ಮದುವೆಯೆಂಬುದು ಒಂದು ಸುಂದರವಾದ ಸಂಬಂಧ. ಆದ್ರೆ ಇದು ಎಲ್ಲರ ಪಾಲಿಗೆ ಸೇಮ್ ಆಗಿರುವುದಿಲ್ಲ. ಕೆಲವೊಬ್ಬರಿಗೆ ಇದು ನಿಜವಾಗಿಯೂ ಬಂಧನದಂತೆ ಆಗಿಬಿಡುತ್ತದೆ. ವರದಕ್ಷಿಣೆ, ಅತ್ತೆ-ಮಾವನ ಕಾಟ, ಗಂಡನ ಕಿರುಕುಳಕ್ಕೆ ದಾಂಪತ್ಯ ನರಕದರ್ಶನ ಮಾಡಿಸಿಬಿಡುತ್ತದೆ. ಇಲ್ಲೊಬ್ಬಳು ಹಾಗೆಯೇ ಗಂಡ ಬಾಡಿ ಶೇಮಿಂಗ್ ಮಾಡ್ತಾನೆ ಅಂತ ಅಳಲು ತೋಡಿಕೊಂಡಿದ್ದಾಳೆ. 

ಮದುವೆ (Marriage)ಯೆಂಬುದು ಗಂಡು-ಹೆಣ್ಣಿನ ನಡುವಿನ ದಾಂಪತ್ಯ ಜೀವನ. ಸಂಪೂರ್ಣ ಅಪರಿಚಿತರಾಗಿರುವ ಇಬ್ಬರು ವ್ಯಕ್ತಿಗಳು, ಅಥವಾ ಕೆಲವೊಮ್ಮೆ ಪರಿಚಿತರು ವೈವಾಹಿಕ ಬಂಧನಕ್ಕೆ ಒಳಗಾಗುತ್ತಾರೆ. ಆದ್ರೆ ಮದುವೆಯೆಂಬುದು ಎಲ್ಲರಿಗೂ ಖುಷಿ (Happy) ನೀಡುವುದಿಲ್ಲ. ಕೆಲವೊಬ್ಬರು ಮದುವೆಯ ನಂತರ ಅಕ್ಷರಶಃ ನರಕಸದೃಶ ಜೀವನ ನಡೆಸುತ್ತಾರೆ. ದೈಹಿಕವಾಗಿಯೂ, ಮಾನಸಿಕವಾಗಿಯೂ ತೊಂದರೆ ಅನುಭವಿಸಿ ಅದರಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಮದುವೆಯ ಮೊದಲೂ ಎಲ್ಲರೂ ಸರಿಯಿದ್ದರೂ ನಂತರ ಎಲ್ಲವೂ ತಾಳತಪ್ಪಿದೆ ಅನಿಸಲು ಶುರುವಾಗಿಬಿಡುತ್ತದೆ. ಮದುವೆಯ ಮೊದಲು ಚಿನ್ನ, ರನ್ನ, ಬೇಬಿ ಅಂತೆಲ್ಲಾ ಕರೆದ ಗಂಡ ಹೆಂಡತಿ (Husband-wife)ಯನ್ನು ಕಂಡ ತಕ್ಷಣ ಉರಿದು ಬೀಳುತ್ತಾನೆ. ಇಲ್ಲೊಬ್ಬಾಕೆಗೂ ಹಾಗೇ ಆಗಿದೆ. ಗಂಡ ಎಲ್ಲರೆದುರೇ ನೀನ್ ದಪ್ಪ (Fat) ಇದ್ದೀಯಾ, ಕೆಟ್ಟದಾಗಿದ್ದೀಯಾ ಎಂದು ಹೀಯಾಳಿಸುತ್ತಾನೆ ಎಂದು ದೂರಿದ್ದಾಳೆ. 

