ಮಗಳೇ,
ನಿನ್ನೆ ನಿನ್ನ ಹಲ್ಲು ಕಿತ್ತೆ. ಅದನ್ನೊಂದು ಡಬ್ಬದಲ್ಲಿ ಹಾಕಿಟ್ಟಿದ್ದೇನೆ. ಈ ನಿನ್ನ ಪುಟಾಣಿ ಹಲ್ಲಿನ ಜೊತೆಗೆ ನನಗೆ ತುಂಬ ನೆನಪುಗಳಿವೆ. ಬೊಚ್ಚು ಬಾಯಿ ಬಿಟ್ಟು ತುಟಿಯಿಂದ ಜೊಲ್ಲು ಇಳಿಸುತ್ತಾ, ಅಂಬೆಗಾಲಿಡುತ್ತಿದ್ದ ನೀನು ಒಂದು ಹಂತದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಬಾಯಿಗೆ ಹಾಕಲು ಶುರು ಮಾಡಿದ್ದೆ. ಮೂಲೆಯಲ್ಲಿಟ್ಟ ಪೊರಕೆ, ಚಪ್ಪಲಿಗಳೇ ಆಗ ನಿನ್ನ ಆಕರ್ಷಣೆಯ ಕೇಂದ್ರಬಿಂದು. ನೆಲದ ಮೇಲೆ ಕಸ ಬಿದ್ದಿದ್ದರೂ ನಮ್ಮ ಕಣ್ಣು ಅದರ ಮೇಲೆ ಬೀಳುವ ಮೊದಲೇ ನಿನ್ನ ಪುಟ್ಟ ಕಣ್ಣುಗಳಿಗೆ ಅವು ಕಂಡಿರುತ್ತಿದ್ದವು. ಎಳೇ ಬೆರಳುಗಳಲ್ಲಿ ಅದನ್ನೆತ್ತಿ ಬಾಯಿಗೆ ಹಾಕಿ ಚಪ್ಪರಿಸುತ್ತಿದ್ದೆ. ನಿನ್ನ ಬಾಯೊಳಗೆಲ್ಲ ಹುಡುಕಾಡಿದರೂ ನಮಗೆ ಸಿಗುತ್ತಿದ್ದದ್ದು ತುಂಟ ನಗೆ ಮಾತ್ರ. ಒಮ್ಮೆ ಅಂತೂ ರಬ್ಬರ್ ಬೇಗಡೆಯನ್ನೇ ನುಂಗಿ ಕಣ್ಣು ಮೇಲೆ ಮಾಡಿ ನಮ್ಮ ಜೀವಕ್ಕೆ ತಂದಿಟ್ಟಿದ್ದೆ. ಎಲ್ಲಿ ಗಂಟಲಲ್ಲಿ ಸಿಕ್ಕಿ ನಿನ್ನ ಉಸಿರಿಗೇನಾದ್ರೂ ಆಗುತ್ತದೋ, ನಿನ್ನ ಎಳೆಯ ಮೈಗೆ ಗಾಯ ಮಾಡಿ ಆಪರೇಶನ್ ಮೂಲಕ ಅದನ್ನು ಹೊರತೆಗೆಯ ಬೇಕಾಗುತ್ತದೋ ಅಂತ ಒದ್ದಾಡಿದ್ದೇ ಒದ್ದಾಡಿದ್ದು. ದೇವರ ದಯೆ, ಬಾಳೇಹಣ್ಣಿನ ಕೃಪೆ. ಮರುದಿನ ಅದು ನಿನ್ನ ದೇಹದಿಂದ ಹೊರ ಹೋಯ್ತು. ಇದಾಗಿ ಎರಡು ದಿನಕ್ಕೇ ನೀನು ಮತ್ತೇನೋ ಬಾಯಿಗೆ ಹಾಕಿದ್ದಾಗ ಅದೇನು ಅಂತ ನೋಡಲು ನಿನ್ನ ಬಾಯೊಳಗೆ ಕೈ ಹಾಕಿದ್ದಷ್ಟೇ, ಆ... ಅಂತ ಕಿರುಚಿ ಕೈ ಹಿಂತೆಗೆದುಕೊಂಡಿದ್ದೆ. ನಿನಗೆ ಹಲ್ಲು ಬಂದ ಖುಷಿಗೆ ನೀನು ಕಚ್ಚಿದ ನೋವೂ ಹಿತವಾಗಿತ್ತು, ಜೊತೆಗೆ ತುಂಟ ನಗುವೂ. 

