ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ
ಕಾಲ ಬದಲಾದರೂ ಮನಸ್ಥಿತಿಗಳು ಸಂಪೂರ್ಣ ಬದಲಾಗದ ಸಮಾಜದಲ್ಲಿ ಮಕ್ಕಳನ್ನು ಸ್ಟ್ರಾಂಗ್ ಆಗಿ ಬೆಳೆಸುವುದು ಸುಲಭದ ಮಾತಲ್ಲ. ಅದರಲ್ಲೂ ಹೆಣ್ಣುಮಕ್ಕಳು ದೊಡ್ಡವರಾಗುವ ಮುನ್ನ ಅವರಿಗೊಂದಿಷ್ಟು ಪಾಠಗಳನ್ನು ಹೇಳಿ ಕೊಡಲೇಬೇಕು. ಇದು ಅವರನ್ನು ಹೆಚ್ಚು ಗಟ್ಟಿಗೊಳಿಸಿ, ಬದುಕನ್ನು ದಿಟ್ಟವಾಗಿ ಎದುರಿಸಲು ನೆರವಾಗುತ್ತವೆ.
ಹೆಣ್ಣುಮಕ್ಕಳ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಡುವಂಥ ಹಲವಾರು ನಂಬಿಕೆಗಳು, ಕಟ್ಟುಪಾಡುಗಳು ಹಿಂದಿನಿಂದಲೂ ಬೆಳೆದುಬಂದಿವೆ. ಇನ್ನೂ ಕೂಡಾ ಆಕೆಗೆ ತಲೆ ತಗ್ಗಿಸಿ ನಡೆಯಬೇಕು, ದನಿ ಎತ್ತಬಾರದು, ಅಭಿಪ್ರಾಯಗಳನ್ನು ಹೇಳಬಾರದು ಎಂದೆಲ್ಲ ಬೆಳೆಸುವವರೇ ಹೆಚ್ಚು. ಹೆಣ್ಣು ಸಹನಾಮಹಿ, ಕರುಣಾಮಯಿ ಎಂದೆಲ್ಲ ಆಕೆಯ ಮನಸ್ಸಿನಲ್ಲಿ ತುಂಬಿ ಎಷ್ಟೇ ಕಷ್ಟ ನೋವುಗಳು ಬಂದರೂ ಅದನ್ನೆಲ್ಲ ತನ್ನ ತಲೆ ಮೇಲೆ ಎಳೆದುಕೊಂಡು ಅನುಭವಿಸುವ ಸ್ಥಿತಿ ಸೃಷ್ಟಿಸುತ್ತವೆ ಇಂಥ ಮಾತುಗಳು. ಸಹನೆ, ಕರುಣೆಗಳ ಪಾಠ ಬೇಕು ನಿಜ- ಅವು ಗಂಡಿಗೂ ಹೆಣ್ಣಿಗೂ ಸಮಾನವಾಗಿ ಹೇಳಿಕೊಡಬೇಕು. ಜೊತೆಗೆ ಎಲ್ಲಿ ಸಹನೆ ವಹಿಸಬೇಕು, ಎಲ್ಲಿ ಎದುರಾಡಬೇಕು, ಎಲ್ಲಿ ದನಿಯೆತ್ತಬೇಕು, ಎಲ್ಲಿ ಮೌನ ವಹಿಸಬೇಕು ಎಂಬುದನ್ನೂ ಹೇಳಿಕೊಡಬೇಕು. ಆಗ ಮಾತ್ರ ಆಕೆ ಸ್ಟ್ರಾಂಗ್ ಆಗಿ ಬೆಳೆದು ಬದುಕನ್ನು ಧೈರ್ಯದಿಂದ ಎದುರಿಸಬಲ್ಲಳು. ಮಗಳು ಹದಿಹರೆಯಕ್ಕೆ ಕಾಲಿಡುವ ಮೊದಲು ಅವಳಿಗೆ ಈ ಪಾಠಗಳನ್ನು ಹೇಳಿಕೊಡಿ.
