ಆ್ಯಂಕರ್ ಅಕುಲ್ ಬಾಲಾಜಿ ಅವರು ತಮಗೆ ಪೇಟ ತೊಡಿಸುವ ಬಸಪ್ಪ ಎಂಬ ಅಜ್ಜನಿಗೆ ಎಐ ಮೂಲಕ ಸೃಷ್ಟಿಸಿದ ಅವರ ಮೃತ ಪತ್ನಿಯ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಐದೂವರೆ ವರ್ಷಗಳ ಹಿಂದೆ ಮೃತಪಟ್ಟ ಪತ್ನಿಯ ಫೋಟೋ ನೋಡಿ ಅಜ್ಜ ಭಾವುಕರಾಗಿದ್ದಾರೆ.

ಬೆಂಗಳೂರು: ಆ್ಯಂಕರ್​ ಅಕುಲ್​ ಬಾಲಾಜಿ ಅವರು ತಮ್ಮ ಬಣ್ಣದ ಲೋಕದಲ್ಲಿ ಈಚೆಗಷ್ಟೇ 25 ವರ್ಷಗಳನ್ನು ಪೂರೈಸಿದ್ದು, ಇದೀಗ ಹಳ್ಳಿ ಪವರ್​ ರಿಯಾಲಿಟಿ ಷೋ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇವರು ಹಲವಾರು ಷೋಗಳಲ್ಲಿ ಪೇಟ ಒಂದನ್ನು ತೊಡುತ್ತಿರುವುದನ್ನು ಅವರ ಅಭಿಮಾನಿಗಳು ನೋಡೇ ಇರುತ್ತೀರಿ. ಆದರೆ ಈ ಪೇಟದ ಹಿಂದೆ ಒಂದು ಭಾವನಾತ್ಮಕ ಸಂಬಂಧವಿದೆ. ಅದರಲ್ಲೊಂದು ಹೃದಯದ ಮಾತಿದೆ, ಆತ್ಮೀಯತೆ ಇದೆ. ಹೌದು. ಅದು ಒಬ್ಬ ಅಜ್ಜನವರದ್ದು. ಆ ಅಜ್ಜನವರ ಹೆಸರು ಬಸಪ್ಪ. ಇದೀಗ ಅವರನ್ನು ಪರಿಚಯಿಸಿದ್ದಾರೆ ಅಕುಲ್​.

ಪತ್ನಿಯ ಫೋಟೋಗೆ ಕಂಬನಿ

ಈ ಪೇಟ ಈ ಅಜ್ಜನವರದ್ದು. ಅವರು ಎಲ್ಲಿಯೇ ಇದ್ದರೂ, ನನ್ನ ಷೋ ಇದ್ದಾಗ ಬಂದು ಪೇಟ ತೊಡಿಸುತ್ತಾರೆ ಎಂದು ಸುಮಾರು 80-82ರ ಆಸುಪಾಸಿನ ಅಜ್ಜನನ್ನು ಪರಿಚಯ ಮಾಡಿಸಿದ್ದಾರೆ ಅಕುಲ್​. ಆ ಅಜ್ಜನೋ ತುಂಬಾ ಮುಗ್ಧ. ಅಕುಲ್​ ಅವರು ತಮ್ಮನ್ನು ಹೊಗಳುತ್ತಿದ್ದಾರೆ ಎನ್ನುವ ಪರಿವೇ ಇಲ್ಲದೇ ಸೀದಾ ಸಾದಾ ಆಗಿ ಮುಗ್ಧರಂತೆ ನೋಡುತ್ತಿದ್ದಾರೆ. ಕೊನೆಗೆ ಅಕುಲ್​ ಅವರು, ಅಜ್ಜನಿಗೆ ಎಂದಿಗೂ ಮರೆಯಲಾಗದ ಒಂದು ಗಿಫ್ಟ್​ ಕೊಟ್ಟಿದ್ದಾರೆ. ಅದನ್ನು ನೋಡಿ ಅಜ್ಜ, ಕಣ್ಣೀರಾಗಿ ಬಿಟ್ಟಿದ್ದಾರೆ. ಅದಕ್ಕೆ ಕಾರಣ, ಅಲ್ಲಿಇದ್ದುದು ಐದೂವರೆ ವರ್ಷಗಳ ಹಿಂದೆ ತೀರಿಕೊಂಡಿರುವ ಅವರ ಪತ್ನಿಯ ಜೊತೆಗಿನ ಫೋಟೋ. ಅರೆಕ್ಷಣ ಬಸಪ್ಪನವರು ಮೂಕ ವಿಸ್ಮಿತರಾದರು. ಅವಳು ಸೇಮ್​ ಹೀಗೆಯೇ ಇದ್ದಳು ಎಂದರು.

