Asianet Suvarna News Asianet Suvarna News

ಒಬ್ಬರಿಗೆ ಕಮಿಟ್ ಆದ ಮೇಲೂ ಮತ್ತೊಬ್ಬರ ಮೇಲೆ ಕ್ರಶ್ ಆಯ್ತಾ?

ನಿಮಗೆ ನಿಮ್ಮ ಸಂಗಾತಿ ಮೇಲೆ ಪ್ರೀತಿಯಿದೆ, ಸಂಬಂಧವೂ ಚೆನ್ನಾಗಿದೆ. ಆದರೆ, ಆಗಾಗ ಒಮ್ಮೊಮ್ಮೆ ಬೇರೆ ವ್ಯಕ್ತಿಯ ಬಗ್ಗೆ ಆಕರ್ಷಣೆ ಹುಟ್ಟುತ್ತದೆ. ಅವರ ಬಗ್ಗೆ ಕೆಲ ಕಾಲ ಕಲ್ಪನೆಯಲ್ಲೂ ತೇಲುತ್ತೀರಿ. ಇಂಥ ಅನುಭವ ಆಗುತ್ತಿದ್ರೆ ಅದು ಸಹಜನಾ?

Are you attracted to someone while being in a relationship
Author
Bangalore, First Published Aug 17, 2020, 1:01 PM IST

ಒಮ್ಮೆ ಕಮಿಟ್ ಆದ್ರೆ ಏಳೇಳು ಜನ್ಮಕ್ಕೂ ಅವರನ್ನೇ ಸಂಗಾತಿಯಾಗಿ ಬಯಸೋವಂಥ ಸತಿ ಸಾವಿತ್ರಿಯರು, ಪತಿ ಮಹಾಶಯರು ಆದರ್ಶರ ಪಟ್ಟಿಯಲ್ಲಿದ್ದಾರೆ. ಪತಿ ಅಥವಾ ಪತ್ನಿ ಬಹಳ ಪ್ರೀತಿಸುತ್ತಿದ್ದರೆ ಅವರೂ ಕೂಡಾ ಹೀಗೇ ಬಯಸುತ್ತಾರೆ ಎಂದು ಅವರ ಸಂಗಾತಿ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರು ಜನ್ಮಾಂತರಗಳ ಮಾತ್ಯಾಕೆ, ಇದೊಂದು ಜನ್ಮದಲ್ಲಿ ನನಗೆ ಈಕೆ/ಈತ ಪ್ರಾಮಾಣಿಕವಾಗಿದ್ದರೆ ಸಾಕು ಎಂದು ಬಯಸುತ್ತಾರೆ. ಒಬ್ಬರಿಗೆ ಕಮಿಟ್ ಆದ ಮೇಲೆ ನಿಮ್ಮೆಲ್ಲ ರೊಮ್ಯಾಂಟಿಕ್ ಫೀಲಿಂಗ್ಸ್ ಅವರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂಬುದೊಂದು ಸಾಮಾನ್ಯ ನಂಬಿಕೆ. ಆದರೆ, ನಿಮಗೆ ಗೊತ್ತಾ, ಬಹುತೇಕರು ಒಬ್ಬರೊಂದಿಗೆ ಕಮಿಟ್ ಆದ ಮೇಲೂ ಆಗಾಗ ಇನ್ನೊಬ್ಬರೆಡೆಗೆ ಆಕರ್ಷಿತರಾಗುತ್ತಾರೆ. ಒಬ್ಬರೊಂದಿಗೆ 10 ವರ್ಷ ಸಂಸಾರ ಮಾಡಿದ ಮೇಲೂ ಮತ್ತೊಬ್ಬರ ಬಗ್ಗೆ ಕ್ಷಣಿಕ ಕಾಲಕ್ಕಾದರೂ ಕನಸು ಕಾಣುತ್ತಾರೆ. ಇದು ಮೈಕ್ರೋ ಚೀಟಿಂಗಾ? ಹೀಗೆ ಮಾಡುವುದು ತಪ್ಪಾ ?

