Social media controversy viral video today: ಸೋಶಿಯಲ್ ಮೀಡಿಯಾ ಜಮಾನದಲ್ಲಿ ದಿನಕ್ಕೊಂದು ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಇಂಟರ್ನೆಟ್‌ಗೆ ಲಗ್ಗೆ ಇಟ್ಟಿರುವ ವಿಡಿಯೋವೊಂದು ಇಡೀ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.

ಹಿಂದೂ ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ಪಿತೃಕಾರ್ಯ ಅಥವಾ ಮರಣ ಹೊಂದಿದ ಹಿರಿಯರಿಗೆ ಮಾಡುವ ತಿಥಿ, ಶ್ರಾದ್ಧ ಮತ್ತು ಆರಾಧನೆಗಳಿಗೆ ನಮ್ಮ ಸಮಾಜದಲ್ಲಿ ಅತ್ಯಂತ ವಿಶೇಷವಾದ ಪ್ರಾಮುಖ್ಯತೆ ಇದೆ. ಅಗಲಿದ ಪೋಷಕರನ್ನು ಹಾಗೂ ಹಿರಿಯರನ್ನು ಭಕ್ತಿಯಿಂದ ಸ್ಮರಿಸುತ್ತಾ, ಅವರಿಗೆ ಬದುಕಿದ್ದಾಗ ಇಷ್ಟವಾಗುತ್ತಿದ್ದ ಬಗೆಬಗೆಯ ಅಡುಗೆಗಳು ಮತ್ತು ಆಹಾರ ಪದಾರ್ಥಗಳನ್ನು ಅತ್ಯಂತ ಭಕ್ತಿಶ್ರದ್ಧೆಗಳಿಂದ ನೈವೇದ್ಯವಾಗಿ ಅರ್ಪಿಸುವುದು ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯಯಾಗಿದೆ. ಸಾಮಾನ್ಯವಾಗಿ ಇಂತಹ ದಿನಗಳಲ್ಲಿ ಹಣ್ಣುಗಳು, ಪಾಯಸ, ಲಡ್ಡು ಅಥವಾ ಅವರು ಇಷ್ಟಪಟ್ಟು ಊಟ ಮಾಡುತ್ತಿದ್ದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳನ್ನು ನೈವೇದ್ಯವಾಗಿ ಎಡೆ ಇಡುವುದು ವಾಡಿಕೆ. ಆದರೆ, ಇತ್ತೀಚೆಗೆ ಯುವತಿಯೊಬ್ಬಳು ತನ್ನ ದಿವಂಗತ ತಂದೆಯ ತಿಥಿ ಆಚರಣೆಯ ಸಂದರ್ಭದಲ್ಲಿ ಸಲ್ಲಿಸಿದ ವಿಚಿತ್ರ ನೈವೇದ್ಯವೊಂದು ಇಡೀ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿವಾದ ಹಾಗೂ ಪರ-ವಿರೋಧದ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ವಿಡಿಯೋದಲ್ಲೇನಿದೆ?

