ನಟ ಅಭಿಷೇಕ್ ಬಚ್ಚನ್ ತಮ್ಮ 14 ವರ್ಷದ ಮಗಳು ಆರಾಧ್ಯ ಬಳಿ ವೈಯಕ್ತಿಕ ಮೊಬೈಲ್ ಫೋನ್ ಇಲ್ಲ ಎಂಬ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಮಗಳ ಮೇಲೆ ಪರಿಣಾಮ ಬೀರದಂತೆ ಹೇಗೆ ನೋಡಿಕೊಳ್ಳುತ್ತಾರೆ ಮತ್ತು ಆಕೆಗೆ ಫೋನ್ ನೀಡದಿರಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.

ಈಗ ಹುಟ್ಟುವ ಮಗುವಿನ ಕೈಯಲ್ಲೂ ಮೊಬೈಲ್ ಫೋನ್​ ಇರುತ್ತದೆ. ಅದಕ್ಕೆ ಕಾರಣ, ಅಪ್ಪ-ಅಮ್ಮ. ಮಕ್ಕಳ ಕೈಯಲ್ಲಿ ಮೊಬೈಲ್​ ಫೋನ್​ ಕೊಟ್ಟು ಕುಳ್ಳರಿಸಿದರೆ ಅವರು ಬೇರೆಯ ಕೆಲಸ ಮಾಡಿಕೊಳ್ಳಬಹುದು. ಮಗು ಹಟ ಮಾಡಿತು ಎಂದರೆ ಸಾಕು, ಮೊಬೈಲ್​ ಕೊಟ್ಟು ಸಮಾಧಾನ ಮಾಡುತ್ತಾರೆ. ತಮಗೆ ಟಿವಿಯ ಮುಂದೆ ಕೂತು ಸೀರಿಯಲ್​ ನೋಡಬೇಕು ಎಂದರೆ, ಮಕ್ಕಳು ಡಿಸ್​ಟರ್ಬ್​ ಮಾಡಬಾರದು ಎಂದು ಮೊಬೈಲ್​ ಕೊಟ್ಟು ಕುಳ್ಳರಿಸುವುದು ಮಾಮೂಲು. ಕೊನೆಗೆ ಮೊಬೈಲ್​ನಲ್ಲಿ ಮಕ್ಕಳು ಅದೂ ಇದೂ ನೋಡುವುದು ಗೊತ್ತಾಗುತ್ತಿದ್ದಂತೆಯೇ, ಮೊಬೈಲ್​ಗೆ ಮಕ್ಕಳಿಗೆ ಶಾಪ ಹಾಕುತ್ತಾ, ಅವರ ಕೈಯಲ್ಲಿ ಇರುವ ಮೊಬೈಲ್​ ಕಸಿದು ಅವರನ್ನು ಖಿನ್ನತೆಗೆ ಜಾರುವಂತೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ.

Add Asianetnews Kannada as a Preferred SourcegooglePreferred

14 ವರ್ಷದ ಆರಾಧ್ಯ

ಆದರೆ, ಇದೀಗ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್​ ಅವರ ಪುತ್ರಿ ಆರಾಧ್ಯ ಬಚ್ಚನ್​ ಬಳಿ ಫೋನ್​ ಇಲ್ಲ ಎನ್ನುವ ಶಾಕಿಂಗ್​ ವಿಷ್ಯವೊಂದನ್ನು ಅಭಿಷೇಕ್​ ರಿವೀಲ್​ ಮಾಡಿದ್ದಾರೆ. ಆರಾಧ್ಯಗೆ ಈಗ 14 ವರ್ಷ ಮುಗಿದಿದೆ. ಆದರೆ, ಇದುವರೆಗೆ ಆಕೆಯ ಕೈಗೆ ಮೊಬೈಲ್ ಫೋನ್​ ಕೊಟ್ಟಿಲ್ಲ ಎಂದಿದ್ದಾರೆ ಅಭಿಷೇಕ್​. ಆರಾಧ್ಯ ಬಳಿ ಫೋನ್ ಇಲ್ಲ, ಆಕೆಗೆ ಹೋಮ್​ವರ್ಕ್​ ಮಾಡಲು ಮನೆಯ ವೈಫೈ ಬಳಸಿದರೆ, ಸ್ನೇಹಿತರ ಕಾಲ್​ ಬಂದರೆ ಮನೆಯಲ್ಲಿ ಬೇರೆಯ ಫೋನ್​ ಇದೆ ಎಂದಿದ್ದಾರೆ.

