ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ಉದ್ಯೋಗಿ ಭುವನೇಶ್ವರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತಿ ಸೆಲ್ವ ಬಾಲಮುರುಗನ್ ಸೇರಿದಂತೆ ಏಳು ಮಂದಿ ವಿರುದ್ಧ ಪೊಲೀಸರು 495 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಬೆಂಗಳೂರು: ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಬ್ಯಾಂಕ್ ಉದ್ಯೋಗಿ ಪತ್ನಿಯನ್ನು ರಸ್ತೆಯಲ್ಲಿಯೇ ಗುಂಡಿಕ್ಕಿ ಪತಿ ಹತ್ಯೆಗೈದ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಮಾಗಡಿ ಠಾಣೆ ಪೊಲೀಸರು ಏಳು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 495 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
2025ರ ಡಿ.23ರಂದು ಪತ್ನಿ ಭುವನೇಶ್ವರಿ (39) ಎಂಬುವರ ಹತ್ಯೆ ಮಾಡಿದ ಆರೋಪದಡಿ ತಮಿಳುನಾಡು ಮೂಲದ ಪತಿ ಸೆಲ್ವ ಬಾಲಮುರುಗನ್ ಈತನ ಸಹಚರರಾದ ಅಭಿಮನ್ಯು ಸಿಂಗ್, ಮೌಲೇಶ್ ಕುಮಾರ್, ಪೆರಿಯಾಸ್ವಾಮಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ರಾಹುಲ್, ಹರೀಶ್ ಮತ್ತು ಸೂರ್ಯ ತಲೆಮರೆಸಿಕೊಂಡಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭುವನೇಶ್ವರಿ ಖಾಸಗಿ ಬ್ಯಾಂಕ್‌ನಲ್ಲಿ ಅಸ್ಟಿಸೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವೈಟ್‌ಫೀಲ್ಡ್ ಬಳಿ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಪತಿ ಬಾಲಮುರುಗನ್ 13 ವರ್ಷಗಳ ಹಿಂದೆ ಭುವನೇಶ್ವರಿಯನ್ನು ಮದುವೆಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಮಧ್ಯೆ ವಿಚ್ಛೇದನ ಕೋರಿ, ಪತಿಗೆ ನೋಟಿಸ್ ಕಳುಹಿಸಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು.
ಪತ್ನಿಯ ಮೇಲೆ ಸಂಶಯ
ಪತ್ನಿಯು ವಿವಾಹೇತರ ಸಂಬಂಧ ಹೊಂದಿರುವುದಾಗಿ ಪತಿ ಸಂಶಯ ಹೊಂದಿದ್ದನು. ಈ ಕಾರಣದಿಂದ ಡಿ.23ರಂದು ಸಂಜೆ ನಡುರಸ್ತೆಯಲ್ಲಿ ಪತ್ನಿ ಮೇಲೆ ಮೂರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಮಾಗಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದನು.
ಇದನ್ನೂ ಓದಿ: ಪೂಜೆ ಮಾಡಿ ಹೊಸ್ತಿಲು ಮೇಲೆ ಇಟ್ಟಿದ್ದ ಹೂ 6 ತಿಂಗಳ ಕಂದಮ್ಮನ ಉಸಿರಾಟ ನಿಲ್ಲಿಸ್ತು! ತಾಯಂದಿರೇ ಈ ತಪ್ಪು ಮಾಡ್ಬೇಡಿ!
ಹತ್ಯೆಗೆ ₹1ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ..ಆದ್ರೇ..!
ಪತ್ನಿಯು ಅಕ್ರಮ ಸಂಬಂಧ ಹೊಂದಿರುವುದಾಗಿ ಅನುಮಾನದಿಂದ ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ತಮಿಳುನಾಡು ಮೂಲದ ರೌಡಿ ಮೌಲೇಶ್ ಕುಮಾರ್ ಹಾಗೂ ಪೆರಿಯಾಸ್ವಾಮಿಗೆ 1 ಲಕ್ಷ ರು.ಗೆ ಸುಪಾರಿ ನೀಡಿದ್ದ. ಆದರೆ, ಆರೋಪಿಗಳು ಸರಿಯಾದ ಸಮಯಕ್ಕೆ ಕೆಲಸ ಮಾಡಿರಲಿಲ್ಲ. ಬಳಿಕ ವಾರಣಾಸಿ ಮೂಲದ ಅಭಿಮನ್ಯು ಸಿಂಗ್ ನೆರವಿನಿಂದ ಬಿಹಾರದಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಖರೀದಿಸಿದ್ದ. ಪಿಸ್ತೂಲ್‌ನಿಂದ ಹತ್ಯೆ ವಿಫಲವಾದರೆ ಚಾಕುವಿನಿಂದ ಹತ್ಯೆಗೆ ಸಂಚು ಮಾಡಿದ್ದ. ಅದಕ್ಕಾಗಿ ಒಂದು ತಿಂಗಳ ಹಿಂದೆ ಚಾಕು ಖರೀದಿಸಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಉದ್ಯೋಗಕ್ಕೆ ಬೆಂಗಳೂರಿಗೆ ಬಂದು ವೇಶ್ಯಾವಾಟಿಕೆಗೆ ಸಿಲುಕಿದ ಥಾಯ್ ಯುವತಿ, ಸ್ವದೇಶಕ್ಕೆ ಕಳಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ


