ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ!
ಪತ್ನಿಯ ಬಾಯಲ್ಲಿ ಉತ್ತಮ ಗಂಡ ಎಂದು ಹೇಳಿಸಿಕೊಳ್ಳೋದು ಸುಲಭದ ಮಾತಲ್ಲ. ಹಾಗೆ ಹೇಳಿಸಿಕೊಳ್ಳಲು ನೀವು ಶಕ್ತರಾಗಿದ್ದೀರಿ ಎಂದರೆ ನೀವು ಬಹಳ ಸ್ಪೆಶಲ್ ಎಂದೇ ಅರ್ಥ.
ಜಗತ್ತಿನ ಅತ್ಯುತ್ತಮ ಪತಿ ಎಂಬವನೊಬ್ಬನನ್ನು ಹುಡುಕುವುದು ಕಷ್ಟ. ಆದರೆ, ಪ್ರತಿ ಮಹಿಳೆಯ ಪಾಲಿಗೆ, ಆಕೆಯ ಪುಟ್ಟ ಜಗತ್ತಿಗೆ ಆತ ಅತ್ಯುತ್ತಮನಾಗಿದ್ದರೆ ಸಾಕು- ಆಕೆ ಅನುಮಾನವಿಲ್ಲದೆ ಘೋಷಿಸಬಹುದು, ತನಗೆ ಜಗತ್ತಿನ ಅತ್ಯುತ್ತಮ ಪತಿ ಸಿಕ್ಕಿದ್ದಾನೆಂದು. ಇಷ್ಟಕ್ಕೂ ಮಹಿಳೆ ಪತಿಯಲ್ಲಿ ಬಯಸುವ, ಮೆಚ್ಚುವ ವರ್ತನೆಗಳು ಯಾವುವು ಗೊತ್ತಾ?
ಇಡೀ ಜಗತ್ತೇ ಮೆಚ್ಚಿದರೂ ಪತ್ನಿ ಮೆಚ್ಚದ ಪತಿ ಇವರು!
ಅವಳ ಬಳಿ ಬೆಸ್ಟ್ ಹಸ್ಬೆಂಡ್ ಎಂಬ ಪಟ್ಟ ಪಡೆಯಲು ಪತಿ ಮಹಾಶಯನೇನು ತಿಪ್ಪರಲಾಗ ಹಾಕಬೇಕಿಲ್ಲ. ಬದಲಿಗೆ ಆತ ಆಕೆಗೆ ಬೆಸ್ಟ್ ಫ್ರೆಂಡ್ ಆಗಿದ್ದರೆ ಸಾಕು, ಅವನನ್ನು ಆಕೆ ಸಿಕ್ಕಾಪಟ್ಟೆ ಹಚ್ಚಿಕೊಳ್ಳಲು. ಪತಿಯಲ್ಲಿ ಈ ಗುಣಗಳಿದ್ದರೆ ಸಾಕು, ಪತ್ನಿ ಎಲ್ಲರ ಬಳಿ ಹೇಳಿಕೊಂಡು ಬಂದಾಳು, ಎಲ್ಲರಂಥವನಲ್ಲ ನನ ಗಂಡ ಎಂದು...
