Viral Video: ಕರಾವಳಿಯಲ್ಲಿ ಮಗುವಿನ ಮುಗ್ಧ ಪ್ರೀತಿಗೆ ಮನಸೋತ ದೈವ
ದೈವಕ್ಕೇ ಸ್ವೀಟ್ ಕಾರ್ನ್ ನೀಡುವ ಮಗು, ಮಗುವನ್ನು ಆರ್ಶೀವದಿಸುವ ದೈವದ ವೀಡಿಯೋ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ. ಮಗುವಿನ ಮುಗ್ಧ ಪ್ರೀತಿಗೆ ದೈವ ಮನಸೋತ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದೈವಾರಾಧನೆ, ತುಳುನಾಡಿನಲ್ಲಿ ತಲೆತಲಾಂತರಗಳಿಂದಲೂ ನಡೆದುಕೊಂಡು ಬಂದಿರುವ ಆಚರಣೆ. ತುಳುವರ ಜೀವನದ ಅವಿಭಾಜ್ಯ ಅಂಗ. ಹೀಗಾಗಿಯೇ ತುಳುವಿನಲ್ಲಿ ದೈವಕ್ಕೆ 'ಪೆದ್ದಿ ಅಪ್ಪೆ ಆದ್ ತಾಂಕಿ ತಮ್ಮಲೆ ಆದ್ ರಕ್ಷಣೆ ಮಲ್ತೊಂದು ಬರ್ಪೆ' ಎಂಬ ಮಾತಿದೆ. ಅಂದರೆ 'ಹೆತ್ತ ತಾಯಿಯಂತೆಯೂ ಸಾಕಿ ಸಲಹಿದ ಮಾವನಂತೆಯೂ ರಕ್ಷಣೆ ಮಾಡುತ್ತಾ ಬರುತ್ತೇನೆ ಇದು ದೈವದ ಅಭಯ ನುಡಿಯಾಗಿದೆ. ಈ ಮಾತಿನಂತೆಯೇ ದೈವ ನಂಬಿದವರೆಲ್ಲರನ್ನೂ ಪೊರೆಯುತ್ತಾ ಬಂದಿದೆ. ಖುಷಿಯಾದಾಗ ದೈವಕ್ಕೆ ಕಾಣಿಕೆ ನೀಡುವ ಜನರು, ಕಷ್ಟ ಬಂದಾಗ ದೈವದಲ್ಲಿ ಹೇಳಿಕೊಳ್ಳುತ್ತಾರೆ. ಸಮಸ್ಯೆ ಪರಿಹಾರ ತಿಳಿದುಕೊಳ್ಳುತ್ತಾರೆ. ಪುಟ್ಟ ಮಕ್ಕಳಿಂದ (Children) ಹಿಡಿದು ವೃದ್ಧರ ವರೆಗೂ ಇಲ್ಲಿ ಎಲ್ಲರೂ ದೈವಕ್ಕೆ ತಲೆಬಾಗುತ್ತಾರೆ. ಸದ್ಯ ದೈವವೊಂದು ಮುಗ್ಧ ಮಗುವಿನೊಂದಿಗೆ ಸಂಭಾಷಣೆ (Conversation) ನಡೆಸುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
Kantara; ಸಕ್ಸಸ್ ಬಳಿಕ ಹರಕೆ ತೀರಿಸಿದ ಚಿತ್ರತಂಡ; ರಿಷಬ್ ಮತ್ತು ತಂಡವನ್ನು ಅಪ್ಪಿಕೊಂಡ ದೈವ
