ವಾರನ್‌ ಬಫೆಟ್‌ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕೆದಾರ, ಜನಪ್ರಿಯ ಬ್ಯುಸಿನೆಸ್‌ ಟೈಕಾನ್‌. ಅಷ್ಟೇ ಅಲ್ಲ,ವಿಶ್ವದ ಟಾಪ್‌ ಟೆನ್‌ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರೋ ಉದ್ಯಮಿ.ಆದ್ರೆ ಬಫೆಟ್‌ಗೆ ಈ ಯಶಸ್ಸು, ವ್ಯಾಪಾರ ನೈಪುಣ್ಯ ಆಚಾನಕ್‌ ಆಗಿ ಬಂದಿದ್ದಲ್ಲ. ಬದಲಿಗೆ ಬಾಲ್ಯದಿಂದಲೇ ಬಫೆಟ್‌ಗೆ ಹಣ,ಅದರ ಮೌಲ್ಯ ಹಾಗೂ ಸಂಪಾದನೆಯ ಪ್ರ್ಯಾಕ್ಟಿಕಲ್ ‌ಅನುಭವ ಧಕ್ಕಿತ್ತು. ಇಂದು ಬರ್ಕ್‌ಶಿರೆ ಹಾಥ್‌ವೇ ಸಿಇಒ ಆಗಿರೋ ಬಫೆಟ್‌ ತಮ್ಮ 6ನೇ ವಯಸ್ಸಿನಲ್ಲಿ ಕೋಕ್‌ ಮಾರಿ ಹಣ ಸಂಪಾದಿಸಿದ್ದರು. ಅಷ್ಟೇ ಅಲ್ಲ, ಬಾಲ್ಯದಲ್ಲಿ ಮನೆ ಮನೆಗೆ ಮ್ಯಾಗಜಿನ್ಸ್‌ ಹಾಗೂ ಗಮ್‌ ಮಾರಿ ಪಾಕೆಟ್‌ ಮನಿ ಸಂಪಾದಿಸಿದ್ದರು. ʼನನ್ನ ತಂದೆ ನನ್ನ ಅತಿದೊಡ್ಡ ಸ್ಫೂರ್ತಿ. ಉತ್ತಮ ಅಭ್ಯಾಸಗಳನ್ನು ಎಳವೆಯಲ್ಲೇ ಮೈಗೂಡಿಸಿಕೊಳ್ಳಬೇಕು ಎಂಬ ಪಾಠವನ್ನು ನಾನು ಬಾಲ್ಯದಲ್ಲೇ ಅವರಿಂದ ಕಲಿತೆ. ಅವುಗಳಲ್ಲಿ ಉಳಿತಾಯ ಮುಖ್ಯವಾದ ಪಾಠʼ ಎಂದು ಸಂದರ್ಶನವೊಂದರಲ್ಲಿ ಬಫೆಟ್‌ ಹೇಳಿಕೊಂಡಿದ್ದಾರೆ. ʼಬಹುತೇಕ ಸಂದರ್ಭಗಳಲ್ಲಿ ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟು ಹಣದ ನಿರ್ವಹಣೆ ಬಗ್ಗೆ ಮಾತನಾಡೋ ತನಕ ಪೋಷಕರು ಅವರಿಗೆ ಹಣದ ಮೌಲ್ಯ ಹಾಗೂ ಉಳಿತಾಯದ ಬಗ್ಗೆ ಕಲಿಸೋ ಯೋಚನೆ ಮಾಡೋದಿಲ್ಲ. ಈ ಪಾಠವನ್ನು ಅವರು ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಯಲ್ಲಿರೋವಾಗಲೇ ಪ್ರಾರಂಭಿಸಬೇಕುʼ ಎನ್ನೋದು ಬಫೆಟ್‌ ಅಭಿಪ್ರಾಯ.ಹಾಗಾದ್ರೆ ಮಕ್ಕಳಿಗೆ ಮನಿ ಮ್ಯಾನೇಜ್‌ಮೆಂಟ್‌ ಪಾಠ ಮಾಡೋದು ಹೇಗೆ? ಬಫೆಟ್‌ ತಮ್ಮಮಕ್ಕಳಿಗೆ ಈ ಪಾಠ ಹೇಗೆ ಮಾಡಿದ್ದಾರೆ?  ಇಲ್ಲಿದೆ ಮಾಹಿತಿ.

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌!

