‘ನನ್ನ ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಾನು ಮೈಸೂರಿನಿಂದ ಮರಳಿ ಬಂದಿದ್ದೇನೆ. ಅವರು ಇನ್ನು ಮುಂದೆ ನನ್ನ ಜೊತೆಗಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಅವರು ಪದೇ ಪದೇ ಮಾಡುತ್ತಿದ್ದ ಫೋನ್ ಕರೆಗಳನ್ನು ನಾನು ತುಂಬಾ ಮಿಸ್ ಮಾಡುತ್ತೇನೆ...’
ಎಸ್ ಜಾನಕಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಕೆಎಸ್ ಚಿತ್ರಾ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
ಭಾರತದ ಖ್ಯಾತ ಗಾಯಕಿ, 'ದಕ್ಷಿಣ ಭಾರತದ ಕೋಗಿಲೆ' ಎಂದೇ ಕರೆಯಲಾಗುತ್ತಿದ್ದ ಹಿನ್ನೆಲೆ ಗಾಯಕಿ ಎಸ್ ಜಾನಕಿಯವರು (S Janaki) ಇತ್ತೀಚೆಗೆ (11 ಜುಲೈ 2026) ನಿಧನರಾಗಿದ್ದು ಗೊತ್ತೇ ಇದೆ. ಅವರ ಅಂತ್ಯಕ್ರಿಯೆಯನ್ನು ಅವರ ಇಷ್ಟ, ಕೊನೆಯ ಆಸೆಯ ಪ್ರಕಾರವೇ ಕನ್ನಡನಾಡಿನ ಮೈಸೂರಿನಲ್ಲಿ ನಡೆಸಲಾಗಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಾದರದೊಂದಿಗೆ, ಸಹಸ್ರಾರು ಅಭಿಮಾನಿಗಳ ಕಣ್ಣೀರಿನ ವಿದಾಯದ ಮಧ್ಯೆ ಗಾಯಕಿ ಎಸ್ ಜಾನಕಿಯವರ ಅಂತ್ಯಕ್ರಿಯೆ ಜುಲೈ 12ರಂದು ಮೈಸೂರಿನಲ್ಲಿ ನಡೆಯಿತು.
ಚಿತ್ರಾ ಹಾಗೂ ಎಸ್ ಜಾನಕಿ ಮಧ್ಯೆ ಅಮ್ಮ-ಮಗಳ ಬಾಂಧವ್ಯ
ಈ ಕಾರ್ಯಕ್ರಮದಲ್ಲಿ ಭಾರತದ ಮತ್ತೊಬ್ಬ ಖ್ಯಾತ ಗಾಯಕಿ ಕೆಎಸ್ ಚಿತ್ರಾ (KS Chithra) ಭಾಗಿಯಾಗಿದ್ದರು. ಚಿತ್ರಾ ಹಾಗೂ ಎಸ್ ಜಾನಕಿ ಮಧ್ಯೆ ಅಮ್ಮ-ಮಗಳ ಬಾಂಧವ್ಯವಿತ್ತು. ಅದೇನೂ ಸೀಕ್ರೆಟ್ ಆಗಿರಲಿಲ್ಲ. ಈ ಬಗ್ಗೆ ಹಲವಾರು ವೇದಿಕೆಗಳಲ್ಲಿ ಸ್ವತಃ ಎಸ್ ಜಾನಕಿಯವರು ಹಾಗೂ ಕೆಎಸ್ ಚಿತ್ರಾ ಅವರೇ ಹೇಳಿಕೊಂಡಿದ್ದಾರೆ. ಮೊನ್ನೆ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಗಾಯಕಿ ಚಿತ್ರಾ ಅವರು ತಮ್ಮ ಅಮ್ಮನ ಸ್ಥಾನದಲ್ಲಿದ್ದ ಅಗಲಿರುವ ಎಸ್ ಜಾನಕಿಯವರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಜೊತೆಗೆ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ತಮ್ಮ ಹೃದಯಾಂತರಾಳದ ಸಂತಾಪ ಸೂಚಿಸಿದ್ದಾರೆ. ಜೊತೆಗೆ, ಜಾನಕಮ್ಮನವರನ್ನು ತಾವು ತುಂಬಾ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಕೆಎಸ್ ಚಿತ್ರಾ ಪೋಸ್ಟ್‌ನಲ್ಲಿ ಏನಿದೆ?
"ನನ್ನ ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಾನು ಮೈಸೂರಿನಿಂದ ಮರಳಿ ಬಂದಿದ್ದೇನೆ. ಅವರು ಇನ್ನು ಮುಂದೆ ನನ್ನ ಜೊತೆಗಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಅವರು ಪದೇ ಪದೇ ಮಾಡುತ್ತಿದ್ದ ಫೋನ್ ಕರೆಗಳನ್ನು ನಾನು ತುಂಬಾ ಮಿಸ್ ಮಾಡುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ." ಎಂದು ಕೆಎಸ್ ಚಿತ್ರಾ ಅವರು ತಮ್ಮ ಸೋಷಿಯಲ್ ಮಿಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಖ್ಯಾತ ಗಾಯಕಿ ಎಸ್ ಜಾನಕಿಯವರು ಹಲವಾರು ವೇದಿಕೆಗಳಲ್ಲಿ ಕೆಎಸ್ ಚಿತ್ರಾ ಅವರ ಬಗ್ಗೆ ಬಹಳಷ್ಟು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಚಿತ್ರಾ ಅವರು ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಬಂದಾಗ ಎಸ್ ಜಾನಕಿಯವರು ಅವರನ್ನು ಹೊಗಳಿದ್ದರು. ಅಷ್ಟೇ ಅಲ್ಲ, ಮಲಯಾಳಂನಲ್ಲಿ ಹಾಡುತ್ತಿರುವ ಚಿತ್ರಾ ಅತ್ಯುತ್ತಮವಾಗಿ ಹಾಡುತ್ತಾರೆ ಎಂದು ಚಿತ್ರಾ ಇನ್ನೂ ಖ್ಯಾತಿ ಪಡೆಯುವ ಮೊದಲೇ ಹಲವಾರು ವೇದಿಕೆಗಳಲ್ಲಿ ಹೇಳಿದ್ದಾರೆ. ಕೆಎಸ್ ಚಿತ್ರಾ- ಎಸ್ ಜಾನಕಿ ಬಾಂಧವ್ಯ ತುಂಬಾ ಚೆನ್ನಾಗಿತ್ತು. ಅವರಿಬ್ಬರೂ ಅಮ್ಮ-ಮಗಳಂತೆ ಬದುಕಿದ್ದರು.



