ಮದುವೆಯಾಗಿ 20 ವರ್ಷಗಳ ದಾಂಪತ್ಯ ನಡೆಸಿದ ನಂತರ ಆಕೆಗೆ ನಿಜವಾಗಲೂ ತನ್ನ ಲೈಂಗಿಕ ಸುಖದ ಮೂಲ ಎಲ್ಲಿದೆ, ತನ್ನ ಲೈಂಗಿಕ ಆಕರ್ಷಣೆ ಯಾವುದು ಎಂಬುದು ಅರ್ಥವಾಯಿತು. ಅದಕ್ಕಾಗಿ ಆಕೆ ಮಾಡಿದ ಕೆಲಸ ಮಾತ್ರ ಊಹಾತೀತ. ಏನದು? ಇಲ್ಲಿದೆ ಆ ಹೆಣ್ಣುಮಗಳ (confession) ಕನ್‌ಫೆಶನ್.
ಇದು ಮದುವೆಯಾಗಿ ಇಪ್ಪತ್ತು ವರ್ಷದ ಬಳಿಕ ಗೆಳತಿಯ ʼಸಹವಾಸʼಕ್ಕಾಗಿ ಗಂಡನನ್ನು ಬಿಟ್ಟವಳೊಬ್ಬಳ ಕನ್‌ಫೆಶನ್ ಅಥವಾ ಸ್ವಗತ. ಅವಳ ಹೆಸರು ಬೇಡ. ಬೇಕಿದ್ದರೆ ರೀಟಾ ಎಂದಿಟ್ಟುಕೊಳ್ಳಿ. ಮುಂದಿರುವುದು ಅವಳ ಮಾತು:
ನನಗೆ ಮದುವೆಯಾಗಿ 20 ವರ್ಷವಾಗಿದೆ. ನಾನು ಹೆಟೆರೋಸೆಕ್ಸುಯಲ್ (ವಿರುದ್ಧ ಲಿಂಗದವರತ್ತ ಆಕರ್ಷಣೆ ಹೊಂದಿರುವವಳು) ಎಂದುಕೊಂಡಿದ್ದೆ. ನನ್ನ ಗಂಡ ಮ್ಯಾಥ್ಯೂ ಕೂಡ ಅದೇ ರೀತಿ ಯೋಚಿಸಿದ್ದ. ಏಕೆಂದರೆ ನಾವು 20 ವರ್ಷಗಳಿಂದ ಜೊತೆಯಾಗಿ ಬದುಕಿದ್ದೆವು. ಹಾಗೆ ಅಷ್ಟು ಕಾಲ ಜೊತೆಯಾಗಿ ಬದುಕಿದ ನನ್ನ ಗಂಡನನ್ನು ಬಿಟ್ಟು, ನನ್ನಂಥವಳೇ ಒಬ್ಬ ಮಹಿಳೆಗಾಗಿ ಆಕೆಯ ಹಿಂದೆ ಹೊರಟೆ. ಇದು ಸಂಪೂರ್ಣ ಅನಿರೀಕ್ಷಿತವಾದದ್ದು. ನಾನು ಹೀಗೆ ಮಾಡುವೆ ಎಂದು ಯಾರೂ, ನಾನೂ ಊಹಿಸಿರಲಿಲ್ಲ. ಅವಳು ನನ್ನ ಕೆಲಸದ ಸ್ಥಳದಲ್ಲಿಯೇ ಉದ್ಯೋಗ ಮಾಡುತ್ತಿದ್ದವಳು, ಸಹೋದ್ಯೋಗಿನಿ. ಆಕೆಯ ಜೊತೆ ನಾನು ಪ್ರೀತಿಗೆ ಬಿದ್ದಿದ್ದೆ.
