ವರದಕ್ಷಿಣೆಯಾಗಿ ಕಿಡ್ನಿಯನ್ನೇ ದಾನ ಮಾಡುವಂತೆ ಅತ್ತೆ-ಮಾವ ಪೀಡಿಸಿದ ವಿಚಿತ್ರ ಘಟನೆ ಬಿಹಾರದ ಮುಜಾಫರಾಬಾದ್‌ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ಸೊಸೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬಿಹಾರ: ವರದಕ್ಷಿಣೆಯಾಗಿ ಬೈಕ್, ದುಡ್ಡು, ಒಡವೆ, ಬಟ್ಟೆ ಮೊದಲಾದವುಗಳನ್ನು ನೀಡುವಂತೆ ಸೊಸೆಗೆ ಹಿಂಸೆ ನೀಡುವ ಪ್ರಕರಣಗಳು ಸಾಮಾನ್ಯ. ಆದರೆ ವರದಕ್ಷಿಣೆಯಾಗಿ ಕಿಡ್ನಿಯನ್ನೇ ದಾನ ಮಾಡುವಂತೆ ಅತ್ತೆ-ಮಾವ ಪೀಡಿಸಿದ ವಿಚಿತ್ರ ಘಟನೆ ಬಿಹಾರದ ಮುಜಾಫರಾಬಾದ್‌ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ಸೊಸೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
2021ರಲ್ಲಿ ದೀಪ್ತಿ ಎಂಬಾಕೆಯ ವಿವಾಹವಾಗಿತ್ತು. ವಿವಾಹಕ್ಕೂ ಮೊದಲೇ ವರನಿಗೆ ಕಿಡ್ನಿ ವೈಫಲ್ಯ ಸಮಸ್ಯೆ ಇತ್ತು. ಇದನ್ನು ಮುಚ್ಚಿಟ್ಟು ಪೋಷಕರು ಆತನಿಗೆ ಮದುವೆ ಮಾಡಿದ್ದಾರೆ. ಮದುವೆಯಾದ ನಂತರ ಸೊಸೆಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಅತ್ತೆ ಮಾವ ಪೀಡಿಸಲು ಶುರು ಮಾಡಿದ್ದಾರೆ. ಅವರು ಒಪ್ಪದೇ ಹೋದಾಗ ತಮ್ಮ ಮಗನಿಗೆ ಕಿಡ್ನಿ ದಾನ ಮಾಡುವಂತೆ ಒತ್ತಡ ಹೇರಿದ್ದಾರೆ. ಇದರಿಂದ ಧೃತಿಗೆಟ್ಟ ಸೊಸೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
2021ರಲ್ಲಿ ತನ್ನ ಮದುವೆಯಾಗಿತ್ತು. ಮದುವೆಯ ನಂತರ ತಾನು ಮುಜಾಫರ್‌ಪುರದ ಬೋಚ್ಛಾ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತೆ ಮಾವನ ಮನೆಯಲ್ಲಿ ವಾಸಿಸಲು ಆರಂಭಿಸಿದೆ. ಇದಕ್ಕೂ ಮೊದಲು ತಾನು ಮಿತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿಭಾಗೀಯ ಹೆಡ್‌ಕ್ವಾಟರ್‌ನಲ್ಲಿ ವಾಸ ಮಾಡುತ್ತಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ನಂತರ ನಿಧಾನವಾಗಿ ಅತ್ತೆ ಮಾವನವರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದರು. ಮೊದ ಮೊದಲು ಬೈಕ್ ಹಾಗೂ ಹಣವನ್ನು ವರದಕ್ಷಿಣೆಯಾಗಿ ತವರಿನಿಂದ ತರುವಂತೆ ಪೀಡಿಸುತ್ತಿದ್ದರು. ಆದರೆ ಇದು ಸಾಧ್ಯವಾಗದೇ ಹೋದಾಗ ಅವರ ಅನಾರೋಗ್ಯ ಪೀಡಿತ ಮಗನಿಗೆ ಕಿಡ್ನಿ ನೀಡುವಂತೆ ಕಿರುಕುಳ ನೀಡಲು ಶುರು ಮಾಡಿದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಮದುವೆಯ ಮೊದಲೇ ತನ್ನ ಪತಿಗೆ ಕಿಡ್ನಿ ಸಮಸ್ಯೆ ಇತ್ತು. ಇದನ್ನು ಅವರು ಮುಚ್ಚಿಟ್ಟಿದ್ದರು. ಮದುವೆಯಾದ ಎರಡು ವರ್ಷಗಳ ನಂತರ ನನಗೆ ಈ ವಿಚಾರ ತಿಳಿಯಿತು. ಪ್ರಾರಂಭದಲ್ಲಿ ನಾನು ಅವರ ಬೇಡಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅವರು ನನ್ನ ಮೇಲೆ ನಿರಂತರ ಒತ್ತಡ ಹೇರಲು ಪ್ರಾರಂಭಿಸಿದರು. ನಾನು ಇದಕ್ಕೆ ನಿರಾಕರಿಸಿದಾಗ, ಅವರು ನನಗೆ ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರಗೆ ಹಾಕಿದರು ಎಂದು ಸೊಸೆ ದೂರಿನಲ್ಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎರಡು ಕುಟುಂಬಗಳ ಜೊತೆ ಸಂಧಾನ ನಡೆಸಲು ಮುಂದಾಗಿದ್ದಾರೆ. ಆದರೆ ಈ ಸಂಧಾನಕ್ಕೆ ಎರಡೂ ಕಡೆಯವರೂ ಒಪ್ಪದ ಕಾರಣ ಮುರಿದು ಬಿದ್ದಿದೆ.
ಘಟನೆಯ ಹಿನ್ನೆಲೆಯಲ್ಲಿ ಸೊಸೆ ದೀಪ್ತಿ ಈಗ ಪತಿಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ಆದರೆ ಪತಿ ಅವಳನ್ನು ಬಿಟ್ಟು ಹೋಗಲು ನಿರಾಕರಿಸಿದ್ದಾನೆ. ಇದಾದ ನಂತರ, ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯ ಪತಿ ಸೇರಿದಂತೆ ಆಕೆಯ ಅತ್ತೆ ಮಾವ ಹಾಗೂ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ ಎಂದು ಮುಜಫರ್‌ಪುರ ಗ್ರಾಮೀಣ ಎಸ್‌ಪಿ ವಿದ್ಯಾಸಾಗರ್ ಹೇಳಿದ್ದಾರೆ. ಈ ಬಗ್ಗೆ ಆಳವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲು ಮಾಡುವಂತೆ ತನಿಖಾಧಿಕಾರಿಯನ್ನು ಕೇಳಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