1. ಹೃದಯ ಗೆಲ್ಲೋಕೆ ಸದಾ ಸಿದ್ಧ
ಪ್ರಣಯ ಎಂಬುದು ಗಂಡಹೆಂಡತಿ ನಡುವೆ ಬಹಳ ಮುಖ್ಯ. ಇಬ್ಬರೂ ಒಬ್ಬರಿಗೊಬ್ಬರು ಸರ್ಪ್ರೈಸ್ ಕೊಡುವುದು, ಅವರ ಖುಷಿಯನ್ನು ಆಗಾಗ ದ್ವಿಗುಣವಾಗಿಸುವ ಹಪಹಪಿಯಿಂದ ಹೊಸತೇನಾದರೂ ಮಾಡುವುದು ಮಾಡುತ್ತಿರುತ್ತೀರಿ. ಅಂತೆಯೇ ಪತಿ ಪರಮೇಶ್ವರನು ಆಗಾಗ ಪತ್ನಿಯನ್ನು ಕೂರಿಸಿ ತಿಂಡಿ ಮಾಡುವುದು, ಸರ್ಪ್ರೈಸ್ ಕೊಡಲೆಂದೇ ಮನೆಗೆ ಬೇಗ ಬರುವುದು, ಮನೆಯ ಟೆರೇಸ್‌ನಲ್ಲಿ ಕ್ಯಾಡಲ್ ಲೈಟ್ ಡಿನ್ನರ್ ಆರೇಂಜ್ ಮಾಡಿ ನಿಮ್ಮ ಕಣ್ಣು ಮುಚ್ಚಿ ಕರೆದುಕೊಂಡು ಹೋಗುವುದು... ಹೀಗೇ ಹೃದಯ ಗೆಲ್ಲೋಕಂಥ ಹೊಸ ಹೊಸ ಯತ್ನ ಮಾಡ್ತಾನೇ ಇರ್ತಾನೆ. ಮಾಡುವ ಇಂಥ ಪ್ರಯತ್ನಗಳೆಲ್ಲ ಅಂದುಕೊಂಡಂತೆ ಆಗದೆ ಇರಬಹುದು, ಆದರೆ ಅವೆಲ್ಲವುಗಳಲ್ಲಿ ನಿಮ್ಮ ಕಂಗಳಲ್ಲಿ ಆ ಖುಷಿ ಕಾಣುವ ಆಸೆಯೊಂದೇ ಇರುತ್ತದೆ, ಪ್ರಯತ್ನಗಳು ಪ್ರಾಮಾಣಿಕವಾಗಿರುತ್ತವೆ...
ಇದು ಸಂಸಾರಸ್ಥರಿಗಾಗಿ ಮಾತ್ರ! ನೀವಿದನ್ನು ಓದಲೇಬೇಕು! .
2. ನಿಮ್ಮೊಂದಿಗೆ ಸಮಯ ಕಳೆಯೋದು ಆತನಿಗಿಷ್ಟ
ಇಡೀ ಬದುಕನ್ನು ಒಬ್ಬರೊಂದಿಗೆ ಕಳೆಯೋದೆಂದರೆ ಬೋರಾಗುವುದಿಲ್ಲವೇ ಎನಿಸಬಹುದು. ಆದರೆ ಪ್ರೀತಿಯೊಂದಿದ್ದರೆ ಸಾಕು, ಬದುಕಿನ ಪ್ರತಿಯೊಂದು ಗಳಿಗೆಯನ್ನೂ ಒಟ್ಟಿಗೇ ಕಳೆಯೋಣ ಎನಿಸುತ್ತದೆ. ಸ್ವಲ್ಪ ಅವಕಾಶ ಸಿಕ್ಕರೂ ಜೊತೆಯಾಗಿ ಇದ್ದುಬಿಡಬೇಕು ಎನಿಸುತ್ತದೆ. ನಿಮ್ಮ ಪತಿಗೂ ಹೀಗೆ ಅನಿಸುತ್ತಿದ್ದರೆ, ಆತ ನಿಮ್ಮ ಜೊತೆ ಕಳೆವ ಕ್ಷಣಕ್ಕಾಗಿ ಪ್ರತಿನಿತ್ಯ ಹಪಹಪಿಸುತ್ತಿದ್ದಾನೆಂದರೆ, ನಿಮ್ಮ ಮಾತುಗಳನ್ನು ಕೇಳಲು, ನಿಮ್ಮೊಂದಿಗೆ ಬದುಕಿನೆಲಲ ಸವಾಲುಗಳನ್ನು ಎದುರಿಸಲು ಬಯಸುತ್ತಾನೆಂದರೆ ಅದಕ್ಕಿಂತ ಇನ್ನೇನು ಬೇಕು ಹೇಳಿ?