ಮನಿ ಪಾಠಕ್ಕೆ ಸೂಕ್ತ ವಯಸ್ಸು ಯಾವುದು?
ಮಕ್ಕಳಿನ್ನು ಚಿಕ್ಕವರು. ದುಡ್ಡು,ಹಣಕಾಸು, ಖರ್ಚು, ಉಳಿತಾಯಗಳ ಬಗ್ಗೆ ಈಗಲೇ ಹೇಳಿದ್ರೆ ಏನೂ ಅರ್ಥವಾಗಲ್ಲ ಎಂದು ಭಾವಿಸಿ ಬಹುತೇಕ ಪೋಷಕರು ಮಕ್ಕಳು ಪ್ರೌಢಾವಸ್ಥೆಗೆ ತಲುಪೋ ತನಕ ಆರ್ಥಿಕ ವಿಚಾರಗಳ ಬಗ್ಗೆ ತಿಳಿವಳಿಕೆ ಮೂಡಿಸೋದಿಲ್ಲ. ಆದ್ರೆ, ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿರೋ ಮಗುವಿಗೆ ಹಣದ ವಿಚಾರಗಳ ಬಗ್ಗೆ ಕಲಿಸಿದ್ರೆ ಅದನ್ನು ಅರ್ಥ ಮಾಡಿಕೊಳ್ಳೋ ಸಾಮರ್ಥ್ಯ ಅದಕ್ಕಿರುತ್ತದೆ ಎನ್ನುತ್ತಾರೆ ಬಫೆಟ್‌. ಮಕ್ಕಳ ಮಿದುಳಿನ ಶೇ.8೦ರಷ್ಟು ಬೆಳವಣಿಗೆ ಅವರು 3ವರ್ಷಕ್ಕೆ ಕಾಲಿಡೋ ಮುನ್ನ ಆಗುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಕೂಡ ಸಾಬೀತುಪಡಿಸಿವೆ.ಕೇಂಬ್ರಿಜ್‌ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ ಮಕ್ಕಳು 3 ಮತ್ತು 4ನೇ ವಯಸ್ಸಿನ ನಡುವೆ ಹಣಕ್ಕೆ ಸಂಬಂಧಿಸಿದ ಮೂಲ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಶಕ್ತರಾಗಿರುತ್ತಾರೆ. ಏಳನೇ ವಯಸ್ಸಿಗೆ ಭವಿಷ್ಯದ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಬೇಸಿಕ್‌ ಕಾನ್ಸೆಪ್ಟ್‌ಗಳು ಅಭಿವೃದ್ಧಿ ಹೊಂದಿರುತ್ತವೆ.

 ಬಫೆಟ್‌ ಕಲಿಸಿದ ಮನಿ ಪಾಠಗಳು ಯಾವುವು ಗೊತ್ತಾ?
ಬಫೆಟ್‌ 2011ರಲ್ಲಿ ʼಸೀಕ್ರೆಟ್‌ ಮಿಲಿಯನರ್ಸ್‌ ಕ್ಲಬ್‌ʼ ಎಂಬ ಆನಿಮೇಟೆಡ್‌ ಸೀರೀಸ್‌ ಮೂಲಕ ಒಂದಿಷ್ಟು ಮಕ್ಕಳಿಗೆ ಆರ್ಥಿಕ ಪಾಠ ಮಾಡಿದ್ದರು. ಈ ಶೋನಲ್ಲಿ 26 ಎಪಿಸೋಡ್‌ಗಳಿದ್ದು,ಪ್ರತಿಯೊಂದು ಶೋ ಕೂಡ ಒಂದೊಂದು ಆರ್ಥಿಕ ನೀತಿಯನ್ನೊಳಗೊಂಡಿದೆ. ಅದರಿಂದ ಆಯ್ದ ಕೆಲವು ಕೆಲವು ಆರ್ಥಿಕ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಫ್ಲೆಕ್ಸಿಬಲ್‌ ಥಿಂಕರ್‌ ಆಗೋದು ಹೇಗೆ?
ಮೊದಲ ಬಾರಿಗೆ ಉಳಿತಾಯದ ಯೋಜನೆ ಸಫಲವಾಗಿಲ್ಲ ಅಥವಾ ಅವರ ಯಾವುದೋ ಹೂಡಿಕೆ ಯೋಜನೆ ಯಶಸ್ವಿಯಾಗಿಲ್ಲ ಎಂಬ ಕಾರಣಕ್ಕೆ ಆರ್ಥಿಕ ವಿಚಾರಗಳನ್ನು ಕಲಿಯಲು ನಿಮ್ಮ ಮಗು ಹಿಂದೇಟು ಹಾಕದಂತೆ ಅವರನ್ನು ಪ್ರೋತ್ಸಾಹಿಸಿ.ಹೀಗೆ ಮಾಡೋದ್ರಿಂದ ಭವಿಷ್ಯದಲ್ಲಿ ಆರ್ಥಿಕ ಸವಾಲುಗಳು ಎದುರಾದಾಗ ಅದನ್ನು ಹೇಗೆ ಎದುರಿಸಬೇಕು ಎಂಬುದು ಅವರಿಗೆ ತಿಳಿಯುತ್ತೆ. ಉದಾಹರಣೆಗೆ ಮನೆಯಲ್ಲೇ ಇರೋ ಬಳಸದ ಕೆಲವೊಂದು ವಸ್ತುಗಳನ್ನು ಕ್ರಿಯೇಟಿವ್‌ ಆಗಿ ಬಳಸಿಕೊಳ್ಳಬಹುದು. ದುಡ್ಡು ಕೊಟ್ಟು ಪೆನ್‌ ಸ್ಟ್ಯಾಂಡ್‌ ಖರೀದಿಸೋ ಬದಲು ಮನೆಯಲ್ಲಿರೋ ಖಾಲಿ ಪ್ಲಾಸ್ಟಿಕ್‌ ಬಾಟಲ್ನಿಂದ ಅಂದವಾದ ಪೆನ್‌ ಸ್ಟ್ಯಾಂಡ್‌ ಸಿದ್ಧಪಡಿಸಬಹುದು.ಈ ರೀತಿ ಕಸದಿಂದ ರಸ ತೆಗೆಯೋ ಮೂಲಕ ಹಣ ಉಳಿತಾಯ ಮಾಡೋ ಮಕ್ಕಳ ಯೋಚನೆಗಳನ್ನು ಪ್ರೋತ್ಸಾಹಿಸಿ.