ನಾನು ಒಂದು ಮಹಿಳೆಯನ್ನೇ ಲವ್ ಮಾಡಿದ್ದೇನೆ ಎಂದು ಅವನಿಗೆ ಹೇಳಿದೆ. ಅದರ ಪರಿಣಾಮ ಭಾರೀ ಆಗಿತ್ತು. ನಂತರ ನಾವು ವಿಚ್ಛೇದನ ಮಾಡಿಕೊಂಡೆವು. ಅವನು ಆಗ ನನಗೆ, “ಒಬ್ಬ ಹೆಣ್ಣಿಗಾಗಿ ನನ್ನನ್ನು ಬಿಟ್ಟದ್ದು ಹೆಚ್ಚು ನೋವೋ, ಅಥವಾ ಮತ್ತೊಬ್ಬ ಪುರುಷನಿಗಾಗಿ ಬಿಟ್ಟಿದ್ದರೆ ಅದು ಹೆಚ್ಚು ನೋವಾಗುತ್ತಿತ್ತೋ ನನಗೆ ಗೊತ್ತಿಲ್ಲ” ಎಂದು ಹೇಳಿದ್ದ. ಆ ಘಟನೆ ನನ್ನನ್ನು ತಿಳಿದಿದ್ದ ಎಲ್ಲರಲ್ಲೂ ದೊಡ್ಡ ಆಘಾತ ಉಂಟುಮಾಡಿತು. ನನ್ನ ಮಕ್ಕಳೂ ಕೂಡ ಬೆಚ್ಚಿಬಿದ್ದರು. ಈಗ ಅವರು ಸ್ವಲ್ಪ ಅರ್ಥಮಾಡಿಕೊಂಡಿದ್ದಾರೆ. ಏಕೆಂದರೆ ಅವರ ಪೀಳಿಗೆಯಲ್ಲಿ ಗೇ, ಬೈಸೆಕ್ಸುಯಲ್, ಟ್ರಾನ್ಸ್‌ಜೆಂಡರ್ ಸ್ನೇಹಿತರು ಸಾಮಾನ್ಯವಾಗಿ ಇರುತ್ತಾರೆ. ಆದರೂ, ನಾನು ಅವರ ತಂದೆಯನ್ನು ಬಿಟ್ಟು ಒಂದು ಹೆಣ್ಣಿನ ಜೊತೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಅವರಿಗೆ ಗೊಂದಲವಾಗಿತ್ತು.
ನಾನು ಕ್ಯಾರೋ ಎಂಬ ಹೆಣ್ಣಿನೊಂದಿಗೆ ಆಳವಾಗಿ ಪ್ರೀತಿಗೆ ಬಿದ್ದಿದ್ದೆ. ನಂತರ ನನ್ನ ಹಳೆಯ ನೆನಪುಗಳನ್ನು ಯೋಚಿಸಲು ಪ್ರಾರಂಭಿಸಿದೆ. ನನಗೆ ಬಾಲ್ಯದಿಂದಲೇ ಮಹಿಳೆಯರತ್ತ ಆಕರ್ಷಣೆ ಇದ್ದಿತೇ ಎಂದು ಯೋಚಿಸಿದೆ. ಹೆಚ್ಚು ಯೋಚಿಸಿದಂತೆ, ನನಗೆ ಬಾಲ್ಯದಿಂದಲೇ ಹೆಣ್ಣಿನತ್ತ ಆಕರ್ಷಣೆ ಇತ್ತು ಎಂಬುದೇ ಸ್ಪಷ್ಟವಾಯಿತು. ಆದರೆ ಅದನ್ನು ನಾನು ಅರಿತುಕೊಳ್ಳಲಿಲ್ಲ ಎಂಬುದು ವಿಷಾದಕರ. ನಾನು ಬಾಲ್ಯದಲ್ಲೇ ನನ್ನ ಆ ಭಾವನೆಗಳನ್ನು ಸ್ವೀಕರಿಸಲು ಅವಕಾಶ ಸಿಕ್ಕಿದ್ದರೆ, ಬಹುಶಃ ತುಂಬಾ ನೋವು ತಪ್ಪಿಸಬಹುದಿತ್ತು.
ಬಾಲ್ಯದಲ್ಲೇ ಇತ್ತು ಸಲಿಂಗ ಆಕರ್ಷಣೆ
ನಾನು 1980ರ ದಶಕದಲ್ಲಿ ಬೆಳೆದವಳು. ನನ್ನ ತಂದೆ-ತಾಯಿ ಒಂದು ಅಂಗಡಿ ನಡೆಸುತ್ತಿದ್ದರು. ಅವರು ತುಂಬಾ ದುಡಿಯುತ್ತಿದ್ದರು, ಆದ್ದರಿಂದ ನಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಅಜ್ಜಿ ನಮ್ಮ ಜೊತೆ ವಾಸಕ್ಕೆ ಬಂದ ನಂತರ, ಅವಳು ನನ್ನನ್ನೂ ನನ್ನ ಸಹೋದರನನ್ನೂ ಬೆಳೆಸಿದಳು. ಅವಳು ದಿನವಿಡೀ ಅಡುಗೆ ಮತ್ತು ಮನೆ ಕೆಲಸ ಮಾಡುತ್ತಿದ್ದಳು. ನಾನು ಹೆಚ್ಚಿನ ಸಮಯ ಕನಸುಗಳ ಲೋಕದಲ್ಲಿ ಬದುಕುತ್ತಿದ್ದೆ. ನನ್ನ ವಯಸ್ಸಿನ ಅನೇಕ ಹುಡುಗಿಯರು ಡಿಸ್ನಿ ರಾಜಕುಮಾರರ ಬಗ್ಗೆ ಕನಸು ಕಾಣುತ್ತಿದ್ದರು. ಆದರೆ ನಾನು ರಾಜಕುಮಾರಿಯರ ಬಗ್ಗೆ ಮಾತ್ರ ಕನಸು ಕಾಣುತ್ತಿದ್ದೆ.
ಶಾಲೆಯಲ್ಲಿ ನನಗೆ ಫಿಯೋನಾ ಎಂಬ ಅತಿ ಹತ್ತಿರದ ಸ್ನೇಹಿತೆ ಇದ್ದಳು. ನಾವು ತುಂಬಾ ಸಮಯ ಒಟ್ಟಿಗೆ ಕಳೆಯುತ್ತಿದ್ದೆವು. ಒಮ್ಮೆ ಮರದ ಮೇಲೆ ನಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಹೃದಯದ ಆಕಾರದಲ್ಲಿ ಕೆತ್ತಿದ್ದೆವು. ಇದು ನಾವು ತುಂಬಾ ಚಿಕ್ಕವರಾಗಿದ್ದಾಗ. ಸುಮಾರು 10 ವರ್ಷ ವಯಸ್ಸಿನಲ್ಲಿ, ಕೆಲವು ಲೈಂಗಿಕ ಅನುಭವಗಳನ್ನು ಕೂಡ ಹೊಂದಿದ್ದೆವು. ನಾವು “ಡಾಕ್ಟರ್-ನರ್ಸ್” ಆಟ ಆಡುತ್ತಿದ್ದೆವು. ಒಂದು ದಿನ, ನನ್ನ ತಾಯಿ ನಮ್ಮನ್ನು ನನ್ನ ಕೊಠಡಿಯಲ್ಲಿ ನೋಡಿ ತುಂಬಾ ಕೋಪಗೊಂಡಳು. ಅಸಹ್ಯ ಎಂದು ಬೈದಳು. ನಂತರ ಫಿಯೋನಾಳನ್ನು ಭೇಟಿಯಾಗುವುದನ್ನು ನಿಷೇಧಿಸಿದಳು.
ನಾವು ಒಂದೇ ಶಾಲೆಯಲ್ಲಿ ಇದ್ದೆವು. ನನಗೆ ತುಂಬಾ ನಾಚಿಕೆ ಆಯಿತು. ನಾನು ಅವಳ ಜೊತೆ ಮಾತನಾಡುವುದನ್ನು ನಿಲ್ಲಿಸಿದೆ. ಅದು ತುಂಬಾ ನೋವಿನ ಅನುಭವ. ನಂತರ ನಾವು ಬೇರೆ ಬೇರೆ ಶಾಲೆಗಳಿಗೆ ಹೋದೆವು. ಮತ್ತೆ ಅವಳನ್ನು ಕಾಣಲಿಲ್ಲ.
ನಾನು 25ರ ವರ್ಷ ವಯಸ್ಸಿನಲ್ಲಿ ಮ್ಯಾಥ್ಯೂನನ್ನು ಭೇಟಿಯಾದೆ. ನನ್ನ ತಂದೆ-ತಾಯಿಗೆ ನಾನು ಮದುವೆಯಾಗಬೇಕು ಎಂಬ ಆಸೆ ಇತ್ತು. ಆದ್ದರಿಂದ ನಾವು ಮದುವೆಯಾದೆವು. ನಾನು ಅವನನ್ನು ನಿಜವಾಗಿಯೂ ಪ್ರೀತಿಸಿದ್ದೇನಾ ಎಂಬ ಪ್ರಶ್ನೆ ಕೆಲವೊಮ್ಮೆ ಬರುತ್ತದೆ. ನಾವು ಒಳ್ಳೆಯ ದಾಂಪತ್ಯ ಜೀವನ ನಡೆಸಿದ್ದೆವು. ನಮಗೆ ಇಬ್ಬರು ಮಕ್ಕಳು — ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ. ಈಗ ಅವರು ಟೀನೇಜರ್ಸ್. ಮ್ಯಾಥ್ಯೂ ಒಳ್ಳೆಯ ವ್ಯಕ್ತಿ, ಅಷ್ಟಾದರೆ ಸಾಕು ಎಂದು ನಾನು ಯೋಚಿಸಿದ್ದೆ. ನಮ್ಮ ಲೈಂಗಿಕ ಜೀವನ ವಿಶೇಷವಾಗಿರಲಿಲ್ಲ. ಎಲ್ಲರ ದಾಂಪತ್ಯವೂ ಹಾಗೆಯೇ ಇರಬಹುದು ಎಂದುಕೊಂಡಿದ್ದೆ.
