ಡಾ. ರಾಜ್ಕುಮಾರ್ ಮತ್ತು ಮುಖ್ಯಮಂತ್ರಿ ಚಂದ್ರು ಅವರು ಚಿತ್ರೀಕರಣಕ್ಕೆ ಹೋಗುವಾಗ ರಸ್ತೆಬದಿಯ ಹೋಟೆಲ್ನಲ್ಲಿ ಇಡ್ಲಿ ತಿಂದಿದ್ದರು. ಈ ವಿಷಯವನ್ನು ಪಾರ್ವತಮ್ಮನವರಿಗೆ ಹೇಳಬಾರದು ಎಂದು ಅಣ್ಣಾವ್ರು ಚಂದ್ರು ಅವರಿಗೆ ತಮಾಷೆಯಾಗಿ ತಾಕೀತು ಮಾಡಿದ್ದ ಪ್ರಸಂಗವಿದು.
ಬೆಂಗಳೂರು: ಡಾ.ರಾಜ್ ಕುಮಾರ್ ಮತ್ತು ಮುಖ್ಯಮಂತ್ರಿ ಚಂದ್ರು ಇಬ್ಬರೂ ಇಬ್ಬರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಒಟ್ಟಿಗೇ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಡಾ.ರಾಜ್ ಅಂದರೇನೇ ಅವರೊಬ್ಬ ಯುಗಪುರುಷ. ಅವರ ಜೊತೆ ಕೆಲಸ ಮಾಡಿದ ಹಲವು ನಟರು ಅವರ ಜೊತೆಗಿನ ಒಡನಾಟವನ್ನು ಹಂಚಿಕೊಳ್ಳುವಾಗ ಅದರಲ್ಲಿ ಏನೇನೋ ವಿಶೇಷತೆಗಳು ಇದ್ದೇ ಇರುತ್ತವೆ. ಅದರಲ್ಲಿಯೂ ಹಾಸ್ಯದ ಮೂಲಕ ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಡಾ.ರಾಜ್ ಅವರು ಮಾಡುವ ಚೇಷ್ಠೆಗಳೂ ಅಷ್ಟೇ ಸುಂದರವಾಗಿರುತ್ತಿದ್ದವು. ಇದೀಗ ಡಾ.ರಾಜ್ಕುಮಾರ್ ಅವರ ಕೀಟಲೆಯ ಪ್ರಸಂಗವೊಂದನ್ನು ನೆನಪಿಸಿಕೊಂಡಿದ್ದಾರೆ ನಟ 'ಮುಖ್ಯಮಂತ್ರಿ' ಚಂದ್ರು. ಸಂದರ್ಶನವೊಂದರಲ್ಲಿ ಡಾ.ರಾಜ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿರುವ ಚಂದ್ರು ಅವರು, ಪಾರ್ವತಮ್ಮನವರಿಗೆ ಈ ವಿಷಯವನ್ನು ಹೇಳಬೇಡ ಎಂದು ತಮಗೆ ಡಾ.ರಾಜ್ ತಾಕೀತು ಮಾಡಿದ್ದ ಪ್ರಸಂಗವನ್ನು ಅವರು ಹೇಳಿದ್ದಾರೆ.
ಅದೇನೆಂದರೆ, 'ಅದೊಂದು ದಿನ ಶೂಟಿಂಗ್ಗೆ ಹೋಗುವ ಸಂದರ್ಭದಲ್ಲಿ, ಬಿಡದಿಗೆ ಹೋಗಬೇಕಿತ್ತು. ಅಲ್ಲಿ ತಿಂಡಿ-ಅಡುಗೆ ಎಲ್ಲವೂ ರೆಡಿ ಇತ್ತು. ಆದರೆ ರೋಡ್ಸೈಡ್ನಲ್ಲಿ ಇರುವ ಹೋಟೆಲ್ ಒಂದರಲ್ಲಿ ಇಡ್ಲಿ, ವಡಾ, ಚಿತ್ರನ್ನಾ ಡಾ.ರಾಜ್ಕುಮಾರ್ ಅವರಿಗೆ ಬಹಳ ಹಿಡಿಸಿತ್ತು. ಇದೇ ಕಾರಣಕ್ಕೆ ಡ್ರೈವರ್ಗೆ ಆ ಹೋಟೆಲ್ ಬಳಿ ನಿಲ್ಲಿಸುವಂತೆ ಹೇಳಿದ್ರು. ಆಗ ನಾನು ಬಿಡದಿಯಲ್ಲಿಯೇ ಎಲ್ಲಾ ವ್ಯವಸ್ಥೆ ಇರತ್ತಲ್ಲಪ್ಪಾ ಅಂದೆ. ಅದಕ್ಕೆ ರಾಜ್ ಅವರು ಅದು ಇರತ್ತೆ ಬಿಡಪ್ಪಾ, ಇದು ಸಕತ್ ಟೇಸ್ಟ್ ಇರುತ್ತೆ ಎಂದರು. ಆಮೇಲೆ ಡ್ರೈವರ್ನ ಕಳಿಸಿ ನನಗೆ, ಅವರಿಗೆ ಮತ್ತು ಡ್ರೈವರ್ಗೆ ಸೇರಿಸಿ ಎರಡೆರಡು ತಟ್ಟೆ ಇಡ್ಲಿ, ವಡೆ ಮತ್ತು ಚಿತ್ರಾನ್ನ ಪಾರ್ಸೆಲ್ ಮಾಡಿಸಿದ್ರು. ಆಮೇಲೆ ಮಣ್ಣಿನ ರೋಡ್ ಬಂದಾಗ, ಚಿಕ್ಕ ಮೋರಿಯ ಸಮೀಪ ಹೋಗಿ ಇಲ್ಲಿ ತಿಂದರೆ ಬೇಜಾರು ಇಲ್ಲ ತಾನೇ ಎಂದರು. ನಾನು ಅಡ್ಡಿಲ್ಲ ಎಂದೆ. ಆಮೇಲೆ ಎಲ್ಲರೂ ಅಲ್ಲೇ ತಿಂದ್ವಿ' ಎನ್ನುತ್ತಲೇ ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಚಂದ್ರು ಅವರು.