ಪ್ರಸ್ತುತ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಸಾಂಪ್ರದಾಯಿಕವಾಗಿ ಸೀರೆ ಉಟ್ಟುಕೊಂಡಿರುವ ಯುವತಿಯೊಬ್ಬಳು ತನ್ನ ತಂದೆಯ ಫೋಟೋಗೆ ಭಕ್ತಿಯಿಂದ ಪೂಜೆ ಮಾಡುತ್ತಿರುವುದನ್ನು ನಾವು ಕಾಣಬಹುದು. ಅಲ್ಲಿ ಒಂದು ಮಣೆಯ ಮೇಲೆ ತಂದೆಯ ಫೋಟೋ ಇರಿಸಿ, ಅದಕ್ಕೆ ಸುಂದರವಾದ ಹೂವಿನ ಹಾರ ಹಾಕಿ, ಸುತ್ತಲೂ ಹಣ್ಣುಗಳು, ವಿವಿಧ ಬಗೆಯ ಸ್ವೀಟ್‌ಗಳು ಹಾಗೂ ಸಾಂಪ್ರದಾಯಿಕ ಭೋಜನದ ತಟ್ಟೆಗಳನ್ನು ನೈವೇದ್ಯವಾಗಿ ಸಿದ್ಧಪಡಿಸಿ ಇಡಲಾಗಿದೆ. ವಿಡಿಯೋ ಕೊನೆವರೆಗೂ ಎಲ್ಲವೂ ಸರಿಯಿತ್ತು. ಎಲ್ಲರ ಮನೆಯಲ್ಲಿ ನಡೆಯುವ ಪೂಜೆಯಂತೆಯೇ ಸಾಂಪ್ರದಾಯಿಕವಾಗಿ ಇತ್ತು. ಆದರೆ ಆ ನಂತರ ನಡೆದ ದೃಶ್ಯವೇ ನೆಟ್ಟಿಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಆ ಯುವತಿ ಒಂದು ಸಿಗರೇಟ್ ಅನ್ನು ತನ್ನ ಕೈಗೆ ತೆಗೆದುಕೊಂಡು, ಬಾಯಲ್ಲಿಟ್ಟು ಹೊಚ್ಚಿ ಅದರಿಂದ ಹೊಗೆ ಬರುತ್ತಿರುವಾಗಲೇ ತಂದೆಯ ಫೋಟೋ ಮುಂದಿರುವ ನೈವೇದ್ಯದ ತಟ್ಟೆಯಲ್ಲಿ ಅತ್ಯಂತ ಭಕ್ತಿಯಿಂದ ತಂದು ಇಡುತ್ತಾಳೆ. ಬಳಿಕ ಆಕೆ ತುಂಬಾ ಸಾಮಾನ್ಯವಾಗಿ ತಂದೆಗೆ ಕೈಮುಗಿದು ನಮಸ್ಕರಿಸುತ್ತಾ ತನ್ನ ಪೂಜೆಯನ್ನು ಮುಗಿಸುತ್ತಾಳೆ. ಈ ವಿಡಿಯೋದ ಹಿನ್ನೆಲೆಯಲ್ಲಿ ಒಂದು ಭಕ್ತಿಗೀತೆ ಕೇಳಿಬರುತ್ತಿರುವುದು ಈ ವಿಚಿತ್ರ ದೃಶ್ಯವನ್ನು ನೋಡುಗರಿಗೆ ಮತ್ತಷ್ಟು ವಿಚಿತ್ರವಾಗಿ ಮತ್ತು ಕೌತುಕವಾಗಿ ಕಾಣುವಂತೆ ಮಾಡಿದೆ. ಇದರ ಜೊತೆಗೆ ಆಕೆ ಆ ವಿಡಿಯೋದ ಮೇಲೆ ಬರೆದಿರುವ ಅಡಿಬರಹ (ಕ್ಯಾಪ್ಷನ್) ಕೂಡ ಜನರ ಗಮನ ಸೆಳೆದಿದೆ. ಆಕೆ ವಿಡಿಯೋದಲ್ಲಿ, "ಅಪ್ಪ.. ನೀನು ಮೇಲೆ ರಂಭೆ, ಊರ್ವಶಿ, ಮೇನಕೆಯರ ಜೊತೆ ಸಖತ್ ಆಗಿ ಸಂತೋಷವಾಗಿರಬಹುದು. ಅಷ್ಟೇ ಅಲ್ಲದೆ, ಬಹುಶಃ ನೀನು ಅವರಿಗೆ ಅಲ್ಲಿ ಫೆಮಿನಿಸಂ ಬಗ್ಗೆ ಬೋಧನೆ ಮಾಡುತ್ತಿರಬಹುದು" ಎಂದು ಬರೆದುಕೊಂಡಿದ್ದಾಳೆ. ಈ ಸಾಲುಗಳು ಕೆಲವರಿಗೆ ನಗು ತರಿಸಿದರೆ, ಇನ್ನು ಕೆಲವರಿಗೆ ತೀವ್ರ ಸಿಟ್ಟು ತರಿಸಿದೆ.