'ಹುಡುಗರಿಗಿಂತ ನೀನೇನೂ ಕಮ್ಮಿಯಲ್ಲ'
ಅಧ್ಯಯನಗಳ ಪ್ರಕಾರ, ಲಿಂಗಬೇಧದ ಅರಿವು ಮಕ್ಕಳಿಗೆ 4ನೇ ವಯಸ್ಸಿನಲ್ಲೇ ಮೂಡುತ್ತದೆಯಂತೆ. ಹಾಗಿದ್ದರೆ, ಅದಕ್ಕೂ ಮುನ್ನವೇ ಮಗಳಿಗೆ ಮಗನಷ್ಟೇ ಅವಕಾಶಗಳು ಸಿಗುವಂತೆ, ಅವನಷ್ಟೇ ಪ್ರಾಮುಖ್ಯತೆ ಸಿಗುವಂತೆ ನೋಡಿಕೊಳ್ಳಬೇಕು. ಹುಡುಗ ಹುಡುಗಿಯರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಇಬ್ಬರೂ ಸಮಾನರು ಎಂಬುದನ್ನು ತಿಳಿಸಿಕೊಡಬೇಕು. ಇಬ್ಬರಿಗೂ ಪರಸ್ಪರರನ್ನು ಗೌರವಿಸುವುದನ್ನು ಕಲಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಪತಿಪತ್ನಿಯ ನಡುವೆ ಅಂಥ ಲಿಂಗ ತಾರತಮ್ಯಗಳಿಲ್ಲದೆ ಇಬ್ಬರೂ ಎಲ್ಲ ವಿಷಯಗಳಲ್ಲೂ ಗೆಳೆಯರಂತೆ ಇದ್ದರೆ, ಮಕ್ಕಳು ಅದನ್ನು ನೋಡಿಯೇ ಸಮಾನತೆಯ ಅರಿವನ್ನು ಬೆಳೆಸಿಕೊಳ್ಳುತ್ತವೆ.
'ಬೇಕಾದಲ್ಲಿ ದನಿಯೆತ್ತು'
ತನ್ನ ಅಭಿಪ್ರಾಯ ಹೇಳುವಾಗ ಅದರಲ್ಲಿ ಗೊಂದಲರಹಿತವಾದ ಗಟ್ಟಿ ದನಿಯಿದ್ದರೆ ಆ ದನಿಯನ್ನು ಎಲ್ಲರೂ ಕೇಳುತ್ತಾರೆ. ಈ ಅಭ್ಯಾಸ ಆಕೆಯನ್ನು ಸಬಲೆಯಾಗಿಸುತ್ತದೆ. ಈ ಪಾಠ ಮನೆಯಿಂದಲೇ ಪ್ರಾಕ್ಟಿಕಲ್ ಅಭ್ಯಾಸಕ್ಕೆ ಬರಬೇಕು. ಮಗಳ ದನಿಗೆ, ಅಭಿಪ್ರಾಯಕ್ಕೆ ಬೆಲೆ ಕೊಡಬೇಕು. ಅವರಿಗೆ ತಮಗನ್ನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ನೀಡಬೇಕು. ಆಕೆಯ ಮಾತಿಗೆ ವ್ಯಂಗ್ಯ, ತಿರಸ್ಕಾರ ಎಂದಿಗೂ ಸಲ್ಲದು.
ತಾಯಿ ಪ್ರೀತಿ ಸಿಗದಿದ್ದರೆ ಮಗಳ ವ್ಯಕ್ತಿತ್ವಕ್ಕೆ ಕುತ್ತು...
'ನೋ ಹೇಳೋಕೆ ಹೆದರಬೇಕಿಲ್ಲ'
ಗುಡ್ ಗರ್ಲ್ ಆಗಿರಬೇಕು ಎಂಬ ಕಾರಣಕ್ಕೆ ಆಕೆಯ ಕುತ್ತಿಗೆ ಮಟ್ಟಕ್ಕೆ ಮಿತಿಗಳನ್ನು ಹೇರುವುದು ಉತ್ತಮ ಐಡಿಯಾವಲ್ಲ. ನೋ ಎಂದರೆ ನೋ ಎಂಬುವುದು ಆರಂಭದಿಂದಲೇ ಅರಿವಾಗಬೇಕು. ಆಕೆಗೆ ನೋ ಹೇಳಲು ಅವಕಾಶ ನೀಡಿ ಹಾಗೂ ತನ್ನದೇ ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ ಕಲ್ಪಿಸಿಕೊಡಿ. ತನಗೆ ಸರಿಯೆನಿಸುತ್ತಿಲ್ಲ ಎಂದಾಗ ಆಕೆಗೆ ನೋ ಹೇಳುವುದನ್ನು ಕಲಿಸಿ ಹಾಗೂ ಅದನ್ನು ಗೌರವಿಸಿ. ಆಗ ಮಗಳಿಗೆ ತನಗೆ ಸಂಬಂಧಿಸಿದ ವಿಷಯಗಳ ಮೇಲೆ ನಿಯಂತ್ರಣವಿದೆ ಎಂದು ಅರಿವಾಗುತ್ತದೆ. ಹಾಗಂಥ ವಿನಯತೆ ಮಾಸಿ ಹೋಗದಂತೆ ಜಾಗೃತೆ ವಹಿಸಬೇಕಾದ್ದು ತಂದೆತಾಯಿಗಳ ಕರ್ತವ್ಯ.
