ಗರ್ಭಿಣಿಯಾಗಿದ್ದಾಗ ಫಿಂಗರ್ ಚಿಪ್ಸ್ ತಿನ್ನಬೇಡ ಎಂದ ಪತಿಯ ವಿರುದ್ಧ ಪತ್ನಿ ಗೃಹಹಿಂಸೆ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪತ್ನಿಯ ದೂರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿ, ಪತಿಯ ಮೇಲಿನ ತನಿಖೆಗೆ ತಡೆ ನೀಡಿದೆ. ಈ ಘಟನೆಯು ಕೌಟುಂಬಿಕ ದೌರ್ಜನ್ಯ ಕಾನೂನಿನ ದುರುಪಯೋಗದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಮಹಿಳೆಯರಿಗೆ ಇರುವ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಸಿಕ್ಕಾಪಟ್ಟೆ ದುರುಪಯೋಗ ಆಗುತ್ತಿರುವ ಬಗ್ಗೆ ಇದಾಗಲೇ ಸಾಕಷ್ಟು ಮಂದಿ ದೂರಿದ್ದಾರೆ. ಈ ಮೊದಲು ಈ ಕಾನೂನನ್ನು ಜಾರಿಗೆ ತಂದಾಗ, ಹೆಣ್ಣುಮಕ್ಕಳು ಅದರ ದುರುಪಯೋಗ ಪಡಿಸಿಕೊಂಡಿದ್ದ ಕಾರಣ, ಅದೆಷ್ಟೋ ಗಂಡಂದಿರು ಮತ್ತು ಅವರ ಕುಟುಂಬದವರು ನರಳಿದ್ದು ಇದೆ. ಹೆಣ್ಣುಮಕ್ಕಳ ಮೇಲೆ ಶೋಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರ ಹಿತದೃಷ್ಟಿಯಿಂದ ತಂದ ಈ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಲೇ ಇರುವ ಕಾರಣ, ಅದಕ್ಕೆ ಒಂದಿಷ್ಟು ಷರತ್ತುಗಳನ್ನು ಇದಾಗಲೇ ವಿಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋರ್ಟ್​ ಮೆಟ್ಟಿಲೇರಿದ ಕೇಸ್​

ಇದರ ಹೊರತಾಗಿಯೂ ಇಲ್ಲೊಂದು ಪ್ರಕರಣದಲ್ಲಿ ಖುದ್ದು ಹೈಕೋರ್ಟ್​ ಶಾಕ್​ ಆಗಿದೆ. ಗರ್ಭಿಣಿಯಾಗಿದ್ದಾರೆ ಪತಿ ಫಿಂಗರ್​ಚಿಪ್ಸ್​ ತಿನ್ನಬೇಡ, ಮಾಂಸ ಸೇವನೆ ಕಡಿಮೆ ಮಾಡು ಎಂದು ಪತ್ನಿಗೆ ಪದೇ ಪದೇ ಹೇಳುತ್ತಿದ್ದ ಹಿನ್ನೆಲೆಯಲ್ಲಿ, ಈ ಪತ್ನಿ, ತನ್ನ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಗೃಹಹಿಂಸೆ (498A) ಕೇಸ್ ದಾಖಲಿಸಿದ್ದರು. "ಗರ್ಭಾವಸ್ಥೆಯಲ್ಲಿದ್ದಾಗ ತನ್ನ ರಕ್ತದೊತ್ತಡ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಪತಿ ಫಿಂಗರ್ ಚಿಪ್ಸ್, ಅನ್ನ ಹಾಗೂ ಮಾಂಸ ತಿನ್ನಲು ಬಿಡಲಿಲ್ಲ" ಎಂದು ಅವರು ಆರೋಪಿಸಿದ್ದರು.

ಪತಿ ವಿರುದ್ಧ ತನಿಖೆಗೆ ತಡೆ

ಈ ಪ್ರಕರಣ ಇದೀಗ ಕರ್ನಾಟಕದ ಹೈಕೋರ್ಟ್​ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಪತ್ನಿಯ ಈ ದೂರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು. "ಇದೇನಿದು ತಮಾಷೆ, ಆರೋಗ್ಯದ ಹಿತದೃಷ್ಟಿಯಿಂದ ಪತಿ ತಿನ್ನಬೇಡ ಎಂದಿದ್ದನ್ನು ಗೃಹಹಿಂಸೆ ಎನ್ನಲು ಸಾಧ್ಯ ಎಂದು ಪ್ರಶ್ನಿಸಿದರು. ನಂತರ ಪತಿಯ ಮೇಲಿನ ತನಿಖೆಗೆ ತಡೆ ನೀಡಿದರು.

ಈ ಘಟನೆ ಆದ ಬಳಿಕ ಮತ್ತೊಮ್ಮೆ ಕಾನೂನಿನ ದುರುಪಯೋಗದ ಸವಾಲು ಎದುರಾಗುತ್ತಿದೆ. ಕಾನೂನನ್ನು ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಬಳಸಬೇಕೇ ಹೊರತು, ವೈಯಕ್ತಿಕ ಅಸಮಾಧಾನ ಅಥವಾ ಪ್ರತೀಕಾರದ ಸಾಧನವನ್ನಾಗಿ ಬಳಸಬಾರದು ಎನ್ನುವ ಮಾತುಗಳು ಕೇಳಿಬರುತ್ತಿವೆ.