ಬಹುಮತವಿಲ್ಲದಿದ್ದರೂ, ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿತು. ಆದರೆ, ರಾಜಕೀಯ ಲೆಕ್ಕಾಚಾರಗಳು ವಿಫಲವಾದ ಕಾರಣ ಈ ಪ್ರಯತ್ನ ಸೋತಿದ್ದು, ಇದು ದಕ್ಷಿಣದ ರಾಜ್ಯಗಳು ಮತ್ತು ವಿಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ.

  • ಪ್ರಶಾಂತ್ ನಾತು ಏಷ್ಯಾನೆಟ್ ಸುವರ್ಣ ನ್ಯೂಸ್

2014ರಿಂದ ನರೇಂದ್ರ ಮೋದಿ ಯಾವುದಾದರೂ ಘೋಷಣೆ, ಮಸೂದೆ, ವಿಧೇಯಕ, ಕಾನೂನು, ಸುಗ್ರೀವಾಜ್ಞೆ ತರುತ್ತಾರೆ ಎಂದರೆ ಸಹಜವಾಗಿ ಬಿಜೆಪಿ ಮತದಾರರಲ್ಲಿ ನಿರೀಕ್ಷೆಗಳು ಗರಿಗೆದರುತ್ತವೆ. ಮೋದಿ ಮತ್ತು ಅಮಿತ್ ಶಾ ಕೂಡಿಕೊಂಡು ಆಳವಾದ ನೀರಿದ್ದರೂ ಹಡಗನ್ನು ಹೇಗಾದರೂ ಮಾಡಿ ದಡಕ್ಕೆ ಮುಟ್ಟಿಸುತ್ತಾರೆ ಅನ್ನುವ ಯೋಚನೆ ಇರುತ್ತೆ. ಆದರೆ ಯಾಕೋ ಏನೋ ಮೊದಲ ಬಾರಿ ಮೋದಿ ಮತ್ತು ಅಮಿತ್ ಶಾ ಸದನದಲ್ಲಿ ಬಹುಮತ ಇಲ್ಲ, ನಾವು ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲು ವಿಧೇಯಕ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ಒಟ್ಟೊಟ್ಟಿಗೆ ತಂದು ಸದನದಲ್ಲಿ ಪಾಸು ಮಾಡಿಸಿಕೊಳ್ಳುತ್ತೇವೆ ಎಂದು ಉತ್ಸಾಹದಲ್ಲೇ ಇದ್ದರೂ ಮಸೂದೆ ಪಾಸು ಆಗಿಲ್ಲ. ಇದರಿಂದ ಮಹಿಳಾ ಮತದಾರರಲ್ಲಿ ಬಿಜೆಪಿ ಬಗ್ಗೆ ಅನುಕಂಪ ಬರಬಹುದು, ಕೊಲ್ಲಿ ಯುದ್ಧದ ಕಾರಣದಿಂದ ಸಿಲಿಂಡರ್ ಸಮಸ್ಯೆಯಿಂದ ಮುನಿಸಿಕೊಂಡಿರುವ ಮಹಿಳೆಯರ ಮನ ಒಲಿಸಬಹುದು, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವೋಟುಗಳು ಹರಿದು ಬರಬಹುದು ಎಂಬೆಲ್ಲ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಆದರೂ ಒಂದು ಜನಪ್ರಿಯ ಚುನಾಯಿತ ಸರ್ಕಾರ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸಂಸದರ ಬೆಂಬಲ ತನಗೆ ಇಲ್ಲ ಎಂದು ಗೊತ್ತಿದ್ದರೂ ತರಾತುರಿಯಲ್ಲಿ ವಿಶೇಷ ಅಧಿವೇಶನ ಕರೆದು ಮಸೂದೆಯನ್ನು ಮತಕ್ಕೆ ಹಾಕಿ ಸೋಲು ಕಂಡಿರುವುದು ಕೇವಲ ಮಹಿಳಾ ಮತದಾರರ ಅನುಕಂಪಕ್ಕೆ ಅನ್ನೋದು ಪಥ್ಯ ಆಗುತ್ತಿಲ್ಲ ಬಿಡಿ. ಮೇಲುನೋಟಕ್ಕೆ ಅರ್ಥ ಆಗುವುದು ಏನೆಂದರೆ, ಮೋದಿ ಸರ್ಕಾರಕ್ಕೆ 2029ರ ಚುನಾವಣೆಯಲ್ಲಿಯೇ ಕ್ಷೇತ್ರ ಪುನರ್‌ ವಿಂಗಡಣೆ ಮಾಡಬೇಕಿತ್ತು. ಹೀಗಾಗಿ ಮಹಿಳಾ ವಿಧೇಯಕವನ್ನು ಗಂಟು ಹಾಕಿಸಿ ತರಲಾಯಿತು ಎನ್ನುವುದು ಅಷ್ಟೇ. ಗೆದ್ದರೆ 2029ರ ಕ್ಷೇತ್ರ ವಿಂಗಡಣೆ, ಸೋತರೆ ಮಹಿಳಾ ವಿಧೇಯಕದ ಸೋಲು, ಜತೆಗೆ ಪ್ರತಿಪಕ್ಷಗಳಿಗೆ ಸೋಲಿನ ಕಳಂಕ ಕಟ್ಟುವುದು!

