ಬೆಳದಿಂಗಳ ಬಾಲೆಯಾಗಿ ಎಲ್ಲರ ಮನಗೆದ್ದ ನಟಿ ಸುಮನ್ ನಗರ್‌ಕರ್ ಮತ್ತು ಅವರ ಪತಿ ಮಕ್ಕಳೇ ಬೇಡ ಎಂದು ಡಿಸೈಡ್ ಮಾಡಿದ್ಯಾಕೆ? ನಟಿ ಏನ್ ಹೇಳಿದ್ರು ಕೇಳಿ...
ಬೆಳದಿಂಗಳ ಬಾಲೆಯಾಗಿ ಎಲ್ಲರ ಮನಗೆದ್ದವರು ನಟಿ ಸುಮನ್ ನಗರ್‌ಕರ್. ನಟನೆಯಿಂದ ಸ್ವಲ್ಪ ದೂರ ಇದ್ದರೂ, ತಮ್ಮ ಹೊಸ ನಿರ್ಮಾಣ ಸಂಸ್ಥೆ ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸುನಿಲ್ ಕುಮಾರ್ ದೇಸಾಯಿವರ `ನಿಷ್ಕರ್ಷ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ `ನಮ್ಮೂರ ಮಂದಾರ ಹೂವೇ' ಮತ್ತು `ಬೆಳದಿಂಗಳ ಬಾಲೆ' ಚಿತ್ರದ ಮೂಲಕ ಪ್ರಸಿದ್ಧರಾದವರು. ‘ಅಮ್ಮಾವ್ರ ಗಂಡ’, ‘ಹೂಮಳೆ’, ‘ಮುಂಗಾರಿನ ಮಿಂಚು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸುಮನ್ ನಗರ್‌ಕರ್ ಮಿಂಚಿದವರು. 15 ವರ್ಷ ಚಿತ್ರರಂಗದಿಂದ ದೂರವಿದ್ದ ಅವರು, ನಾಗತಿಹಳ್ಳಿ ಚಂದ್ರಶೇಖರವರ `ಇಷ್ಟಕಾಮ್ಯ' ಚಿತ್ರದ ಮೂಲಕ ಅಭಿನಯಕ್ಕೆ ಮರಳಿದರು.
ಗುರುದೇವ್ ನಾಗರಾಜ್ ಜೊತೆ ಮದುವೆಯಾದ ನಟಿ ಸರಳ ಜೀವನಕ್ಕಾಗಿ ಎಷ್ಟು ಫೇಮಸ್ ಆಗಿದ್ದಾರೋ, ಮಕ್ಕಳೇ ಬೇಡ ಎಂದು ಮದುವೆಗೂ ಮುನ್ನವೇ ಡಿಸೈಡ್ ಮಾಡಿ ಮತ್ತಷ್ಟು ಕುತೂಹಲಕ್ಕೆ ಕಾರಣರಾಗಿದ್ದಾರೆ. ಇದೀಗ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಸರಳ ಜೀವನ ಮತ್ತು ಮಕ್ಕಳು ಬೇಡ ಎನ್ನುವುದಕ್ಕೆ ಕಾರಣವನ್ನು ನೀಡಿದ್ದಾರೆ. ಹೌದು.. ನನಗೆ ಚಿನ್ನ, ಬೆಳ್ಳಿ ಮೇಲೆ ಆಸಕ್ತಿಯೇ ಇಲ್ಲ. ಶಾಲೆಯಲ್ಲಿ ಕಲಿಯುತ್ತಿದ್ದ ದಿನಗಳಿಂದಲೇ ನನಗೆ ಇದರಲ್ಲಿ ಆಸಕ್ತಿ ಇಲ್ಲ. ಜನವರಿ 1, 2001ರಂದು ಗುರುದೇವ್ ನಾಗರಾಜ ಜೊತೆ ಮದುವೆಯಾದೆ. ಅದು ಕೂಡ ಸರಳವಾದ ರಿಜಿಸ್ಟರ್ ಮ್ಯಾರೇಜ್. ಆಗಲೂ ಆಭರಣ ಧರಿಸಲಿಲ್ಲ ಎಂದಿದ್ದಾರೆ ನಟಿ.
