ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋತು ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವನ್ನು ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದು, ಟಿಎಂಸಿ ವಶಪಡಿಸಿಕೊಂಡಿದ್ದ ತಮ್ಮ ಪಕ್ಷದ ಕಚೇರಿಗಳ ಬೀಗ ಒಡೆದು ಮರಳಿ ವಶಕ್ಕೆ ಪಡೆಯುತ್ತಿದ್ದಾರೆ.
ಪಶ್ವಿಮ ಬಂಗಾಳದಲ್ಲಿ ಈ ಬಾರಿ ಹಿಂದೆಂದೂ ಅರಿಯದ ರೀತಿಯಲ್ಲಿ ಬದಲಾವಣೆ ಕಂಡಿದೆ. 15 ವರ್ಷಗಳ ಕಾಲ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿಗೆ ಇನ್ನಿಲ್ಲದ ರೀತಿಯಲ್ಲಿ ಮುಖಭಂಗವಾಗಿದೆ. ಇಡೀ ಪಶ್ಚಿಮ ಬಂಗಾಳವನ್ನೇ ಸೋತಿದ್ದೂ ಅಲ್ಲದೇ, ತಮ್ಮ ಖುದ್ದು ಕ್ಷೇತ್ರದಲ್ಲಿಯೂ ತಾವೇ ಗೆಲ್ಲಲಾಗದ ಸ್ಥಿತಿಯಿಂದಾಗಿ ಕುಗ್ಗಿ ಹೋಗಿದ್ದಾರೆ ದೀದಿ. ಮುಖ್ಯಮಂತ್ರಿ ದೂರದ ಮಾತು, ಕೊನೆಯ ಪಕ್ಷ ಶಾಸಕಿ ಎನ್ನಿಸಿಕೊಳ್ಳಲೂ ಅಲ್ಲಿಯ ಜನರು ಬಿಡಲಿಲ್ಲ. ಆದರೂ ಮಮತಾ ಬ್ಯಾನರ್ಜಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಕೇಕೇ ಹಾಕಿ ಕಾಂಗ್ರೆಸ್ಸಿಗರ ಸಂಭ್ರಮ
ಅದೇನೇ ಇರಲಿ. ಆದರೆ, ಪಶ್ವಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನಿಂದ ಕೇವಲ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ಕಾರ್ಯಕರ್ತರಿಗೂ ಇನ್ನಿಲ್ಲದ ಖುಷಿ ಕೊಟ್ಟಿದೆ. ಬಿಜೆಪಿ ಗೆಲ್ಲುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಆದ ತಕ್ಷಣ ಅದು ಫೇಕ್ ವಿಡಿಯೋ, ಎಐ ವಿಡಿಯೋ, ಬಿಜೆಪಿಯವರೇ ಹರಡುತ್ತಿರುವ ವಿಡಿಯೋ ಎಂದೆಲ್ಲಾ ಕೆಲವರು ಆಡಿಕೊಳ್ಳಬಹುದು. ಆದರೆ ಇದು ಫೇಕ್ ಅಲ್ಲ, ನಂಬಲು ಸಾಧ್ಯವಿಲ್ಲದಂಥ ಬದಲಾವಣೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗರಿಂದ ನಡೆಯುತ್ತಿದೆ. ಅವರ ಸಂಭ್ರಮಕ್ಕೆ ಒಂದು ಕುತೂಹಲದ ಕಾರಣವೂ ಇದೆ.
ಕಾಂಗ್ರೆಸ್ ಕಚೇರಿ ಟಿಎಂಸಿ ವಶದಲ್ಲಿ
ಅದೇನೆಂದರೆ, ಕಾಂಗ್ರೆಸ್ಗೆ ಎಂದೇ ಕೆಲವು ಕಚೇರಿಗಳು ಪಶ್ಚಿಮ ಬಂಗಾಳದಲ್ಲಿ ಇವೆ. ಆದರೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಅವು ಕಾಂಗ್ರೆಸ್ ಕಚೇರಿಗಳಾಗಿರಲಿಲ್ಲ, ಹೆಸರಿಗೆ ಕಾಂಗ್ರೆಸ್ ಕಚೇರಿ, ಆದರೆ ಅದನ್ನು ಟಿಎಂಸಿ ವಶ ಪಡಿಸಿಕೊಂಡಿತ್ತು. ಕಾಂಗ್ರೆಸ್ಸಿಗರು ಅಲ್ಲಿಗೆ ಹೋಗುವಂತೆ ಇರಲಿಲ್ಲ. ಇಂಡಿ ಒಕ್ಕೂಟ ಮಾಡಿದಾಗ ಅದರಲ್ಲಿ ಮಮತಾ ಬ್ಯಾನರ್ಜಿ ಅವರನ್ನೂ ಸೇರಿಸಿರುವುದು ಗೊತ್ತೇ ಇದೆ. ಆದರೆ ಈ ಒಕ್ಕೂಟದ ಸದಸ್ಯರ ನಡುವೆಯೇ ಬಿರುಕು ಮೂಡಿ, ಮಮತಾ ಒಕ್ಕೂಟದಿಂದ ಹೊರಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮದೇ ಕಚೇರಿಗೆ ಹೋಗಲು ಅವಕಾಶವೇ ಇರಲಿಲ್ಲ.
ಕಾಂಗ್ರೆಸ್ಸಿಗರಿಂದ ಬೀಗ ಒಡೆಯುವ ದೃಶ್ಯ
ಇದೀಗ, ಬಿಜೆಪಿ ಗೆಲ್ಲುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಜೈಜೈಕಾರ ಹಾಕಿದ್ದಾರೆ. ಟಿಎಂಸಿ ವಶಪಡಿಸಿಕೊಂಡಿರುವ ತಮ್ಮ ಪಕ್ಷದ ಕಚೇರಿಯ ಬೀಗ ಒಡೆಯುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಷ್ಟೇ ಅಲ್ಲದೇ, ಅಲ್ಲಿ ಹಿಂದೂಗಳ ಸ್ಥಿತಿ ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತಲೂ ಭಯಾನಕವಾಗಿತ್ತು. ಹಿಂದೂ ದೇವರ ಪೂಜೆ ಎನ್ನುವುದು ಮರೀಚಿಕೆ ಆಗಿತ್ತು. ಇದೇ ಕಾರಣಕ್ಕೆ ಕೆಲವು ದೇವಸ್ಥಾನಗಳ ಬಾಗಿಲುಗಳೂ ಮುಚ್ಚಿದ್ದವು. ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಲೇ ದೇವಾಲಯಗಳ ಬಾಗಿಲುಗಳು ತೆರೆದಿವೆ. ಅಲ್ಲಿ ಗಂಟೆಯ ನಾದ ಮೊಳಗುತ್ತಿದೆ.


