ಲಕ್ಷ್ಮೀಪುತ್ರ ಸಿನಿಮಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್ ತಮ್ಮ ತಾಯಿ ಪಾರ್ವತಮ್ಮನವರೊಂದಿಗಿನ ಒಲವು ಮತ್ತು ಬಾಲ್ಯದ ಘಟನೆಗಳನ್ನು ಸ್ಮರಿಸಿದರು. ತಾಯಿ ಹೊಡೆಯಲು ಬಂದಾಗ 20 ಅಡಿ ಎತ್ತರದಿಂದ ಬಿದ್ದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ನಟ ಶಿವರಾಜ್ ಕುಮಾರ್ ಮತ್ತು ಅವರ ಅಮ್ಮ ಪಾರ್ವತಮ್ಮ ಅವರ ಬಾಂಡಿಂಗ್ ಎಷ್ಟರಮಟ್ಟಿಗೆ ಇತ್ತು ಎನ್ನೋದು ಬೇರೆ ಹೇಳಬೇಕಾಗಿಲ್ಲ. ಶಿವರಾಜ್ ಕುಮಾರ್ ಇದಾಗಲೇ ಹಲವಾರು ವೇದಿಕೆಗಳಲ್ಲಿ ತಮ್ಮ ಅಮ್ಮನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದು ಇದೆ. ಇದೀಗ ಲಕ್ಷ್ಮೀಪುತ್ರ ಸಿನಿಮಾ ಈವೆಂಟ್ನಲ್ಲಿಯೂ ಅಮ್ಮ ಮತ್ತು ಮಗನ ಭಾವುಕ ಸಂಬಂಧಗಳ ಬಗ್ಗೆ ಮಾತನಾಡುತ್ತಾ, ಅಮ್ಮ ಯಾವತ್ತಿಗೂ ಅಮ್ಮನೇ. ಅಮ್ಮನಾದವಳಿಗೆ ಕೇವಲ ಪ್ರೀತಿ ಕೊಡುವುದು ಮಾತ್ರ ಗೊತ್ತು ಎಂದು ಅಮ್ಮ-ಮಕ್ಕಳ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಅಮ್ಮನ ಬಗ್ಗೆ ಇರುವ ಹಲವು ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಇದೇ ವೇಳೆ ಅಮ್ಮನ ಮಹತ್ವವನ್ನು ಸಾರಿ ಸಾರಿ ಹೇಳಿದ್ದಾರೆ ಶಿವಣ್ಣ.
ಈ ಸಂದರ್ಭದಲ್ಲಿ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿರುವ ಶಿವಣ್ಣ, ತಮ್ಮ ಅಮ್ಮ ಪಾರ್ವತಮ್ಮ ತಾವು ಕಿಲಾಡಿ ಮಾಡಿದಾಗ ಹೇಗೆ ಹೊಡೆಯುತ್ತಿದ್ದರು ಎನ್ನುತ್ತಾ ಅಂದು ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ತಾಯಿ ಎಂದಿಗೂ ತಾಯಿನೇ.. ಆಕೆ ಹೊಡೆದ್ರೂ ತಾಯಿ. ಬೈದರೂ ತಾಯಿನೇ. ನನ್ನ ತಾಯಿ ಕೂಡ ಹಾಗೆ ಮಾಡ್ತಿದ್ರು ಎನ್ನುತ್ತಲೇ ಆ ಘಟನೆ ತಾವು 20 ಅಡಿ ಮೇಲಿನಿಂದ ಬಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