ಉಳಿತಾಯದ ಪಾಠ ಕಲಿಸೋದು ಹೇಗೆ?
ʼಒಂದು ರೂ. ಉಳಿತಾಯ ಒಂದು ರೂ. ಗಳಿಕೆಗೆ ಸಮʼ ಎಂಬ ಬೆನ್‌ ಫ್ರಾಂಕ್ಲಿನ್‌ ಮಾತನ್ನು ಮಕ್ಕಳಿಗೆ ಮನವರಿಕೆ ಮಾಡಿಸಿ. ನಿಮ್ಮ ಮಗು ಹಣವನ್ನುಸಮರ್ಪಕವಾಗಿ ಬಳಕೆ ಮಾಡೋದನ್ನು ಕಲಿಯಬೇಕೆಂದ್ರೆ ಅವರಿಗೆ ಅಗತ್ಯಗಳು ಹಾಗೂ ಬಯಕೆಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಸಬೇಕು.ಬಹುತೇಕ ಪೋಷಕರು ಮಕ್ಕಳಿಗೆ ಒಂದು ಡಬ್ಬಿ ನೀಡಿ ಅದ್ರಲ್ಲಿ ಹಣ ಕೂಡಿಡಲು ಹೇಳುತ್ತಾರೆ.ಆದ್ರೆ ಈ ರೀತಿ ಮಾಡೋ ಬದಲು ಅವರಿಗೆ 2 ಡಬ್ಬಿಗಳನ್ನು ನೀಡಿ. ಒಂದರಲ್ಲಿ ಉಳಿತಾಯದ ಹಣ ಹಾಗೂ ಇನ್ನೊಂದರಲ್ಲಿ ಖರ್ಚಿನ ಹಣ ಹಾಕಿಡಲು ಹೇಳಿ. ಉದಾಹರಣೆಗೆ ಅವರಿಗೆ ಅಜ್ಜ ಮತ್ತು ಅಜ್ಜಿ ಪ್ರೀತಿಯಿಂದ ಸ್ವಲ್ಪ ಹಣ ನೀಡಿರುತ್ತಾರೆ ಎಂದಿಟ್ಟುಕೊಳ್ಳೋಣ. ಈ ಹಣವನ್ನು ಉಳಿತಾಯ ಹಾಗೂ ವೆಚ್ಚವೆಂದು ವಿಂಗಡಿಸಿ ಎರಡು ಡಬ್ಬಿಗಳಿಗೆ ಹಂಚಿ ಹಾಕಲು ಹೇಳಿ.ಇದ್ರಿಂದ ಮಕ್ಕಳಿಗೆ ಹಣವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ತಿಳಿಯುತ್ತೆ.ಇನ್ನು ಮಕ್ಕಳು ತಮ್ಮ ಬಳಿಯಿರೋ ಹಣದಿಂದ ಏನೆಲ್ಲ ಖರೀದಿಸಲು ಬಯಸುತ್ತಾರೆ ಎಂಬುದನ್ನು ಪಟ್ಟಿ ಮಾಡಲು ಹೇಳಿ.ಅದ್ರಲ್ಲಿ ಅವರಿಗೆ ಅತ್ಯಗತ್ಯವಾಗಿರೋ ವಸ್ತುಗಳು ಯಾವುವು ಹಾಗೂ ಅವರು ಬೇಕೆಂದು ಬಯಸುತ್ತಿರೋ ವಸ್ತುಗಳು ಯಾವುವು ಎಂಬುದನ್ನು ಗುರುತಿಸಲು ಹೇಳಿ. ಇದ್ರಿಂದ ಮಕ್ಕಳಿಗೆ ಅಗತ್ಯ ಹಾಗೂ ಬಯಕೆ ನಡುವಿನ ವ್ಯತ್ಯಾಸ ಅರ್ಥವಾಗುತ್ತೆ.

