ವಾರಾಣಾಸಿ: ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದು, ಇಂದು (ಫೆ.11ರಂದು) ಲಖನೌನ‌ಲ್ಲಿ ಮೊದಲ ಚುನಾವಣಾ ರ‍್ಯಾಲಿ ನಡೆಸಿದ್ದಾರೆ. 

ಈಗ ತಾನೇ ರಾಜಕೀಯಕ್ಕೆ ಕಾಲಿಟ್ಟು ಪ್ರಿಯಾಂಕಾ ಚುನಾವಣೆಗೆ ನಿಲ್ಲುವುದಾದರೆ ಸೋನಿಯಾ ಗಾಂಧಿ ಕಳೆದ ಐದು ವರ್ಷಗಳಿಂದ ಸ್ಪರ್ಧಿಸಿ, ಗೆಲ್ಲುತ್ತಿರುವ ರಾಯ್‌ ಬರೇಲಿ ಕ್ಷೇತ್ರವನ್ನೇ ಆರಿಸಿಕೊಳ್ಳಲ್ಲಿದ್ದಾರೆ. ಇಂದಿರಾ ಗಾಂಧಿ ಕಾಲದಿಂದಲೂ ಈ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಇಲ್ಲಿಂದಲೇ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಿಯಾಂಕಾ ಆರಂಭಿಸುವ ನಿರೀಕ್ಷೆ ಇದೆ. 

ಆದರೆ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಾಸಿಯಲ್ಲಿಯೇ ಪ್ರಿಯಾಂಕಾ ಸ್ಪರ್ಧಿಸಬೇಕೆಂಬ ಒತ್ತಡವೂ ಇದ್ದು, ಕಾಶಿ ಮತದಾರು ಪ್ರಿಯಾಂಕಾ ಗಾಂಧಿ ತಮ್ಮ ಸಂಸದರಾಗಬೇಕೆಂದು ಬಯಸುತ್ತಿದ್ದಾರೆನ್ನುವ ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. 

ವಾರಾಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ ಪ್ರಿಯಾಂಕಾ ಗೆಲ್ಲುವುದು ಕಷ್ಟ ಸಾಧ್ಯ. ಆದರೂ, ಈ ಸ್ಪರ್ಧೆ ರಾಜ್ಯದ ಇತರೆ ಲೋಕಸಭಾ  ಕ್ಷೇತ್ರಗಳ ಮೇಲೂ ಪ್ರಭಾವ ಬೀರಲಿದ್ದು, ಕಾಂಗ್ರೆಸ್‌ಗೆ ವರವಾಗಲಿದೆ ಎಂಬುವುದು ರಾಜಕೀಯ ತಜ್ಞರ ವಿಶ್ಲೇಷಣೆ. ಮೋದಿಯನ್ನೇ ಎದುರಿಸಲು ಕಾಂಗ್ರೆಸ್ ಸಶಕ್ತವಾಗಿದೆ ಎಂಬ ಸಂದೇಶ ಸಾರುವಲ್ಲಿ ಈ ಸ್ಪರ್ಧೆ ಯಶಸ್ವಿಯಾಗಲಿದೆ. 

ಪ್ರಿಯಾಂಕಾ ಗೆಲ್ಲುವುದು ಸುಲಭವೇ?
ಉತ್ತರ ಪ್ರದೇಶ ಸೇರಿ ಉತ್ತರ ಭಾರತದಲ್ಲಿಯೇ ಚುನಾವಣೆಯ ಗೆಲುವಿನಲ್ಲಿ ಜಾತಿ ಲೆಕ್ಕಚಾರದ್ದೇ ಮೇಲಗೈ. ಅದರಲ್ಲಿಯೂ ಉತ್ತರ ಪ್ರದೇಶದ ಬೇರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ, ವಾರಾಣಾಸಿ ಕ್ಷೇತ್ರದ ಗೆಲುವಿಗೆ ಜಾತಿ ಲೆಕ್ಕಚಾರವೇ ಮುಖ್ಯ.

ಅಕಸ್ಮಾತ್ ಪ್ರಿಯಾಂಕಾ ಕಾಶಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‌ ಜತೆ ಕೈ ಜೋಡಿಸದಿದ್ದರೂ ಬಿಎಸ್‌ಪಿ ಹಾಗೂ ಎಸ್‌ಪಿ ಬೆಂಬಲ ನಿರಾಯಾಸವಾಗಿ ಸಿಗಲಿದೆ. ಈಗಾಗಲೇ ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯ್ ಬರೇಲಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಅಮೇಥಿಯಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲವೆಂದು ಎಸ್ಪಿ, ಬಿಎಸ್ಪಿ ಘೋಷಿಸಿವೆ. 

ಜಾತಿ ಲೆಕ್ಕಚಾರ ಹೇಗೆ?
ಕಾಶಿ ಲೋಕಸಭಾ ಕ್ಷೇತ್ರದಲ್ಲಿರುವ ಸುಮಾರು 1.5 ಲಕ್ಷ ಯಾದವರು ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತಾರೆ. ಅಲ್ಲದೇ 80 ಸಾವಿರ ದಲಿತರು ಸಹಜವಾಗಿಯೇ ಮಾಯಾವತಿಯನ್ನು ಬೆಂಬಲಿಸುತ್ತಾರೆ. ಇವೆಲ್ಲ ಸೇರಿ ಒಟ್ಟು 5.30 ಲಕ್ಷ ಮತದಾರರು ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. 