ಆಮೇಲೆ ನಿನ್ನ ಅಮ್ಮನೂ, ನಾನೂ ಅದೆಷ್ಟು ಬಾರಿ ನಿನ್ನ ಹಲ್ಲಿನ ದಾಳಿಗೆ ತುತ್ತಾಗಿಲ್ಲ ಹೇಳು, ಮುತ್ತು ಕೊಡ್ತೀನಿ ಅಂತ ಬಂದು ಕೆನ್ನೆ ಮೇಲೆ ಗಾಯ ಮಾಡಿ ಹೋಗ್ತಿದ್ದ ಎಳೆ ರಾಕ್ಷಸಿ ನೀನು. ಅಮ್ಮನಂತೂ ನಿನಗೆ ಹಾಲು ಕೊಡುವಾಗ ಕಚ್ಚಿಸಿಕೊಂಡು ಅದೆಷ್ಟು ಸಲ ಕುಂಡೆಗೆರಡು ಕೊಟ್ಟಿದ್ದಾಳೋ, ಆಗೊಮ್ಮೆ ಕುಂಯಿ ಅಂದು ಮತ್ತೊಮ್ಮೆ ಹಾಲು ಕುಡಿಯುವಾಗ ಅದೇ ಆಟ! 

ಮಕ್ಕಳಿಗೆ ಮನಿ ಮ್ಯಾನೇಜ್‌ಮೆಂಟ್: ವಾರನ್‌ ಬಫೆಟ್‌ ಹೇಳೋದೇನು? 
ಕ್ರಮೇಣ ನಾವೆಷ್ಟೇ ಹುಷಾರಾಗಿದ್ರೂ ನಿನಗೆ ಚಾಕ್ಲೇಟ್ ತಿನ್ನೋ ಅಭ್ಯಾಸ ಆಯ್ತು. ಕೈ ಮೈಗೆ ಇಡೀ ಚಾಕ್ಲೇಟ್ ತಿನಿಸುತ್ತಾ, ಹಲ್ಲುಗಳನ್ನೆಲ್ಲ ಕಪ್ಪು ಕಪ್ಪು ಮಾಡಿಕೊಳ್ಳೋ ಆ ಸಂಭ್ರಮವೇ! ನಿಧಾನಕ್ಕೆ ನಿನ್ನ ಮುತ್ತಿನಂತಿದ್ದ ಹಲ್ಲಿನ ನಡುವೆ ಹಳದಿ ಬಿರುಕು. ಮುದ್ದು ಹಲ್ಲು ಹುಳ ತಿಂದು ವಕ್ರವಕ್ರ ಆಗಿ ನೀನೂ ವಕ್ರದಂತೆಯಾದೆ. ಆಮೇಲೆ ಒಂದೆರಡು ಹಲ್ಲುಗಳೂ ಬಂದವು. 
