ಯುವತಿಯೊಬ್ಬಳು ಕೈಕೊಟ್ಟ ಬಳಿಕ ಹೆಣ್ಣುಮಕ್ಕಳ ಮೇಲೆ ವಿಶ್ವಾಸವೇ ಕಳೆದುಕೊಂಡ ಯುವಕನೊಬ್ಬ ಗೊಂಬೆಯ ಜೊತೆ ಮದುವೆಯಾಗಿ ಮೂವರು ಮಕ್ಕಳ ಅಪ್ಪ ಆಗಿದ್ದಾನೆ. ಏನಿದು ಸುದ್ದಿ ನೋಡಿ!
ಗಂಡು-ಗಂಡು, ಹೆಣ್ಣು-ಹೆಣ್ಣು ಮದ್ವೆಯಾಗಿರೋದು ಕೇಳಿಯಾಯ್ತು, ಅಪ್ಪ-ಮಗಳ ಪ್ರೇಮ ಕಥೆನೂ ಆಗೋಯ್ತು, ಗಂಡಸರ ಸಹವಾಸವೇ ಬೇಡ ಎಂದು ಹೆಣ್ಣು ಮಕ್ಕಳು ತಮ್ಮನ್ನು ತಾವೇ ಮದುವೆಯಾಗಿ ಹನಿಮೂನ್ ಹೋಗಾಯ್ತು... ಇದೀಗ ವಿಚಿತ್ರ ಎನ್ನುವ ಘಟನೆ ನಡೆದಿದೆ. ಇಲ್ಲಿ ಯುವಕನೊಬ್ಬ ಹೆಣ್ಣುಮಕ್ಕಳ ಸಹವಾಸವೇ ಬೇಡ ಎಂದು ಗೊಂಬೆಯನ್ನು ಮದುವೆಯಾಗಿದ್ದು, ಈಕೆ ಮೂರು ಮಕ್ಕಳ ಅಪ್ಪ ಆಗಿದ್ದಾನೆ. ಕೆಲ ತಿಂಗಳ ಹಿಂದೆ ಯುವತಿಯೊಬ್ಬಳು ಇದೇ ರೀತಿ ಗೊಂಬೆಯನ್ನು ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿದ್ದಳು. ಆಕೆಯಿಂದ ಪ್ರೇರಣೆಗೊಂಡಿರುವ ಈ ಯುವಕ ಈಗ ಇನ್ನೊಂದು ಹೆಜ್ಜೆ ಇಟ್ಟಿದ್ದಾನೆ. ಈತ ಗೊಂಬೆ ಪತ್ನಿ ಮತ್ತು ಮಕ್ಕಳ ಜೊತೆ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇವನ ಮಕ್ಕಳು ಕೂಡ ಇವನ ಪತ್ನಿಯನ್ನೇ ಹೋಲುತ್ತಾರೆ!
ಇಂಥ ಒಂದು ವಿಚಿತ್ರ ಪ್ರಯತ್ನಕ್ಕೆ ಕೈಹಾಕಿದವ ಕ್ರಿಸ್ಟಿಯನ್ ಎನ್ನುವ ಯುವಕ. ಈತ ಯುವತಿಯೊಬ್ಬಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಆದರೆ ಆಕೆ ಕೈಕೊಟ್ಟು ಬೇರೊಬ್ಬನ ಜೊತೆ ಓಡಿಹೋದಳು. ಇದರಿಂದಾಗಿ ಕ್ರಿಸ್ಟಿಯನ್‌ಗೆ ಹುಡುಗಿಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಯಾವ ಹೆಣ್ಣುಮಕ್ಕಳೂ ಸರಿಯಿಲ್ಲ ಎನ್ನುವ ನಿರ್ಧಾರಕ್ಕೆ ಬಂದ. ಕೊನೆಗೆ ಆತ ಒಂಟಿಯಾಗಿ ಉಳಿದ. ಒಂಟಿತನ ತುಂಬಾ ಕಾಡಿತು. ನಂತರ ಆತ ಒಂದು ಹೆಣ್ಣು ಗೊಂಬೆಯನ್ನು ಪಡೆದುಕೊಂಡ. ಅದಕ್ಕೆ ನಟಾಲಿಯಾ ಎಂದು ಹೆಸರು ಇಟ್ಟ. ಕ್ರಮೇಣ ಆ ಗೊಂಬೆಯ ಮೇಲೆ ಆತನಿಗೆ ಪ್ರೀತಿ ಉಂಟಾಯಿತು. ಈ ಗೊಂಬೆಯಂತೂ ತನ್ನನ್ನು ಬಿಟ್ಟುಹೋಗಲು ಸಾಧ್ಯವೇ ಇಲ್ಲ ಎನ್ನುವುದು ಅವನಿಗೂ ಗೊತ್ತಲ್ಲ ಅದೇ ಕಾರಣಕ್ಕೆ.
