ಎಷ್ಟ್ ಕಾಳ್ ಹಾಕಿದ್ರೂ ಒಂದ್ ಹಕ್ಕಿನೂ ಬುಟ್ಟಿಗೆ ಬಿದ್ದಿಲ್ಲ ಎಂದು ನೊಂದುಕೊಳ್ಳುತ್ತ, ವ್ಯಾಲೆಂಟೆನ್ಸ್ ಡೇ ಮತ್ತಿನಲ್ಲಿ ತೇಲಾಡುತ್ತಿರುವ ಸಿಂಗಲ್‍ನಿಂದ ಡಬಲ್‍ಗೆ ಪ್ರಮೋಷನ್ ಪಡೆದ ಸ್ನೇಹಿತರನ್ನು ನೋಡಿ ಹೊಟ್ಟೆಯುರಿ ಪಟ್ಟುಕೊಳ್ಳುತ್ತಿದ್ದೀರಾ? ಡೋಂಟ್ ವರಿ, ಬಿಟ್ಹಾಕಿ.ಒಂಟಿಯಾಗಿರೋದು ಬೋರ್ ಆದ್ರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತೆ ವೈದ್ಯವಿಜ್ಞಾನ. ಅರೇ,ಒಂಟಿಯಾಗಿರುವುದಕ್ಕೂ,ಆರೋಗ್ಯಕ್ಕೂ ಏನ್ ಸಂಬಂಧ ಅಂತೀರಾ? ಸಂಬಂಧವಿದೆ ಎನ್ನುತ್ತಾರೆ ತಜ್ಞರು.ಸಿಂಗಲ್ ಆಗಿರೋದ್ರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆಯಂತೆ.

ಪ್ರೀತಿ ಪ್ರೇಮ ಅಂದರೆ.... ಇವರು ಹೇಳ್ತಾರೆ ನೀವು ಮಾಡಿ!

ಕೆಲವರು ಬಟ್ಟೆ ಬದಲಾಯಿಸಿದಷ್ಟೇ ಸುಲಭವಾಗಿ ಸಂಗಾತಿಯನ್ನು ಬದಲಾಯಿಸುತ್ತ ಪ್ರತಿ ವ್ಯಾಲೆಂಟೆನ್ಸ್ ಡೇಯನ್ನು ಹೊಸ ಪ್ರೇಮಿಯೊಂದಿಗೆ ಸಂಭ್ರಮಿಸುತ್ತಾರೆ.ಇವರು ಒಂದು ದಿನವೂ ಒಂಟಿಯಾಗಿ ಇರುವುದಿಲ್ಲ.ಇಂಥವರನ್ನು ರಸಿಕರ ರಾಜ,ರೊಮ್ಯಾಂಟಿಕ್ ಹೀರೋ, ಫ್ಲರ್ಟ್ ಎಂದೆಲ್ಲ ಕರೆಯುತ್ತೇವೆ. ಅಷ್ಟೇ ಅಲ್ಲ,ಈ ರೀತಿ ಹೊಸ ಹೊಸ ಹಕ್ಕಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಇವರ ಟ್ಯಾಲೆಂಟ್ ನೋಡಿ ಹೊಟ್ಟೆಕಿಚ್ಚು ಪಡುತ್ತೇವೆ. ಆದರೆ,ಮನೋತಜ್ಞರ ಪ್ರಕಾರ ಇಂಥವರ ಹಕೀಕತ್ ಬೇರೆಯೇ ಇದೆ.ಇವರಿಗೆ ಒಂಟಿ ಒಂಟಿ ಆಗಿರುವುದು ಬೋರ್ ಮಾತ್ರವಲ್ಲ,ಸಿಕ್ಕಾಪಟ್ಟೆ ಭಯ ಹುಟ್ಟಿಸುವ ಸಂಗತಿಯೂ ಆಗಿದೆಯಂತೆ.

