ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ನಂತರ, 2001ರಲ್ಲಿ ಅವರ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ರಾಜಕೀಯ ಪ್ರೇರಿತ ಆ್ಯಸಿಡ್ ದಾಳಿಯ ಘೋರ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ದಾಳಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಗೆದ್ದ ಅವರ ಧೈರ್ಯದ ಕಥೆಯನ್ನು ಅವರ ಅಳಿಯ ಡಾ.ಸಿ.ಎನ್. ಮಂಜುನಾಥ್ ವಿವರಿಸಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸರ್ವಸ್ವ ಆಗಿದ್ದ, ಅವರ ಬದುಕನ್ನು ರೂಪಿಸಿದ್ದ ರೂವಾರಿ ಚೆನ್ನಮ್ಮ (Chennamma Deve Gowda) ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ.ಅವರ ನಿಧನದ ಬಳಿಕ ಅವರ ಬದುಕಿನ ಹಲವಾರು ರೋಚಕ ಘಟನೆಗಳು, ಅಪರೂಪದ ಘಟನೆಗಳು, ನೋವಿನ ದಿನಗಳ ಬಗ್ಗೆ ಅವರ ಸಂಬಂಧಿಕರು ಒಂದೊಂದೇ ವಿಷಯವನ್ನು ಬಿಚ್ಚಿಡುತ್ತಿದ್ದಾರೆ. ಅದರಲ್ಲಿಯೂ 2001ರ ಫೆಬ್ರವರಿ 21ರ ಮಹಾಶಿವರಾತ್ರಿಯ ವೇಳೆ ನಡೆದ ಘಟನೆ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಅದು ಕೌಟುಂಬಿಕ ವೈಷಮ್ಯ ಮತ್ತು ರಾಜಕೀಯ ಪ್ರೇರಣೆಯಿಂದ ಆಗಿದ್ದ ಆ್ಯಸಿಡ್ ದಾಳಿ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ದೇವೇಗೌಡರ ಕುಟುಂಬವು ವಿಶೇಷ ಪೂಜೆ ಸಲ್ಲಿಸಲು ತೆರಳಿತ್ತು. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪೂಜೆ ಮುಗಿಸಿಕೊಂಡು ಹೊರಬರುತ್ತಿದ್ದಾಗ, ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಅವರ ಸೊಸೆ ಭವಾನಿ ರೇವಣ್ಣ (ಎಚ್.ಡಿ. ರೇವಣ್ಣ ಅವರ ಪತ್ನಿ) ಅವರ ಮೇಲೆ ಏಕಾಏಕಿ ಆಸಿಡ್ ಎರಚಲಾಯಿತು. ಈ ಘೋರ ಕೃತ್ಯದಲ್ಲಿ ಚನ್ನಮ್ಮ ಹಾಗೂ ಭವಾನಿ ರೇವಣ್ಣ ಇಬ್ಬರೂ ತೀವ್ರವಾಗಿ ಸುಟ್ಟು ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾಯಿತು. ಈ ಬಗ್ಗೆ ದೇವೇಗೌಡರು ಸತ್ಯಾಂಶವನ್ನು ಬಹಿರಂಗಪಡಿಸಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರು, 'ನನ್ನ ತಮ್ಮನ ಮಗನೇ ಆಸಿಡ್ ಹಾಕಿದ್ದು ನಿಜ. ಆದರೆ, ಆತನ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು. ವಾಸ್ತವವಾಗಿ ಅವರ ಸಂಚು ಇದ್ದದ್ದು ನನ್ನ ಮಗ ಹೆಚ್.ಡಿ. ರೇವಣ್ಣನ ಮೇಲೆ ಆಸಿಡ್ ಹಾಕುವುದಾಗಿತ್ತು. ನಾವೆಲ್ಲ ಮಹಾದೇಶ್ವರ ಬೆಟ್ಟಕ್ಕೆ ಹೋದಾಗ ರೇವಣ್ಣ ಬಂದಿರಲಿಲ್ಲ, ಹೀಗಾಗಿ ನನ್ನ ಪತ್ನಿ ಮತ್ತು ಸೊಸೆಯ ಮೇಲೆ ದಾಳಿ ನಡೆಯಿತು' ಎಂದು ಹೇಳಿದ್ದರು. ಇದೀಗ ಆ ಘಟನೆಯ ಬಗ್ಗೆ ಅವರ ಅಳಿಯ ಡಾ.ಸಿ.ಎನ್ ಮಂಜುನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ವೈದ್ಯಕೀಯಕ್ಕೇ ಸವಾಲು
ಆಗ ಆ್ಯಸಿಡ್ ದಾಳಿಯಾದಾಗ ಶೇಕಡಾ 2ರಷ್ಟು ಮಾತ್ರ ಬದುಕುಳಿಯುತ್ತಾರೆ ಎಂದಿದ್ದರು, ಆದರೆ ಅವರ ಧೈರ್ಯಗುಂದಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಸಾವನ್ನು ಗೆದ್ದಿದ್ದರು. ಮುಖಕ್ಕೆ ಆ್ಯಸಿಡ್ ಬಿದ್ದಿದ್ದಕ್ಕೆ, ಮುಖ ನೋಡಿಕೊಳ್ಳಬಾರದು ಅಂತ ಕನ್ನಡಿಗೆ ಕವರ್ ಹಾಕಿದ್ದೆವು. ಆದರೆ ಅದಕ್ಕೂ ಚಾಲೆಂಜ್ ಹಾಕಿದ್ದ ಚೆನ್ನಮ್ಮ ನಾನು ಇದನ್ನು ಅಕ್ಸೆಪ್ಟ್ ಮಾಡುತ್ತೇನೆ, ಕವರ್ ತೆಗೆಯಿರಿ ಎಂದಿದ್ದರು. ಅಂಥ ಗಟ್ಟಿಗಿತ್ತಿಯಾಗಿದ್ದ ಚೆನ್ನಮ್ಮ ಅವರನ್ನು 40 ವರ್ಷಗಳಿಂದ ನೋಡಿದ್ದೇನೆ ಎಂದು ಡಾ.ಮಂಜುನಾಥ್ ಭಾವುಕರಾದರು.
ದಂಪತಿ ಒಡನಾಟ
ಚೆನ್ನಮ್ಮ ದೇವೇಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ದರು. ಅವರಿಗಾಗಿ ಇವರು ಕಾಯುತ್ತಿದ್ದರು, ಇವರಿಗಾಗಿ ಅವರು ಕಾಯುತ್ತಿದ್ದರು ಎಂದು ಘಟನೆಯನ್ನು ನೆನಪಿಸಿಕೊಂಡರು. ಅವರಿಗೆ ಒಂದು ವರ್ಷದಿಂದ ಉಸಿರಾಟದ ಸಮಸ್ಯೆಯಿತ್ತು. ಏಳು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಚೇತರಿಸಿಕೊಂಡಿದ್ದರು. ಆದರೂ ಆಗಾಗ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪದ್ಮನಾಭನಗರದ ಅತ್ತಿಗೆ ಮನೆಯಲ್ಲಿ ಐಸಿಯು ಮಾಡಿದ್ದೆವು. ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸ್ಟಾಫ್ ನರ್ಸ್ ಕೂಡ ಇದ್ದರು. ಚೆನ್ನಮ್ಮ ವೀಲ್ ಚೇರ್‌ನಲ್ಲಿಯೇ ಪೂಜೆ ಮಾಡುತ್ತಿದ್ದರು, ಓಡಾಡುತ್ತಿದ್ದರು ಎಂದು ಹೇಳಿದರು.