ಮಧ್ಯಾಹ್ನವೇ ಕೈ ಚೆಲ್ಲಿತ್ತು ಸರ್ಕಾರ!

ಬಹುಮತ ಇರದಿದ್ದರೂ ಹೇಗಾದರೂ ಮಾಡಿ ಸಂವಿಧಾನ ತಿದ್ದುಪಡಿ ಮಸೂದೆಗೆ ಸದನದ ಒಪ್ಪಿಗೆ ಪಡೆಯಬಹುದೆಂಬ ಉತ್ಸಾಹದಲ್ಲಿ ಸರ್ಕಾರ ಇತ್ತು. ಪಶ್ಚಿಮ ಬಂಗಾಳ ಚುನಾವಣೆ ಕಾರಣ ತೃಣಮೂಲ ಕಾಂಗ್ರೆಸ್‌ನ 29 ಸಂಸದರು ಸದನಕ್ಕೆ ಬರಲಿಕ್ಕಿಲ್ಲ ಎಂಬ ನಿರೀಕ್ಷೆಯಲ್ಲಿ ಆಡಳಿತ ಪಕ್ಷ ಇತ್ತು. ಮೂಲಗಳು ಹೇಳುವ ಪ್ರಕಾರ, ತೆರೆಯ ಹಿಂದೆ ಮಾತುಕತೆ ಕೂಡ ನಡೆದಿತ್ತು. ಆದರೆ ಅಧಿವೇಶನದ ಹಿಂದಿನ ದಿನ ಪ್ರಿಯಾಂಕಾ ಗಾಂಧಿ ಮತ್ತು ಮಮತಾ ಅಳಿಯ ಅಭಿಷೇಕ ಬ್ಯಾನರ್ಜಿ ನಡುವೆ ಮಾತುಕತೆ ನಡೆದಿದ್ದರಿಂದ ಅಷ್ಟೂ ಸಂಸದರು ಸದನಕ್ಕೆ ಬಂದುಬಿಟ್ಟರು. ಇನ್ನೊಂದು ಕಡೆ, ಸಮಾಜವಾದಿ ಪಕ್ಷದ 37 ಸಂಸದರು ಮತದಾನದ ಶುರು ಆದಾಗ ಸದನದಿಂದ ಹೊರ ನಡೆಯುತ್ತಾರೆ, ಆಗ 540 ಸದಸ್ಯ ಬಲದ ಸಂಖ್ಯೆ 474ಕ್ಕೆ ಕುಸಿಯುತ್ತದೆ ಎಂಬ ನಿರೀಕ್ಷೆ ಸರ್ಕಾರಕ್ಕೆ ಇತ್ತು. ಆದರೆ ಯಾವಾಗ ಲೆಕ್ಕಾಚಾರ ಉಲ್ಟಾ ಆಯಿತೋ ಮಸೂದೆಗೆ ಅಂಗೀಕಾರ ಸಿಗುವುದಿಲ್ಲ ಎಂದು ಅಮಿತ್ ಶಾ ಅವರಿಗೆ ಮಧ್ಯಾಹ್ನವೇ ಅರ್ಥವಾಗಿತ್ತು. ಕೆಲವೊಮ್ಮೆ ಎಷ್ಟೇ ಬಲಶಾಲಿ ಆದರೂ ಕೂಡ ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳೇ ಮುಖ್ಯವಾಗುತ್ತವೆ.

