ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರು ಸರ್ಕಾರ ರಚನೆಗೆ ಅಧಿಕೃತವಾಗಿ ಆಹ್ವಾನ ನೀಡಿದ್ದು, ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.
ಬೆಂಗಳೂರು (ಮೇ 30): ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಲೋಕಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಇದಕ್ಕೆ ರಾಜ್ಯಪಾಲರು ಕೂಡ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ.
ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್, ತಮಗೆ ಬೆಂಬಲವಿರುವ ಅರ್ಹ ಶಾಸಕರ ಪಟ್ಟಿಯನ್ನು ಸಲ್ಲಿಸಿ ಸರ್ಕಾರ ರಚನೆಗೆ ಅನುಮತಿ ಕೋರಿದರು. ಪತ್ರವನ್ನು ಪರಿಶೀಲಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಸರ್ಕಾರ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯದ ಬಹುದೊಡ್ಡ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ತಲುಪಿದೆ.
ಶಾಸಕಾಂಗ ಪಕ್ಷದ ಅವಿರೋಧ ಬೆಂಬಲ:
ವಿಧಾನ ಸೌಧದಲ್ಲಿ ಕಾಂಗ್ರಸ್ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಹಾಗೂ ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಎಲ್ಲ ಶಾಸಕರು ಒಮ್ಮತದಿಂದ ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದರು. ಸಿದ್ದರಾಮಯ್ಯ ಅವರೇ ಡಿಕೆಶಿ ಅವರ ಹೆಸರನ್ನು ಸೂಚಿಸಿದ್ದು, ಯಾವುದೇ ವಿರೋಧವಿಲ್ಲದೆ ಪಟ್ಟಾಭಿಷೇಕಕ್ಕೆ ಹಾದಿ ಸುಗಮವಾಯಿತು. ಈ ಅನಿರೀಕ್ಷಿತವಲ್ಲದ ಆದರೆ ಅತ್ಯಂತ ಚಾಣಾಕ್ಷ ನಡೆ ಕೈ ಪಾಳೆಯದ ಒಗ್ಗಟ್ಟನ್ನು ಸಾಬೀತುಪಡಿಸಿದೆ. ತಮ್ಮನ್ನು ನಾಯಕನನ್ನಾಗಿ ಆರಿಸಿದ ಎಲ್ಲಾ ಶಾಸಕರಿಗೆ ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ರಾಜಭವನದಲ್ಲಿ ಹಕ್ಕು ಮಂಡನೆ:
ಸಿಎಲ್‌ಪಿ ಸಭೆ ಮುಗಿಯುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೇ ವಾಹನದಲ್ಲಿ ಲೋಕಭವನದತ್ತ ಮುಖ ಮಾಡಿದರು. ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿ ಮತ್ತು ಬೆಂಬಲದ ವಿವರಗಳಿದ್ದವು. ಸಾಂವಿಧಾನಿಕ ಪ್ರಕ್ರಿಯೆಯಂತೆ ರಾಜ್ಯಪಾಲರು ಶಾಸಕರ ಸಂಖ್ಯಾಬಲವನ್ನು ಖಚಿತಪಡಿಸಿಕೊಂಡು, ಸರ್ಕಾರ ರಚಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬುಧವಾರ ಸಂಜೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ.
ಲೋಕಭವನದ ಮುಂದೆ ಹಬ್ಬದ ವಾತಾವರಣ:
ರಾಜ್ಯಪಾಲರ ಭೇಟಿ ಮುಗಿಸಿ ಡಿ.ಕೆ. ಶಿವಕುಮಾರ್ ಲೋಕಭವನದಿಂದ ಹೊರಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. 'ಡಿಕೆ... ಡಿಕೆ...' ಎಂಬ ಘೋಷಣೆಗಳಿಂದ ಇಡೀ ಆವರಣ ಮೊಳಗಿತು. ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿದ್ದರಾಮಯ್ಯ ಮತ್ತು ಡಿಕೆಶಿ ಒಟ್ಟಾಗಿ ಬರುತ್ತಿದ್ದ ದೃಶ್ಯವು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿತು.
ಬುಧವಾರ ಸಂಜೆ ಸಿಎಂ ಪಟ್ಟಕ್ಕೆ ಮುಹೂರ್ತ:
ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಬುಧವಾರ ಸಂಜೆ ಲೋಕಭವನದ ಆವರಣದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೆಹಲಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಆಗಮಿಸಲಿದ್ದಾರೆ.


