ಕ್ಷೇತ್ರ ಮರು ವಿಂಗಡಣೆಯು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಅತ್ಯವಶ್ಯಕವಾಗಿದೆ. ಈ ಸುಧಾರಣೆಯು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತದೆ ಎಂಬ ವಿಪಕ್ಷಗಳ ಆರೋಪಗಳ ನಡುವೆ, ಇದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಐತಿಹಾಸಿಕ ಹೆಜ್ಜೆ

ಭಾರತದ ಪ್ರಜಾಪ್ರಭುತ್ವವನ್ನು ಅದರ ಅಸಾಧಾರಣ ಗಾತ್ರ, ವೈವಿಧ್ಯತೆಗಾಗಿ ನಾವು ಸಂಭ್ರಮಿಸುತ್ತಾ ಬಂದಿದ್ದೇವೆ. ಆದರೆ, ನಮ್ಮ ಪ್ರಜಾಪ್ರಭುತ್ವದಲ್ಲಿ ದಶಕಗಳ ಕಾಲ ಒಂದು ಸಾಂಸ್ಥಿಕ ಅಸಮತೋಲನ ನಿರಂತರವಾಗಿ ಕಂಡುಬಂದಿತ್ತು. ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಕ್ಷೇತ್ರ ಮರು ವಿಂಗಡಣಾ ಮಸೂದೆ 2026 ಮತ್ತು 131ನೇ ಸಾಂವಿಧಾನಿಕ ತಿದ್ದುಪಡಿಗಳು ಸಮಾನ ಪ್ರಾತಿನಿಧ್ಯದ ಮೇಲೆ ಬೀರಿದ್ದ ಅಡಚಣೆಯನ್ನು ನಿವಾರಿಸುವ ಮಹೋನ್ನತ ಗುರಿಯನ್ನು ಹೊಂದಿದ್ದವು.

ಕ್ಷೇತ್ರ ಮರು ವಿಂಗಡಣೆ ಎನ್ನುವುದು ‘ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ’ ಎಂಬ ಸಂವಿಧಾನದ ಆಶಯಕ್ಕೆ ಪೂರಕವಾಗಿದ್ದು, ಮಹಿಳೆಯರಿಗೆ ರಾಜಕೀಯ ನ್ಯಾಯವನ್ನು ಒದಗಿಸುವುದಾಗಿದೆ. ಅಲ್ಲದೆ, ಜನಸಂಖ್ಯೆಯ ಆಧಾರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಮರಳಿ ರಚಿಸುವುದಾಗಿದ್ದು, ಯಾವುದೇ ಪ್ರಜಾಪ್ರಭುತ್ವವನ್ನು ಸಮರ್ಪಕವಾಗಿ ಪ್ರತಿನಿಧಿಸಲು ಅವಶ್ಯಕ ಮತ್ತು ಅನಿವಾರ್ಯವಾದ ಕ್ರಮವಾಗಿದೆ.

1971ರಲ್ಲಿ 55 ಕೋಟಿಯಷ್ಟಿದ್ದ ಭಾರತದ ಜನಸಂಖ್ಯೆ ಈಗ 140 ಕೋಟಿಗೆ ತಲುಪಿದೆ. ಆದರೆ, ಲೋಕಸಭೆ ಮಾತ್ರ ಇಂದಿಗೂ ಕೇವಲ 543 ಚುನಾಯಿತ ಸದಸ್ಯರನ್ನು ಹೊಂದಿದೆ. ಈಗಾಗಲೇ ಇರುವ ಸ್ಥಾನಗಳಲ್ಲೇ ಮಹಿಳಾ ಮೀಸಲಾತಿಯನ್ನು ಅಳವಡಿಸಿದರೆ, ಅದರಿಂದ ಉದ್ವಿಗ್ನತೆಗಳು ಉಂಟಾಗಬಹುದು. ಆದ್ದರಿಂದ ಪ್ರಸ್ತಾಪಿತ ಮಸೂದೆ ಲೋಕಸಭಾ ಸ್ಥಾನಗಳನ್ನು ಅಂದಾಜು 850ಕ್ಕೆ ಹೆಚ್ಚಿಸುವ ಗುರಿ ಹೊಂದಿತ್ತು.

