ರು ಕಲ್ತಿದ್ರೆ ಅದು ವಿನಯತೆ. ಇವತ್ತು ನಾನು ಏನೋ ಬರೀತಿದ್ದೇನೆ, ಅದು ಎಲ್ಲರಿಗೆ ಇಷ್ಟ ಆಗ್ತಿದೆ ಅಂದ್ರೆ ಅದಕ್ಕೆ ಕಾರಣನೇ ನಮ್ಮಪ್ಪ. ಅಪ್ಪ ತಂದು ಕೊಟ್ಟ ಬಾಲಮಂಗಳ, ಮಂಗಳ, ಕೇಳಿಸಿ ಕೊಟ್ಟ ನಾಟಕ, ಯಕ್ಷಗಾನ, ಹಳೆ ಹಾಡು ಭಾವಗೀತೆ ಎಲ್ಲವು ನನ್ನನ್ನ ಓದೋಕೆ,ಬರೀಲಿಕೆ ಪ್ರೇರೇಪಿಸಿದೆ ಅಂದ್ರೆ ತಪ್ಪೇ ಇಲ್ಲಾ. ಅಪ್ಪನಿಗೆ ಹೆಚ್ಚಾಗಿ ನಾಟಕ, ಯಕ್ಷಗಾನ ನೋಡೋದಂದ್ರೆ ಏನೋ ಖುಷಿ. ಅಷ್ಟೇ ಅಲ್ಲ ಹಳೆ ಹಾಡುಗಳ ಪ್ರೇಮಿ ಅಪ್ಪ. ಇನ್ನು ಕೆಲ್ಸದ ವಿಷ್ಯಕ್ಕೆ ಬಂದ್ರೆ ಅಪ್ಪ ಹೆಚ್ಚೇನೂ ಓದಿದವರಲ್ಲ. ಆದರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಇದ್ದುದರಲ್ಲೇ ನಮಗೊಂದು ಒಂದೊಳ್ಳೆ ಬದುಕು ರೂಪಿಸಿಕೊಟ್ಟಿದ್ದಾರೆ. ತನಗೋಸ್ಕರ ಸಮಯ ಅಥವಾ ಹಣ ಕೂಡಿಡದೆ ಮಕ್ಕಳು ಮನೆ ಅಂತ ಎಲ್ಲ ಸಂತೋಷವನ್ನು ನಮಗಾಗಿ ನೀಡೋ ಈ ಅಪ್ಪನ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿಯೇ.. ಅಪ್ಪನ ಮಿತವಾದ ಮಾತು,ಹಿತವಾದ ಹಾಡು, ಸಣ್ಣ ಸಣ್ಣ ತಮಾಷೆ ನಂಗಿಷ್ಟ ಮತ್ತು ಎಲ್ಲಾ ಹೆಣ್ಣ್ ಮಕ್ಕಳಂತೆ ನಮ್ಮಪ್ಪ ಅಂದ್ರೆ ನಂಗೆ ತುಂಬಾನೇ ಇಷ್ಟ.
ದೀಕ್ಷಿತಾ, ಹೊಸಂಗಡಿ
ಅವನೊಬ್ಬ ಮಹಾನಾಯಕ
ಅವನೆಂದರೆ ಮಳೆಬಿಲ್ಲ ನಡುವಿನ ಸಪ್ತವರ್ಣ ಅವನಿದ್ದರೆ ಜಗತ್ತು ರವಿ ವರ್ಮನ ಕುಂಚದಿ ಅರಳುವ ಕಲಾಕೃತಿಯಂತೆ. ಅಮ್ಮ ಮಾತಾಡಿದಷ್ಟು ಅಮ್ಮನ ಸಾಮೀಪ್ಯದಷ್ಟು ಅಪ್ಪನ ನೆರಳು ಮಗಳ ಸೋಂಕಿದ್ದು ತೀರ ತೀರಾ ವಿರಳ. ಅಪ್ಪ ಮುಂಜಾನೆಯ ಎದ್ದು ಹೊರ ನಡೆದರೆ ಮನೆ ಸೇರುತ್ತಿದ್ದದ್ದೇ ಸೂರ್ಯ ಮರೆಯಾದ ಮೇಲೆ ನಿತ್ಯ ಕರ್ಮ ಮುಗಿಸಿ. ಅದೆಷ್ಟೋ ಏಟುಗಳು ತನ್ನ ಪಾಲಿಗೆ ಬಿದಿದ್ದರೂ ಎಂದೂ ನೋವನ್ನು ಹಂಚಿಲ್ಲ, ಅದೆಷ್ಟೋ ಆರೋಗ್ಯ ಹದಗೆಟ್ಟರೂ ನಾ ಚೆನ್ನಾಗಿದ್ದೇನೆ ಎಂಬ ಮಾತೇ ಹೊರ ಬರುತ್ತಿತ್ತೆ ವಿನಃ ಕಣ್ಣೀರ ಹರಿಸಿದ್ದು ಎಲ್ಲೂ ಕಾಣ ಸಿಗುವುದಿಲ್ಲ.