ಇಂಥ ಗಂಡನ ಜೊತೆ ಏಗೋದು ಕಷ್ಟ!

ಸಾಮಾನ್ಯವಾಗಿ ಹಳೆಯ ಸ್ನೇಹಿತರು, ಸೋಷ್ಯಲ್ ಮೀಡಿಯಾ ವೇದಿಕೆ ಮೂಲಕ ಪರಿಚಿತರಾದವರು, ಪತಿ ಅಥವಾ ಪತ್ನಿಯ ಸ್ನೇಹಿತರು, ಜಿಮ್ ಅಥವಾ ಹೊಸತೇನೋ ಕಲಿಯಲು ಹೋದಲ್ಲಿ ಪರಿಚಯವಾದವರ ಮೇಲೆ ಹೀಗೆ ಕ್ರಶ್ ಆಗಬಹುದು. ಹೀಗಾದ ಕೂಡಲೇ ಮನಸ್ಸು ಎಚ್ಚರಿಸುತ್ತದೆ ನೀನು ಮಾಡುತ್ತಿರುವುದು ತಪ್ಪೆಂದು. ಸ್ವಲ್ಪ ಕಾಲಕ್ಕೆ ಕನಸು ಕಾಣುವುದು ತಪ್ಪಲ್ಲ. ಆದರೆ, ಆ ಭಾವನೆಗಳು ಸರಾಗವಾಗಿ ಮುಂದುವರಿಯಲು ಬಿಡುವುದರಿಂದ ನಿಧಾನವಾಗಿ ತಪ್ಪಿಗೆ ಎಡೆ ಮಾಡಿಕೊಟ್ಟಂತಾಗಬಹುದು. ಅಂದರೆ ತಪ್ಪು ಮಾಡುವುದು ಬಿಡುವುದು ಅವರವರ ಕೈಲೇ ಇರುತ್ತದೆ. 

ನೀವು ಈ ಭಾವನೆಗಳನ್ನು ಎಂಜಾಯ್ ಮಾಡುತ್ತಾ ಮತ್ತಷ್ಟು ಬೆಳೆಸುತ್ತಾ ಸಾಗುತ್ತೀರಾ? ಇದನ್ನು ನಿಮ್ಮ ಸಂಗಾತಿಯಿಂದ ಮುಚ್ಚಿಡುತ್ತೀರಾ ? ಇದರಿಂದಾಗಿ ನಿಮ್ಮ ಈಗಿನ ಸಂಬಂಧದ ಬಗ್ಗೆ ಮತ್ತೊಮ್ಮೆ ಯೋಚಿಸಲು ಶುರು ಮಾಡಿದ್ದೀರಾ? ಈ ಮತ್ತೊಬ್ಬ ವ್ಯಕ್ತಿಯನ್ನು ಮತ್ತೆ ಮತ್ತೆ ಭೇಟಿ ಮಾಡಲು, ಮಾತನಾಡಲು ಬಯಸುತ್ತೀರಾ?
ಈ ಎಲ್ಲ ಪ್ರಶ್ನೆಗಳಿಗೂ ನಿಮ್ಮ ಉತ್ತರ ಎಸ್ ಎಂದಾದರೆ ಖಂಡಿತಾ ನೀವು ಮಾಡುತ್ತಿರುವುದು ತಪ್ಪೇ. ಇಲ್ಲ ಎಂದಾದಲ್ಲಿ ನಿಮಗಾದ ಕ್ರಶ್ ಬಗ್ಗೆ ಚಿಂತಿಸುವ ಪ್ರಮೇಯವೇ ಇಲ್ಲ. ಅದೊಂದು ಮುಗ್ಧವಾದ ಚೆಂದದ ಫೀಲಿಂಗ್ ಅಷ್ಟೇ ಎಂದು ಸುಮ್ಮನಾಗಬಹುದು. 

