23 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದ ಮಹಿಳೆಯೊಬ್ಬಳು ತನ್ನ ತಪ್ಪೊಪ್ಪಿಗೆಯ (Confession box) ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದಾಳೆ. ಪತಿಯೊಂದಿಗೆ ದೈಹಿಕ ಆತ್ಮೀಯತೆ ಕಡಿಮೆಯಾಗಿದ್ದೇ ಅವರಿಬ್ಬರ ಡೈವೋರ್ಸ್‌ಗೆ ಕಾರಣವಾಯಿತೇ? ಇಲ್ಲಿ ಓದಿ.
ನನ್ನ ಹೆಸರು ಲಿಂಡಾ ಕೆಲ್ಸೀ. ನಾನು ಮತ್ತು ನನ್ನ ಗಂಡ ಮದುವೆಯಾಗಿ 23 ವರ್ಷಗಳ ಬಳಿಕ ಡೈವೋರ್ಸ್ ಮಾಡಿಕೊಂಡು ದೂರವಾದೆವು. ಅದು ಹೇಗೆ 23 ವರ್ಷ ಒಟ್ಟಿಗಿದ್ದ ಬಳಿಕ ಬೇರೆಯಾದದ್ದು ಎಂದು ನೀವು ಕೇಳಬಹುದು. ಅಲ್ಲೇ ಇರೋದು ವಿಷಯ. ಕೆಲವು ದಂಪತಿಗಳನ್ನು ನೋಡಿದರೆ, ಇವರು ಯಾಕಿನ್ನೂ ಮದುವೆಯ ಬಂಧನದಲ್ಲೇ ಇದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಅಂದರೆ, ದಾಂಪತ್ಯದ ಯಾವ ಸ್ವಾದವೂ ಅವರ ನಡುವೆ ಇರೋಲ್ಲ. ಅಂದರೆ ದೈಹಿಕ- ಲೈಂಗಿಕ ಸಂಬಂದ. ನನ್ನ ಪ್ರಕಾರ ಅದುವೇ ದಾಂಪತ್ಯವನ್ನು ಗಟ್ಟಿಯಾಗಿ ಹಿಡಿದಿಡುವ ಬಂಧ. ಅದು ಇಲ್ಲವಾದರೆ ದಾಂಪತ್ಯ ಇರೋದೇ ಇಲ್ಲ.
ನಮಗಿಬ್ಬರು ಮಕ್ಕಳೂ ಇದ್ದಾರೆ. ಆದರೆ ಮಕ್ಕಳೂ ನಮ್ಮ ದಾಂಪತ್ಯವನ್ನು ಉಳಿಸುವ ಬಾಂಡಿಂಗ್ ಆಗಲೇ ಇಲ್ಲ. ನನಗೆ ಈಗಲೂ ಅನಿಸುತ್ತದೆ- ನಾವಿಬ್ಬರೂ ಇನ್ನಷ್ಟು ದೇಹ ಹಂಚಿಕೊಳ್ಳುವ ಸಾಧ್ಯತೆ ಇದ್ದಿದ್ದರೆ ನಮ್ಮ ದಾಂಪತ್ಯ ಇನ್ನೂ ಗಟ್ಟಿಯಾಗಿ ಉಳಿದಿರುತ್ತಿತ್ತು