ಒಂದೇ ಮನೆಯಲ್ಲಿ ಒಬ್ಬರು ಮತ್ತೊಬ್ಬರ ಜೊತೆಯಲ್ಲಿ ಪೂರ್ತಿ ಕಂಫರ್ಟ್ ಹೊಂದಿದ್ದಾಗ ಕೂಡಾ ಅವರಿಬ್ಬರ ಮಧ್ಯೆ ಎಲ್ಲವೂ ಹೊಂದಾಣಿಕೆಯಾಗಿ ಹೋಗುತ್ತದೆ ಎಂದು ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಆಪ್ತತೆಯ ಕೊರತೆ, ಸಂವಹನ ಕೊರತೆ, ಬಂಜೆತನ, ಸಿಟ್ಟಿನ ಸ್ವಭಾವ ಮುಂತಾದವನ್ನು ಸಂಬಂಧದ ನಡುವೆ ಬಿರುಕು ತರುವಂಥ ಕಾರಣಗಳಾಗಿ ಹೇಳಲಾಗುತ್ತದೆ. ಆದರೆ, ಮತ್ತೊಂದು ಕಾರಣ ದೊಡ್ಡದಾಗಿದ್ದೂ ಸಹ ಸಾಮಾನ್ಯವಾಗಿ ಸಿಕ್ಕಿಬೀಳದೆ ತನ್ನ ಪಾಡಿಗೆ ಇಬ್ಬರನ್ನು ಬೇರಾಗಿಸುವ ಪ್ರಯತ್ನ ಮುಂದುವರೆಸುತ್ತದೆ. ಅದೇ ಇಬ್ಬರ ಒಂದುಗೂಡದ ಬಯಕೆಗಳು, ಭವಿಷ್ಯದ ಕನಸುಗಳು.

ಇಬ್ಬರ ಬಯಕೆಗಳು ಬೇರೆ ಬೇರೆ ಎಂದ ಮಾತ್ರಕ್ಕೆ ಡಿನ್ನರ್‌ಗೆ ಏನು ತಿನ್ನಬೇಕು, ಯಾವ ಹೋಟೆಲ್‌ಗೆ ಹೋಗಬೇಕು ಎಂಬಂಥ ಸಣ್ಣಪುಟ್ಟ ವಿಷಯಗಳಲ್ಲಿ ವ್ಯತ್ಯಾಸ ಇರುವುದನ್ನು ಹೇಳುತ್ತಿಲ್ಲ. ಬದಲಿಗೆ ಫ್ಯೂಚರ್ ಪ್ಲ್ಯಾನ್ ಬೇರೆ ಬೇರೆ ಇದ್ದರೆ ಈಗ ಡೇಟಿಂಗ್ ಮಾಡಿ ಪ್ರಯೋಜನವಿಲ್ಲ ಎಂಬುದಷ್ಟೇ ಹೇಳಹೊರಟಿರುವುದು. 

ಡ್ರಗ್ಸ್‌ನಿಂದ ಗನ್‌ವರೆಗೆ, ಇಲ್ಲಿ ಬದುಕೋ 'ಅತ್ಯಗತ್ಯ'ಗಳಲ್ಲಿ ಏನುಂಟು ...

ಧೀರ್ಘ ಕಾಲದ ಸಂಬಂಧದ ಬಗ್ಗೆ ಯೋಚಿಸುವಾಗ ಒಬ್ಬರು ಭವಿಷ್ಯದಲ್ಲಿ ಮಕ್ಕಳು ಬೇಡ, ಬದಲಿಗೆ ದೇಶವಿದೇಶ ಸುತ್ತಿಕೊಂಡು ಹಾಯಾಗಿರಬೇಕು ಎಂದು ಕನಸು ಕಾಣುತ್ತಿದ್ದರೆ, ಮತ್ತೊಬ್ಬರು ಮಕ್ಕಳ ಭವಿಷ್ಯ ಕಟ್ಟುವ ಚಿಂತೆಯಲ್ಲಿ ಬಿದ್ದಿರುತ್ತಾರೆ. ಇಂಥ ಸಂದರ್ಭದಲ್ಲಿ ಇಬ್ಬರೂ ಒಳ್ಳೆಯವರೇ ಆಗಿದ್ದು, ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಇದ್ದರೂ ಭವಿಷ್ಯದಲ್ಲಿ ಸಂಬಂಧ ಹೆಚ್ಚು ಕಾಲ ಉಳಿಯಲಾರದು. ಉಳಿದರೂ ನುಂಗಲಾರದ ಕಹಿಯೊಂದು ಅವರಿಬ್ಬರ ಜೊತೆಗೇ ಸಾಗುತ್ತಿರುತ್ತದೆ. ಹಾಗಾಗಿಯೇ ಭವಿಷ್ಯದ ಕನಸುಗಳು ಎರಡು ವಿಭಿನ್ನ ರಸ್ತೆಗೆಳೆಯುವಂತಿರುವಾಗ ಅವರನ್ನು ಡೇಟ್ ಮಾಡಬಾರದು ಎಂದಿದ್ದು. 