ಮಗಳಿನ್ನೂ ಎಳೇ ಮಗು ಅಂದುಕೊಳ್ಳುತ್ತಿದ್ದಾಗಲೇ ನಿನ್ನ ಹಲ್ಲು ಉದುರಿದೆ. ಈಗ ಹಲ್ಲಿಲ್ಲದ ನಿನ್ನ ಬಾಯಿ ನೋಡಿದಾಗ ಶುರು ಶುರುವಿನ ಬೊಚ್ಚು ಬಾಯಿ ಮುದ್ದಮ್ಮನದೇ ನೆನಪು. ಎಲ್ಲೋ ಮೀಟುವ ನೋವಿನ ಎಳೆ. ನಿನ್ನ ಒಂದು ಹಲ್ಲು ಬಿತ್ತು ಅಂದಾಗ, ನಿನ್ನ ಬಾಲ್ಯದ ಒಂದು ಅಧ್ಯಾಯ ಮುಗಿದ ಹಾಗೆ. ನಿನ್ನ ಬಾಲಲೀಲೆಗಳೆಲ್ಲ ಇನ್ನು ಕಡಿಮೆ ಆಗುತ್ತಾ ಬರುತ್ತೆ. ಸ್ಕೂಲ್, ಹೋಂವರ್ಕ್, ಫ್ರೆಂಡ್ಸ್ ಅಂತ ನೀನು ಬ್ಯುಸಿಯಾಗಿ ಬಿಡ್ತೀಯಾ. ನನ್ನ ಬೆರಳು ಹಿಡಿದು ಪುಟ್ಟ ಹೆಜ್ಜೆ ಇಟ್ಟು ಬರುವ ಮಗಳು ನನಗಿಂತ ರಭಸವಾಗಿ ಓಡ್ತಾಳೆ. ಈ ಓಟ ಮುಂದುವರಿಯುತ್ತದೆ. ನಿನ್ನ ಜೊತೆಗೆ ನಾನು ಓಡಲಾಗದೇ ಹಿಂದುಳಿದುಬಿಡುತ್ತೇನೆ..

ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ? 
ಎಲ್ಲೇ ಹೋದರೂ ಎಷ್ಟೇ ದೊಡ್ಡವಳಾದರೂ ಸಂಜೆ ಹೊತ್ತು ಫ್ರೆಂಡ್ಸ್ ಜೊತೆ ನಡೆಯುವಾಗ ತುಸು ಆಯ ತಪ್ಪಿದರೂ ಈ ಅಪ್ಪನ ಬೆರಳಿನ ನೆನಪಾಗಬಹುದು. ಹಲ್ಲು ಚಳ್ ಅಂದಾಗ ಅಪ್ಪ ಹಿಂದೆ ಹಲ್ಲು ಕಿತ್ತಿದ್ದರ ನೆನಪಾಗಬಹುದು. ನಿನ್ನ ಅಂಥಾ ನೆನಪು, ಕನವರಿಕೆಗಳೇ ಸಾಕು, ಈ ಅಪ್ಪನನ್ನು ಬೆಚ್ಚಗಿಡಲು.
.. ನಿನ್ನ ಮಧ್ಯೆ ಕರಗಿದ ಪುಟ್ಟ ಹಲ್ಲು ಈಗ ನನ್ನ ಅಂಗೈಯಲ್ಲಿದೆ, ನಿನ್ನ ಬಾಲ್ಯದ ತುಂಡಿನ ಹಾಗೆ. ಒಂದು ಹಲ್ಲು ಕಿತ್ತಿದ್ದಕ್ಕೇ ಈ ಪರಿ ಸುಸ್ತಾಗಿದ್ದೇನೆ. ಇನ್ನು ಈಗ ನಿನ್ನ ಬಾಯೊಳಗಿರುವ ಅಷ್ಟೂ ಹಲ್ಲು ಹೋಗಿ, ಹೊಸ ಹಲ್ಲುಗಳು ಬಂದು, ಫಳ ಫಳ ಹೊಳೆಯುವ ದಾಳಿಂಬೆಯಂಥಾ ಹಲ್ಲುಗಳು ಬಂದು, ಅದು ಯಾರನ್ನೋ ಸೆಳೆದು...ಉಫ್, ಅದೆಲ್ಲಾ ಈಗ ಬೇಡ ಅಂತೀಯಾ?

ಕ್ಯಾಮೆರಾ ಆಚೆಗಿಡಿ, ಈ ಕ್ಷಣ ಎಂಜಾಯ್ ಮಾಡಿ! ದಾಂಪತ್ಯಕ್ಕೆ ಟಿಪ್ಸ್