ಕಾಂಚನಾ ಕೋಟೆಕಾರು
(ಕೃಷ್ಣಪ್ರಿಯ...)
ಅಪ್ಪ ಅಂದ್ರೆ ನನ್ನ ಪಾಲಿನ ಹೀರೋ… ನನ್ನ ಅಪ್ಪನ ಪುಟ್ಟ ಪ್ರಪಂಚ ನಾನಾದರೆ ನನ್ನ ವಿಶಾಲವಾದ ಪ್ರಪಂಚ ನನ್ನಪ್ಪ...ನನ್ನ ಜೀವನದಲ್ಲಿ ಯಾವಾಗಲು ಮೊದಲ ಹೀರೋ ನೀವಾಗಿರುತ್ತೀರಾ ಅಪ್ಪ. 'ವಿಶ್ವ ತಂದೆಯರ ದಿನ'ದ ಈ ಶುಭ ಗಳಿಗೆಯಂದು ನಿಮಗೆ ಶುಭಾಶಯಗಳು ಅಪ್ಪಾ.
ಕಲಾ ಕುಮಾರ್, ಮೈಸೂರು
ಅಪ್ಪನ ಆ ನೋವಿನೊಳಗಡೆ ಕುಟುಂಬದ ಸುಖದ ಕನಸು ಕಂಡ ಆ ಸಮಯ
ಸಂಬಂಧಗಳ ಮಾತು ಬಂದಾಗಲೆಲ್ಲ ತಾಯಿ ಪ್ರೀತಿಗೆ ಸದಾ ಅಗ್ರಸ್ಥಾನ ಆದರೆ ಅಪ್ಪನೊಳಗಿನ ತಾಯ್ತತನ ಮಾತ್ರ ಚಿಪ್ಪಿನೊಳಗೆ ಅವಿತಿಟ್ಟ ಆಮೆಯಂತೆ. ಅಮ್ಮನಂತೆ ಬಾವುಕನಾಗಿ ತನ್ನ ಪ್ರೀತಿ ತೋರಲಾರದ ಅಪ್ಪ, ಕಟುದ್ವನಿಯಲ್ಲಿ ಮಕ್ಕಳನ್ನು ಶಿಸ್ತಿನಿಂದ ಬೆಳೆಸುತ್ತಾನೆ. ನನ್ನ ತಂದೆಯ ಬಗ್ಗೆ ನನಗೆ ಬಹಳಷ್ಟು ಗೌರವ ಇದೆ ಏಕೆಂದರೆ ಅವರ ತಾಯಿ ಮನಸ್ಸನ್ನು ನಾನು ಬಾಲ್ಯದಲ್ಲೇ ಕಂಡಿರುವೆ. ಕಾಲಿಗೆ ಕಲ್ಲು ತಾಗಿದಾಗ ಕಮ್ಯುನಿಸ್ಟ್ ಎಲೆ ರಸ ಹಾಕಿ ತಿಕ್ಕಿದ ಆ ಸಮಯ, ಆರೋಗ್ಯ ಹದಗೆಟ್ಟಾಗ ಡಾಕ್ಟರ್ ಮನೆಗೆ ಎತ್ತಿ ಕೊಂಡು ಹೋದ ನೆನಪು ಇಂದಿಗೂ ಕಾಡುತ್ತಿದೆ ನನಗೆ. ತಿಂಡಿ ತರಲು ಮರೆತು ಜಡಿ ಮಳೆಯನ್ನೂ ಲೆಕ್ಕಿಸದೆ ಪುನಃ ತೆರಳಿ ನನಗೆ ತಿಂಡಿ ತಂದು