ಮಹಿಳಾ ಮೀಸಲು ಮಸೂದೆಯ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದರ ಹಿಂದಿನ ನಿಜವಾದ ಉದ್ದೇಶ ಕ್ಷೇತ್ರ ಮರುವಿಂಗಡಣೆ ಸಂಚು. ಆದರೆ, ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯ ಈ ದುಷ್ಟ ಯೋಜನೆಯನ್ನು ವಿಫಲಗೊಳಿಸಿವೆ ಎಂದು ಅವರು ಹೇಳಿದ್ದಾರೆ.

ಪಿಟಿಐ ಚೆನ್ನೈ (ಏ.19): ‘ಮಹಿಳಾ ಮೀಸಲು (ತಿದ್ದುಪಡಿ) ಮಸೂದೆ ಅಂಗೀಕರಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರಕ್ಕೆ ಸುಳ್ಳು ಹೇಳಿದ್ದಾರೆ. ಅಂತಹ ಹೇಳಿಕೆಯ ಹಿಂದೆ ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಮತ್ತು ರಾಜ್ಯಗಳನ್ನು ದುರ್ಬಲಗೊಳಿಸುವ ಪೈಶಾಚಿಕ ಕಲ್ಪನೆ ಅಡಗಿತ್ತು. ಇಡೀ ವಿಪಕ್ಷ ಕೂಟವು ಬಂಡೆಯಂತೆ ನಿಂತು ಬಿಜೆಪಿಯ ದುಷ್ಟ ಯೋಜನೆಯನ್ನು ಸೋಲಿಸಿತು’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಬಿಜೆಪಿ ನಾಯಕರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ತಮಿಳುನಾಡಿನ ಪೊನ್ನೇರಿ ಹಾಗೂ ರಾಣಿಪೇಟ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್‌, ‘ಮಹಿಳಾ ಮೀಸಲಿನ ಹಿಂದೆ ಕ್ಷೇತ್ರ ಮರುವಿಂಗಡಣೆಯ ಸಂಚು ಅಡಗಿತ್ತು. ಭಾರತದ ಒಕ್ಕೂಟದಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು. ಬಿಜೆಪಿ ನಿನ್ನೆ ಮಾಡಲು ಪ್ರಯತ್ನಿಸಿದ್ದು ರಾಷ್ಟ್ರವಿರೋಧಿ ಕೃತ್ಯ ಮತ್ತು ಅದು ರಾಜ್ಯಗಳ ಒಕ್ಕೂಟಕ್ಕೆ ವಿರುದ್ಧವಾಗಿತ್ತು. ವಿಪಕ್ಷಗಳು ಬಂಡೆಯಂತೆ ನಿಂತು ಅವರ ದುಷ್ಟ ಯೋಚನೆಯನ್ನು ಸೋಲಿಸಿದ್ದೇವೆ’ ಎಂದರು.

ತಮಿಳು ಸಂಸ್ಕೃತಿ ನಾಶಕ್ಕೆ ಯತ್ನ:

‘ಪ್ರತಿ ರಾಜ್ಯದ ಸ್ಥಾನಗಳ ಸಂಖ್ಯೆಯನ್ನು ಬದಲಾಯಿಸಲು ಬಿಜೆಪಿಗರು ಬಯಸಿದ್ದರು. ದಕ್ಷಿಣ, ಈಶಾನ್ಯ ಮತ್ತು ಸಣ್ಣ ರಾಜ್ಯಗಳನ್ನು ದುರ್ಬಲಗೊಳಿಸಲು ಯೋಚಿಸಿದ್ದರು. ಬಿಜೆಪಿ ಭಾರತದ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ದಾಳಿ ಮಾಡುತ್ತಿದೆ. ಅವರು ಗಡಿ ನಿರ್ಣಯವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ. ಅಸ್ಸಾಂ ಮತ್ತು ಜಮ್ಮು - ಕಾಶ್ಮೀರದ ಚುನಾವಣಾ ನಕ್ಷೆಯನ್ನು ಈಗಾಗಲೇ ಪರಿವರ್ತಿಸಿದ್ದಾರೆ. ದೇಶದ ಉಳಿದ ಭಾಗಗಳಿಗೂ ಅದನ್ನು ಮಾಡಲು ಬಯಸಿದ್ದರು. ಅವರ ಮುಖ್ಯ ಉದ್ದೇಶವೆಂದರೆ ನಿಮ್ಮ (ತಮಿಳು) ಇತಿಹಾಸ, ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯದ ಮೇಲೆ ದಾಳಿ ಮಾಡುವುದು. ಪ್ರಧಾನಿ ಮೋದಿ ಸಂವಿಧಾನದ ಮೇಲೆ ದಾಳಿ ಮಾಡುವುದನ್ನು ಜನರು ಈಗಾಗಲೇ ನೋಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಂವಿಧಾನದಲ್ಲಿ, ಭಾರತ ಎಂದರೆ ರಾಜ್ಯಗಳ ಒಕ್ಕೂಟ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಂದರೆ ಪ್ರತಿಯೊಂದು ರಾಜ್ಯಕ್ಕೂ ಧ್ವನಿ ಇರಬೇಕು. ತಮಿಳುನಾಡು ವಿಧಾನಸಭಾ ಚುನಾವಣೆಯು ಬಿಜೆಪಿ-ಆರ್‌ಎಸ್‌ಎಸ್ ತಮಿಳುನಾಡನ್ನು ವಶಪಡಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ನಡೆಯುತ್ತಿದೆ’ ಎಂದರು.