ಒಂಟಿಯಾಗಿರುವುದು ತಮ್ಮ ಜೀವನದ ಅತ್ಯಂತ ಕೆಟ್ಟ ಘಳಿಗೆಯೆಂದೇ ಭಾವಿಸುವ ಇವರು, ಸದಾ ಸಂಗಾತಿಯೊಂದಿಗಿರಲು ಬಯಸುತ್ತಾರೆ. ಸಂಗಾತಿ ಜೊತೆಗಿದ್ರೇನೆ ಇಂಥವರ ಮನಸ್ಸಿಗೆ ನೆಮ್ಮದಿ.ಇದೇ ಕಾರಣಕ್ಕೆ ಇವರು ಮಕರಂಧ ಹೀರಲು ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಜಂಪ್ ಮಾಡುತ್ತಲೇ ಇರುತ್ತಾರೆ.ಇವರಿಗೆ ಯಾರಾದರೂ ನನ್ನನ್ನು ಬಯಸಬೇಕು,ನನಗಾಗಿಯೇ ಅವರ ಹೃದಯ ಮಿಡಿಯುತ್ತಿರಬೇಕು ಎಂಬ ಬಯಕೆ. ಇವರು ಸಂಗಾತಿ ದಿನದ 24 ಗಂಟೆಯೂ ತನ್ನನ್ನು ಪ್ರೀತಿಸುವ ಜೊತೆಗೆ ಇಷ್ಟಕಷ್ಟಕ್ಕೆ ಗಮನ ನೀಡಬೇಕು ಎಂದು ಆಶಿಸುತ್ತಾರೆ.ಇಂಥ ಆಲೋಚನೆ, ವರ್ತನೆ ಮನೋವಿಜ್ಞಾನದ ಪ್ರಕಾರ ಅತ್ಯಂತ ಅಪಾಯಕಾರಿ.ಇಂಥ ಮನಸ್ಥಿತಿಯಿಂದಾಗಿ ವ್ಯಕ್ತಿ ತನ್ನ ಅಭಿರುಚಿಗೆ ಹೊಂದದ ರಾಂಗ್ ಪರ್ಸನ್ ಜೊತೆಗೆ ಸಂಬಂಧ ಬೆಳೆಸುವ ಸಾಧ್ಯತೆಯಿದೆ.ಇನ್ನು ಇಂಥ ವ್ಯಕ್ತಿಗಳ ಈ ವೀಕ್‍ನೆಸ್ ಅನ್ನೇ ಕೆಲವರು ಬಂಡವಾಳ ಮಾಡಿಕೊಂಡು ಅವರ ಭಾವನೆಗಳ ಜೊತೆಗೆ ಆಟವಾಡಬಹುದು.ಇಕ್ಕಟ್ಟಿಗೆ ಅಥವಾ ತೊಂದರೆಗೆ ಸಿಲುಕಿಸುವ ಸಾಧ್ಯತೆಯೂ ಇದೆ. 

ಅವನಿಗೆ ಗೊತ್ತಿಲ್ಲ, ಅವಳು ಹೇಳಲ್ಲ; ಇದೊಂದು ಕ್ಯೂಟ್‌ ಲವ್‌ ಸ್ಟೋರಿ!

ಇಂಥ ವ್ಯಕ್ತಿಗಳಿಗೆ ತಾವು ಮಾಡುವ ಪ್ರತಿ ಕೆಲಸಕ್ಕೂ ಸಂಗಾತಿಯ ಸಮ್ಮತಿ ಮುದ್ರೆ ಅಗತ್ಯ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಸಿದ್ಧಪಡಿಸುವ ಅಡುಗೆ ತನಕ ಪ್ರತಿಯೊಂದನ್ನು ಸಂಗಾತಿ ಹಾಡಿ ಹೊಗಳಿದರೇನೆ ಇವರಿಗೆ ನೆಮ್ಮದಿ. ಇಂದು ಯಾವ ಡ್ರೆಸ್ ಹಾಕೋದು ಎಂಬಲ್ಲಿಂದ ಹಿಡಿದು ಹೋಟೆಲ್‍ನಲ್ಲಿ ಫುಡ್ ಆರ್ಡರ್ ಮಾಡುವ ತನಕ ಪ್ರತಿ ವಿಷಯಕ್ಕೂ ಇವರು ಸಂಗಾತಿಯನ್ನು ಅವಲಂಬಿಸುತ್ತಾರೆ. ಈ ರೀತಿ ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಿಸಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇನ್ನೊಬ್ಬರ ಸಮ್ಮತಿಯನ್ನು ನಿರೀಕ್ಷಿಸುವ ಗುಣ ಅತ್ಯಂತ ಅಪಾಯಕಾರಿ ಎನ್ನುತ್ತಾರೆ ಮನೋವೈದ್ಯರು. ಇಂಥ ಪರಾವಲಂಬನೆ ಗುಣದ ಕಾರಣಕ್ಕೇ ಸಂಗಾತಿ ತೊರೆದು ಹೋಗಬಹುದು.ಅಲ್ಲದೆ, ಒಂದು ಸಂಬಂಧವನ್ನು ಅತಿಯಾಗಿ ಅವಲಂಬಿಸುವುದರಿಂದ ಸಂಗಾತಿ ಬಿಟ್ಟು ದೂರವಾದ ತಕ್ಷಣ ಸ್ವತಂತ್ರವಾಗಿ ಬದುಕಲು ಕಷ್ಟವಾಗಬಹುದು.