ಮಹಿಳಾ ಪ್ರಾತಿನಿಧ್ಯಕ್ಕೆ ನ್ಯಾಯ

ಮರು ವಿಂಗಡಣೆಯ ಮಹತ್ವವು ಅಂಕಿ-ಅಂಶಗಳನ್ನು ಮೀರಿದೆ. ಕೇಂದ್ರ ಸರ್ಕಾರ ‘ನಾರಿ ಶಕ್ತಿ ವಂದನಾ ಅಭಿಯಾನ (2023)’ ಯೋಜನೆಯ ಜಾರಿ ಮೂಲಕ ಸಂಸತ್‌ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸಲು ಬಯಸಿದೆ. ಈ ಕ್ರಮವು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಅವರ ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತದೆ.

ಇಂತಹ ಐತಿಹಾಸಿಕ ಸುಧಾರಣೆಯನ್ನು ಹೊಸದಾಗಿ ಕ್ಷೇತ್ರ ಮರು ವಿಂಗಡಣೆ ನಡೆಸದೆ ಜಾರಿಗೆ ತರಲು ಸಾಧ್ಯವಿಲ್ಲ. ಇದಕ್ಕಾಗಿ ಕ್ಷೇತ್ರಗಳನ್ನು ಹೊಸದಾಗಿ ರೂಪಿಸಬೇಕು ಮತ್ತು ಮೀಸಲು ಕ್ಷೇತ್ರಗಳನ್ನು ಒಂದಷ್ಟು ಅವಧಿಗಳಿಗೆ ಬದಲಾಯಿಸಬೇಕು. ಈ ಪ್ರಕ್ರಿಯೆಯ ಹೊರತಾಗಿ, ಮಹಿಳಾ ಮೀಸಲಾತಿ ಎಂಬುದು ಕೇವಲ ಸಾಂಕೇತಿಕವಾಗಿ ಉಳಿಯಬಹುದೇ ಹೊರತು, ಪ್ರಾಯೋಗಿಕ ಕ್ರಮ ಆಗಲಾರದು. ಹೀಗಾಗಿ ಮರು ವಿಂಗಡಣೆ ಎನ್ನುವುದು ಪ್ರಾತಿನಿಧ್ಯದ ಸರಿಪಡಿಸುವಿಕೆ ಮಾತ್ರವಲ್ಲದೆ, ದೇಶದ ಜನಸಂಖ್ಯೆಯ ಅರ್ಧ ಪಾಲು ಹೊಂದಿರುವ ಮಹಿಳೆಯರೂ ಅರ್ಥಪೂರ್ಣವಾಗಿ ಪ್ರಜಾಪ್ರಭುತ್ವದ ಭಾಗವಾಗುವಂತೆ ಮಾಡಲಿದೆ.

2011ರ ಜನಗಣತಿಯ ಬಳಕೆ ಏಕೆ?

ವಿಪಕ್ಷಗಳು ಪ್ರಸ್ತುತ ಸುಧಾರಣೆಯಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಬಳಸುವ ಕುರಿತು ಟೀಕಿಸುತ್ತಿವೆ. ಯಾವುದೇ ಕಾರಣ, ಉದ್ದೇಶವಿಲ್ಲದೆ 2011ರ ಜನಗಣತಿಯ ಮಾಹಿತಿಗಳನ್ನು ಬಳಸುತ್ತಿರುವುದಲ್ಲ. ಇದು ತೀರಾ ಇತ್ತೀಚಿನ ಅಂಕಿ-ಅಂಶಗಳಲ್ಲದಿದ್ದರೂ, ಇದು ಅಧಿಕೃತವಾಗಿ ಪ್ರಕಟಗೊಂಡಿರುವ ಇತ್ತೀಚಿನ ರಾಷ್ಟ್ರೀಯ ಜನಸಂಖ್ಯಾ ಮಾಹಿತಿಯಾಗಿದೆ. ಇದು ಈಗಾಗಲೇ ಇರುವ ಕ್ಷೇತ್ರಗಳು ಮತ್ತು ಮತದಾರರ ಪಟ್ಟಿಗಳನ್ನು ಒಳಗೊಂಡಿದೆ. ಇನ್ನು ಮುಂದಿನ ಜನಗಣತಿಯ ಅಂಕಿ- ಅಂಶಗಳಿಗೆ ಕಾದು ಕುಳಿತರೆ, ಮರು ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿಯು ಇನ್ನಷ್ಟು ವಿಳಂಬವಾಗುತ್ತದೆ. ಈಗ ಭಾರತದ ಮುಂದೆ ಆಯ್ಕೆ ಇದ್ದದ್ದು, ಪರಿಪೂರ್ಣ ಅಥವಾ ಅಪರಿಪೂರ್ಣ ಅಂಕಿ-ಅಂಶಗಳದ್ದಲ್ಲ. ಬದಲಿಗೆ, ಸಮಯಕ್ಕೆ ಸರಿಯಾದ ಸುಧಾರಣೆ ಅಥವಾ ಅನಿರ್ದಿಷ್ಟಾವಧಿಯ ವಿಳಂಬದ ನಡುವಣ ಆಯ್ಕೆ.