20 ಅಡಿ ಮೇಲಿಂದ ಬಿದ್ದೆ
ನನಗೆ ನನ್ನಮ್ಮ ಎಷ್ಟು ತಮಾಷೆ ಮಾಡಿ, ಎಷ್ಟು ರೇಗಿಸ್ತಾ ಇದ್ದರೋ ಹಾಗೆ ಹೊಡೀತಾನೂ ಇದ್ದರು. ಅವರು ನನ್ನನ್ನು ಹೊಡಿತಾ ಇದ್ದರೆ ನಾನು ಅವರನ್ನು ಓಡಾಡಿಸ್ತಾ ಇದ್ದೆ. ನನ್ನಮ್ಮ ನನಗೆ ಹೊಡೆಯಲು ಪೊರಕೆ, ಸೌಟು ಎಲ್ಲಾ ತರೋರು. ಒಮ್ಮೆ ನಾನು ಹೀಗೆ ಓಡುತ್ತಾ ಓಡುತ್ತಾ ಗೊತ್ತಿಲ್ಲದೇ ಮೇಲಿನಿಂದ ಧುಮುಕಿಬಿಟ್ಟೆ. ಅದೇ ಕೊನೆ. ಆವಾಗಿಂದ ನನಗೆ ಹೊಡೆಯೋದನ್ನು ಅಮ್ಮ ನಿಲ್ಲಿಸಿಬಿಟ್ಟರು ಎಂದು ಹೇಳಿದ್ದಾರೆ ಶಿವಣ್ಣ. ನನಗೆ ಆಗ ಏನೂ ಆಗಿಲ್ಲ ಅನ್ನಿ. ಸುಮಾರು 20 ಅಡಿ ಮೇಲಿನಿಂದ ಅದಾಗಿತ್ತು. ಪುಣ್ಯಕ್ಕೆ ನನಗೆ ಏನೂ ಆಗಲಿಲ್ಲ. ಆದರೂ ನನ್ನ ಅಮ್ಮ ಅಂದಿನಿಂದ ಹೊಡೆಯೋದನ್ನೇ ನಿಲ್ಲಿಸಿಬಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ ಶಿವರಾಜ್ಕುಮಾರ್.
ಲಕ್ಷ್ಮೀಪುತ್ರದ ಕುರಿತು
ಇನ್ನು ಲಕ್ಷ್ಮೀಪುತ್ರ ಸಿನಿಮಾದ ಕುರಿತು ಹೇಳುವುದಾದರೆ, ನಟ ಚಿಕ್ಕಣ್ಣ ಅವರು ಕಾಮಿಡಿಯನ್ ಪಾತ್ರದ ಮೂಲಕ ಮಿಂಚಿದವರು. ಇದಾಗಲೇ ಉಪಾಧ್ಯಕ್ಷ ಸಿನಿಮಾದಲ್ಲಿ ಹೀರೋ ಆದ ಬಳಿಕ ಈಗ ‘ಲಕ್ಷ್ಮೀಪುತ್ರ’ದಲ್ಲಿ ನಾಯಕನಾಗಿದ್ದಾರೆ. ಈ ಚಿತ್ರದಲ್ಲಿ ಹಾಸ್ಯದ ಹೊಳೆಯ ಜೊತೆಗೆ ಆ್ಯಕ್ಷನ್ ಕೂಡ ಇದೆ. ಚಿಕ್ಕಣ್ಣ ಅವರು ಹಳ್ಳಿ ಹುಡುಗನ ಗೆಟಪ್ನಲ್ಲಿ ಗಮನ ಸೆಳೆದಿದ್ದಾರೆ. ಇದಾಗಲೇ ಇದರ ಟ್ರೈಲರ್ ಲಾಂಚ್ ಆಗಿದೆ. ಅದರಲ್ಲಿ, ಕೃಷ್ಣ (ಚಿಕ್ಕಣ್ಣ) ಹಳ್ಳಿಯಲ್ಲಿರುವ ಹುಡುಗಿಯರಿಗೆಲ್ಲ ಕಾಳು ಹಾಕುತ್ತಾ ಜೀವನ ನಡೆಸುತ್ತಿರುತ್ತಾನೆ. 10 ಜನರಿಗೆ ಕಾಳು ಹಾಕಿ ರಿಜೆಕ್ಟ್ ಆಗೋದಕ್ಕಿಂತ ಒಂದೇ ಹುಡುಗಿಗೆ 10 ಬಾರಿ ಐ ಲವ್ ಯೂ ಎಂದರೆ ಬೀಳುತ್ತಾಳೆ ಎಂಬ ಬಲವಾದ ನಂಬಿಕೆಯಮೇಲೆ ಕಥಾ ನಾಯಕಿ (ವಂದಿತಾ ಗೌಡ) ಹಿಂದೆ ಬೀಳುತ್ತಾನೆ. ಈ ಚಿತ್ರದಲ್ಲಿ ಹಿರಿಯ ನಟಿ ತಾರಾ ಅವರು ಚಿಕ್ಕಣ್ಣನ ತಾಯಿ ಪಾತ್ರ ಮಾಡುತ್ತಿದ್ದಾರೆ.