ಬದುಕಿನಲ್ಲಿ ಸದಾ ಜೋಡಿಯೊಂದನ್ನು ಬಯಸುವ ವ್ಯಕ್ತಿಗಳಿಗೆ ಎಷ್ಟೆಲ್ಲ ತಾಪತ್ರಯಗಳು ಎದುರಾಗಬಹುದು ಎಂಬುದು ಗೊತ್ತಾಯ್ತಲ್ಲ. ಅದೇ ಸಿಂಗಲ್ ಆಗಿದ್ರೆ ಇಂಥ ಯಾವುದೇ ತಲೆನೋವು ಇಲ್ಲ ಎನ್ನುತ್ತಾರೆ ಮನೋತಜ್ಞರು.ಸಿಂಗಲ್ ಆಗಿರೋದ್ರಿಂದ ಎಲ್ಲ ಕೆಲಸಗಳನ್ನು ಅವರೇ ಸ್ವತಂತ್ರವಾಗಿ ಮಾಡುತ್ತಾರೆ.ನಿರ್ಧಾರಗಳನ್ನು ಕೈಗೊಳ್ಳುವಾಗಲು ಸ್ವತಂತ್ರವಾಗಿ ಯೋಚಿಸಿ ಮುಂದುವರಿಯುತ್ತಾರೆ.ಇದರಿಂದ ಸಹಜವಾಗಿಯೇ ಇವರಲ್ಲಿ ಪ್ರೌಢಿಮೆ,ಆತ್ಮವಿಶ್ವಾಸ,ಛಲ ಎಲ್ಲವೂ ಬೆಳೆಯುತ್ತದೆ.ಜೀವನದಲ್ಲಿ ಕಷ್ಟಗಳು ಎದುರಾದಾಗ ಹೇಗೆ ಫೇಸ್ ಮಾಡ್ಬೇಕು ಎಂಬುದು ಇವರಿಗೆ ತಿಳಿದಿರುತ್ತದೆ. ಒಟ್ಟಾರೆ ಹೇಳೋದಾದ್ರೆ ಇವರು ಭಾವನಾತ್ಮಕವಾಗಿ ಸ್ವತಂತ್ರರು ಹಾಗೂ ಬಲಿಷ್ಠರೂ ಆಗಿರುತ್ತಾರೆ. ಅಷ್ಟೇ ಅಲ್ಲ, ಸಿಂಗಲ್ ಆಗಿರೋದ್ರಿಂದ ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೆಚುರಿಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಸಂಗಾತಿಯನ್ನು ಆರಿಸಿಕೊಳ್ಳಲು ನೆರವು ನೀಡುತ್ತದೆ.

ಅಷ್ಟಕ್ಕೂ ಈ ಲವ್, ಲವ್ ಅಂತಾರಲ್ಲ, ಹಂಗಂದ್ರೆ ಏನು?

ನಿಮ್ಮನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಾಗ ಮಾತ್ರ ಇನ್ನೊಬ್ಬರನ್ನು ಸಮರ್ಥವಾಗಿ ಜಡ್ಜ್ ಮಾಡಲು ಸಾಧ್ಯವಾಗುತ್ತದೆ.ನಿಮ್ಮ ಅಗತ್ಯ ಹಾಗೂ ನಿರೀಕ್ಷೆಗಳ ಬಗ್ಗೆ ನಿಮಗೆ ಸ್ಪಷ್ಟತೆಯಿದ್ದಾಗ ಇನ್ನೊಬ್ಬ ವ್ಯಕ್ತಿಯನ್ನು,ಆತನ ವರ್ತನೆಯ ಹಿಂದಿನ ಕಾರಣವನ್ನು ನೀವು ಸರಿಯಾಗಿ ಗ್ರಹಿಸುತ್ತೀರಿ. ಸೋ, ಸಿಂಗಲ್ ಆಗಿರುವ ಜೀವಗಳೇ, ವ್ಯಾಲೆಂಟೆನ್ಸ್ ಡೇ ಸಂಭ್ರಮಾಚರಣೆಗೆ ಜೋಡಿಹಕ್ಕಿಯಿಲ್ಲವೆಂದು ರೋಧಿಸಬೇಡಿ,ಭವಿಷ್ಯದಲ್ಲಿ ನಿಮ್ಮ ಯೋಗ್ಯತೆ ತಕ್ಕ ಹಕ್ಕಿಯೊಂದು ಗೂಡು ಸೇರುತ್ತದೆ.ಆ ಭರವಸೆಯಲ್ಲೇ ಸಿಂಗಲ್ ಆದ್ರೂ ಎಲ್ಲರೊಂದಿಗೂ ಮಿಂಗಲ್ ಆಗಿ ಪ್ರೇಮಿಗಳ ದಿನ ಆಚರಿಸಿ.