ಪ್ರತಿಪಕ್ಷಗಳ ಆಧಾರ ರಹಿತ ಆರೋಪ

ವಿಪಕ್ಷದ ನಾಯಕರುಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಸೇರಿದಂತೆ ಹಲವರು ಕರಡು ಪ್ರಕಟವಾಗುವ ಮುಂಚೆಯೇ ಉತ್ತರ ರಾಜ್ಯಗಳಿಗೆ ಹೆಚ್ಚು ಲಾಭವಾಗುತ್ತದೆ ಮತ್ತು ದಕ್ಷಿಣಕ್ಕೆ ಅನ್ಯಾಯವಾಗುತ್ತದೆ ಎಂದು ಹೇಳಲು ಆರಂಭಿಸಿದರು. ಇದನ್ನು ಕೆಲವರು ಸಾಂಸ್ಕೃತಿಕ ಮಾರ್ಕ್ಸ್‌ವಾದದ ದೃಷ್ಟಿಕೋನದೊಂದಿಗೆ ಸಂಪರ್ಕಿಸಲು ಯತ್ನಿಸಿದರು. ಸಾಂಪ್ರದಾಯಿಕ ವರ್ಗ ಹೋರಾಟಗಳು ಪರಿಣಾಮಕಾರಿಯಾಗದ ಕಾರಣ ಸಮಾಜದಲ್ಲಿರುವ ಭಾಷೆ, ಪ್ರದೇಶ, ಲಿಂಗ ಮತ್ತು ಸಂಸ್ಕೃತಿ ಮೊದಲಾದ ವೈವಿಧ್ಯತೆಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಿ, ಸಂಘರ್ಷ ಹುಟ್ಟುಹಾಕಿ, ವಿಭಜನೆ ಸೃಷ್ಟಿಸಲು ಪ್ರಯತ್ನಿಸುವ ನೀತಿಯನ್ನು ಅನುಸರಿಸುತ್ತಿರುವುದು ಗಮನೀಯವಾಗಿ ಕಂಡುಬರುತ್ತಿದೆ.

ವಿಪಕ್ಷದವರು ಆರೋಪಿಸಿದಂತೆ ಯಾವ ರಾಜ್ಯವೂ ತನ್ನ ಈಗಿನ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತಿರಲಿಲ್ಲ. ಬದಲಿಗೆ, ಹೆಚ್ಚುವರಿಯಾಗಿ ಶೇ.50 ರಷ್ಟು ಲೋಕಸಭಾ ಸ್ಥಾನಗಳನ್ನು ಗಳಿಸುತ್ತಿದ್ದವು. ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದ ದೃಷ್ಟಿಯಲ್ಲಿ ನೋಡುವಾಗ ಅದರ ಪಾಲು ಈಗಿನ ಶೇ.23.76 ರಿಂದ ಸುಮಾರು ಶೇ.24ಕ್ಕೆ ಏರಲಿದೆ ಎಂದು ಅಮಿತ್ ಶಾ ಅವರೇ ದತ್ತಾಂಶಗಳ ಸಮೇತ ವಿವರಿಸಿದ್ದರು. ಅಲ್ಲದೆ, ದಕ್ಷಿಣದ 5 ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳು ಈಗಿನ 129 ರಿಂದ 195ಕ್ಕೆ ಏರಿಕೆಯಾಗುತ್ತಿತ್ತು.