ಅಂತ. ಆದರೆ ನಮ್ಮ ಮದುವೆಯ ಆರಂಭದ ದಿನಗಳು ಹೀಗಿರಲೇ ಇಲ್ಲ. ಅಲ್ಲಿ ಎಲ್ಲದಕ್ಕೂ ಸಮಯವಿತ್ತು. ವಾರದಲ್ಲಿ ಎರಡು ಮೂರು ಬಾರಿಯಾದರೂ ನಮ್ಮ ದೇಹಸುಖ ಹಂಚಿಕೊಳ್ಳುವುದಕ್ಕೆ, ಕತ್ತಲಲ್ಲಿ ಕೈಕೈ ಹಿಡಿದು ವಾಕಿಂಗ್ ಮಾಡುವುದಕ್ಕೆ, ಭಾನುವಾರ ಬೆಳಗ್ಗೆ ಹಾಸಿಗೆಯಲ್ಲೇ ಹೊತ್ತು ಕಳೆಯುವುದಕ್ಕೆ, ಕಚೇರಿಯಿಂದ ಬಂದರೂ ದಣಿವಾಗದೆ ಮಿಲನದಲ್ಲಿ ರೋಮಾಂಚನ ಅನುಭವಿಸುವುದಕ್ಕೆ, ಕೆಲವೊಮ್ಮೆ ಎಲ್ಲರಿಂದ ಕದ್ದುಮುಚ್ಚಿ ಕಾರಿನಲ್ಲೇ ಕೂಡುವುದಕ್ಕೆ, ಕೆಲವೊಮ್ಮೆ ಪಾರ್ಕ್‌ನಲ್ಲಿ ಮುತ್ತಿಡುವುದಕ್ಕೆ- ಹೀಗೆ ಹೊಸ ಹೊಸ ಸಾಹಸಗಳಿಗೆ ಸಮಯ ಮಾಡಿಕೊಳ್ಳುತ್ತಿದ್ದೆವು.
ನಮಗೆ ಇಬ್ಬರು ಮಕ್ಕಳಾದರು. ಇಬ್ಬರಿಗೂ ಹೈಪವರ್ ಕೆಲಸವಿತ್ತು. ಅವನಿಗೆ ಪ್ರಿಂಟಿಂಗ್ ಕಂಪನಿಯ ಎಂಡಿ, ನನಗೆ ವುಮೆನ್ ಮ್ಯಾಗಜೈನಿನ ಎಡಿಟರ್. ಬಿಡುವಿಲ್ಲದ ಕೆಲಸಗಳ ನಡುವೆಯೂ ನಮ್ಮ ಬಾಂಡಿಂಗ್ ಚೆನ್ನಾಗಿಯೇ ಇತ್ತು. ಪ್ರೀತಿಗೆ ಸಮಯ ಮಾಡಿಕೊಳ್ಳುತ್ತಿದ್ದೆವು. ಮನೆಗೆಲಸ ಹಂಚಿಕೊಳ್ಳುತ್ತಿದ್ದೆವು. ನಮ್ಮ ಕಚೇರಿಯಲ್ಲಿ ಏನಾಗುತ್ತಿದೆ ಎಂಬುದು ಪರಸ್ಪರರಿಗೆ ಗೊತ್ತಾಗುತ್ತಿತ್ತು. ನಮ್ಮ ಮಕ್ಕಳ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರುತ್ತಿದ್ದೆವು. ನಮ್ಮ ಭಾವನಾತ್ಮಕ ಇಂಟಿಮೆಸಿ ಅದ್ಭುತವಾಗಿತ್ತು. ಆದರೆ ಒಂದು ಶಾಕ್‌ನಂತೆ ಎಲ್ಲ ಬದಲಾಯಿತು.
ಬದುಕು ಬದಲಾಗಿದ್ದು ಹೇಗೆ?