ಕೊಟ್ಟು ಅದರಲ್ಲಿ ನೀವು ಅನುಭವಿಸಿದ ಸುಖ ಇಂದಿಗೂ ನನ್ನ ಮನದಲ್ಲಿದೆ. ಪರೀಕ್ಷೆಯಲ್ಲಿ ಅನುತೀರ್ಣ ಆದರೇನಂತೆ ನೀನು ಬದಕಲು ಕಲಿ ಎಂದು ಹೇಳಿದಂತಹ ಶ್ರೇಷ್ಠ ವ್ಯಕ್ತಿಯನ್ನೂ ಎಲ್ಲೂ ಕಂಡಿಲ್ಲ ಕಾರಣ ಅವರ ಉದ್ದೇಶ ನನ್ನ ಏಳಿಗೆ ಒಂದೇ.
ರತೀಶ್ ನೂಜಿಪ್ಪಾಡಿ, ಕುಕ್ಕಾಜೆ
ಅಪ್ಪ ಕೇಳಲು ಬರೇ ಎರಡಕ್ಷರವಿರಬಹುದು ಆದ್ರೆ ನಮ್ಮಜೀವನದುದ್ದಕ್ಕೂ ಹೆಚ್ಚಿನ ಪಾತ್ರವಿರುವುದು ಅಪ್ಪನದೆ. ಈ ನನ್ನ ದೇಹಕ್ಕೆ ಅಮ್ಮ ಜೀವ ನೀಡಿದ್ರೆ ಜೀವನ ರೂಪಿಸಿ ಕೊಟ್ಟದ್ದು ಅಪ್ಪ. ಇಂದು ನಾನೇನು ಆಗಿದ್ದೇನೋ ಅದಕ್ಕೆ ಭದ್ರ ಬುನಾದಿ ಹಾಕಿರುವುದು ಅಪ್ಪ. ನನ್ನ ಮದುವೆ ಮೊದಲು ಜವಬ್ದಾರಿಯುತ ಅಪ್ಪನನ್ನು ನಾನು ನೋಡಿದ್ದೆ. ಆದ್ರೆ ಈಗ ನನ್ನ ಮಗುವಿನೊಂದಿಗೆ ಮಗುವಿನ ಮನಸ್ಸಿನಂತೆ ಆಟವಾಡುವ ಅಪ್ಪನನ್ನು ಕಾಣುತ್ತಿದ್ದೇನೆ. ಅಪ್ಪ ನಿಂದ ಇದೀಗ ಅಜ್ಜ ಎಂಬ ಬಡ್ತಿ ಪಡೆದಿರೋ ಅಪ್ಪನಿಗೆ ನಿವೃತ್ತಿ ಜೀವನದಲ್ಲೂ ಇದೀಗ ಬಿಡುವಿಲ್ಲದಷ್ಟು ಪುಳ್ಳಿಯ ಕೆಲಸ. ಪುಳ್ಳಿಯ ಜತೆ ತುಂಟಾಟ ಮಾಡುತ್ತಿರುವ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು
ನಿಶ್ಮಿತಾ ಬೇಕಲ್
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ....