ಡಿವೋರ್ಸ್​ ಮಗಳ ಮನಸ್ಸಿನ ಮೇಲೆ ಹೇಗೆ ಪರಿಣಾಮ

ಪೀಪಿಂಗ್ ಮೂನ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ನಟ ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡಿದರು. ತಮ್ಮ ಮತ್ತು ಅವರ ಪತ್ನಿ ಐಶ್ವರ್ಯ ರೈ ಬಚ್ಚನ್ ನಡುವಿನ ವಿಚ್ಛೇದನದ ವದಂತಿಗಳು ತಮ್ಮ 14 ವರ್ಷದ ಮಗಳು ಆರಾಧ್ಯ ಬಚ್ಚನ್‌ಗೆ ತೊಂದರೆ ನೀಡುತ್ತವೆಯೇ ಎಂದು ಕೇಳಿದಾಗ, ಅಭಿಷೇಕ್, "ಅವಳು ಈ ವದಂತಿಗಳಿಗೆ ಗಮನ ಕೊಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವಳು ಅವುಗಳಲ್ಲಿ ಆಸಕ್ತಿ ಹೊಂದಿಲ್ಲ, ಏಕೆಂದರೆ, ಅವಳು ಇಂಥ ಗಾಳಿ ಸುದ್ದಿಗಳನ್ನು ಯಾವುದನ್ನೂ ನಂಬುವುದಿಲ್ಲ" ಎಂದು ಉತ್ತರಿಸಿದರು. ಆರಾಧ್ಯಗೆ ತಾಯಿ (ಐಶ್ವರ್ಯ) ಎಲ್ಲವನ್ನೂ ಕುರುಡಾಗಿ ನಂಬಬೇಡ ಎಂದು ಕಲಿಸಿದ್ದಾರೆ ಎಂದು ಅವರು ವಿವರಿಸಿದರು.

ವೈಯಕ್ತಿಕ ಫೋನ್ ಇಲ್ಲ

14 ವರ್ಷ ವಯಸ್ಸಿನವಳಾಗಿದ್ದರೂ, ಆರಾಧ್ಯ ಬಳಿ ತನ್ನದೇ ಆದ ವೈಯಕ್ತಿಕ ಫೋನ್ ಇಲ್ಲ ಎಂದು ಅಭಿಷೇಕ್ ಬಚ್ಚನ್ ಬಹಿರಂಗಪಡಿಸಿದರು. "ಅವಳ ಸ್ನೇಹಿತರು ಅವಳನ್ನು ಸಂಪರ್ಕಿಸಲು ಬಯಸಿದರೆ, ಅವರು ಅವಳ ತಾಯಿಯ ಫೋನ್‌ಗೆ ಕರೆ ಮಾಡಬೇಕು. ನಾವು ಈ ನಿರ್ಧಾರವನ್ನು ಬಹಳ ಹಿಂದೆಯೇ ಮಾಡಿದ್ದೇವೆ. ಆದಾಗ್ಯೂ, ಆರಾಧ್ಯಗೆ ಇಂಟರ್ನೆಟ್ ಪ್ರವೇಶವಿದೆ, ಆದರೆ ಅವಳು ಹೆಚ್ಚಾಗಿ ಅದನ್ನು ತನ್ನ ಶಾಲೆಯ ಮನೆಕೆಲಸ ಮತ್ತು ಸಂಶೋಧನೆಗೆ ಬಳಸುತ್ತಾಳೆ ಎಂದು ಅವರು ಸ್ಪಷ್ಟಪಡಿಸಿದರು.

ಸಿನಿಮಾದಲ್ಲಿ ಗೌರವ

ತಮ್ಮ ಮಗಳು ಆರಾಧ್ಯ ಬಗ್ಗೆ ಮತ್ತಷ್ಟು ಮಾತನಾಡುತ್ತಾ, ಐಶ್ವರ್ಯ ಆರಾಧ್ಯಳಲ್ಲಿ ಚಲನಚಿತ್ರೋದ್ಯಮ ಮತ್ತು ಅವಳ ಕೆಲಸದ ಬಗ್ಗೆ ಹೆಚ್ಚಿನ ಗೌರವವನ್ನು ಮೂಡಿಸಿದ್ದಾರೆ. ನಾವು ಏನಾಗಿದ್ದೇವೆಯೋ ಅದು ಚಲನಚಿತ್ರಗಳು ಮತ್ತು ಪ್ರೇಕ್ಷಕರಿಂದ ಎಂದು ಐಶ್ವರ್ಯ ಅವಳಿಗೆ ಕಲಿಸಿದ್ದಾರೆ ಎಂದಿದ್ದಾರೆ. ಫೋನ್​ ಇದ್ದರೆ ಅಪ್ಪ-ಅಮ್ಮನ ಬಗ್ಗೆ ಇಲ್ಲಸಲ್ಲದ್ದು ಬಂದಿರುವುದನ್ನು ನೋಡಿದರೆ ಎಲ್ಲಿ ಮಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆಯೋ ಎನ್ನುವ ಕಾರಣಕ್ಕೆ ಆಕೆಗೆ ಫೋನ್​ ಕೊಡದೇ ಇರಬಹುದು ಎಂದು ಹಲವರು ಕಮೆಂಟ್​ ಮಾಡುತ್ತಿದ್ದರೂ, ಸೆಲೆಬ್ರಿಟಿ ಮಕ್ಕಳೇ ಹೀಗಿರುವಾಗ ಸಾಮಾನ್ಯ ಜನರು ಹುಟ್ಟುತ್ತಲೇ ಮಕ್ಕಳ ಕೈಯಲ್ಲಿ ಫೋನ್​ ಕೊಟ್ಟು ಅವರನ್ನು ಹಾಳು ಮಾಡುವುದು ಎಷ್ಟು ಸರಿ ಎಂದು ಹಲವರು ಹೇಳುತ್ತಿದ್ದಾರೆ.