ಪ್ರೀತಿಯೊಂದೇ ಸಾಲದು
ಸಂಬಂಧವು ಶಾಶ್ವತವಾಗಿರಲು ಹಾಗೂ ಚೆನ್ನಾಗಿರಲು ಪ್ರೀತಿಯೊಂದೇ ಸಾಲದು. ನೀವಿಬ್ಬರೂ ಬೇರೆ ಬೇರೆ ವಿಷಯಗಳನ್ನು ಜೀವನದಿಂದ ಬಯಸುತ್ತಿದ್ದರೆ, ನಿಮ್ಮಿಬ್ಬರ ಹಾದಿಯೂ ಬೇರೆಯಾಗುತ್ತದೆ. ಬೇರೆ ಹಾದಿ ಎಂದ ಮೇಲೆ ಒಂದಾಗಿರುವುದು ಸಾಧ್ಯವಿಲ್ಲ ಅಲ್ಲವೇ? 

ಹಾಗೊಂದು ವೇಳೆ ಪ್ರೀತಿಯೊಂದೇ ಸಾಕೆಂದು ಒಬ್ಬರು ತಮ್ಮ ಕನಸುಗಳನ್ನು ತ್ಯಾಗ ಮಾಡಲು ನಿರ್ಧರಿಸಿದರೆ, ಆ ನಿರ್ಧಾರ ಜೀವನವಿಡೀ ನಿಮ್ಮನ್ನು ಕೊರೆಯುತ್ತಲೇ ಇರುತ್ತದೆ. ಜೀವನದ ಪ್ರತೀ ಸಂಗತಿಗಳಲ್ಲೂ ನಿಮ್ಮ ಪಾರ್ಟ್ನರ್ ನಿಮ್ಮ ಕನಸಿನ ಜೀವನವನ್ನು ಕಸಿದುಕೊಂಡಂತೆ ಎನಿಸಲಾರಂಭಿಸುತ್ತದೆ. ನಿಮಗೇ ಗೊತ್ತಿಲ್ಲದೆ ಪ್ರತಿ ಕ್ಷಣವೂ ನೀವು ಮಾಡಿದ ತ್ಯಾಗಕ್ಕಾಗಿ ಸಂಗಾತಿಯಿಂದ ಹೆಚ್ಚಿನದನ್ನು ನಿರೀಕ್ಷಿಸತೊಡಗುತ್ತೀರಿ. ಜೀವನದಲ್ಲಿ ಯಾವಾಗ ಏನೇ ಹೊಂದಾಣಿಕೆ ಮಾಡಿಕೊಳ್ಳಬೇಕಾದರೂ, ನಾನು ಈಗಾಗಲೇ ದೊಡ್ಡ ತ್ಯಾಗ ಮಾಡಿರುವುದರಿಂದ ಮತ್ತೊಬ್ಬರೇ ಹೊಂದಿಕೊಳ್ಳಲಿ ಎಂಬ ಮನೋಭಾವ ಮೈಗೂಡುತ್ತದೆ. ಇದು ಜಗಳಗಳಿಗೆ ಎಡೆ ಮಾಡಿಕೊಡಬಹುದು. ಅಥವಾ ನಿರೀಕ್ಷೆಗಳು ಹುಸಿಯಾದಾಗೆಲ್ಲ ಇದಕ್ಕಾಗಿ ನನ್ನೆಲ್ಲ ಕನಸುಗಳನ್ನು ತ್ಯಾಗ ಮಾಡಿದೆನಾ ಎಂದೆನಿಸಲಾರಂಭಿಸುತ್ತವೆ. ಇವೆಲ್ಲ ಸಂಬಂಧದಲ್ಲಿ ಬಿರುಕು ಮೂಡುವ ಆರಂಭದ ಹಂತಗಳಷ್ಟೇ. 

ಇನ್ನೊಂದು ರೀತಿಯಾಗಿ ನೋಡಿದರೆ ನಾನೇ ಏಕೆ ಕನಸುಗಳನ್ನು ತ್ಯಾಗ ಮಾಡಬೇಕು?  ಇಬ್ಬರೂ ಪ್ರೀತಿಸುತ್ತಿರುವುದು ನಿಜವಾದ ಮೇಲೆ ಅವರೂ ತ್ಯಾಗ ಮಾಡಬಹುದಲ್ಲಾ ಎನಿಸತೊಡಗುತ್ತದೆ. ಒಟ್ಟಿನಲ್ಲಿ ನಿರ್ಣಾಯಕ ಹಂತಕ್ಕೆ ಹೋದಾಗ ಪ್ರತಿಯೊಬ್ಬರಿಗೂ ತಮ್ಮ ಕನಸು, ತಮ್ಮ ಬದುಕೇ ಮುಖ್ಯವಾಗಿರುತ್ತದೆ. 