ಆ ನಂತರ ನಾನು ಕ್ಯಾರೋಳನ್ನು ಭೇಟಿಯಾದೆ. ಅವಳು ನಮ್ಮ ಚಾರಿಟಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಸೇರಿದ್ದಳು. ಅವಳನ್ನು ಮೊದಲ ಬಾರಿ ನೋಡಿದಾಗಲೇ ನನಗೆ ಹಿಂದೆ ಫಿಯೋನಾಳ ಬಗ್ಗೆ ಇದ್ದಂಥ ಭಾವನೆಗಳು ಮತ್ತೆ ಹುಟ್ಟಿಕೊಂಡವು. ಅದು ನಿಜವಾದ ಲೈಂಗಿಕ ಆಕರ್ಷಣೆ ಎಂದು ಅರಿತುಕೊಂಡೆ. ನಾನು ಕ್ಯಾರೋಳನ್ನು ತಪ್ಪಿಸಲು ಪ್ರಯತ್ನಿಸಿದರೂ, ನಾವು ಒಟ್ಟಿಗೆ ಕೆಲಸ ಮಾಡುವುದರಿಂದ, ನಾವು ಹತ್ತಿರವಾಗಿ ಇರಲೇಬೇಕಿತ್ತು. ಮೂರು ತಿಂಗಳ ನಂತರ ನಾನು ಮ್ಯಾಥ್ಯೂಗೆ ಸತ್ಯವನ್ನು ಹೇಳಿದೆ. ಅವನಿಗೆ ತುಂಬಾ ಆಘಾತವಾಯಿತು. ಆದರೆ ಸಮಯ ಕಳೆದಂತೆ ಎಲ್ಲವೂ ನಿಧಾನವಾಗಿ ಸರಿಯಾಯಿತು.
ಈಗ ಅವನಿಗೂ ಹೊಸ ಸಂಗಾತಿ ಇದ್ದಾಳೆ. ನಾವು ನಾಲ್ವರೂ ಕೆಲವೊಮ್ಮೆ ಭೇಟಿಯಾಗುತ್ತೇವೆ. ಕ್ಯಾರೋ ಮತ್ತು ನಾನು ಈಗ ತುಂಬಾ ಸಂತೋಷದಿಂದ ಜೊತೆಯಾಗಿ ಬದುಕುತ್ತಿದ್ದೇವೆ. ನಾನು ಇಂತಹ ಪ್ರೀತಿ ಮತ್ತು ಪ್ರೀತಿಯನ್ನು ಪಡೆಯುವ ಅನುಭವವನ್ನು ಹಿಂದೆ ಎಂದಿಗೂ ಅನುಭವಿಸಿರಲಿಲ್ಲ. ನಮ್ಮಿಬ್ಬರ ಲೈಂಗಿಕ ಅಉಭವ ಉತ್ತೇಜಕವಾಗಿದೆ. ಮ್ಯಾಥ್ಯೂನಲ್ಲಿ ಪಡೆದಿಲ್ಲದ ಸುಖವನ್ನು ನಾನು ಇವಳಿಂದ ಪಡೆದಿದ್ದೇನೆ.
ನನ್ನ ಲೈಂಗಿಕ ಸ್ವಭಾವ ಬೇರೆಯೇ ಆಗಿದ್ದರೂ ಸಮಾಜದ ಕಾರಣದಿಂದ ನಾನು ಗಂಡಸಿನ ಜೊತೆಗೆ ಜೀವನ ನಡೆಸಬೇಕಾಯಿತು. ನನ್ನ ಹಾಗೆಯೇ ಎಷ್ಟು ಹೆಣ್ಣು ಮಕ್ಕಳು ಮತ್ತು ಎಷ್ಟು ಗಂಡು ಮಕ್ಕಳು ಜೀವಿಸುತ್ತಿದ್ದಾರೋ ತಿಳಿಯದು. ಎಲ್ಲರಿಗೂ ಮುಕ್ತವಾಗಿ ಬದುಕುವ ಅವಕಾಶ ಸಿಗಲಿ.