Are you attracted to someone while being in a relationship

ಮನೋತಜ್ಞರೇನಂತಾರೆ?
ಜೋಡಿಯು ಒಟ್ಟಿಗೇ ಇರಲಾರಂಭಿಸಿ ಅವರ ನಡುವೆ ಎಲ್ಲವೂ ಹಳತಾದ ಮೇಲೆ ಹೀಗಾಗುವುದು ಸಾಮಾನ್ಯ. ಇದರರ್ಥ ನೀವು ಕೆಟ್ಟ ಪತಿಯೋ, ವಂಚಕ ಪತ್ನಿಯೋ ಎಂದಲ್ಲ. ಇದಕ್ಕೂ ಸಂಬಂಧದಲ್ಲಿರುವ ಸಂತೋಷಕ್ಕೂ ಸಂಬಂಧವಿರಬೇಕೆಂದೇನೂ ಇಲ್ಲ. ಈ ಕ್ರಶ್ ಭಾವನೆ ಮನಸ್ಸನ್ನು ಹೆಚ್ಚು ಜೀವಂತವಾಗಿಡುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. 

ಪೋರ್ನ್‌ ತಾರೆಯರ ಜೊತೆ ಸಂಬಂಧ ಹೊಂದಿದ್ದ ಟ್ರಂಪ್?

ನೀವು ವಿವಾಹವಾದ ಮಾತ್ರಕ್ಕೆ ಹೊರಜಗತ್ತಿನ ಆಕರ್ಷಕ ವ್ಯಕ್ತಿಗಳನ್ನು ಭೇಟಿಯಾಗುವುದು, ಅವರ ಆಕರ್ಷಣೆಯನ್ನು ಸಡನ್ ಆಗಿ ಬಿಡಬೇಕೆಂದೇನೂ ಇಲ್ಲ. ಏಕೆಂದರೆ ಈ ಭಾವನೆಗಳು ನಮ್ಮ ನಿಯಂತ್ರಣ ಮೀರಿ ತಾವಾಗಿಯೇ ಬರುತ್ತವೆ, ಕೆಲ ಕ್ಷಣ ಇದ್ದು ಹೊರಟುಹೋಗುತ್ತವೆ. ಆದರೆ, ನಮ್ಮ ನಿಯಂತ್ರಣದಲ್ಲಿರುವುದೇನೆಂದರೆ, ಈ ಕ್ರಶ್ ಭಾವನೆಯನ್ನು ಹೇಗೆ ನಿಭಾಯಿಸಬಹುದೆಂಬುದು. 