ಏನು ಮಾಡಬೇಕು?
ಇಬ್ಬರ ಕನಸುಗಳು, ಸಂತೋಷದ ವ್ಯಾಖ್ಯಾನ ಸಂಪೂರ್ಣ ವಿಭಿನ್ನವಾಗಿದ್ದಾಗ ಖಂಡಿತಾ ಮುಂದೆ ಜೊತೆಗಿರುವ ಐಡಿಯಾವನ್ನು ಕೈ ಬಿಡುವುದೇ ಒಳಿತು. ಪ್ರೀತಿಯ ಹೆಸರಿನಲ್ಲಿ ಒಟ್ಟಾಗಿ ಇಬ್ಬರೂ ನೋವನ್ನನುಭವಿಸುವುದಕ್ಕಿಂತಾ ಇದು ಹೆಚ್ಚು ಬುದ್ಧಿವಂತಿಕೆಯ ನಿರ್ಧಾರ ಎನಿಸಿಕೊಳ್ಳುತ್ತದೆ. 
ಇನ್ನೊಂದು ಕಡೆ, ನಿಮ್ಮ ಕನಸುಗಳು ಆತನಿಗೆ ಇಷ್ಟವಿಲ್ಲದಿದ್ದಾಗಲೂ ಅಂಥವರ ಜೊತೆ ಸಂಬಂಧ ಮುರಿದುಕೊಳ್ಳುವುದು ಒಳಿತು. ಉದಾಹರಣೆಗೆ ನಿಮಗೆ ಚಿತ್ರಗಳಲ್ಲಿ ನಟಿಸುವ ಆಸೆ ಇರುತ್ತದೆ, ಆತನಿಗೆ ನೀವು ಮನೆ ಮಕ್ಕಳು ಎಂದು ನೋಡಿಕೊಂಡಿರಲಿ ಎಂದಿರುತ್ತದೆ. ಆದರೆ, ಮತ್ತೊಬ್ಬರ ಕನಸನ್ನು ಬಿಟ್ಟುಬಿಡು ಎಂದು ಹೇಳುವುದು ಸೆನ್ಸಿಬಲ್ ಆದವರು ಮಾಡುವ ಕೆಲಸವಲ್ಲ. ವಿವಾಹಕ್ಕೂ ಮೊದಲೇ ನಿಮ್ಮ ಜೀವನವನ್ನು ನಿರ್ಧರಿಸುವ ಅಂಕುಶ ತೆಗೆದುಕೊಳ್ಳುವವರ ಜೊತೆ ಆನಂತರದಲ್ಲಿ ಸಂತೋಷವಾಗಿ ಬಾಳುವುದಾದರೂ ಹೇಗೆ?

ಕ್ವಾರಂಟೈನ್ ಎಂದ ಮಾತ್ರಕ್ಕೆ ಪ್ರೀತಿಪಾತ್ರರ ಬರ್ತ್‌ಡೇ ಬಡವಾಗದಿರಲಿ

ಒಂದು ವೇಳೆ, ನಿಮ್ಮ ಕನಸುಗಳು ಈಗ ಜೊತೆಗೂಡುವುದಿಲ್ಲವಾದರೂ, ಭವಿಷ್ಯದ ಯಾವುದೋ ಒಂದು ಸಂದರ್ಭದಲ್ಲಿ ಒಂದಾಗುತ್ತವೆ ಎಂಬ ಸಂಭವ ಇದ್ದಾಗ, ಇಬ್ಬರೂ ಜೊತೆಗೂಡಿ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಉದಾಹರಣೆಗೆ ನಿಮಗೆ ವಿದೇಶಕ್ಕೆ ಹೋಗಿ ಎಂಬಿಎ ಮಾಡುವ ಬಯಕೆ ಇರುತ್ತದೆ. ನಿಮ್ಮ ಪ್ರೇಮಿಯ ಮನೆಯಲ್ಲಿ ವಿವಾಹಕ್ಕೆ ಒತ್ತಡವಿರುತ್ತದೆ. ಜೊತೆಗೆ, ಅವರಿಗೆ ಊರಿನಲ್ಲೇ ಪೋಷಕರನ್ನು ನೋಡಿಕೊಂಡಿರಬೇಕು ಎಂಬ ಆಸೆ ಇರುತ್ತದೆ. ಅಂಥ ಸಂದರ್ಭದಲ್ಲಿ ಇಬ್ಬರೂ ಮದುವೆಯಾಗಿ, ನಂತರ 3 ವರ್ಷಗಳು ಒಬ್ಬರನ್ನೊಬ್ಬರು ಬಿಟ್ಟಿದ್ದು, ಅಲ್ಲಿ ಒಬ್ಬರು ಎಂಬಿಎ ಮುಗಿಸಿದ ಬಳಿಕ ಊರಿಗೆ ಮರಳಿ ಇಲ್ಲಿಯೇ ಕೆಲಸ ಹಿಡಿದು ಒಟ್ಟಾಗಿರುವ ಬಗ್ಗೆ ಮಾತನಾಡಿಕೊಳ್ಳಬಹುದು. ಇಂಥ ಪರಿಸ್ಥಿತಿಯಲ್ಲಿ ಕೇವಲ ಮೂರ್ನಾಲ್ಕು ವರ್ಷಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. 

"