ಇದೇನಪ್ಪ ಅಪ್ಪನ ಬಗ್ಗೆ ಹೇಳು ಅಂದ್ರೆ ಪ್ರೇಮ ಗೀತೆ ಹೇಳ್ತ ಇದ್ದಾಳಲ್ವ ಅಂತ ತಿಲ್ಕೊಬೇಡಿ ಈ ಸಾಲನ್ನು ಕೇಳದಾಗ ನನಗೆ ಮೊದಲು ನೆನಪಾಗೋ ವ್ಯಕ್ತಿ ಅಂದ್ರೆ ಅದು ಅಪ್ಪಾನೆ. ಅಪ್ಪ ಯಾವತ್ತಿಗು ಮಕ್ಕಳ ಬಾಳನ್ನ ಬರಡಾಗಿಸಲು ಅವಕಾಶವನ್ನೇ ಕೊಡೋದಿಲ್ಲ. ಅಪ್ಪ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಶಿಸ್ತು, ಸಂಪ್ರದಾಯ, ಮುಂದಾಲೋಚನೆ, ಸ್ವಾಭಿಮಾನ, ಗೌರವ, ನಿಷ್ಠೆ, ಹಾಗು ವಿನಮ್ರತೆ ಈ ಸಪ್ತ ಗುಣಗಳು. ಅಪ್ಪ ಒಂದು ರೀತಿಯಲ್ಲಿ ಕಲ್ಪನೆಗೂ ನಿಲುಕದ ವ್ಯಕ್ತಿ,ಮಾತಿನಲ್ಲಿ ಕಠೋರತೆ, ಮನಸ್ಸಿನ ಪರಿಶುಧ್ಧತೆ, ಪ್ರೀತಿಯ ಮರೀಚಿಕೆ ಇವೆಲ್ಲದರ ಜೊತೆಗೆ ಮಕ್ಕಳನ್ನ ತಿದ್ದಿ ತೀಡಿ ಉತ್ತಮ ಭವಿಷ್ಯ ಕಲ್ಪಿಸಿ ಕೊಡೋ ಶಿಲ್ಪಿ. ಬರೋ ಎಲ್ಲಾ ಕಷ್ಟಗಳನ್ನು ತನ್ನಲ್ಲೆ ನುಂಗಿಕೊಂಡು ಅಮೃತವನ್ನು ನಮಗೆ ಉಣಬಡಿಸೋ ಪರಮಾತ್ಮ ಅಪ್ಪ. ನಾವು ಎಷ್ಟೇ ಧನ್ಯವಾದ ಹೇಳಿದರೂ ಅವರು ಕಷ್ಟಪಡುವಾಗ ಹರಿಸಿದ ಒಂದು ಬೆವರ ಹನಿಗೂ ಅದು ಸಮಾನವಾಗಲಾರದು. ಮಕ್ಕಳ ಪಾಲಿನ ಹೀರೋ ಆಗಿರೊ ಅಂತಹ ಎಲ್ಲಾ ಅಪ್ಪಂದಿರಿಗೂ ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.
ನಿವೇದಿತ ಆಚಾರ್ಯ, ಕಡಂಬಾರ್
ಅಪ್ಪಾ ನಿನ್ನ ಪಡೆದ ನಾನು ತುಂಬಾ ಅದೃಷ್ಟಶಾಲಿ, ಇವತ್ತಿಗೂ ಯಾವತ್ತಿಗೂ ನನ್ನ ಗೆಳೆಯನಾಗಿರು ಅಪ್ಪಾ, ಹ್ಯಾಪಿ ಫಾದರ್ಸ್ ಡೇ ಅಪ್ಪಾ… ಐ ಲವ್ ಯೂ…
ಸಾನ್ವಿ
ಅಪ್ಪನ ಕೈಗಳು ಶ್ರಮ ಪಟ್ಟಾಗಲೇ, ಮಕ್ಕಳ ಕೈಗಳು ಸುಂದರವಾಗಿ ಕಾಣೋದು. ಥ್ಯಾಂಕ್ಸ್ ಅಪ್ಪಾ ಎಲ್ಲಾ ಕೊಟ್ಟದ್ದಕ್ಕೆ. ಹ್ಯಾಪಿ ಫಾದರ್ಸ್ ಡೇ, ಐ ಲವ್ ಯೂ ಅಪ್ಪ….
ಭೂಮಿ
ಸಾನ್ವಿ ಮತ್ತು ಭೂಮಿ ಪುತ್ತೂರು
ಅಪ್ಪಾ ಯಾವಾಗಲೂ ನನ್ನ ಸೂಪರ್ ಹೀರೋ. ನನ್ನನ್ನು ತುಂಬಾ ಕೇರ್ ಮಾಡುವ ಪ್ರೀತಿ ಮಾಡುವ ಒಂದು ಜೀವ ಎಂದರೆ ಅದು ಅಪ್ಪಾ. ನನ್ನ ಎಲ್ಲಾ ಕಷ್ಟದ ಮತ್ತು ಸುಖದ ಸಮಯದಲ್ಲಿ ನನ್ನ ಜೊತೆ ಹೆಜ್ಜೆ ಹಾಕಿರೋನು ನನ್ನ ಅಪ್ಪಾ. ಅಪ್ಪ ತನಗಾಗಿ ಮಾತ್ರವಲ್ಲದೆ, ಕುಟುಂಬಕ್ಕಾಗಿ ಗುರಿ, ಕನಸುಗಳನ್ನು ಕಟ್ಟಿಕೊಂಡು ಅದನ್ನೇ ಸಾಕಾರ ಮಾಡಿದವರು. ನನ್ನ ಪ್ರತಿ ಹೆಜ್ಜೆಯಲ್ಲಿ ನನಗೆ ಗೈಡ್ ಮಾಡಿದ ಶಿಕ್ಷಕ ಅಪ್ಪಾ. ನಾನು ಅತ್ಯುತ್ತಮ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಆಶಿಸಿದವರು ನನ್ನಪ್ಪ, ನಾನು ಅವರ ಆಶಯದಂತೆ ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತೇನೆ ಎಂದು ಅಪ್ಪನಿಗೆ ಈ ಫಾದರ್ಸ್ ಡೇ ದಿನ ಪ್ರಾಮಿಸ್ ಮಾಡುತ್ತೇನೆ,... ಹ್ಯಾಪಿ ಫಾದರ್ಸ್ ಡೇ ಅಪ್ಪಾ… ಐ ಲವ್ ಯೂ…
ಹಾತ್ಮಿಕ ಎಂ. ಮಂಗಳೂರು
ಕಣ್ಣಂಚಿನ ನೋವು ಮರೆ ಮಾಚಲೆಂದೇ ಇತ್ತೇನೋ, ಕನ್ನಡಕ ಮೊಗದಲಿ, ಶಿಸ್ತಿನಿಂದ ಜೋಡಿಸಿಟ್ಟ ಕೆಲವೇ ಜೊತೆ ಬಟ್ಟೆ ಕಬಾಟಿನಲಿ, ಶುಚಿಗೊಳಿಸಿ ಹೊಸದೆಂಬಂತೆ ಧರಿಸುತ್ತಿದ್ದೆ, ಅದೇ ಸವೆದ ಚಪ್ಪಲಿ, ಚೌಕಟ್ಟಿನಲ್ಲಿ ಜೀವಿಸಿದೆ, ಇತಿ ಮಿತಿಯಲಿ, ವಿರಾಮವಿಲ್ಲದೇನೆ ದುಡಿದೆ ಪ್ರತಿ ದಿನ ಬಿಸಿಲಿನಲಿ. ಕಲ್ಲು , ಮುಳ್ಳಿನ ದುರ್ಗಮ ಹಾದಿಯಲ್ಲಿ ಜೀವನವನ್ನು ಎದುರಿಸಿ ಗೆದ್ದ ಯೋದ್ಧ ನೀನು. ಬ್ಯಾಂಕ್ ಸಾಲ ಪಡೆಯದೆ, ಚಂದದ ಪುಟ್ಟ ಪ್ರೀತಿಯ ಸೂರು ನಿರ್ಮಿಸಿದ ಸಾಧನೆ ನಿನ್ನದು. ಕೈ ಚಾಚದ ಬದುಕು ನಿನ್ನದು. ಅದೆಷ್ಟು ಬಾರಿ ಪ್ರೀತಿಯಿಂದ ತಬ್ಬಿ ಮುದ್ದಾಡಿದ್ದೆ ನನ್ನನ್ನು ಬಾಲ್ಯದಲಿ , ನಿನ್ನೇಲ್ಲಾ ತ್ಯಾಗಕ್ಕೂ ಧನ್ಯ ವಾದ ಹೇಳ ಬಯಸಿರುವೆ...ಆದರೆ,ದೈರ್ಯ ಸಾಲುತ್ತಿಲ್ಲವೇಕೆ ಅಪ್ಪ, ನಿನ್ನ ಬಿಗಿದಪ್ಪಿಕೊಳ್ಳಲು ನನ್ನ ಬಾಹುವಿನಲಿ.... ಹ್ಯಾಪಿ ಫಾದರ್ಸ್ ಡೇ ಅಪ್ಪ….