ಪರ-ವಿರೋಧ ಚರ್ಚೆ

ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗೆ ಶೇರ್ ಆದ ಕೆಲವೇ ಕ್ಷಣಗಳಲ್ಲಿ ನೆಟ್ಟಿಗರು ಭಿನ್ನವಾದ ಅಭಿಪ್ರಾಯಗಳೊಂದಿಗೆ ಇದರ ಮೇಲೆ ಮುಗಿಬಿದ್ದಿದ್ದಾರೆ. ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುವ ಬಹುತೇಕ ಜನರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. "ಜನರಿಗೆ ದಿನೇ ದಿನೇ ಹುಚ್ಚು ಹೆಚ್ಚಾಗುತ್ತಿದೆ. ಕನಿಷ್ಠ ಸಂಸ್ಕಾರ, ಸಂಸ್ಕೃತಿ ಮತ್ತು ವಿವೇಚನೆ ಇಲ್ಲದೆ ಪವಿತ್ರವಾದ ಪೂಜಾ ಸ್ಥಳದಲ್ಲಿ ಸಿಗರೇಟ್ ಹಚ್ಚಿ ನೈವೇದ್ಯ ಇಡುವುದು ಎಂತಹ ಮೂರ್ಖತನ? ಕೇವಲ ಇಂಟರ್ನೆಟ್‌ನಲ್ಲಿ ಲೈಕ್ಸ್ ಮತ್ತು ವ್ಯೂಸ್‌ ಗಿಟ್ಟಿಸಿಕೊಳ್ಳಲು ಇಂತಹ ಗಿಮಿಕ್‌ ಹಾಗೂ ಸ್ಟಂಟ್‌ಗಳನ್ನು ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ. ಪೂಜಾ ಮನೆಯಲ್ಲಿ ಇಂತಹ ತಂಬಾಕು ಉತ್ಪನ್ನಗಳನ್ನು ಇಡುವುದು ಮನೆಗೆ ಅನಿಷ್ಟ ತರುತ್ತದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಆದರೆ ಈ ಎಲ್ಲಾ ಕಾಮೆಂಟ್‌ಗೆ ಭಿನ್ನವಾಗಿ ಕೆಲವು ನೆಟ್ಟಿಗರು ಯುವತಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. "ಮರಣ ಹೊಂದಿದ ವ್ಯಕ್ತಿಗೆ ಅವರು ಬದುಕಿದ್ದಾಗ ಯಾವ ಹವ್ಯಾಸವಿತ್ತೋ, ಅವರಿಗೆ ಯಾವ ವಸ್ತು ಇಷ್ಟವಿತ್ತೋ ಅದನ್ನೇ ಅವರ ತಿಥಿಯ ದಿನ ನೈವೇದ್ಯವಾಗಿ ಅರ್ಪಿಸುವುದು ಕೆಲವು ಕುಟುಂಬಗಳ ವೈಯಕ್ತಿಕ ನಂಬಿಕೆಯಾಗಿರುತ್ತದೆ. ಇದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಇಲ್ಲಿ ತಂದೆಯ ಮೇಲಿರುವ ಮಗಳ ನಿಷ್ಕಲ್ಮಷ ಪ್ರೀತಿ ಮುಖ್ಯವೇ ಹೊರತು ಅಲ್ಲಿಟ್ಟ ವಸ್ತು ಒಳ್ಳೆಯದೇ ಅಥವಾ ಕೆಟ್ಟದ್ದೇ ಎನ್ನುವುದಲ್ಲ. ಅದು ಸಂಪೂರ್ಣವಾಗಿ ಅವಳ ವೈಯಕ್ತಿಕ ವಿಷಯ" ಎಂದು ಯುವತಿಯನ್ನು ಬೆಂಬಲಿಸಿದ್ದಾರೆ. ಒಟ್ಟಿನಲ್ಲಿ ಈ 'ಸಿಗರೇಟ್ ನೈವೇದ್ಯ'ದ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ್ದು, ಸಾಂಪ್ರದಾಯಿಕ ಪದ್ಧತಿ ವರ್ಸಸ್ ವೈಯಕ್ತಿಕ ನಂಬಿಕೆಗಳ ನಡುವಿನ ಒಂದು ದೊಡ್ಡ ವೈಚಾರಿಕ ಯುದ್ಧಕ್ಕೇ ದಾರಿ ಮಾಡಿಕೊಟ್ಟಿದೆ.

ಇಲ್ಲಿದೆ ನೋಡಿ ವಿಡಿಯೋ 

Scroll to load tweet…