ಎಐ ಮೂಲಕ ಈ ಫೋಟೋ ಅನ್ನು ಸೃಷ್ಟಿಸಿ ಗಿಫ್ಟ್​ ಕೊಟ್ಟಿದ್ದಾರೆ ಅಕುಲ್​. ಇದನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ, ಬಸಪ್ಪನವರು ಪೂಜಿಸುತ್ತೇನೆ ಎಂದರು. ತಮ್ಮ ಪತ್ನಿಯ ಬಗ್ಗೆ ಅವರಿಗೆ ಇದ್ದ ಭಾವನೆ, ಆ ಆತ್ಮೀಯತೆ ನಿಜಕ್ಕೂ ನೋಡುಗರ ಕಣ್ಣಾಲಿಯನ್ನು ತೇವ ಮಾಡುವುದಂತೂ ದಿಟ. ಅಕುಲ್​ ಅವರು ಅಂಥದ್ದೊಂದು ಅದ್ಭುತ, ಮರೆಯಲಾಗದ ಗಿಫ್ಟ್​ ತಮಗೆ ಪೇಟ ಕೊಡುವ ಅಜ್ಜನಿಗೆ ಕೊಟ್ಟಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಅಕುಲ್​ ಬಾಲಾಜಿ ಕುರಿತು

ಇನ್ನು ಅಕುಲ್‌ ಬಾಲಾಜಿ ಅವರ ಕುರಿತು ಚುಟುಕಾಗಿ ಹೇಳಬೇಕು ಎಂದರೆ,, ಇವರು ಮೂಲತಃ ಆದ್ರಪ್ರದೇಶದವರು. ಹುಟ್ಟಿದ್ದು ನೆಲ್ಲೂರು. ಬೆಳದಿದ್ದು ರಾಯಲ್‌ ಸೀಮಾ ಎಂದು ಖ್ಯಾತಿ ಪಡೆದ ಕಡಪ ಊರಿನಲ್ಲಿ. ಇವರ ಕುಟುಂಬದ ಬ್ಯುಸಿನೆಸ್‌ ಸೀರೆ. ಆಂಧ್ರದಿಂದ ಬಂದು ಬೆಂಗಳೂರಿನಲ್ಲಿ ಸೀರೆ ಬ್ಯುಸಿನೆಸ್‌ ಹಾಕಿದ್ದರು. ಅಕುಲ್​ ಅವರು, ಭರತ ನಾಟ್ಯ, ಕಥಕ್‌ ಕ್ಲಾಸಿಕಲ್‌ ಡ್ಯಾನ್ಸ್‌ನ ಕಲಿತಿದ್ದಾರೆ. ಅಕುಲ್​ ಅವರು ಈ ಮಟ್ಟಿಗೆ ಬೆಳೆದು ನಿಲ್ಲಬೇಕಾದರೆ ಅಲ್ಲಿ ಕಣ್ಣೀರಿನ ಸ್ಟೋರಿಯೂ ಇದೆ. ಎಲ್ಲವನ್ನೂ ಮೆಟ್ಟಿನಿಂತು ಈಗ ಮನೆಮಗ ಎನ್ನುವ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇವರು ಜ್ಯೋತಿ ಎನ್ನುವವರು 2008ರಲ್ಲಿ ಮದುವೆ ಆಗಿದ್ದು, 16 ವರ್ಷದ ಓರ್ವ ಪುತ್ರನಿದ್ದಾನೆ.