ಮಗುವಿನ ಮುಗ್ಧ ಪ್ರೀತಿಗೆ ದೈವವೇ ಮನಸೋತ ಅಪರೂಪದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ನಗರದ ಬಿಕರ್ನಕಟ್ಟೆಯ ಬಜ್ಜೋಡಿಯಲ್ಲಿ ನಡೆದ ದೊಂಪದಬಲಿಯಲ್ಲಿ ಕಾಂತೇರಿ ಜುಮಾದಿ ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ ಬಿಂಬಿಸುತ್ತಿತ್ತು. ಈ ವೇಳೆ ಅಲ್ಲಿಯೇ ನೆಲದಲ್ಲಿ ಕುಳಿತು ಮಗುವೊಂದು ಸ್ವೀಟ್ ಕಾರ್ನ್ ತಿನ್ನುತ್ತಾ ನೇಮ ವೀಕ್ಷಿಸುತ್ತಿತ್ತು. ನೇರ ಅಲ್ಲಿಗೆ ಬಂದ ಕಾಂತೇರಿ ಜುಮಾದಿ ದೈವ ತನಗೂ ತಿನಿಸು (Food) ಕೊಡುವಂತೆ ಕೈ ಚಾಚಿದೆ. ದೈವ ತನ್ನಲ್ಲಿಗೆ ಬಂದಾಗ ಕೊಂಚವೂ ಭೀತಿಗೊಳಗಾಗದ ಮಗು ಮುಗ್ಧತೆಯಿಂದ (Innocense) ಚಮಚದಲ್ಲಿ ಸ್ವೀಟ್ ಕಾರ್ನ್ ನೀಡಲು ಯತ್ನಿಸಿದೆ.
ಈ ಸಂದರ್ಭ ಮಗುವಿನ ಮುಗ್ಧತೆಗೆ ತಲೆದೂಗಿದ ದೈವ ತನ್ನ ಹಣೆಯ ಬಣ್ಣವನ್ನೇ ಮಗುವಿನ ಹಣೆಗೆ ಆಶೀರ್ವಾದ ಪೂರ್ವಕವಾಗಿ ತಿಲಕವಿರಿಸಿದೆ. ಈ ಸಂಪೂರ್ಣ ದೃಶ್ಯವು ಅಲ್ಲಿಯೇ ಇದ್ದವರೊಬ್ಬರ ಮೊಬೈಲ್ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ದೈವ ಹಾಗೂ ಮಗುವಿನ ನಡುವೆ ನಡೆದ ಈ ಮುಗ್ಧ ಮೌನ ಸಂಭಾಷಣೆಗೆ ಫಿದಾ ಆಗಿರುವ ಕರಾವಳಿಗರ ಮೊಬೈಲ್ ಸ್ಟೇಟಸ್ ನಲ್ಲಿ ಇದೀಗ ಈ ವೀಡಿಯೋ ರಾರಾಜಿಸುತ್ತಿದೆ.
ಕೋರ್ಟ್‌ನಲ್ಲಿ ನೋಡಿಕೊಳ್ತೀನಿ ಅಂದವ ಸತ್ತು ಹೋದ: ಇದು ರಿಯಲ್ 'ಕಾಂತಾರ' ಕತೆ
ಅಂದ ಹಾಗೆ ಈ ಮಗುವಿನ ಹೆಸರು ಶಮಿತ್. ಎರಡೂವರೆ ವರ್ಷದ ಈ ಬಾಲಕ ಶಕ್ತಿನಗರದ, ಪ್ರಶಾಂತಿನಗರದ ದೀಪಕ್ ಹಾಗೂ ದೀಪ್ತಿ ದಂಪತಿಯ ಪುತ್ರ ಎಂದು ತಿಳಿದುಬಂದಿದೆ. ದೈವ ತನ್ನೆದುರಲ್ಲೇ ಕೂತರೂ ಸ್ವಲ್ಪವೂ ಭಯಪಡದೆ ಮಗು ತನ್ನ ಕೈಯಲ್ಲಿದ್ದ ತಿಂಡಿಯನ್ನು ದೈವಕ್ಕೆ ನೀಡುವ ಮೂಲಕ ಎಲ್ಲರಿಗೂ ಹಂಚಿ ತಿನ್ನಬೇಕು ಎನ್ನುವ ಸಾರವನ್ನು ಮಗು ತೋರಿಸಿದೆ ಎಂದು ಜನ ಪ್ರಶಂಸಿದ್ದಾರೆ.