ದಕ್ಷಿಣದ ರಾಜ್ಯಗಳಿಗೆ ಆತಂಕ

ಮೋದಿ ಸರ್ಕಾರ ಬಾಯಿ ಮಾತಿನಲ್ಲಿ ಮಾತ್ರ ಯಾವುದೇ ರಾಜ್ಯಗಳಿರಲಿ ಸಾರ್ವತ್ರಿಕವಾಗಿ ಶೇಕಡಾ 50ರಷ್ಟು ಸೀಟುಗಳು ಹೆಚ್ಚಳ ಆಗುತ್ತವೆ ಎಂದು ಹೇಳಿತು. ಆದರೆ ಮಸೂದೆಯಲ್ಲಿ ಮಾತ್ರ ಸ್ಪಷ್ಟ ಉಲ್ಲೇಖ ಇರಲಿಲ್ಲ. ಮಸೂದೆಯಲ್ಲಿಯೇ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಕ್ಕೆ ಎಷ್ಟು ಎಂದು ಎಲ್ಲಾ ರಾಜ್ಯಗಳ ಸೀಟುಗಳ ಬಗ್ಗೆ ಸ್ಪಷ್ಟತೆ ಕೊಟ್ಟು ಸರ್ವಪಕ್ಷಗಳ ಸಭೆ ಕರೆದು ಸರ್ವ ಸಮ್ಮತಿ ಮೂಡಿಸುವ ಪ್ರಯತ್ನ ಮಾಡಬಹುದಿತ್ತು ಎಂಬ ವಿಶ್ಲೇಷಣೆಗಳಿವೆ. ಆದರೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳು ನಡೆಯುತ್ತಿರುವಾಗ ತರಾತುರಿಯಲ್ಲಿ ಯಾವುದೇ ಚರ್ಚೆ, ಸಂಧಾನ, ಮನವರಿಕೆ, ಮನವೊಲಿಕೆ ಪ್ರಯತ್ನ ಇಲ್ಲದೆ ಮಸೂದೆ ತಂದಿದ್ದು ಯಾಕೆ ಎಂಬುದು ಇನ್ನೂ ತರ್ಕಕ್ಕೆ ನಿಲುಕುತ್ತಿಲ್ಲ.

ಪ್ರತಿಪಕ್ಷಗಳ ಆತಂಕ ಏನು?

ರಾಹುಲ್‌ ಗಾಂಧಿಯಿಂದ ಹಿಡಿದು ಅಖಿಲೇಶ್ ಯಾದವ್‌ವರೆಗೆ ಇರುವ ಆತಂಕ ಕ್ಷೇತ್ರ ಮರು ವಿಂಗಡಣೆಯದು. ಕ್ಷೇತ್ರ ಮರು ವಿಂಗಡಣೆಗೆ ಈಗ ಒಪ್ಪಿಗೆ ಕೊಟ್ಟರೆ ಅಸ್ಸಾಂ ಮತ್ತು ಜಮ್ಮು- ಕಾಶ್ಮೀರದಲ್ಲಿ ಮಾಡಿದಂತೆ, ಮೋದಿ ಮತ್ತು ಅಮಿತ್ ಶಾ ಸ್ವಪಕ್ಷಕ್ಕೆ ಮುಂದಿನ 20 ವರ್ಷ ಕಾಲ ಅನುಕೂಲ ಆಗುವ ರೀತಿಯಲ್ಲಿ ಕ್ಷೇತ್ರಗಳನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾಡಿಕೊಂಡರೆ ಕತೆ ಏನು ಎನ್ನುವ ಆತಂಕ ವಿರೋಧ ಪಕ್ಷಗಳಿಗಿದೆ. ಏಕೆಂದರೆ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಬಳಿ ಈಗ 20 ರಾಜ್ಯ ಸರ್ಕಾರಗಳಿವೆ. ಒಂದು ವೇಳೆ ಬಿಜೆಪಿಯನ್ನು ಶತಾಯ ಗತಾಯ ವಿರೋಧಿಸುವ ಮುಸ್ಲಿಂ ಮತದಾರರನ್ನು ಹೊಸ ಕ್ಷೇತ್ರಗಳಲ್ಲಿ ಛಿದ್ರ ಛಿದ್ರ ಮಾಡಿ ಹಾಕಿದರೆ ಮುಂದಿನ 20 ವರ್ಷ ಅಧಿಕಾರವನ್ನು ಬಿಜೆಪಿಗೆ ತಟ್ಟೆಯಲ್ಲಿ ಇಟ್ಟು ಕೊಟ್ಟಂತೆ ಎಂಬುದು ವಿಪಕ್ಷಗಳಿಗೆ ಗೊತ್ತಿದೆ.

ತಾಂತ್ರಿಕ ಕಾರಣಗಳು ಏನು?

ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಕ್ಷೇತ್ರ ವಿಂಗಡಣೆ ಆಗಿರುವುದು ಇಲ್ಲಿಯವರೆಗೆ ನಾಲ್ಕು ಬಾರಿ ಮಾತ್ರ. 1951ರ ಜನಗಣತಿ ಆಧಾರವಾಗಿ 1952ರ ಚುನಾವಣೆ, 1961ರ ಗಣತಿ ಇಟ್ಟುಕೊಂಡು 1962ರ ಚುನಾವಣೆ, ನಂತರ 1971ರ ಗಣತಿ ಇಟ್ಟು ಕೊಂಡು 1972ರ ಚುನಾವಣೆ. ಆದರೆ ಯಾವಾಗ 1975ರ ಅವಧಿಯಲ್ಲಿ ಜನಸಂಖ್ಯೆ ನಿಯಂತ್ರಣ ಯೋಜನೆ ಶುರು ಆಯಿತೋ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮುಂದಿನ 25 ವರ್ಷ ಅಂದರೆ 2002ರವರೆಗೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಮುಂದೆ 2002ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ಸದನದ ಸಂಖ್ಯೆಯನ್ನು ಮುಂದಿನ 25 ವರ್ಷ ಕಾಲ ಹಾಗೆಯೇ ಇಟ್ಟುಕೊಂಡು ಕೇವಲ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. 2002ರಿಂದ 2008ರ ವರೆಗೆ ಕ್ಷೇತ್ರ ಪುನರ್‌ ವಿಂಗಡಣೆ ನಡೆದು 2009ರಲ್ಲಿ ಹೊಸದಾಗಿ ವಿಂಗಡಣೆ ಆದ ಕ್ಷೇತ್ರಗಳಿಗೆ ಚುನಾವಣೆಗಳು ನಡೆದವು. ಅದರ ಮಧ್ಯೆ ಮೋದಿ ಸರ್ಕಾರ 2023ರಲ್ಲಿ ಮಹಿಳಾ ಮೀಸಲಾತಿ ವಿಧೇಯಕ ತಂದು 33 ಪ್ರತಿ ಶತ ಮೀಸಲು ಕೊಡುವ ಸಂವಿಧಾನ ತಿದ್ದುಪಡಿಗೆ ಕಾಂಗ್ರೆಸ್ ಬೆಂಬಲದಿಂದ ಒಪ್ಪಿಗೆ ಕೂಡ ಪಡೆದು ಕೊಂಡಿತು. ಆದರೆ ಅದರಲ್ಲಿ 2026ರಲ್ಲಿ ಹೊಸದಾಗಿ ಗಣತಿ, ಆಮೇಲೆ ಕ್ಷೇತ್ರ ಮರು ವಿಂಗಡಣೆ, ಅದಾದ ಮೇಲೆ ಸೀಟುಗಳ ಸಂಖ್ಯೆ ಹೆಚ್ಚಿಸಿ ಮಹಿಳಾ ಮೀಸಲಾತಿ ಜಾರಿಗೆ ತರುವುದು ಎಂದಾಗಿತ್ತು. ಅಂದರೆ 2034ಕ್ಕೆ, ಹೊಸದಾಗಿ ವಿಂಗಡಣೆ ಆದ ಕ್ಷೇತ್ರಗಳಲ್ಲಿ 33 ಪ್ರತಿ ಶತ ಮೀಸಲಾತಿ ಎಂದು ನಿರ್ಧಾರ ಆಗಿತ್ತು. ಆದರೆ ಅದೇಕೋ ಏನೋ 2029ಕ್ಕೆ ಕ್ಷೇತ್ರ ವಿಂಗಡಣೆ ಮಾಡಿಕೊಂಡು ಚುನಾವಣೆಗೆ ಹೋದರೆ ಲಾಭ ಹೆಚ್ಚು ಎಂದು ಮೋದಿ ಸಾಹೇಬರು ತೀರ್ಮಾನಿಸಿದಂತಿದೆ. ಅದಕ್ಕಾಗಿ 2026ರ ಗಣತಿಗೆ ಕಾಯದೆ 2011ರ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ಹೋಗುವುದು ಎಂದು ತರಾತುರಿ ಮಾಡಿದರು ಕೂಡ ಸಂಖ್ಯೆಯ ಕೊರತೆಯಿಂದ ಅಂದುಕೊಂಡಿದ್ದು ಮಾಡಲು ಸಾಧ್ಯವಾಗಲಿಲ್ಲ. ಬಹುತೇಕ 2024ರ ಚುನಾವಣೆಯಲ್ಲಿ ಸೀಟುಗಳು ಕಡಿಮೆ ಆದ ನಷ್ಟ ಬಿಜೆಪಿಗೆ ಮೊದಲ ಬಾರಿ ಆದಂತೆ ಕಾಣುತ್ತಿದೆ.