ಪಶ್ಚಿಮ ಬಂಗಾಳದಲ್ಲಿ ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ಇದು ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಈ ಪರಿಸ್ಥಿತಿಯಲ್ಲಿ ಸಂವಿಧಾನದ ನಿಯಮಗಳು ಮತ್ತು ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಪಶ್ಚಿಮ ಬಂಗಾಳ ಮಾತ್ರವಲ್ಲದೇ ತಮ್ಮ ಕ್ಷೇತ್ರವನ್ನೂ ಉಳಿಸಿಕೊಳ್ಳಲಾಗದೇ ಹೈರಾಣಾಗಿರುವ ಪಶ್ಚಿಮ ಬಂಗಾಳದ 'ಮುಖ್ಯಮಂತ್ರಿ' ಮಮತಾ ಬ್ಯಾನರ್ಜಿ ಇದೀಗ ತಮ್ಮ ಸ್ಥಾನವನ್ನು ತ್ಯಜಿಸಲು ರೆಡಿ ಇಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲೆಲ್ಲಾ ಕಾಂಗ್ರೆಸ್ಸಿಗರು ಇವಿಎಂ ದೂರುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ತಾವು ಗೆದ್ದಿರುವ ರಾಜ್ಯಗಳು ಬಿಟ್ಟರೆ ಉಳಿದ ಕಡೆಗಳಲ್ಲಿ ಯಾವತ್ತಿಗೂ ಅವರಿಗೆ ಇವಿಎಂ ಸರಿ ಇರುವುದೇ ಇಲ್ಲ. ಇದೊಂದು ರೀತಿಯಲ್ಲಿ ಅಪಹಾಸ್ಯಕ್ಕೂ ಕಾರಣವಾಗಿದ್ದರೂ ಕಾಂಗ್ರೆಸ್​ ಮುಖಂಡರು ಸೇರಿದಂತೆ ಬಿಜೆಪಿಯೇತರರು ಇದನ್ನು ಹೇಳುತ್ತಲೇ ಟ್ರೋಲ್​ ಆಗುವುದೂ ಇದೆ.

Add Asianetnews Kannada as a Preferred SourcegooglePreferred

ಚುನಾವಣಾ ಆಯೋಗದ ಮೇಲೆ ಆರೋಪ

ಮಮತಾ ಬ್ಯಾನರ್ಜಿ ಸದ್ಯ ನೇರಾನೇರ ಚುನಾವಣಾ ಆಯೋಗದ ಮೇಲೆಯೇ ಆರೋಪ ಹೊರಿಸುತ್ತಿದ್ದಾರೆ. ತಾವೇ ಮುಖ್ಯಮಂತ್ರಿ, ನಾನು ರಿಸೈನ್ ಮಾಡುವುದೇ ಇಲ್ಲ, ಏನು ಬೇಕಾದ್ರೂ ಮಾಡಿಕೊಳ್ಳಿ ಎಂದಿರುವ ಮಮತಾಗೆ ಕೊನೆಯ ಪಕ್ಷ ಶಾಸಕಿಯ ಸ್ಥಾನವೂ ಇಲ್ಲದ ಬಗ್ಗೆ ತೀವ್ರ ಕುಗ್ಗಿ ಹೋಗಿದ್ದಾರೆ. ಸಮೀಕ್ಷೆಯ ಫಲಿತಾಂಶಗಳು ರಾಜ್ಯದ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ನೀಡಿವೆ - ಇದು ಕೇಸರಿ ಪಕ್ಷದ ಜೊತೆಗೂಡಿ ಚುನಾವಣಾ ಆಯೋಗವು ಆಯೋಜಿಸಿದ ಅಕ್ರಮ ಪ್ರಚಾರದ ಪರಿಣಾಮವಾಗಿದೆ ಎಂದು ಆರೋಪಿಸಿದ್ದಾರೆ. "ನಾನು ಸೋತಿಲ್ಲ... ಆದ್ದರಿಂದ ನಾನು ರಾಜಭವನಕ್ಕೆ (ರಾಜ್ಯಪಾಲರ ನಿವಾಸ) ಹೋಗುವುದಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ" ಎಂದಿದ್ದಾರೆ.

ಸಾಂವಿಧಾನಿಕ ಬಿಕ್ಕಟ್ಟು

ಇದರಿಂದಾಗಿ ಸದ್ಯ ಪಶ್ಚಿಮ ಬಂಗಾಳದಲ್ಲಿ ಅಸಾಧಾರಣ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ಹಿಂದೆ ಭಾರತದಲ್ಲಿ ಇಂಥ ಯಾವುದೇ ಪರಿಸ್ಥಿತಿ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಸೋತರೂ ಮುಖ್ಯಮಂತ್ರಿ ರಾಜೀನಾಮೆ ನೀಡಲ್ಲ ಎಂದು ಪಟ್ಟುಹಿಡಿದಿರುವುದು ಎಂದಿರುವ ತಜ್ಞರು, ಈ ಮೂಲಕ ಸೋಲಿನಲ್ಲಿಯೂ ದೀದಿ ದಾಖಲೆ ಬರೆದಿದ್ದಾರೆ ಎನ್ನಲಾಗಿದೆ.