ನ್ಯಾಯವೇ ಅಥವಾ ಅನ್ಯಾಯವೇ?

ಮುಖ್ಯಮಂತ್ರಿಗಳೇ, ಕೊಡಗು ಒಂದು ವಿಶಿಷ್ಟವಾದ ಜಿಲ್ಲೆ. ಆ ಕೊಡಗಿಗೆ ಮೂರು ವಿಧಾನಸಭಾ ಕ್ಷೇತ್ರಗಳಿದ್ದವು. ಅದು ಮಾಯವಾಯಿತು. ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ಒಂದೊಂದು ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡವು. ಕೋಲಾರ ಸೇರಿದಂತೆ ಇದೇ ರೀತಿ ಹಲವಾರು ಜಿಲ್ಲೆಗಳಲ್ಲಿ ತಮ್ಮ ವಿಧಾನಸಭಾ ಕ್ಷೇತ್ರಗಳು ಕಡಿಮೆಯಾಗಿ ಅವು ಬೆಂಗಳೂರಿನಲ್ಲಿ ಸೃಷ್ಟಿಯಾದವು. ಹಾಗಾಗಿ ನಾವು ಇದನ್ನು ತಾರತಮ್ಯ ಅಂತ ಹೇಳಬೇಕೆ? ಅಥವಾ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ ಅಂತ ಭಾವಿಸಬೇಕೆ? ಅಥವಾ ಇದು ಅನ್ಯಾಯ ಅಂತ ಭಾವಿಸಬೇಕೆ?

ಮುಸ್ಲಿಮರು ಕುಟುಂಬ ಯೋಜನೆ ಪಾಲಿಸಲಿಲ್ಲ:

ದಕ್ಷಿಣದವರು ನಾವು ಕುಟುಂಬ ಯೋಜನೆಯನ್ನು ಪಾಲಿಸಿದ್ದೆವು. ಉತ್ತರದವರು ಪಾಲಿಸಲಿಲ್ಲ. ಹಾಗಾಗಿ ಜನಸಂಖ್ಯೆ ಅಲ್ಲಿ ವೃದ್ಧಿಯಾಯಿತು. ಇಲ್ಲಿ ಕಡಿಮೆಯಾಯಿತು ಎಂದು ಹೇಳುತ್ತಿದ್ದಾರೆ. ಕುಟುಂಬ ಯೋಜನೆಯನ್ನು ಹಿಂದೂಗಳು ಪಾಲಿಸಿದರು. ಮುಸಲ್ಮಾನರು ಪಾಲಿಸಲಿಲ್ಲ. ಅವರಿಗೆ ಮೂರು, ನಾಲ್ಕು ಮದುವೆ ಮಾಡಿಕೊಳ್ಳಲು, ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿ ಹಿಂದೂ ಜನಸಂಖ್ಯೆ ಕುಸಿತವಾಯಿತು ಎನ್ನುವ ವಾದಕ್ಕೆ ಮುಖ್ಯಮಂತ್ರಿಗಳೇ ನೀವೇನು ಹೇಳುತ್ತೀರಿ? ಹೇಗೆ ಉತ್ತರದಲ್ಲಿ ಜನಸಂಖ್ಯೆ ಬೆಳವಣಿಗೆಯಾಯಿತೋ ಅದೇ ರೀತಿ ಮುಸಲ್ಮಾನರ ಜನಸಂಖ್ಯೆಯೂ ಕೂಡ ಬೆಳವಣಿಗೆಯಾಗಿದೆ. ಹೀಗಿರುವಾಗ ಇದು ಹಿಂದೂಗಳಿಗೆ ಮಾಡಿದ ಅನ್ಯಾಯವೆಂದು ಆರೋಪಿಸಿದರೆ ಏನೆಂದು ಸಮರ್ಥಿಸಿಕೊಳ್ಳುತ್ತೀರಿ?

