ಬೆಂಗಳೂರಿನ ಅಂಜನಾನಗರದಲ್ಲಿ ಪ್ರೀತಿಯ ಹೆಸರಿನಲ್ಲಿ ಘೋರ ದುರಂತ ಸಂಭವಿಸಿದೆ. 'ವೆಸ್ಟರ್ನ್ ಸ್ಟೈಲ್' ಪ್ರಪೋಸಲ್ ನೆಪದಲ್ಲಿ ಯುವಕ ಕಿರಣ್‌ನನ್ನು ಕೈಕಾಲು ಕಟ್ಟಿ, ಪೆಟ್ರೋಲ್ ಸುರಿದು ಆತನ ಪ್ರೇಯಸಿ ಪ್ರೇಮಾ ಜೀವಂತವಾಗಿ ದಹಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಬೆಂಗಳೂರು (ಏ.21): ಸಿಲಿಕಾನ್ ಸಿಟಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾನಗರದಲ್ಲಿ ಇಂದು ಮಧ್ಯಾಹ್ನ ಮನಕಲಕುವ ಘಟನೆಯೊಂದು ನಡೆದಿದೆ. ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬನನ್ನು ನಂಬಿಸಿ, ಆತನ ಕೈಕಾಲು ಕಟ್ಟಿ ಪೆಟ್ರೋಲ್ ಸುರಿದು ಜೀವಂತವಾಗಿ ದಹಿಸಿದ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ಮೊದಲು ಯುವಕ ಕಿರಣ್‌ ಸ್ವತಣ ತಾನೇ ಬೆಂಕಿ ಹಚ್ಚಿಕೊಂಡು ಸತ್ತಿದ್ದಾನೆ ಎಂದು ವರದಿಯಾಗಿತ್ತಾದರೂ, ಈ ಕೇಸ್‌ಗೆ ಈಗ ಟ್ವಿಸ್ಟ್‌ ಸಿಕ್ಕಿದ್ದು, ವೊಡಾಫೋನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬ ಯುವಕನ ಕೈಕಾಲು ಕಟ್ಟಿ ಸ್ವತಃ ಆತನ ಪೇಯಸಿ ಪ್ರೇಮಾ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಪೋಸ್ ನೆಪದಲ್ಲಿ ನಡೆದ ಭೀಕರ ಸ್ಕೆಚ್

ಕಿರಣ್ ಮತ್ತು ಆರೋಪಿ ಯುವತಿ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಕಿರಣ್ ತನ್ನ ಪ್ರಿಯತಮೆಯ ಮನೆಗೆ ಬಂದಿದ್ದ. ಮನೆಯಲ್ಲಿ ತಾಯಿ ಮತ್ತು ಅಣ್ಣ ಇಲ್ಲದ ಸಮಯ ನೋಡಿ ಯುವತಿಯೇ ಆತನನ್ನು ಬರಮಾಡಿಕೊಂಡಿದ್ದಳು.

ಮೂಲಗಳ ಪ್ರಕಾರ, ಪ್ರೇಮಾ ತಾನು "ವೆಸ್ಟರ್ನ್ ಸ್ಟೈಲ್" (ವಿದೇಶಿ ಶೈಲಿ) ನಲ್ಲಿ ಪ್ರಪೋಸ್ ಮಾಡುವುದಾಗಿ ಕಿರಣ್ ನನ್ನು ನಂಬಿಸಿದ್ದಳು. ಈ ಪ್ರಕ್ರಿಯೆಯ ಭಾಗವಾಗಿ ಕಿರಣ್ ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಳು. ಕಿರಣ್ "ಯಾಕಿಷ್ಟು ಟೈಟ್ ಆಗಿ ಹಗ್ಗ ಕಟ್ಟುತ್ತಿದ್ದೀಯಾ?" ಎಂದು ಕೇಳಿದಾಗ, "ಇದು ಫಾರಿನ್ ಸ್ಟೈಲ್" ಎಂದು ಹೇಳಿ ಆತನನ್ನು ಮೌನವಾಗಿಸಿದ್ದಳು ಎನ್ನಲಾಗಿದೆ.

ಕೊಲೆ ಆರೋಪಿ ಪ್ರೇಮಾ

ಸ್ಪರ್ಶ ಸುಖದ ಆಮಿಷ... ಆಮೇಲೆ ಪೆಟ್ರೋಲ್ ದಾಳಿ!

ಪೊಲೀಸ್ ತನಿಖೆಯ ಮಾಹಿತಿಯಂತೆ, ಯುವತಿಯು ಕಿರಣ್ ನ ಬಟ್ಟೆ ತೆಗೆದು ಆತನಿಗೆ ಸ್ಪರ್ಶ ಸುಖ ನೀಡುವ ನಾಟಕವಾಡಿದ್ದಾಳೆ. ಕಿರಣ್ ಹಗ್ಗದಿಂದ ಬಂಧಿತನಾಗಿ ಅಸಹಾಯಕನಾಗಿದ್ದನ್ನು ಬಳಸಿಕೊಂಡ ಯುವತಿ, ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಪೆಟ್ರೋಲ್ ಅನ್ನು ಆತನ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಅತ್ಯಂತ ಕ್ರೂರ ಸಂಗತಿಯೆಂದರೆ, ಕಿರಣ್ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ನರಳಾಡುತ್ತಿದ್ದ ದೃಶ್ಯವನ್ನು ಯುವತಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಯುವತಿಯ ಉಲ್ಟಾ ಹೊಡೆದ ಹೇಳಿಕೆ

ಘಟನೆಯ ನಂತರ ಯುವತಿಯು ಪೊಲೀಸರ ಮುಂದೆ ಹಳಿ ತಪ್ಪಿಸುವ ಹೇಳಿಕೆ ನೀಡಲು ಯತ್ನಿಸಿದ್ದಾಳೆ. "ನಾನು ಟಾಯ್ಲೆಟ್‌ನಲ್ಲಿದ್ದೆ, ಆಗ ದಿಢೀರನೆ ಬೆಂಕಿಯ ಸದ್ದು ಕೇಳಿಸಿತು. ಹೊರಗೆ ಬಂದು ನೋಡಿದಾಗ ಆತ ಬೆಂಕಿ ಹಚ್ಚಿಕೊಂಡಿದ್ದ" ಎಂದು ಹೇಳಿದ್ದಳು. ಆದರೆ, ಕಿರಣ್ ಬೈಕ್‌ನಲ್ಲಿ ಬಂದಾಗ ಯಾವುದೇ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎಂಬುದು ಸಿಸಿಟಿವಿ ಮತ್ತು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಯುವತಿಯೇ ಪೆಟ್ರೋಲ್ ರೆಡಿ ಮಾಡಿಕೊಂಡಿದ್ದಳು ಎಂಬ ಸಂಶಯಕ್ಕೆ ಬಲ ಬಂದಿದೆ.

ಪೊಲೀಸ್ ಕಾರ್ಯಾಚರಣೆ

ಘಟನಾ ಸ್ಥಳಕ್ಕೆ ಎಸಿಪಿ ಅಶೋಕ್ ಮತ್ತು ಇನ್ಸ್‌ಪೆಕ್ಟರ್ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ಅಸಲಿ ಕಾರಣವೇನು? ಪ್ರೀತಿಯಲ್ಲಿ ವೈಮನಸ್ಸು ಇತ್ತೇ ಅಥವಾ ಇದು ಪೂರ್ವನಿಯೋಜಿತ ಸಂಚೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.