ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯಲ್ಲಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ವಿರುದ್ಧ ನಡೆದ ದೌರ್ಜನ್ಯ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ರೇಖಾ ಪಾತ್ರ, ಮಹಿಳೆಯರ ಧ್ವನಿಯಾಗಿ ನಿಂತರು. ಅವರ ಈ ಧೈರ್ಯದ ಹೋರಾಟವೇ ಅವರನ್ನು ಬಿಜೆಪಿಯಿಂದ ಶಾಸಕಿಯಾಗಿ ಆಯ್ಕೆಗೊಳ್ಳುವಂತೆ ಮಾಡಿತು.

2024ರಲ್ಲಿ ಪಶ್ಚಿಮ ಬಂಗಾಳದ ಸಂದೇಶ್​ ಖಾಲಿ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿದ್ದ ಅ*ತ್ಯಾಚಾರ ಪ್ರಕರಣದಿಂದಾಗಿ. ಸಂದೇಶ್ ಖಾಲಿ ಪಶ್ಚಿಮ ಬಂಗಾಳದ ಉತ್ತರ 24 ಪರ್ಗಣಾಸ್ ಜಿಲ್ಲೆಯಲ್ಲಿರುವ ಒಂದು ದ್ವೀಪ ಪ್ರದೇಶ. ಇಲ್ಲಿ ಟಿಎಂಸಿ (TMC) ನಾಯಕ ಷಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು ನಡೆಸಿದರೆನ್ನಲಾದ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಭೂ ಕಬಳಿಕೆಯ ಆರೋಪಗಳಿಂದಾಗಿ ಇದು ರಾಷ್ಟ್ರಮಟ್ಟದಲ್ಲಿ ಭಾರೀ ವಿವಾದ ಮತ್ತು ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಶೇಖ್ ಷಹಜಹಾನ್ ಮತ್ತವನ ತಂಡ ಆ ಊರಿನ ಹೆಣ್ಣುಮಕ್ಕಳನ್ನು ಪಾರ್ಟಿ ಆಫೀಸಿಗೆ ಕರೆದು ಅ*ತ್ಯಾಚಾರ ಮಾಡುತ್ತಿದ್ದರು ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಆದರೆ ಆತನ ವಿರುದ್ಧ ಮಹಿಳೆಯರು ದನಿ ಎತ್ತಲು ಹೆದರುತ್ತಿದ್ದರು.

ನ್ಯಾಯಕ್ಕಾಗಿ ಹೆಣ್ಣುಮಗಳ ಹೋರಾಟ

ಊರಿನ ಜನರ ತಾಳ್ಮೆಯ ಕಟ್ಟೆಯೊಡೆದಾಗ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಲು ರೌಡಿಗಳನ್ನೇ ಎದುರು ಹಾಕಿಕೊಂಡು ಹೋರಾಟಕ್ಕೆ ಇಳಿದವರೇ ರೇಖಾ ಪಾತ್ರಾ (Rekha Patra). ಈ ಘಟನೆಯು ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷವಾದ ಬಿಜೆಪಿಯ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಬಿಜೆಪಿ ನಾಯಕರು ಸ್ಥಳೀಯರಿಗೆ ಬೆಂಬಲವಾಗಿ ಪ್ರತಿಭಟನೆಗಳನ್ನು ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೀಗೆ ಮಹಿಳೆಯ ದನಿಯಾಗಿ ನಿಂತ ಇವರು ಇಂದು ಟಿಎಂಸಿಯನ್ನು ಮಣಿಸಿ ಜಯಭೇರಿ ಬಾರಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಧೈರ್ಯ ತುಂಬಿದ್ದ ರೇಖಾ

2024ರ ಜನವರಿಯಲ್ಲಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಷಹಜಹಾನ್ ಶೇಖ್ ಮನೆಗೆ ದಾಳಿ ಮಾಡಲು ತೆರಳಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ಮೇಲೆ ಆತನ ಬೆಂಬಲಿಗರು ಹಲ್ಲೆ ನಡೆಸಿದರು. ಈ ಘಟನೆಯ ನಂತರ ಶೇಖ್ ನಾಪತ್ತೆಯಾಗಿದ್ದನು. ಶೇಖ್ ನಾಪತ್ತೆಯಾದ ಬಳಿಕ, ಸಂದೇಶ್ ಖಾಲಿಯ ನೂರಾರು ಸ್ಥಳೀಯ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದರು. ಷಹಜಹಾನ್ ಶೇಖ್ ಮತ್ತು ಆತನ ಆಪ್ತರು ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ಮೀನುಗಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ಇವರೆಲ್ಲ ಇಷ್ಟು ಮುಂದೆ ಬಂದು ಧೈರ್ಯ ತುಂಬಲು ಕಾರಣವಾಗಿದ್ದು ಈ ರೇಖಾ.

ಬಿಜೆಪಿ ಟಿಕೆಟ್​ ಸಿಕ್ಕಿತ್ತು

ದೀರ್ಘಕಾಲ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಷಹಜಹಾನ್ ಶೇಖ್‌ನನ್ನು ಸುಮಾರು 55 ದಿನಗಳ ನಂತರ ಪಶ್ಚಿಮ ಬಂಗಾಳ ಪೊಲೀಸರು 2024ರ ಫೆಬ್ರವರಿಯಲ್ಲಿ ಬಂಧಿಸಿದರು. ಆತನನ್ನು ಪಕ್ಷದಿಂದಲೂ ಅಮಾನತುಗೊಳಿಸಲಾಯಿತು. ಹೀಗೆ ಧೈರ್ಯದಿಂದ ಮುಂದೆ ಬಂದು ಹೋರಾಟ ನಡೆಸಿದ ರೇಖಾ ಅವರನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶಹಬ್ಬಾಸ್​ಗಿರಿ ಕೊಟ್ಟಿದ್ದೂ ಅಲ್ಲದೇ, ಬಿಜೆಪಿಗೆ ಟಿಕೆಟ್​ ಅನ್ನೂ ಕೊಡಿಸಿದ್ದರು.