ಅನಿವಾರ್ಯವಾದ ಸುಧಾರಣೆ

ಕ್ಷೇತ್ರ ಮರು ವಿಂಗಡಣಾ ಮಸೂದೆ 2026 ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಶ್ಯಕ ಸಮತೋಲನ ತರುತ್ತಿತ್ತು. ದೀರ್ಘ ಕಾಲದಿಂದಲೂ ಕಡೆಗಣಿಸಲ್ಪಟ್ಟಿದ್ದ ಮಹಿಳಾ ಮೀಸಲಾತಿಯನ್ನು ಕೊನೆಗೂ ಅನುಷ್ಠಾನಗೊಳಿಸುತ್ತಿತ್ತು. ಇದರಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನ ಪ್ರಾತಿನಿಧ್ಯದ ತತ್ವವನ್ನು ನರೇಂದ್ರ ಮೋದಿಯವರ ಸರ್ಕಾರ ಅನುಷ್ಠಾನಕ್ಕೆ ತಂದಂತಾಗುತ್ತಿತ್ತು. ಭಾರತದ ಪ್ರಜಾಪ್ರಭುತ್ವ ತನ್ನ ಗಾತ್ರ ಮತ್ತು ಮಹತ್ವಾಕಾಂಕ್ಷೆಯಲ್ಲಿ ಸಾಕಷ್ಟು ವೃದ್ಧಿಸಿದೆ. ಈಗ ಅದರ ಸಾಂಸ್ಥಿಕ ವ್ಯವಸ್ಥೆಯೂ ಸಹ ಕಾಲಕ್ಕೆ, ಜನಸಂಖ್ಯೆಗೆ ತಕ್ಕಂತೆ ಸುಧಾರಿಸಲೇಬೇಕಲ್ಲವೇ?

ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕಾದ ಸುಧಾರಣೆಗಳನ್ನು, ಕಾಲಕಾಲಕ್ಕೆ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಅನುಮಾನ ಸೃಷ್ಟಿಸುವುದು, ಅಪನಂಬಿಕೆ ಹುಟ್ಟುಹಾಕುವುದು ಮತ್ತು ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಆರೋಪ ಮಾಡುವುದು ಇವೆಲ್ಲವೂ ವಿಪಕ್ಷದವರ ಟೂಲ್ ಕಿಟ್ ರಾಜಕಾರಣದ ಭಾಗವಾಗಿದೆ.

ಅಖಂಡ ಭಾರತದ ದೃಷ್ಟಿಯಲ್ಲಿ ನೋಡಬೇಕು

ನಾವು ಭಾರತವನ್ನು ಅಖಂಡ ದೃಷ್ಟಿಯಿಂದ ನೋಡಬೇಕು. ಉತ್ತರ ಬೇರೆ, ದಕ್ಷಿಣ ಬೇರೆ ಎಂದು ಪರಿಗಣಿಸಬೇಕಾಗಿಲ್ಲ. ಭಾರತದ ಉತ್ತರ, ಭಾರತದ ದಕ್ಷಿಣ, ಭಾರತದ ಪೂರ್ವ, ಭಾರತದ ಪಶ್ಚಿಮ ಮತ್ತು ಭಾರತದ ಮಧ್ಯ ಎಂದು ಪರಿಗಣಿಸುವುದರಿಂದ ನಾವು ಭಾರತೀಯ ದೃಷ್ಟಿಕೋನದಿಂದ ನೋಡಬಹುದು. ಅದಲ್ಲದೆ, ಭಾರತವನ್ನು ವಿಭಜಿಸಬಾರದು ಮತ್ತು ವಿಭಜಿಸಲು ಅವಕಾಶವನ್ನು ಸಹ ಕೊಡಬಾರದು.