'ದೈಹಿಕ ಬದಲಾವಣೆ ಸಾಮಾನ್ಯ ವಿಷಯ'
ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳು ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಮುಜುಗರ ತರುತ್ತವೆ. ಹಾಗಾಗಿ, ಪೋಷಕರಾಗಿ ನಿಮ್ಮ ಜವಾಬ್ದಾರಿ ಏನೆಂದರೆ ಮಕ್ಕಳಿಗೆ ಬಾಲ್ಯದಲ್ಲಿಯೇ ಮುಂದಾಗುವ ದೈಹಿಕ ಬದಲಾವಣೆಗಳ ಕುರಿತು ಉತ್ತಮ ಮಾಹಿತಿ ನೀಡುವುದು. ಮುಂದಾಗುವ ದೈಹಿಕ ಬದಲಾವಣೆಗಳಿಗೆ ಮಗಳನ್ನು ಮೊದಲಿನಿಂದಲೇ ಮಾನಸಿಕವಾಗಿ ಸಜ್ಜುಗೊಳಿಸಿ. ಈ ಬಗ್ಗೆ ಯಾವುದೇ ನಾಚಿಕೆ ಅಥವಾ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ, ಇದೊಂದು ಸಾಮಾನ್ಯ ವಿಷಯ ಎಂಬುದನ್ನು ವಿವರಿಸಿ. ಹಾರ್ಮೋನ್‌ಗಳ ಬದಲಾವಣೆ, ಪೀರಿಯಡ್ಸ್, ದೈಹಿಕ ಸ್ವಚ್ಛತೆ ಎಲ್ಲದರ ಬಗ್ಗೆ ಹೇಳಿಕೊಡಿ. ಯಾವುದಾದರೂ ವಿಷಯ ಕಂಫರ್ಟ್ ಎನಿಸುತ್ತಿಲ್ಲ ಎಂದಾದರೆ ಅದನ್ನು ನಿಮ್ಮ ಬಳಿ ಹೇಳಿಕೊಳ್ಳುವಂತೆ ತಿಳಿಸಿ.
'ನೀನು ನನ್ನ ಬಳಿ ಎಲ್ಲ ಹೇಳಬಹುದು'
ಹುಟ್ಟಿದಾಗಿನಿಂದ ಪೋಷಕರನ್ನೇ ಅವಲಂಬಿಸಿ ಬೆಳೆವ ಮಕ್ಕಳು ಸಡನ್ ಆಗಿ ಅವರನ್ನು ದೂರ ಇಡುವುದು, ಅವರಿಂದ ವಿಷಯಗಳನ್ನು ಮುಚ್ಚಿಡುವುದು ಮಾಡುತ್ತಿದ್ದಾರೆಂದರೆ ಅದು ಪೋಷಕರಿಗೆ ನಿಜಕ್ಕೂ ಶಾಕ್ ನೀಡುವ ವಿಷಯ. ಅದರಲ್ಲೂ ಹೆಣ್ಣುಮಕ್ಕಳು ತಮ್ಮನ್ನು ಕೊರೆವ ವಿಷಯಗಳನ್ನು ನಿಮಗೆ ಹೇಳಲು ಹೆಚ್ಚು ಸಂಕೋಚ ಹಾಗೂ ನಾಚಿಕೆ ಪಟ್ಟುಕೊಳ್ಳುತ್ತಾರೆ. ಹೀಗಾಗದೆ ಅವರು ಎಲ್ಲವನ್ನೂ ಪೋಷಕರ ಬಳಿ ಹಂಚಿಕೊಳ್ಳುವಂಥ ಮುಕ್ತ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿಕೊಡುವುದು ಅಗತ್ಯ.
ಯಾರೀಕೆ ಹರ್ಷಿತಾ ಕೇಜ್ರಿವಾಲ್? ಇವಳೇಕೆ ಸುದ್ದಿಯಲ್ಲಿದ್ದಾಳೆ?...
'ನಿನ್ನ ರಕ್ಷಣೆಗೆ ನೀನೇ ಸಿದ್ಧವಾಗಬೇಕು'
ಮಕ್ಕಳಿಗೆ ಎಲ್ಲ ಸಮಯದಲ್ಲೂ ಜೊತೆಯಾಗಿರಬೇಕೆಂದು ಬಹುತೇಕ ಪೋಷಕರು ಬಯಸುತ್ತಾರೆ. ಆದರೆ, ಇದು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಹೆಣ್ಣುಮಗಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸ್ಟ್ರಾಂಗ್ ಆಗಿರುವಂತೆ ಬೆಳೆಸಿ. ಸ್ವರಕ್ಷಣೆಯ ತಂತ್ರಗಳನ್ನು ಹೇಳಿಕೊಡಿ. ಅಗತ್ಯ ಬಿದ್ದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲೆನೆಂಬುದು ಆಕೆಗೆ ಬಹಳಷ್ಟು ಆತ್ಮವಿಶ್ವಾಸ ನೀಡುತ್ತದೆ.