3. ತನ್ನ ಕುಟುಂಬದ ಮೇಲೆ ಪ್ರೀತಿ
ಯಾವ ಪುರುಷನು ಕುಟುಂಬವನ್ನು ವೃತ್ತಿಗಿಂತ, ಗೆಳೆಯರಿಗಿಂತ, ಫೇವರೇಟ್ ಟಿವಿ ಪ್ರೋಗ್ರಾಂಗಿಂತ ಹೆಚ್ಚೆಂದು ಬಯಸುತ್ತಾನೋ ಆತನೊಂದಿಗಿರುವವರು ಖಂಡಿತಾ ಸುಖವಾಗಿರುತ್ತಾರೆ. ಮದುವೆಗೆ ಮುಂಚೆಯೇ ಆಗಲಿ, ನಿಮ್ಮ ಪತಿಯಾಗುವವನಿಗೆ ತನ್ನ ಕುಟುಂಬ, ತಾಯಿ ಎಂದರೆ ಎಲ್ಲಿಲ್ಲದ ಪ್ರೀತಿ ಎಂದರೆ ಆತ ಮದುವೆಯಾದ ಬಳಿಕ ಪತ್ನಿ, ಮಕ್ಕಳಿಗೂ ಅದೇ ಪ್ರಾಶಸ್ತ್ಯ ನೀಡಬಲ್ಲ.
ಮದುವೆಯಾದ ಕೂಡಲೇ ನೀವು ಎದುರಿಸುವ ಸಮಸ್ಯೆಗಳಿವು! .
4. ಗೌರವ ಕುಂದಲ್ಲ
ಬಹುತೇಕ ಯುವಕರು ಮದುವೆಯಾಗುವವರೆಗೆ ಇದ್ದಂತೆ ನಂತರದಲ್ಲಿ ಪತ್ನಿಯ ಜೊತೆ ನಡೆದುಕೊಳ್ಳುವುದಿಲ್ಲ. ಅಲ್ಲಿಯವರೆಗೆ ಉಳಿಸಿಕೊಳ್ಳಲು ಮಾಡುತ್ತಿದ್ದ ಪ್ರಯತ್ನಗಳೆಲ್ಲ ತನ್ನಿಂತಾನೇ ಬಂದ್ ಆಗುತ್ತವೆ. ಹೇಗಿದ್ದರೂ ಮದುವೆಯಾಯ್ತಲ್ಲ, ಇನ್ನು ಜೊತೆಯೇ ಇರುತ್ತಾಳಲ್ಲ ಎಂಬ ಅಸಡ್ಡೆಯೊಂದು ಅವಳ ಜೊತೆ ನಡೆದುಕೊಳ್ಳುವ ರೀತಿಯನ್ನೇ ಬದಲಿಸಿಬಿಡುತ್ತವೆ. ಆಕೆ ತನ್ನೆಲ್ಲ ಕೆಲಸಗಳನ್ನು ಮಾಡುವ ಆಳು, ಅದು ಅವಳ ಕರ್ತವ್ಯ ಎಂಬಂತೆ ಭಾವಿಸುವವರು ಹಲವರು. ಆದರೆ, ಮದುವೆಯ ಬಳಿಕವೂ ನಿಮ್ಮ ಪತಿ ಪ್ರತಿ ಮಾತಿನಲ್ಲೂ ನಿಮ್ಮನ್ನು ಗೌರವಿಸುತ್ತಾನೆ, ಎಲ್ಲಿಯೂ ಕೀಳಾಗಿ ಕಾಣದೆ ತನ್ನ ಸಮಕ್ಕೆ ಭಾವಿಸುತ್ತಿದ್ದಾನೆ ಎಂದರೆ ಅತ ಖಂಡಿತವಾಗಿಯೂ ಸ್ಪೆಶಲ್.