ಕ್ರಶ್ ಭಾವನೆಗೆ ಫೀಡ್ ಮಾಡುವುದು ಯಾಕೆ?
ಈಗಾಗಲೇ ಹೇಳಿದಂತೆ ಕ್ರಶ್ ಭಾವನೆ ಬಂದಾಗ ಅದನ್ನು ಬೆಳೆಸುವುದೂ ಬಿಡುವುದೂ ನಮ್ಮ ಕೈಲೇ ಇರುತ್ತದೆ. ಒಂದು ವೇಳೆ ನೀವು ತಪ್ಪೆಂದು ಗೊತ್ತಿದ್ದೂ ಬೆಳೆಸುವ ಆಯ್ಕೆ ಮಾಡಿಕೊಂಡರೆ ಬಹುಷಃ ನಿಮ್ಮ ಸಂಬಂಧದಲ್ಲಿ ವೈಯಕ್ತಿಕ ಮಟ್ಟದಲ್ಲಿ ನೀವು ಕೆಲ ಸಮಸ್ಯೆಗಳನ್ನು ಹೊಂದಿದ್ದೀರಿ ಎಂದರ್ಥ. ಉದಾಹರಣೆಗೆ ಸಂಬಂಧ ಬೋರೆನಿಸುತ್ತಿದೆ, ನಿಮ್ಮ ಸಂಗಾತಿಯ ಆಸಕ್ತಿ ನಿಮಗಿಂತ ಸಂಪೂರ್ಣ ವಿಭಿನ್ನವಾಗಿದೆ ಹಾಗೂ ನಿಮ್ಮ ಕ್ರಶ್‌‌ನ ಆಸಕ್ತಿ ನಿಮ್ಮ ಇಷ್ಟಗಳಿಗೆ ಮ್ಯಾಚ್ ಆಗುತ್ತದೆ, ನಿಮ್ಮ ಈಗಿನ ಸಂಗಾತಿಯೊಂದಿಗಿನ ಸಂಬಂಧ ಉಸಿರುಗಟ್ಟಿಸುತ್ತಿದೆ ಎನಿಸುತ್ತಿದೆ, ನಿಮ್ಮಿಬ್ಬರ ನಡುವೆ ಸಂವಹನ ಕೊರತೆ ಇದೆ, ನಿಮ್ಮ ಭಾವನಾತ್ಮಕ ಬೇಡಿಕೆಗಳು ಪೂರೈಕೆಯಾಗುತ್ತಿಲ್ಲ, ನಿಮಗೆ ಅಗತ್ಯವಿರುವಷ್ಟು ಗಮನ ದೊರೆಯುತ್ತಿಲ್ಲ, ನಿಮ್ಮ ಸಂಗಾತಿಗೆ ಹೊಟ್ಟೆಕಿಚ್ಚು ಹುಟ್ಟಿಸುವ ಪ್ರಯತ್ನ- ಹೀಗೆ ಸಂಬಂಧದೊಳಗಿನ ಕೊರತೆಗಳು- ಅವು ತಾತ್ಕಾಲಿಕವಾಗಿರಲಿ ಅಥವಾ ಶಾಶ್ವತವಾದದ್ದೇ ಇರಲಿ, ಅವನ್ನು ಹೊರಗೆ ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರೆಂದರ್ಥ. 

ಹದ್ದು ಮೀರುತ್ತಿದ್ದೀರಾ ಎಂಬ ಸೂಚನೆ ಏನು?
ನಿಮಗೇನಾದರೂ ತುಂಬಾ ಒಳ್ಳೆಯ ಅಥವಾ ಕೆಟ್ಟ ಸುದ್ದಿ ಗೊತ್ತಾದಾಗ ಅದನ್ನು ಮೊದಲು ಸಂಗಾತಿಯೊಂದಿಗೆ ಹೇಳಿಕೊಳ್ಳಬೇಕೆನಿಸುತ್ತೋ ಅಥವಾ ಕ್ರಶ್ ಬಳಿಯೋ? ಉತ್ತರ ಕ್ರಶ್ ಎಂದಾಗಿದ್ದಲ್ಲಿ ನೀವು ಅಪಾಯದ ಸರಹದ್ದು ಮೀರುತ್ತಿದ್ದೀರಿ ಎಂದರ್ಥ. ಒಂದು ವೇಳೆ ನಿಮ್ಮ ಫೀಲಿಂಗ್ಸ್ ಗಂಭೀರವಾದುದು ಎಂದಾದರೆ ಇದನ್ನು ಖಂಡಿತಾ ಕ್ರಶ್‌ಗೆ ತಿಳಿಸಬೇಡಿ. ನಂತರದಲ್ಲಿ ಸ್ವತಃ ನಿಮ್ಮ ಪ್ರಯತ್ನದಿಂದ ಇಲ್ಲವೇ ಥೆರಪಿಸ್ಟ್ ಸಹಾಯದಿಂದ ಈ ಭಾವನೆಗಳಿಂದ ಹೊರಬನ್ನಿ. ಏಕೆಂದರೆ ನಿಮ್ಮ ಸಂಬಂಧದಲ್ಲಿರುವ ಕೊರತೆಯನ್ನು ಅಲ್ಲಿಯೇ ಸರಿಪಡಿಸಿಕೊಳ್ಳಲು ವಿಧಾನಗಳನ್ನು ಕಂಡುಕೊಳ್ಳಬೇಕೇ ವಿನಾ ಹೊರಗಿನಿಂದಲ್ಲ. 

Follow Us:
Download App:
  • android
  • ios