ಮೋರಿ ಪಕ್ಕದ ತಿಂಡಿ, ಪಾರ್ವತಮ್ಮನವರ ಉಪ್ಪಿಟ್ಟು!
'ದೊಡ್ಡ ದೊಡ್ಡ ಇಡ್ಲಿ ತಿಂದೇ ಸುಸ್ತಾಗಿ ಹೋಗಿದ್ದೆ. ಆದರೂ ಅವರು ಬಿಡಲಿಲ್ಲ. ಎಲ್ಲವನ್ನೂ ತಿನ್ನಿಸಿದ್ರು. ಆಮೇಲೆ ಬಿಡದಿ ಕಡೆ ಹೊರಟ್ವಿ. ದಾರಿ ಮಧ್ಯೆ ಅವರು ನನಗೆ ಗುಟ್ಟಾಗಿ, ನೋಡಪ್ಪಾ, ನಾವಿಲ್ಲಿ ಏನೂ ತಿಂದೇ ಇಲ್ಲ ಎಂದರು. ನನಗೆ ಆಶ್ಚರ್ಯ ಆಯ್ತು. ಬಳಿಕ ರಾಜ್ ಅವರೇ, ನೋಡಿ ಇಲ್ಲಿ ತಿಂದದ್ದನ್ನು ಪಾರ್ವತಿ ಬಳಿ ಹೇಳಬೇಡಿ, ನಾವು ಇಲ್ಲಿ ಏನೂ ತಿಂದಿಲ್ಲ ಅಷ್ಟೇ ಎಂದರು. ಅದು ಸರಿ ಅಲ್ಲಿ ತಿಂಡಿ ಕೊಟ್ರೆ ಏನು ಮಾಡೋದು ಎಂದು ಕೇಳಿದೆ. ಅದನ್ನೆಲ್ಲಾ ನಾನು ನೋಡಿಕೊಳ್ತೇನೆ ಬಿಡು ಎಂದು ಹೇಳಿ ಹೋದರು.
ಕೊನೆಗೆ ಅಲ್ಲಿ ತಿಂಡಿ ಎಲ್ಲಾ ಸಿದ್ಧವಾಗಿತ್ತು. ಯಾರಾದ್ರೂ ತಂದುಕೊಟ್ಟು ಬಿಟ್ಟರೆ ಫುಲ್ ಪ್ಲೇಟ್ ಹಾಕಿಸಿಕೊಂಡು ಬರ್ತಾರೆ ಎಂದು ಪ್ಲ್ಯಾನ್ ಮಾಡಿದ ರಾಜ್ಕುಮಾರ್ ಅವರೇ ಸನ್ನೆ ಮಾಡಿ ಲೈನ್ನಲ್ಲಿ ನಿಲ್ಲುವಂತೆ ಹೇಳಿದ್ರು. ಕೊನೆಗೆ ಸ್ವಲ್ಪ ಸ್ವಲ್ಪ ಉಪ್ಪಿಟ್ಟು ಹಾಕಿಸಿಕೊಂಡು ತಿಂದಾಯಿತು. ಯಾರಿಗೂ ಡೌಟ್ ಬರಬಾರದು ಎಂದು ರಾಜ್ ಅವರು ಆ ಉಪ್ಪಿಟ್ಟನ್ನೆಲ್ಲಾ ತುಂಬಾ ಹೊಗಳಿ ಅಂತೂ ಮ್ಯಾನೇಜ್ ಮಾಡಿದ್ರು' ಎಂದು ಹೇಳಿದ್ದಾರೆ.