5. ನಿಮ್ಮ ನಗುವಿಗಾಗಿ
ನೀವೇನು ಎಲ್ಲರಿಗಿಂತ ಚೆನ್ನಾಗಿ ಅಡುಗೆ ಮಾಡಬೇಕೆಂದಿಲ್ಲ, ಆದರೂ ನಿಮ್ಮ ಕೈರುಚಿ ಮೀರಿಸುವವರಿಲ್ಲ ಎಂದು ಗಂಭೀರವಾಗಿಯೂ, ಹಾಸ್ಯವಾಗಿಯೂ ಹೇಳಬಲ್ಲ ಚಾಕಚಕ್ಯತೆ ಅವನದು. ಒಟ್ಟಿನಲ್ಲಿ ನಿಮಗೆ ಬೇಸರವಾಗದ ಹಾಗೆ ನಡೆದುಕೊಳ್ಳುತ್ತಾವೆ. ನಿಮ್ಮ ಜೋಕ್ ಗಳು ತುಂಬಾ ನಗು ತರಿಸದೇ ಇರಬಹುದು, ಆದರೂ ಅವನು ಅದರಲ್ಲೇ ಖುಷಿ ಕಾಣುತ್ತಾನೆ. ಅವನು ನಿಮ್ಮ ಹಾಸ್ಯವನ್ನು ಇಟ್ಟುಕೊಂಡು ಮತ್ಯಾವುದೋ ವಿಷಯ ಕೆಣಕಿ ನಿಮ್ಮನ್ನು ನಗಿಸಬಲ್ಲ. ಒಟ್ಟಿನಲ್ಲಿ ಆತ ನಿಮ್ಮ ನಗುವೊಂದನ್ನೇ ಬಯಸುತ್ತಿರುತ್ತಾನೆ.
ಭಾರತದಲ್ಲೇ ಡೈವೋರ್ಸ್ ಅತಿ ಕಡಿಮೆ... ಹೆಚ್ಚಿರೋ ದೇಶಗಳಿವು!
6. ನಿಮ್ಮ ಕನಸುಗಳಿಗೆ ಬೆಂಬಲ
ಇಬ್ಬರಲ್ಲೂ ಸಮಾನ ಆಸಕ್ತಿ ಇಲ್ಲದಿರಬಹುದು. ಆದರೂ ಕೂಡಾ ಪತಿ ನಿಮ್ಮೆಲ್ಲ ಕನಸು, ಗುರಿಗಳ ಸಾಕಾರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಆಗಾಗ ನೀವು ಹಿಂದೆ ಬಿದ್ದರೂ ಪ್ರೋತ್ಸಾಹದ ಮಾತಾಡಿ ನಿಮ್ಮನ್ನು ಗೆಲುವಿನೆಡೆ ನುಗ್ಗಿಸುತ್ತಾನೆ. ನಿಮ್ಮ ಸಂಬಳ ಏರಿದರೂ ಹೊಟ್ಟೆಕಿಚ್ಚಾಗದೆ ನಿಮಗಿಂತಾ ಹೆಚ್ಚಾಗಿ ಸಂಭ್ರಮಿಸುತ್ತಾನೆ. ಕನಸು ನನಸಾದ ಕ್ಷಣದಲ್ಲಿ, ಆತ ಅಲ್ಲದಿದ್ದರೆ ಖಂಡಿತಾ ಇದು ಸಾಧ್ಯವಿರುತ್ತಿರಲಿಲ್ಲ ಎಂದು ನಿಮಗನಿಸಿಯೇ ಅನಿಸುತ್ತದೆ. ಆಗ ನೀವು ಖಂಡಿತಾ ಧೈರ್ಯವಾಗಿ ಹೇಳಬಹುದು, ಜಗತ್ತಿನ ಅತ್ಯುತ್ತಮ ಪತಿ ನಿಮ್ಮವನೆಂದು.