ಪ್ರದೀಪ್ ಕುಮಾರ್, ಶಿಬರೂರ್
ಅಪ್ಪ ಅಂದ್ರೆ, ಆಕಾಶ, ಅಪ್ಪ ಅಂದ್ರೆ ಮಕ್ಕಳ ಪಾಲಿನ ಆಂಗ್ರಿ ಮ್ಯಾನ್, ಹೀರೋ ಎಲ್ಲವೂ ನಿಜಾ… ಆದರೆ ನನ್ನ ಪಾಲಿಗೆ ಅಪ್ಪ ನನ್ನ ಬೆಸ್ಟ್ ಫ್ರೆಂಡ್… ಇದೇ ದಾರಿಯಲ್ಲಿ ನಡೀಬೇಕು ಎಂದು ಯಾವತ್ತೂ ಹೇಳಿಲ್ಲ ಅಪ್ಪಾ, ಆದರೆ ನಾನಿಟ್ಟ ಪ್ರತಿ ಹೆಜ್ಜೆಯಲ್ಲೂ ಜೊತೆ ನಿಂತು ಯೆಸ್ ನಿನ್ನಿಂದ ಇದು ಸಾಧ್ಯ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದ ಗೆಳೆಯ ಅಪ್ಪ… ದೊಡ್ಡ ಕಾದಂಬರಿ ತಂದರೂ ಅದನ್ನು ಎರಡು ದಿನಗಳಲ್ಲಿ ಓದಿ ಮುಗಿಸುವ ಹುಚ್ಚು ಓದುಗ ಅಪ್ಪ, ಆ ಹುಚ್ಚು ನನಗೂ ಹಿಡಿದಿರುವುದು ನನ್ನ ಅದೃಷ್ಟ. ನಾನು ಯಾರ ಜೊತೆ ತುಂಬಾ ಜಗಳ ಮಾಡೋದು ಅಂತಾ ಕೇಳಿದ್ರೆ… ಅದು ಅಪ್ಪನ ಜೊತೆನೆ, ಯಾಕಂದ್ರೆ ಪ್ರೀತಿ ಇದ್ರೆ ತಾನೆ ಅಲ್ಲಿ ಜಗಳ ಇರೋದು. ಅದಕ್ಕಾಗಿಯೇ ಅಪ್ಪನ ಪಾಲಿನ ಶೂರ್ಪಣಕಿ ಮಗಳು ನಾನು. ಮದುವೆಯಾಗಿ ನಾನು ಗಂಡನ ಮನೆಗೆ ಹೊರಟು ನಿಂತಾಗ, ಬಿಕ್ಕಿ ಬಿಕ್ಕಿ ಅತ್ತ ಹೆಂಗರುಳು ಅಪ್ಪನದು. ಕೇಳಿ ಕೊಡುವವನು ದೇವರಾದ್ರೆ, ಕೇಳದೆ ಎಲ್ಲವನ್ನೂ ಕೊಟ್ಟ ಅಪ್ಪನಿಗೆ ಹ್ಯಾಪಿ ಫಾದರ್ಸ್ ಡೇ… ಡ್ಯಾಡೀಸ್ ಪ್ರಿನ್ಸನ್ ಆಗ್ಬೇಕು ಅಂತಾ ಯಾವತ್ತೂ ಆಸೆ ಇಲ್ಲ… ಐ ವಿಲ್ ಬಿ ಯುವರ್ ಶೂರ್ಪಣಕಿ ಮಗಳು ಫಾರೆವರ್ ಅಪ್ಪ….
ಪಾವನ ದಾಸ್ , ಕೋಟೆಕಾರ್