ಈ ಗೊಂಬೆಯ ಜೊತೆ ಮದುವೆಗೆ ನಿರ್ಧರಿಸಿದ. ಕೊನೆಗೆ ದೊಡ್ಡ ಗೊಂಬೆಯನ್ನು ಇಟ್ಟುಕೊಂಡು ಅದರ ಎದುರೇ ಈ ಗೊಂಬೆಯನ್ನು ಮದುವೆಯಾದ. ಅಂದರೆ ಈತನ ಮದುವೆ ಮಾಡಿಸಿದ್ದು ಕೂಡ ಮತ್ತೊಂದು ಗೊಂಬೆ. ಕೊನೆಗೆ ವರ್ಷ ಕಳೆದಂತೆ ಅವನಿಗೆ ಮಕ್ಕಳು ಬೇಕೆನ್ನುವ ಆಸೆಯಾಯಿತು. ಒಂದಲ್ಲ, ಎರಡಲ್ಲ... ಮೂರು ಗೊಂಬೆಗಳನ್ನು ತಂದು ಅದನ್ನು ಮಕ್ಕಳಂತೆಯೇ ಸಾಕುತ್ತಿದ್ದಾನೆ. ಈ ಮೂಲಕ ತನ್ನದು ಪರಿಪೂರ್ಣ ಕುಟುಂಬ ಎಂದು ಅವನು ಹೇಳುತ್ತಿದ್ದಾನೆ.
ಈ ಹಿಂದೆ ಗಂಡು ಗೊಂಬೆಯ ಜೊತೆ ಯುವತಿಯೊಬ್ಬಳು ಮದುವೆಯಾಗಿದ್ದಳು. ಈಕೆ ಕೂಡ ಇದೇ ರೀತಿ ಇಬ್ಬರು ಮಕ್ಕಳ ಅಮ್ಮ ಆಗಿದ್ದಳು. ಮದುವೆಯ ಬಗ್ಗೆ ಮಾತನಾಡಿದ್ದ ಮಹಿಳೆ, ಮದುವೆಯಾದಾಗಿನಿಂದ ತುಂಬಾ ಖುಷಿಯಾಗಿದ್ದೇನೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ನಡೆಸುತ್ತಿರುವ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ಅವನು ವಾದ ಮಾಡುವುದಿಲ್ಲ ಮತ್ತು ಅವನು ಅರ್ಥಮಾಡಿಕೊಳ್ಳುತ್ತಾನೆ. ಮಾರ್ಸೆಲೊ ಒಬ್ಬ ಮಹಾನ್ ಮತ್ತು ನಿಷ್ಠಾವಂತ ಪತಿ. ಅವನು ಅಂತಹ ವ್ಯಕ್ತಿ ಮತ್ತು ಎಲ್ಲಾ ಮಹಿಳೆಯರು ಅವನನ್ನು ಅಸೂಯೆಪಡುತ್ತಾರೆ” ಎಂದು ಮೀರಿವೊನೆ ರೋಚಾ ಮೊರೇಸ್ ಹೇಳಿದ್ದಳು. ಅವನು ತುಂಬಾ ಉತ್ತಮ ಗುಣಗಳನ್ನು ಹೊಂದಿದ್ದಾನೆ. ಆದರೆ ಅವನ ಏಕೈಕ ನ್ಯೂನತೆಯೆಂದರೆ ಅವನು ಸೋಮಾರಿಯಾಗಿದ್ದಾನೆ. ಅವನು ಕೆಲಸ ಮಾಡುವುದಿಲ್ಲ. ನಾನೊಬ್ಬಳೇ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದೂ ಹೇಳಿದ್ದಳು.