ಪ್ರಶ್ನೆ: ನಾವು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದೇವೆ. ಈಗ ಒಂದು ಮಗುವೂ ಇದೆ. ಮದುವೆಯ ಮೊದಲು ತೆಳ್ಳಗಿದ್ದ ನಾನು, ಮದುವೆಯ ನಂತರ, ಹೆರಿಗೆಯ ನಂತರ ತುಂಬಾ ದಪ್ಪಗಾಗಿದ್ದಾನೆ. ಹೀಗಾಗಿ, ನನ್ನ ಪತಿ ಯಾವಾಗಲೂ ನನ್ನನ್ನು ದಪ್ಪ ಎಂದು ಹೀಯಾಳಿಸುತ್ತಲೇ ಇರುತ್ತಾರೆ. ಹಂದಿ, ಆನೆ ಮುಂತಾದ ಹೆಸರುಗಳನ್ನು ಹಿಡಿದು ಕರೆಯುತ್ತಾರೆ. ನಮ್ಮ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿಯೂ ಅವರು ನನ್ನ ದೇಹ (Body)ವನ್ನು ಟೀಕಿಸಿ ಕಾಮೆಂಟ್ ಮಾಡುತ್ತಾರೆ. ಆದಷ್ಟು ಬೇಗ ತೂಕವನ್ನು ಕಳೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ನನ್ನ ಗಂಡ ನನ್ನ ದೇಹವನ್ನು ವಿಪರೀತವಾಗಿ ಟೀಕಿಸುತ್ತಿರುವ ಪರಿಣಾಮವಾಗಿ ನನಗೆ ನನ್ನ ಬಗ್ಗೆಯೇ ಆತ್ಮವಿಶ್ವಾಸ (Confidence) ಇಲ್ಲದಂತಾಗಿದೆ. ಇದಕ್ಕೇನು ಪರಿಹಾರ ತಿಳಿಸುತ್ತೀರಾ ?

Relationship Tips: ವೈವಾಹಿಕ ಜೀವನದಿಂದ ನೆಗೆಟಿವಿಟಿಯನ್ನು ಹೀಗೆ ದೂರ ಮಾಡಿ

ವಿವಾಹಿತ ಮಹಿಳೆಯ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.

ಉತ್ತರ: ಗಂಡ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾರಾ ತಿಳಿದುಕೊಳ್ಳಿ. ಹೆಂಡತಿಯನ್ನು ನಿಜವಾಗಿಯೂ ಪ್ರೀತಿಸುವವರು ಹೀಗೆಲ್ಲಾ ಟೀಕಿಸುತ್ತಿರಲು ಸಾಧ್ಯವಿಲ್ಲ. ಅದರಲ್ಲೂ ಇನ್ನೊಬ್ಬರ ಎದುರು ಪತ್ನಿಯನ್ನು ಕೀಟಲೆ ಮಾಡುವುದು, ಅಪಹಾಸ್ಯ ಮಾಡುವುದು ತುಂಬಾ ಅವಮಾನಕರವಾಗಿರುತ್ತದೆ. ಹೀಗೆ ಮಾಡುವುದನ್ನು ನೀವು ವಿರೋಧಿಸಬೇಕು. ಇಲ್ಲದಿದ್ದರೆ ಇದು ನಿಮ್ಮ ದಾಂಪತ್ಯ ಕೊನೆಯಾಗಲು ಕಾರಣವಾಗಬಹುದು. ಮದುವೆಯೆಂದರೆ ಪ್ರೀತಿ, ಗೌರವ, ನಂಬಿಕೆ ಎಲ್ಲವೂ ಇರಬೇಕು. ಇದ್ಯಾವುದೂ ಇಲ್ಲದೆ ನೀವು ಎಷ್ಟು ವರ್ಷ ಜೊತೆಗಿದ್ದರೂ ದಾಂಪತ್ಯ ಪರಿಪೂರ್ಣವಾಗುವುದಿಲ್ಲ. 

ಗರ್ಭಧಾರಣೆ ತೂಕವನ್ನು ಹೆಚ್ಚಿಸುತ್ತದೆ: ನಿಸ್ಸಂದೇಹವಾಗಿ ನೀವು ಗರ್ಭಧಾರಣೆಯ ನಂತರ ತೂಕವನ್ನು ಹೆಚ್ಚಿಸಿಕೊಂಡಿರಬಹುದು. ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಒಂದು ಸೂಕ್ಷ್ಮ ಸಮಯ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ. ಮಗುವನ್ನು ಸುರಕ್ಷಿತವಾಗಿ ಈ ಜಗತ್ತಿಗೆ ತರಲು ಹೆಣ್ಣು ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಬಿಡಿಸಿ ಹೇಳಿ. ಹೆಣ್ಣು ಗರ್ಭಾವಸ್ಥೆಯ ಹಂತವನ್ನು ದಾಟಿ ಬರುವುದೇ ಬಹಳ ಸವಾಲಿನ ಕೆಲಸ ಈ ಸಂದರ್ಭದಲ್ಲಿ ಅವಳ ದೈಹಿಕ, ಮಾನಸಿಕ ಸ್ಥಿತಿಯಲ್ಲಿ ಆಗುವ ಬದಲಾವಣೆಯನ್ನು ಅದೇ ರೀತಿ ಒಪ್ಪಿಕೊಳ್ಳಬೇಕು ಎಂಬುದನ್ನು ಗಂಡನಿಗೆ ಮನವರಿಕೆ ಮಾಡಿಕೊಡುವುದು ಮುಖ್ಯವಾಗಿದೆ. 