ಏನು ಹೇಳುತ್ತೆ ನಿಯಮ:

ಚುನಾವಣೆಯಲ್ಲಿ ಸೋತ ನಂತರ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಸಂವಿಧಾನದಲ್ಲಿ ಯಾವುದೇ ಸ್ಪಷ್ಟ ನಿಬಂಧನೆ ಇಲ್ಲ. ಚುನಾವಣಾ ಸೋಲಿನ ನಂತರ ರಾಜೀನಾಮೆ ನೀಡುವುದು, ಶಾಂತಿಯುತ ಅಧಿಕಾರ ವರ್ಗಾವಣೆಯ ಮೂಲತತ್ವ . ಇದು ನಿಯಮಕ್ಕಿಂತ ಹೆಚ್ಚಾಗಿ ಒಂದು ಸಂಪ್ರದಾಯವಾಗಿದೆ. ಆದರೆ ಇದೀಗ ಬೇರೆಯದ್ದೇ ಪರಿಸ್ಥಿತಿ ತಲೆದೋರಿದೆ. ಮುಖ್ಯಮಂತ್ರಿಯೊಬ್ಬರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಶಾಸಕಾಂಗ ಸಭೆಯ ವಿಶ್ವಾಸವನ್ನು ಹೊಂದಿರಬೇಕು ಎಂಬುದು ನಿಯಮ. ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದ ಬಳಿಕ, ಸಂಪ್ರದಾಯದ ಪ್ರಕಾರ ರಾಜೀನಾಮೆ ನೀಡಲೇಬೇಕು. ಒಂದು ವೇಳೆ ದೀದಿ ಮಾಡಿದಂತೆ ಅವರು ನಿರಾಕರಿಸಿದರೆ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದು, ಅಂದರೆ ಶಾಸಕಾಂಗವನ್ನು ಅಮಾನತುಗೊಳಿಸುವುದು ಮತ್ತು ರಾಜ್ಯವನ್ನು ಫೆಡರಲ್ ಸರ್ಕಾರದ ನೇರ ನಿಯಂತ್ರಣಕ್ಕೆ ತರುವುದು ಸೇರಿದಂತೆ ರಾಜ್ಯಪಾಲರು ತಮ್ಮ ಬಳಿ ಕೆಲವು ಕ್ರಮಗಳನ್ನು ಹೊಂದಿರುತ್ತಾರೆ.

ಇನ್ನೂ ಸಿಎಂ ಆಗ್ಬೋದು

ಇನ್ನೊಂದು ಸಾಧ್ಯತೆ ಎಂದರೆ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರಿಗೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆ. ಒಂದು ವೇಳೆ ಮಮತಾ ಬಹುಮತ ಸಾಧಿಸುವಲ್ಲಿ ಯಶಸ್ವಿಯಾದರೆ, ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶವಿದೆ. ಅವರು ಹಾಗೆ ಮಾಡಲು ಸಾಧ್ಯವಾಗದೇ ಹೋದರೆ, ಅವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎನ್ನುವುದು ತಜ್ಞರ ಅಭಿಮತ. ಇನ್ನು ಸದ್ಯದ ಸ್ಥಿತಿ ನೋಡುವುದಾದರೆ, ತೃಣಮೂಲ ಕಾಂಗ್ರೆಸ್​ಗೆ 80 ಸ್ಥಾನಗಳು ಬಂದಿವೆ. ಬಹುಮತಕ್ಕೆ 68 ಸ್ಥಾನಗಳ ಕೊರತೆಯಿದೆ. ಆದ್ದರಿಂದ ಈ 68 ಸ್ಥಾನವನ್ನು ಪಡೆಯುವಲ್ಲಿ ಮಮತಾ ಯಶಸ್ವಿಯಾದರೆ ಮುಖ್ಯಮಂತ್ರಿ ಆಗಬಹುದು. ಪರಿಸ್ಥಿತಿ ಕೈಮೀರಿದರೆ, ಮುಖ್ಯಮಂತ್ರಿಯನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇಲ್ಲವೇ ಸುಪ್ರೀಂಕೋರ್ಟ್​ಗೆ ಅವರು ಹೋಗಬಹುದು.