ಈ ಕ್ಷೇತ್ರದಲ್ಲಿ ಸುಮಾರು 2.5 ಲಕ್ಷ ಬ್ರಾಹ್ಮಣ ಮತದಾರರಿದ್ದು, ಭುಮಿಹಾರ್‌ರ ಸುಮಾರು 1.5 ಲಕ್ಷ ಮತಗಳಿವೆ. ಇವರನ್ನು ಓಲೈಸಿಕೊಳ್ಳಲು ಪ್ರಿಯಾಂಕಾ ಶ್ರಮಿಸಬೇಕು. ಸಾಂಪ್ರಾದಾಯಿಕವಾಗಿ ಕಾಂಗ್ರೆಸ್ಸನ್ನೇ ಬೆಂಬಲಿಸುವ ಈ ಜಾತಿಗಳು, ಮಂದಿರ ಹಾಗೂ ಮಂಡಲ ರಾಜಕೀಯ ನಂತರ ಬಿಜೆಪಿಯತ್ತ ವಾಲಿವೆ. ಹಾಗಂತ ಇವತ್ತಿಗೂ ಇವರು ಕಾಂಗ್ರೆಸ್‌ನತ್ತ ಮೃದು ಧೋರಣೆ ತಾಳಿವೆ. ಆದರೆ, ಎಸ್ಪಿ-ಬಿಎಸ್ಪಿಯನ್ನು ವಿರೋಧಿಸುತ್ತಾರೆ. ಎಸ್ಪಿ, ಬಿಎಸ್ಪಿ ಬೆಂಬಲದೊಂದಿಗೆ ಈ ಜಾತಿಗಳ ಮನ ಓಲೈಸುವುದು ಕಾಂಗ್ರೆಸ್‌ಗಿರೋ ದೊಡ್ಡ ಸವಾಲು. 

ಬಿಜೆಪಿಗೇನು ಬಲ?
ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ 2 ಲಕ್ಷ ಮಂದಿ ವೇಶ್ಯರು, 1 ಲಕ್ಷ ರಜಪೂತರು, 80 ಸಾವಿರ ಛೌರಾಸಿಯರು, 65 ಸಾವಿರ ಕಾಯಸ್ಥರು, 2.5 ಲಕ್ಷ ಬ್ರಾಹ್ಮಣರು ಮತ್ತು 1.5 ಲಕ್ಷ ಭುಮಿಹರ್ ಮತದಾರರಿದ್ದಾರೆ. ಅಂದ್ರೆ ಮೋದಿ ಪರ ಸುಮಾರು 8.5 ಲಕ್ಷ ಮತಗಳಿವೆ. 

ಈ ಬಿಜೆಪಿ ಮೂಲ ಮತಗಳನ್ನು ಸೆಳೆಯುವುದು ಪ್ರಿಯಾಂಕಾಗೆ ಹೇಳಿದಷ್ಟು ಸುಲಭವಲ್ಲ. ಹಾಗಂತ ಈ ಮತದಾರರ ಮನಸ್ಸು ಕಾಂಗ್ರೆಸ್ಸಿನೆಡೆಗೂ ಇರುವ ಕಾರಣ ಅವನ್ನು ಉಳಿಸಿಕೊಳ್ಳುವುದು ಬಿಜೆಪಿಗೂ ಕಷ್ಟ. 

ನಿಮ್ಮ ಅಭಿಪ್ರಾಯವನ್ನು ವೋಟ್ ಮಾಡಿ ತಿಳಿಸಿ...ಮೋದಿಯನ್ನು ಮಣಿಸಬೇಕಾದರೆ ಪ್ರಿಯಾಂಕಾ ಈ ಮೇಲ್ವರ್ಗಗಳಾದ ಬ್ರಾಹ್ಮಣರು ಹಾಗೂ ಭುಮಿಹಾರ್ ಮತಗಳನ್ನು ಸೆಳೆಯುವ ತಂತ್ರ ರೂಪಿಸಬೇಕು. ಅಕಸ್ಮಾತ್ ಪ್ರಿಯಾಂಕಾ ಈ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರೋ, ಮೋದಿಗೆ ವಾರಾಣಾಸಿಯಲ್ಲಿ ಸೋಲು ಒಪ್ಪಿಕೊಳ್ಳುವುದು ಅನಿವಾರ್ಯ.

ಆಧಾರ: ಇಂಡಿಯಾ ಟುಡೇ ವರದಿ 

ಪತಿಯನ್ನು ED ಕಚೇರಿಗೆ ಡ್ರಾಪ್ ಕೊಟ್ಟ ಪ್ರಿಯಾಂಕಾ..

ಕುಡಿದ ಮತ್ತಿನಲ್ಲಿ ಪ್ರಿಯಾಂಕಾ ಗಾಂಧಿ: ವೈರಲ್ ಚೆಕ್

ರಾಜಕೀಯಕ್ಕೆ ಪ್ರಿಯಾಂಕಾ ಎಂಟ್ರಿ: ರಾತ್ರೋ ರಾತ್ರಿ ಈ ಬದಲಾವಣೆ