ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನದ ನಂತರ ಇದೀಗ 'ಮೈಮಾಟ' ಹಾಡು ಇಬ್ಬರ ನಡುವೆ ಹೊಸ ಘರ್ಷಣೆಗೆ ಕಾರಣವಾಗಿದೆ. ಈ ಹಾಡು ತನ್ನನ್ನು ಕುರಿತೇ ಬರೆದದ್ದು ಎಂದು ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ನಿವೇದಿತಾ, ತಮ್ಮ ಗತಕಾಲದ ಜೀವನ ಒಂದು ಹಾರರ್ ಸ್ಟೋರಿ ಎಂದಿದ್ದಾರೆ. ಇವರಿಬ್ಬರ ಜಟಾಪಟಿ ನಡುವೆ ಹಾಡು ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಈ ಹಾಡು 17 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಬೆಂಗಳೂರು: 'ಡಿವೋರ್ಸ್​ ಆದ್ರೆ ಈ ರೀತಿಯಾಗಿ ಸದ್ದಿಲ್ಲದೇ ಆಗಬೇಕು' ಎಂದು ಉದಾಹರಣೆ ಆದವರು Rapper ಚಂದನ್​ ಶೆಟ್ಟಿ ಮತ್ತು ಅರೆಬರೆ ಡ್ರೆಸ್​ಗಳ ರೀಲ್ಸ್​ಗಳಿಂದಲೇ ಫೇಮಸ್​ ಆಗ್ತಿರೋ ನಿವೇದಿತಾ ಗೌಡ ಅವರದ್ದು. ಬಿಗ್​ಬಾಸ್​ನಲ್ಲಿ ಶುರುವಾದ ಪ್ರೀತಿ, ಹೊರಗಡೆ ಬಂದು ಮದುವೆಯಾಗುವವರೆಗೆ, ಕೊನೆಗೆ ಡಿವೋರ್ಸ್ ಆಗುವವರೆಗೂ ಮುಂದುವರೆಯಿತು. ಡಿವೋರ್ಸ್​ಗೆ ನಿಜವಾದ ಕಾರಣ ಏನು ಎನ್ನುವುದನ್ನು ಇದುವರೆಗೆ ನೇರವಾಗಿ ಇಬ್ಬರೂ ಹೇಳದಿದ್ದರೂ, ನಿವೇದಿತಾ ಗೌಡ (Nivedita Gowda) ಅವರ ಪಾಷ್​ ಬದುಕು, ಅವರ ಬೇಡಿಕೆ ಈಡೇರಿಸುವುದು ಕಷ್ಟವಾಗಿತ್ತು ಎಂದು ಪರೋಕ್ಷವಾಗಿ ಚಂದನ್​ ಅವರು ಹೇಳಿದ್ದರೆ, ನನ್ನೆಲ್ಲಾ ಖರ್ಚುಗಳನ್ನೂ ನಾನೇ ನೋಡಿಕೊಳ್ಳುತ್ತಿದ್ದೆ, ನನಗೆ ದುಡ್ಡೇ ಮುಖ್ಯ ನಿಜ, ಐಷಾರಾಮಿ ಬದುಕು ಕೂಡ ಬೇಕು. ಆದರೆ ಅದಕ್ಕೆ ನಾನು ಚಂದನ್​ ಶೆಟ್ಟಿ (Chandan Shetty) ಬಳಿ ಹಣ ಕೇಳಿದವಳಲ್ಲ ಎಂದು ನಿವೇದಿತಾ ಗೌಡ ಹೇಳಿದ್ದರು.

ಲವ್ ಮಾಡುವಾಗ ಎಲ್ಲವೂ ಚೆನ್ನಾಗಿತ್ತು. ಅದಕ್ಕಾಗಿಯೇ ಅದು ಮದುವೆ ಆಗುವವರೆಗೂ ಮುಂದುವರೆದಿತ್ತು. ಮದುವೆಯಾದ್ಮೇಲೂ ಕೆಲವು ಕಾಲ ಎಲ್ಲವೂ ಓಕೆ ಎನ್ನುವಂತೆಯೇ ಜೀವನ ಸಾಗಿತ್ತು. ಆದರೆ, ಕಾಲ ಕಳೆದಂತೆ ನಮ್ಮಿಬ್ಬರಲ್ಲಿ ಪರಸ್ಪರ ಹೊಂದಾಣಿಕೆ ಆಗಲು ಕಷ್ಟವಾಗುವಂತಹ ಭಿನ್ನಾಭಿಪ್ರಾಯ ಮೂಡತೊಡಗಿತು. ಆದರೆ, ಯಾವತ್ತೂ ಅದನ್ನು ನಾವಿಬ್ಬರೂ ಜಗಳದ ರೂಪಕ್ಕೆ ತೆಗೆದುಕೊಂಡು ಹೋಗಲೇ ಇಲ್ಲ. ಎಲ್ಲೋ ಏನೂ ತಪ್ಪಾಗ್ತಿದೆ ಎಂಬ ಅರಿವು ಇಬ್ಬರಲ್ಲೂ ಬಂದಿತ್ತು. ನಮ್ಮಿಬ್ಬರ ಫ್ಯಾಮಿಲಿಗೂ ಅದು ಗೊತ್ತಾಗಿತ್ತು. ಅದಕ್ಕಾಗಿ ಡಿವೋರ್ಸ್ ಪಡೆದೆವು ಎಂದಿದ್ದ ದಂಪತಿ, ಡಿವೋರ್ಸ್​ ಪಡೆದ ಬಳಿಕವೂ ಪರಸ್ಪರ ಗೂಬೆ ಕೂಡ್ರಿಸಿದವರಲ್ಲ.

ಮೈಮಾಟದ ಘರ್ಷಣೆ

ಆದರೆ ಇದೀಗ ಚಂದನ್​ ಶೆಟ್ಟಿ ಅವರ 'ಮೈಮಾಟ' ಶೀರ್ಷಿಕೆ ಇರುವ ಹಾಡು ಇಬ್ಬರ ನಡುವೆ ಮತ್ತೆ ಘರ್ಷಣೆಗೆ ಕಾರಣವಾಗಿದೆ. ಚಂದನ್ ಶೆಟ್ಟಿ ಅವರ ಬಹುನಿರೀಕ್ಷಿತ ಹೊಸ ಆಲ್ಬಂ ಸಾಂಗ್ 'ಮೈಮಾಟ' ಅಕ್ಟೋಬರ್ 25 ರಂದು ಬಿಡುಗಡೆಯಾಗಿದೆ."ಏನೇ ನಿನ್ನ ಮೈಮಾಟದಾಟ, ಇನ್ ಏಳು ಜನುಮಕ್ಕೂ ಕಲಿಸಿಯ ಪಾಠ... ನೀ ಹೋದಮೇಲೆ ನಾ ಸೋತಿಲ್ಲ, ಬದಲಾದೆ! ನನ್ನ ಪ್ರೀತಿ ಸೋತಿರಬಹುದು ಆದರೆ ನಾ ಸೋತಿಲ್ಲ..." ಎನ್ನುವ ಈ ಹಾಡು ಪಕ್ಕಾ, ನಿವೇದಿತಾ ಗೌಡ ಅವರನ್ನು ಕುರಿತೇ ಬರೆದದ್ದು ಎನ್ನುವ ಮಾತುಗಳೀಗ ಕೇಳಿಬಂದಿವೆ.

ಇದು ಇಷ್ಟೆಲ್ಲಾ ಸದ್ದು ಮಾಡುತ್ತಲೇ ಸುಮ್ಮನಿರದ ನಿವೇದಿತಾ ಗೌಡ, 'ನನ್ನ ಗತಕಾಲ ಎನ್ನುವ ದೆವ್ವ... ಅದ್ಭುತ ಸ್ನೇಹಿತರನ್ನು ಹೊಂದಿರುವ, ಮಹತ್ವಾಕಾಂಕ್ಷೆಯುಳ್ಳ ಹಾಗೂ ಪ್ರೀತಿಯಲ್ಲಿ ದುರದೃಷ್ಟವಂತೆಯಾಗಿರುವ ಹುಡುಗಿಯ ಜೀವನವು ರೊಮ್ಯಾಂಟಿಕ್ ಕಾಮಿಡಿಯಂತೆ ಇರುತ್ತದೆ ಎಂದು ಎಲ್ಲೋ ಓದಿದ್ದೆ. ಆದರೆ ನನ್ನ ಜೀವನ ಮಾತ್ರ ಸಂಪೂರ್ಣ Horror Story ಆಗಿದೆ. ಸ್ಪಷ್ಟವಾಗಿ ಹೇಳುವುದಾದರೆ, ನನ್ನ ಪಾಸ್ಟ್​ ಲೈಫ್​ ನನ್ನನ್ನು ಒಂಟಿಯಾಗಿ ಬಿಡುತ್ತಲೇ ಇಲ್ಲ...' ಎಂದು ಬರೆದುಕೊಂಡಿದ್ದಾರೆ. ಇದು ಅವರು ಮೈಮಾಟದ ಹಾಡಿಗೆ ಟಾಂಗ್​ ಕೊಟ್ಟಿರೋದು ಎಂದು ತಿಳಿದಿದೆ.

17 ಲಕ್ಷ ವ್ಯೂವ್ಸ್​

ಇದೀಗ ಇವೆಲ್ಲಾ ಚರ್ಚೆ ನಡುವೆಯೇ ನಾಲ್ಕೇ ದಿನದಲ್ಲಿ ಮೈಮಾಟದ ಸಾಂಗ್​ ಚಂದನ್​ ಶೆಟ್ಟಿ ಅವರ ಯುಟ್ಯೂಬ್​ನಲ್ಲಿ 17 ಲಕ್ಷಕ್ಕೂ ಅಧಿಕ ವ್ಯೂವ್ಸ್​ ಕಂಡಿದೆ. ಇದಿಷ್ಟೇ ಅಲ್ಲದೇ, ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿಯೂ ಹೆಚ್ಚು ಹೆಚ್ಚು ವ್ಯೂವ್ಸ್​ ಕಾಣುತ್ತಲೇ ಇದೆ.