ಮಗಳ ಹೆಸರಲ್ಲಿ ಉಳಿತಾಯ ಮಾಡಬೇಕೆ? 

ಬೆಲೆ ಹಾಗೂ ಮೌಲ್ಯದ ವ್ಯತ್ಯಾಸ ತಿಳಿಸಿ
ಈಗಂತೂ ಎಲ್ಲ ವಸ್ತುಗಳನ್ನು ಅತಿಯಾಗಿ ಮಾರ್ಕೆಟಿಂಗ್‌ ಮಾಡುತ್ತಾರೆ. ಹೀಗಿರೋವಾಗ ನಾವು ಖರೀದಿಸೋ ವಸ್ತುವಿನ ಬೆಲೆ ಹಾಗೂ ಮೌಲ್ಯದ ಬಗ್ಗೆ ಸಮರ್ಪಕವಾಗಿ ಯೋಚಿಸಬೇಕಾಗುತ್ತೆ.ಎಷ್ಟೋ ಬಾರಿ ನಾವು ಇಷ್ಟಪಟ್ಟು ಖರೀದಿಸಿದ ಶೂಗೆ ಜಾಸ್ತಿ ಬೆಲೆ ನೀಡಿದ್ದೇವೆ ಎಂಬುದು ಮನೆಗೆ ಬಂದ ಬಳಿಕ ತಿಳಿಯುತ್ತೆ. ಈ ರೀತಿ ಆಲೋಚಿಸದೆ ಹಣವನ್ನು ಖರ್ಚು ಮಾಡಿ ಪಶ್ಚತ್ತಾಪ ಪಡೋದಕ್ಕಿಂತ ಮೊದಲೇ ಯೋಚಿಸೋದು ಉತ್ತಮ. ಹೀಗಾಗಿ ಮಕ್ಕಳಿಗೆ ವಸ್ತುವಿನ ಬೆಲೆ ಹಾಗೂ ಮೌಲ್ಯದ ವ್ಯತ್ಯಾಸ ತಿಳಿಸಬೇಕು.

ಉತ್ತಮ ನಿರ್ಧಾರ ಕೈಗೊಳ್ಳಲು ಪ್ರೇರೇಪಿಸೋದು ಹೇಗೆ?
ಹಣದ ವಿಷಯದಲ್ಲಿ ಉತ್ತಮ ನಿರ್ಧಾರ ಯಾವುದು ಮತ್ತು ಅದನ್ನು ಕೈಗೊಳ್ಳೋದು ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸಿ ಕೊಡಬೇಕು. ಕೈಯಲ್ಲಿ ಕಡಿಮೆ ಹಣವಿರೋವಾಗ ಬಯಸೋ ಎಲ್ಲ ವಸ್ತುಗಳನ್ನು ಖರೀದಿಸಲು ಸಾಧ್ಯವಾಗೋದಿಲ್ಲ. ಅಂಥ ಸಮಯದಲ್ಲಿ ಅಗತ್ಯವಿರೋ ವಸ್ತು ಯಾವುದು ಎಂಬುದನ್ನು ಗುರುತಿಸಿ, ಖರೀದಿಸಬೇಕು. ನಂತರದ ದಿನಗಳಲ್ಲಿ ಮತ್ತಷ್ಟು ಹಣ ಸಿಕ್ಕಿದ ಬಳಿಕ ಇಷ್ಟಪಟ್ಟ ವಸ್ತುವನ್ನು ಖರೀದಿಸಬಹುದು. ಇಂಥ ಪಾಠವನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿದ್ರೆ ದೊಡ್ಡವರಾದ ಬಳಿಕ ಅವರು ಹಣವನ್ನು ಯೋಚಿಸಿ, ಅಗತ್ಯಕ್ಕನುಗುಣವಾಗಿ ವ್ಯಯಿಸುತ್ತಾರೆ.