ನನಗೊಂದು ಸಣ್ಣ ಡಿಪ್ರೆಸ್ಸಿವ್ ಖಾಯಿಲೆ ಶುರುವಾಯಿತು. ನಾನು ಕೆಲಸ ಬಿಡಬೇಕಾಯಿತು. ಆಗ ನನ್ನ ಗಂಡ ಹೀರೋನಂತೆಯೇ ನನ್ನನ್ನು ನೋಡಿಕೊಂಡ ಎನ್ನಬೇಕು. ಆದರೆ, ಅವನೂ ನಂತರ ಆತನ ದೊಡ್ಡ ಜಾಬ್ ಬಿಡುವಂತಾಯಿತು. ದೊಡ್ಡ ಮನ್ನಣೆ, ಕೈತುಂಬ ಸಂಬಳ ಎಲ್ಲವೂ ಕೈತಪ್ಪಿದವು. ತೊಂದರೆ ಶುರುವಾಯಿತು. ನಾವಿಬ್ಬರೂ ನಮ್ಮನಮ್ಮದೇ ಸಂಕಷ್ಟಗಳಲ್ಲಿ ಮುಳುಗಿಹೋದೆವು. ಒಬ್ಬರನ್ನೊಬ್ಬರು ಮಾತಾಡಿಸುವುದು, ಇನ್ನೊಬ್ಬರ ಕಷ್ಟಗಳನ್ನು ಆಲಿಸುವುದು, ಸಹಾನುಭೂತಿ ಹೊಂದುವುದು ಅಸಾಧ್ಯವಾಯಿತು. ಸಂಜೆ ಅವನು ಮನೆಯೊಳಗೆ ಬಂದರೆ ನಾನು ಆತನ ಮುಖ ನೋಡದೇ ಇದ್ದುದೂ ಇತ್ತು. ನನ್ನದೇ ಸಂಕಟಗಳಲ್ಲಿ ಮುಳುಗಿಹೋಗಿದ್ದರಿಂದ, ಅವನ ವೇದನೆಯ ಕತೆಗಳನ್ನು ಕೇಳುವ ಮನಸ್ಸು ಇರುತ್ತಿರಲಿಲ್ಲ. ಹಾಗೇ ನನ್ನ ಕಷ್ಟಗಳನ್ನು ಕೇಳಲು ಅವನ ಬಳಿ ಸಮಯ ಇರುತ್ತಿರಲಿಲ್ಲ. ನಾನು ಹೇಗೆ ಕಾಣುತ್ತೇನೆ, ಯಾವ ಥರದ ಡ್ರೆಸ್ ಧರಿಸಿದರೆ ಚಂದ, ಇದನ್ನೆಲ್ಲ ಮೊದಲು ಅವನು ಹೇಳುತ್ತಿದ್ದ . ಅದೆಲ್ಲ ನಿಂತುಬಿಟ್ಟಿತು. ನಾನು ಅವನಿಗೆ ಕಾಣಿಸುತ್ತಿರಲೇ ಇಲ್ಲವೋ ಏನೋ.
ನಂತರ ಅವನಿಗೆ ಮುಂಬಯಿಯಿಂದ ಆಚೆ ಒಂದು ಕೆಲಸ ಸಿಕ್ಕಿತು. ಅದು ಅವನಿಗೆ ಇಷ್ಟವಿರಲಿಲ್ಲ. ಆದರೆ ಆತ ತೆರಳಲೇಬೇಕಿತ್ತು. ಹೋದ. ಅಲ್ಲಿಂದ ಬಳಿಕ ಎಲ್ಲೆಲ್ಲೋ ಹೋದ. ವೀಕೆಂಡ್‌ಗಳಲ್ಲಿ ಮಾತ್ರ ಮನೆಗೆ ಬರುತ್ತಿದ್ದ. ಮನೆಗೆ ಬಂದಾಗಲೂ ಅವನ ಮನಸ್ಸು ಇಲ್ಲಿ ಇರುತ್ತಿರಲಿಲ್ಲ. ಮಗ ದೊಡ್ಡವನಾಗುತ್ತಿದ್ದ. ತಂದೆ ಫೋನ್ ಮಾಡಿದಾಗ ಆತ ಬ್ಯುಸಿಯಾಗಿರುತ್ತಿದ್ದ. ಫೋನ್‌ನಲ್ಲಿ ಮಾತಾಡಲು ಇಷ್ಟಪಡುತ್ತಿರಲಿಲ್ಲ. ಹೀಗೆ ನಾನು ಮತ್ತು ಮಗ ಒಂದಾದರೆ, ಗಂಡನೊಬ್ಬನೇ ಬೇರೆಯಾದ. ಗಂಡ ಮನೆಗೆ ಬಂದು ಎರಡು ದಿನದಲ್ಲಿ ಎಲ್ಲ ಮತ್ತೆ ಹೊಂದಾಣಿಕೆ ಆಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಆತ ಹೊರಡುವ ಸಮಯ ಬರುತ್ತಿತ್ತು.
ಇದೆಲ್ಲದರಿಂದ, ನನಗೆ ಆತನ ದೈಹಿಕ ಸಾಮೀಪ್ಯವೂ ದೂರವಾಯಿತು. ವಾರದಲ್ಲಿ ಒಂದು ದಿನ ಕೆಲವೊಮ್ಮೆ ತಿಂಗಳಲ್ಲಿ ಒಂದು ದಿನ ಮಾತ್ರ ಹತ್ತಿರ ಬರುತ್ತಿದ್ದ. ಹಾಗೆ ಹತ್ತಿರ ಬಂದಾಗಲೂ ದಿಡೀರ್ ಇಂಟಿಮೆಸಿ ಸಾಧ್ಯವಾಗುತ್ತಿರಲಿಲ್ಲ. ಸಣ್ಣ ಸಣ್ಣ ಆಲಿಂಗನ, ಮುತ್ತು, ಹರಟೆ ಇದಕ್ಕೆಲ್ಲ ಸಮಯ ಇರುತ್ತಿರಲಿಲ್ಲ. ಪ್ರೀತಿ ಉಳಿಸಿಕೊಳ್ಳಲು ಇದೆಲ್ಲ ತುಂಬ ಮುಖ್ಯ ಅಲ್ಲವೇ. ನಾನು ಅವನಿಗೆ ಇನ್ನಷ್ಟು ಸಮಯ ಕೊಟ್ಟಿದ್ದರೆ, ಇನ್ನಷ್ಟು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರೆ ನಮ್ಮ ದಾಂಪತ್ಯ ಉಳಿದುಕೊಳ್ಳುತ್ತಿತ್ತೋ ಏನೋ!
ನಾವು ಬೇರೆ ಬೇರೆಯಾಗಿ ಇದೀಗ ಹಲವು ವರ್ಷಗಳಾಗಿವೆ. ಇಷ್ಟು ವರ್ಷಗಳ ಬಳಿಕ ನನಗೆ ಗೊತ್ತಾಗಿದೆ- ನಾವು ಇನ್ನೂ ಪ್ರಬುದ್ಧವಾಗಿ, ಪ್ರೀತಿಯಿಂದ, ಆತ್ಮೀಯತೆಯಿಂದ ವರ್ತಿಸಿದ್ದರೆ ನಮ್ಮ ದಾಂಪತ್ಯವನ್ನು ಉಳಿಸಿಕೊಳ್ಳುತ್ತಿದ್ದೆವು ಎಂದು. ಒಂದು ಹಂತದ ಬಳಿಕ ನಮ್ಮ ಸಂಗಾತಿಯ ಬದಲು ನಮ್ಮ ಮಕ್ಕಳ ಭವಿಷ್ಯದತ್ತ ನಾವು ಫೋಕಸ್ ಮಾಡುತ್ತೇವೆ. ಅದು ತಪ್ಪು. ಸಂಗಾತಿಯತ್ತ ನಾವು ಹೆಚ್ಚಿನ ಗಮನ ಕೊಡದಿದ್ದರೆ ಇರುವ ಆತ್ಮೀಯತೆಯ ಸಾಂಗತ್ಯವನ್ನು ಖಂಡಿತ ಕಳೆದುಕೊಳ್ಳುತ್ತೇವೆ. ಇದು ಈಗ ನನ್ನ ಪಶ್ಚಾತ್ತಾಪ. ನೀವು ಹೀಗೆ ಮಾಡಬೇಡಿ.