‘’ನಾವು ಸುಮಾರು ವರ್ಷ ಫ್ರೆಂಡ್ಸ್ ಆಗೇ ಇದ್ವಿ. ಮದುವೆಯಾಗೋಣ್ವ ಅಂತ ನನಗೆ ಕೇಳಿದಾಗ ನಾನು ತುಂಬಾ ಟೈಮ್ ತೆಗೆದುಕೊಂಡಿದ್ದೆ. ಯಾಕಂದ್ರೆ, ಮದುವೆಯಾಗುವ ಐಡಿಯಾ ನನಗೆ ಇರಲಿಲ್ಲ’ ಎಂದೂ ನಟಿ ಹೇಳಿದ್ದಾರೆ. ಇನ್ನು ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ, ಮದುವೆಗೂ ಮುನ್ನವೇ ಇಬ್ಬರೂ ಮಕ್ಕಳು ಬೇಡ ಎಂದು ಡಿಸೈಡ್ ಮಾಡಿದ್ವಿ. ಮದುವೆಯಾಗೋದೆ ಮಕ್ಕಳನ್ನು ಮಾಡಿಕೊಳ್ಳಲು ಅಲ್ವಲ್ಲಾ? ಮದುವೆಯಾಗೋದು ಸಂಗಾತಿ ಬೇಕು ಎಂದು ಅಷ್ಟೆ. ಒಬ್ಬ ಫ್ರೆಂಡ್ ಬೇಕು ಅಂತ. ಮಕ್ಕಳು ಬೇಕು ಅಂತ ಅಲ್ಲ ಎಂದಿದ್ದಾರೆ ಸುಮನ್.
ಒಮ್ಮೆ ತಂದೆಯ ಜೊತೆ ಹೋಟೆಲ್ಗೆ ಹೋದಾಗ, ಯಾರೋ ನನ್ನ ಮಕ್ಕಳ ಬಗ್ಗೆ ಪ್ರಶ್ನಿಸಿದರು. ಅವರಿಗೆ ನಾನು ನನಗೆ ಮಕ್ಕಳು ಬೇಡ ಎಂದಾಗ, ನೋಡಿ ನೀವು ಹೇಗೆ ನಿಮ್ಮ ಅಪ್ಪನನ್ನು ನೋಡಿಕೊಳ್ಳುತ್ತಿದ್ದೀರಿ, ನೀವು ವಯಸ್ಸಾದ ಮೇಲೆ ನಿಮ್ಮನ್ನು ನೋಡಿಕೊಳ್ಳಲು ಮಕ್ಕಳು ಬೇಕಲ್ವಾ ಎಂದರು. ಆಗ ನಾನು ಹೇಳಿದೆ, ವಯಸ್ಸಾದ ಮೇಲೆ ನೋಡಿಕೊಳ್ಳಲು ಬೇಕು ಎನ್ನುವ ಕಾರಣಕ್ಕೆ ಮಕ್ಕಳನ್ನು ಮಾಡಿಕೊಳ್ಳಬೇಕಾ, ಹಾಗಿದ್ದರೆ ನನಗೆ ಬೇಡವೇ ಬೇಡ ಎಂದೆ ನೇರವಾಗಿ ಹೇಳಿದ್ದಾರೆ ನಟಿ. ಹಾಗೆಂದು ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದೇನಿಲ್ಲ. ನಮ್ಮ ನೆಂಟರ ಮಕ್ಕಳನ್ನು ತುಂಬಾ ಪ್ರೀತಿಸ್ತೇವೆ. ಇಬ್ಬರಿಗೂ ಮಕ್ಕಳು ಎಂದರೆ ಇಷ್ಟನೇ. ಆದರೆ ನಮಗೆ ಬೇಡ ಎಂದು ಡಿಸೈಡ್ ಮಾಡಿದ್ವಿ. ಮನೆಯವರಿಂದಲೂ ಆರಂಭದಲ್ಲಿ ತುಂಬಾ ಪ್ರೆಷರ್ ಇತ್ತು. ಆಮೇಲೆ ಎಲ್ಲರೂ ಸಪೋರ್ಟ್ ಮಾಡಿದ್ರು. ಹೋದಲ್ಲಿ, ಬಂದಲ್ಲಿ ಮಕ್ಕಳ ಬಗ್ಗೆ ಕೇಳಿದಾಗ ಅವರೇ ಉತ್ತರ ಕೊಡುತ್ತಿದ್ದರು. ಆದರೆ ನಾವಿಬ್ಬರೂ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿತ್ತು ಎಂದಿದ್ದಾರೆ ಸುಮನ್.