ಲವ್ ಲೈಫ್ ರಿಫ್ರೆಶ್ ಮಾಡಿಕೊಳ್ಳಲು ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳೊದನ್ನ ಮರಿಬೇಡಿ

ಜಿಮ್‌ಗೆ ಹೋಗೋ ಮೂಲಕ ತೂಕ ಇಳಿಸಿಕೊಳ್ಳಬಹುದು: ನೀವು ಜಿಮ್‌ಗೆ ಹೋಗುವ ಮೂಲಕ, ವ್ಯಾಯಾಮ ಮಾಡುವ ಮೂಲಕ ಕೆಲವು ಹಂತಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು. ಆದರೆ ತೂಕವನ್ನು ಕಳೆದುಕೊಳ್ಳುವುದಕ್ಕಿಂತಲೂ ಹೆಚ್ಚು ಮುಖ್ಯ. ನಿಮ್ಮ ಗಂಡನ ಮನಸ್ಥಿತಿಯನ್ನು ಬದಲಾಯಿಸುವುದು. ಯಾಕೆಂದರೆ ತೂಕ ಕಳೆದುಕೊಂಡರೂ ಇಂಥಾ ಮನಸ್ಥಿತಿ ಇರುವವರ ಜೊತೆ ಜೀವನ ನಡೆಸುವುದು ಕಷ್ಟ. ನೀವು ತೂಕವನ್ನು ಕಳೆದುಕೊಂಡರೂ ಅವರು ಇನ್ಯಾವತ್ತಾದರೂ ನಿಮ್ಮ ದೇಹವನ್ನು ಟೀಕಿಸಬಹುದು. ಮತ್ತೊಮ್ಮೆ ಅವಮಾನ ಮಾಡಬಹುದು. ಯಾವುದೇ ಸಮಸ್ಯೆಗೆ ದಯೆ ಮತ್ತು ಗೌರವಾನ್ವಿತ ಪದಗಳ ಬದಲಿಗೆ ಟೀಕೆ ಮತ್ತು ನಿರುತ್ಸಾಹಗೊಳಿಸುವ ಧ್ವನಿ ಎಂದಿಗೂ ಸಕಾರಾತ್ಮಕ ಪರಿಹಾರವಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳವುದು ಮುಖ್ಯ.

ಗಂಡ, ಹೆಂಡತಿಯ ಕಾಳಜಿ ವಹಿಸಬೇಕು: ಗಂಡನಾದವನು ಗರ್ಭಾವಸ್ಥೆಯ ಸಮಯದಲ್ಲಿ, ಗರ್ಭಾವಸ್ಥೆಯ ನಂತರ ಹೆಂಡತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವಳು ತೂಕವನ್ನು ಹೆಚ್ಚಿಸಿಕೊಂಡರೆ ಆಕೆಯ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಇಬ್ಬರ ದೇಹ ಆಕಾರದಲ್ಲಿ ವ್ಯತ್ಯಾಸ ಕಂಡು ಬಂದರೂ ಪರಸ್ಪರ ಗೌರವಿಸಬೇಕು. ಯಾಕೆಂದರೆ ಪ್ರೀತಿಯಿರುವುದು ಕೇವಲ ಬಾಹ್ಯ ಸೌಂದರ್ಯದಲ್ಲಿ ಮಾತ್ರವಲ್ಲ, ಇದು ಮುಖ್ಯವಾಗಿ ಆಂತರಿಕ ಸೌಂದರ್ಯವನ್ನು ಗೌರವಿಸುವುದಾಗಿದೆ.

ಪ್ರೀತಿಯು ದೇಹ, ಮನಸ್ಸು, ಹೃದಯ ಮತ್ತು ಆತ್ಮ - ಎಲ್ಲಾ ಅಂಶಗಳಿಗೂ ಇರಬೇಕು. ದೇಹದ ಮೇಲಿನ ಪ್ರೀತಿ ನಿಜವಾದ ಪ್ರೀತಿಯಲ್ಲ. ಈ ವಿಚಾರವನ್ನು ನಿಮ್ಮ ಗಂಡನಿಗೆ ಅರ್ಥ ಮಾಡಿಸಬೇಕು. ಅವರು ಈ ಎಲ್ಲಾ ವಿಚಾರಗಳಿಗೆ ಒಪ್ಪದಿದ್ದರೆ, ನೀವು ದಾಂಪತ್ಯದಿಂದ ಹೊರನಡೆಯುವುದು ಒಳಿತು. ಯಾಕೆಂದರೆ ಇಂಥಾ ಮನಸ್ಥಿತಿಯಲ್ಲಿರುವ ದಾಂಪತ್ಯ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.