ಮಹಿಳೆಯರಿಗೆ ರಾಜಕೀಯ ನ್ಯಾಯ

ಮಹಿಳೆಯರಿಗೆ ರಾಜಕೀಯ ನ್ಯಾಯವನ್ನು ಕೊಡುವಂತಹ, ಅಂಬೇಡ್ಕರ್ ಅವರ ಕನಸನ್ನು ನನಸಾಗಿಸುವ ಐತಿಹಾಸಿಕ ಮಸೂದೆ ಇದಾಗಿತ್ತು. ಇವತ್ತಿನ ದೇಶದ ಒಟ್ಟು ಜನಸಂಖ್ಯೆಗೆ ಸ್ಥಾನಗಳನ್ನು ಹೆಚ್ಚಳ ಮಾಡಿದ್ದು, ಅದರೊಂದಿಗೆ ಈ ಹಿಂದೆ ಇದ್ದ ನಿಯಮಗಳಿಗೆ ಅನುಗುಣವಾಗಿಯೇ ಕ್ಷೇತ್ರ ಪುನರ್ ವಿಂಗಡನೆ ಎಂದು ಪ್ರಧಾನಮಂತ್ರಿಗಳು ಮತ್ತು ಗೃಹ ಸಚಿವರು ಸ್ಪಷ್ಟ ಪಡಿಸಿದ್ದರೂ ಕೂಡ, ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬ ಗಾದೆ ಮಾತಿನಂತೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ದುರದೃಷ್ಟಕರ.

ಪ್ರಜಾಪ್ರಭುತ್ವ ಎಂದರೆ, ಒಂದು ಪ್ರಯೋಗಶಾಲೆ. ಈ ಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸುಧಾರಣೆ ಬಯಸದ ಮತ್ತು ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ.

ಸಮತೋಲನದ ಮಾನದಂಡ

ಕ್ಷೇತ್ರಗಳ ಮರು ವಿಂಗಡಣೆ ಮಾಡುವಾಗ ಪ್ರದೇಶ, ಜನಸಂಖ್ಯೆ, ಜನಸಾಂದ್ರತೆ ಇವುಗಳನ್ನೆಲ್ಲ ಸಮತೋಲನವಾಗಿ ಪರಿಗಣಿಸಬೇಕಾಗುತ್ತದೆ. ಈ ಸಂಬಂಧ ಈಶಾನ್ಯ ರಾಜ್ಯಗಳು, ವಿಶೇಷ ಟ್ರೈಬಲ್ ಪ್ರದೇಶಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಡಿಮೆ ಜನಸಂಖ್ಯೆ ಇದ್ದರೂ ಪ್ರಾತಿನಿಧ್ಯ ನೀಡಿರುವುದನ್ನು ನಾವು ಗಮನಿಸಬಹುದು. ಇದು ಕೇವಲ ರಾಜಕೀಯ ನಿರ್ಧಾರವಲ್ಲ ದೇಶದ ಏಕತೆ, ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ವ್ಯವಸ್ಥೆ. ಹೀಗಾಗಿ ಕ್ಷೇತ್ರ ಮರು ವಿಂಗಡಣೆ ವೇಳೆ ಪ್ರತಿ ಪ್ರದೇಶಕ್ಕೂ ನ್ಯಾಯಸಮ್ಮತ ಪ್ರಾತಿನಿಧ್ಯ ಸಿಗುವಂತೆ ಒಂದು ಸಾಮಾನ್ಯ ಮಾನದಂಡ ಆಧರಿಸುವುದರೊಂದಿಗೆ ಗುಡ್ಡಗಾಡು ಪ್ರದೇಶಗಳಿಗೆ ಹಿಂದಿನಂತೆ ವಿಶೇಷ ಪ್ರಾತಿನಿಧ್ಯ ನೀಡುವ ವಿಚಾರವನ್ನೂ ಪರಿಗಣಿಸುವುದು ಸೂಕ್ತ ಎಂಬುದು ನನ್ನ ಸಲಹೆ.

ಲೋಕಸಭಾ ಪ್ರಾತಿನಿಧ್ಯ ವಿಸ್ತರಿಸಿದರೆ, ಅದರಿಂದ ಹೊಣೆಗಾರಿಕೆ ಹೆಚ್ಚಾಗಿ, ಪ್ರತಿನಿಧಿಗಳನ್ನು ತಾವು ಸೇವೆ ಸಲ್ಲಿಸುತ್ತಿರುವ ಪ್ರಜೆಗಳಿಗೆ ಇನ್ನಷ್ಟು ಹತ್ತಿರಾಗಿಸಲಿದೆ. ಇದು ಭಾರತದ ಸಾಂಸ್ಥಿಕ ವ್ಯವಸ್ಥೆಯನ್ನು ಅದರ ಜನಸಂಖ್ಯೆ ಮತ್ತು ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿಸಲಿದೆ.